ನಟ ಟೈಗರ್ ಶ್ರಾಫ್ ಮೇಲೆ ನಡೆದ ಗುಂಡಿನ ದಾಳಿಗೆ ಕಾರಣವೇನು? ಈ ಒಂದು ಮಾತು ಕೇಳಿ ಬೆಚ್ಚಿಬಿದ್ದ ಬಾಲಿವುಡ್! Tiger Shroff Firing

ಟೈಗರ್ ಶ್ರಾಫ್ ಅವರನ್ನು ಗುರಿಯಾಗಿಸಿ ಮುಂಬೈನ ಜನನಿಬಿಡ ಜುಹು ಪ್ರದೇಶದಲ್ಲಿ ಭಾನುವಾರ ಸಂಜೆ (ಅ.18) ಭೀಕರ ಹತ್ಯೆಯತ್ನ ನಡೆದಿದೆ. ಫುಟ್‌ಬಾಲ್ ಆಡಿ, ಮೈದಾನದಿಂದ ತಮ್ಮ ಬಿಎಂಡಬ್ಲ್ಯು ಕಾರಿನಲ್ಲಿ ವಾಪಸಾಗುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ನಟನ ಕಾರಿನ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾರೆ.
Tiger Shroff Firing
ಬಾಲಿವುಡ್​ ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ
Published on: 

ಮುಂಬೈ: ಇಲ್ಲಿನ ಜುಹು ಪ್ರದೇಶದಲ್ಲಿ ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲಿನ ಗುಂಡಿನ ದಾಳಿಯ ( Tiger Shroff Firing ) ಹಿಂದೆ ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಕೈವಾಡವಿರುವುದು ಬೆಳಕಿಗೆ ಬಂದಿದೆ. ಸಲ್ಮಾನ್ ಖಾನ್ ಜೊತೆಗಿನ ಒಡನಾಟವೇ ಈ ದಾಳಿಗೆ ಕಾರಣವೆಂದು ಗ್ಯಾಂಗ್ ಬೆದರಿಕೆ ಹಾಕಿದ್ದು, ಮಹಾರಾಷ್ಟ್ರದಲ್ಲಿ ಈ ಘಟನೆ ತೀವ್ರ ಸಂಚಲನ ಮೂಡಿಸಿದೆ. ಸಲ್ಲು ಜತೆಗಿರುವವರೇ ನಮ್ಮ ಟಾರ್ಗೆಟ್​ ಅನ್ನೋ ಮಾತು ಬಾಲಿವುಡ್​ ಮಂದಿಯ ನಿದ್ದೆಗೆಡಿಸಿದೆ.

ಟೈಗರ್ ಶ್ರಾಫ್ ಅವರನ್ನು ಗುರಿಯಾಗಿಸಿ ಮುಂಬೈನ ಜನನಿಬಿಡ ಜುಹು ಪ್ರದೇಶದಲ್ಲಿ ಭಾನುವಾರ ಸಂಜೆ (ಅ.18) ಭೀಕರ ಹತ್ಯೆಯತ್ನ ನಡೆದಿದೆ. ಫುಟ್‌ಬಾಲ್ ಆಡಿ, ಮೈದಾನದಿಂದ ತಮ್ಮ ಬಿಎಂಡಬ್ಲ್ಯು ಕಾರಿನಲ್ಲಿ ವಾಪಸಾಗುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ನಟನ ಕಾರಿನ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾರೆ. ಅದೃಷ್ಟವಶಾತ್ ಟೈಗರ್ ಶ್ರಾಫ್ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಈ ಅನಿರೀಕ್ಷಿತ ದಾಳಿಯಲ್ಲಿ ನಟನ ಕಾರು ಚಾಲಕನ ಕೈಗೆ ಗುಂಡು ತಗುಲಿದ್ದು, ಗಾಯಗೊಂಡಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗೂ ಗೃಹ ಸಚಿವ ದೇವೇಂದ್ರ ಫಡ್ನವೀಸ್ ಅವರು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.

ಬಾಲಿವುಡ್​ಗೆ ನಡುಕ ಹುಟ್ಟಿಸಿದ ಆಡಿಯೋ

ಈ ಘಟನೆಯ ಬೆನ್ನಲ್ಲೇ ಬಿಡುಗಡೆಯಾಗಿರುವ ಒಂದು ಆಡಿಯೋ ಸಂದೇಶವು ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಅಲ್ಲದೆ, ಬಾಲಿವುಡ್​ ಮಂದಿಯನ್ನು ಬೆಚ್ಚಿಬೀಳಿಸಿದೆ. ಅಷ್ಟಕ್ಕೂ ಆ ಆಡಿಯೋದಲ್ಲಿ ಏನಿದೆ ಅಂದರೆ, ಗುಂಡಿನ ದಾಳಿ ನಡೆಸಿದವರು ತಾವು 'ಲಾರೆನ್ಸ್ ಬಿಷ್ಣೋಯ್' ಗ್ಯಾಂಗ್‌ನವರು ಎಂದು ಹೇಳಿಕೊಂಡಿದ್ದಾರೆ. ಸಲ್ಮಾನ್ ಖಾನ್ ಜತೆ ಕೆಲಸ ಮಾಡುವವರಿಗೆ ತಕ್ಕ ಶಾಸ್ತಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಸದ್ಯ ಮುಂಬೈ ಪೊಲೀಸರು ಈ ಆಡಿಯೋ ಅಸಲಿಯೋ ಅಥವಾ ನಕಲಿಯೋ ಎಂಬುದನ್ನು ಪತ್ತೆ ಹಚ್ಚಲು ತಾಂತ್ರಿಕ ತನಿಖೆಯನ್ನು ತೀವ್ರಗೊಳಿಸಿದ್ದಾರೆ.

Also Read
ಕೊನೇ ಕ್ಷಣದಲ್ಲಿ ನಡೆದ ಪವಾಡ: ಇದು ನಡೆಯದೇ ಹೋಗಿದ್ರೆ ಗುಂಡಿನ ದಾಳಿಗೆ ಬಲಿಯಾಗ್ತಿದ್ರು ನಟ ಟೈಗರ್ ಶ್ರಾಫ್! Tiger Shroff
Tiger Shroff Firing

ನಿಮ್ಮ ಲೆಕ್ಕಾಚಾರಗಳನ್ನು ಸರಿಯಾಗಿ ಇಟ್ಕೊಳ್ಳಿ

ಆಡಿಯೋದಲ್ಲಿ ತನ್ನನ್ನು ಅನಿಲ್ ಪಂಡಿತ್ ಎಂದು ಪರಿಚಯಿಸಿಕೊಂಡ ವ್ಯಕ್ತಿಯು, ಗ್ಯಾಂಗ್‌ನ ಎಚ್ಚರಿಕೆಯನ್ನು ಲೆಕ್ಕಿಸದೆ ಟೈಗರ್ ಶ್ರಾಫ್ ಸಲ್ಮಾನ್ ಖಾನ್ ಜೊತೆ ಕೆಲಸ ಮಾಡುತ್ತಿದ್ದ ಕಾರಣಕ್ಕೇ ಅವರನ್ನು ಗುರಿಯಾಗಿಸಲಾಗಿತ್ತು ಎಂದು ಹೇಳಿದ್ದಾನೆ. ಸಲ್ಮಾನ್ ಖಾನ್ ಅವರನ್ನು ಬೆಂಬಲಿಸುವವರಿಗೆ ಇದು ಮೊದಲ ಮತ್ತು ಕೊನೆಯ ಎಚ್ಚರಿಕೆ ಎಂದು ಧಮಕಿ ಹಾಕಿರುವ ಆತ, "ಸಲ್ಮಾನ್ ಖಾನ್‌ಗೆ ಸಹಾಯ ಮಾಡುವವರು ತಮ್ಮ ಲೆಕ್ಕಾಚಾರಗಳನ್ನು ಸರಿಯಾಗಿಟ್ಟುಕೊಳ್ಳಿ" ಎಂದು ಬೆದರಿಕೆ ಹಾಕಿದ್ದಾನೆ. ಅಲ್ಲದೆ, ಸಲ್ಮಾನ್ ಖಾನ್‌ಗೆ ಪಾಕಿಸ್ತಾನಿ ಗ್ಯಾಂಗ್‌ಸ್ಟರ್ ದಾವೂದ್ ಇಬ್ರಾಹಿಂ ಜೊತೆ ನಂಟಿದೆ ಎಂಬ ಆರೋಪವನ್ನೂ ಮಾಡಲಾಗಿದೆ.

ಬಿಷ್ಣೋಯ್ ಗ್ಯಾಂಗ್​ಗೆ ಸಲ್ಮಾನ್​ ಖಾನ್​ ಮೇಲೆ ಏಕೆ ಕೋಪ?

1998ರ ಕೃಷ್ಣ ಮೃಗ (Blackbuck) ಬೇಟೆ ಪ್ರಕರಣದಿಂದಲೂ ಬಿಷ್ಣೋಯ್ ಸಮುದಾಯವು ಸಲ್ಮಾನ್ ಖಾನ್ ಅವರನ್ನು ಟಾರ್ಗೆಟ್ ಮಾಡುತ್ತಾ ಬಂದಿದೆ. ಬಿಷ್ಣೋಯ್ ಸಮುದಾಯ ಕೃಷ್ಣಮೃಗವನ್ನು ದೇವರಂತೆ ಕಾಣುತ್ತದೆ. ಅದೇ ಕೃಷ್ಣಮೃಗವನ್ನು ಸಲ್ಮಾನ್​ ಖಾನ್​ ಬೇಟೆಯಾಡಿದ್ದೇ ಅವರ ಮೇಲಿನ ಕೋಪಕ್ಕೆ ಕಾರಣ ಎನ್ನಲಾಗಿದೆ. ಈ ಹಿಂದೆ ಹಲವು ಬಾರಿ ಸಲ್ಮಾನ್ ಖಾನ್ ಅವರಿಗೆ ಜೀವ ಬೆದರಿಕೆ ಹಾಕಿದ್ದ ಬಿಷ್ಣೋಯ್ ಗ್ಯಾಂಗ್, ಈಗ ಅವರೊಂದಿಗೆ ನಂಟು ಹೊಂದಿರುವ ಇತರ ಬಾಲಿವುಡ್ ನಟರ ಮೇಲೂ ತನ್ನ ಹಿಂಸಾತ್ಮಕ ಕೃತ್ಯಗಳನ್ನು ನಡೆಸುತ್ತಿರುವುದು ಚಿತ್ರರಂಗದಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದೆ. ಈ ನಿಟ್ಟಿನಲ್ಲಿ ಪೊಲೀಸರು ಕಾವಲು ಕಾಯುತ್ತಿದ್ದು, ದಾಳಿಕೋರರ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯ ಮುಂದುವರೆಸಿದ್ದಾರೆ.

ಬಾಬಾ ಸಿದ್ದಿಕ್ ಹತ್ಯೆ ಪ್ರಕರಣಕ್ಕೆ ಹೋಲಿಕೆ

ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲಿನ ಗುಂಡಿನ ದಾಳಿಯು ಎರಡು ವರ್ಷಗಳ ಹಿಂದೆ ಮುಂಬೈನಲ್ಲಿ ನಡೆದ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕ್ ಹತ್ಯೆಯ ಪ್ರಕರಣವನ್ನು ಹೋಲುತ್ತಿದೆ. ಬಾಬಾ ಸಿದ್ದಿಕ್ ಕೊಲೆಯಾಗಿ 2 ವರ್ಷ ಕಳೆದಿದ್ದು, ಅದೇ ಮಾದರಿಯಲ್ಲಿ ಇದೀಗ ಟೈಗರ್​ ಶ್ರಾಫ್​ ಮೇಲೆ ದಾಳಿ ಮಾಡಲಾಗಿದೆ. ಈ ದಾಳಿಯ ಬೆನ್ನಲ್ಲೇ ಬಿಡುಗಡೆಯಾದ ಆಡಿಯೋ ಸಂದೇಶದಲ್ಲಿ ಅನಿಲ್ ಪಂಡಿತ್ ಎಂಬಾತ ಮಾತನಾಡಿ, ನಮ್ಮೊಂದಿಗೆ ಗುರುತಿಸಿಕೊಳ್ಳದೆ ಸಲ್ಮಾನ್ ಖಾನ್ ಜತೆ ಕೆಲಸ ಮಾಡುವವರನ್ನು ಕೊಲ್ಲಲಾಗುತ್ತದೆ ಎಂದು ಎಚ್ಚರಿಸಿದ್ದಾನೆ. ತಾನು ಮತ್ತು ಹರ್ಮನ್ ಸಂಧು ಈ ದಾಳಿಯ ಹಿಂದಿರುವುದಾಗಿ ಆತ ಹೇಳಿಕೊಂಡಿದ್ದು, ಇಬ್ಬರೂ ಸದ್ಯ ಅಮೆರಿಕದಲ್ಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಾಬಾ ಸಿದ್ದಿಕ್ ಹತ್ಯೆಯ ಹೊಣೆ ಹೊತ್ತಿದ್ದ ಶುಭಮ್ ಲೋಂಕರ್ ಕೂಡ ಅಮೆರಿಕದಲ್ಲೇ ಇದ್ದಾನೆ.

ಅಂದಹಾಗೆ, ಬಾಬಾ ಸಿದ್ದಿಕ್ (66) ಅವರು ಅಕ್ಟೋಬರ್ 12, 2024ರ ರಾತ್ರಿ ಬಾಂದ್ರಾದಲ್ಲಿರುವ ತಮ್ಮ ಮಗ ಜೀಶನ್ ಸಿದ್ದಿಕ್ ಕಚೇರಿ ಹೊರಗೆ ಮೂವರು ದುಷ್ಕರ್ಮಿಗಳಿಂದ ಗುಂಡೇಟಿಗೆ ಬಲಿಯಾಗಿದ್ದರು. ಶುಭಮ್ ಲೋಂಕರ್ ಹೆಸರಿನ ಫೇಸ್‌ಬುಕ್ ಪೋಸ್ಟ್ ಮೂಲಕ ಈ ಹತ್ಯೆಯ ಹೊಣೆ ಹೊತ್ತುಕೊಳ್ಳಲಾಗಿತ್ತು. ಸಲ್ಮಾನ್ ಖಾನ್ ಜತೆಗಿನ ನಂಟು ಹಾಗೂ ಸಲ್ಮಾನ್ ಮನೆ ಮೇಲಿನ ಗುಂಡಿನ ದಾಳಿ ಪ್ರಕರಣದ ಆರೋಪಿ ಅನುಜ್ ಥಪನ್ ಕಸ್ಟಡಿಯಲ್ಲಿ ಸಾವಿಗೀಡಾಗಿದ್ದಕ್ಕೆ ಪ್ರತೀಕಾರವಾಗಿ ಈ ಕೃತ್ಯ ಎಸಗಿರುವುದಾಗಿ ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿತ್ತು.

Also Read
ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿಯ ವಿಡಿಯೋ ವೈರಲ್; ಆರೋಪಿಗಳ ಬಂಧನಕ್ಕೆ 15 ತಂಡಗಳ ರಚನೆ | Tiger Shroff
Tiger Shroff Firing

ತನಿಖೆಯ ಪ್ರಕಾರ, ಬಾಬಾ ಸಿದ್ದಿಕ್ ಹತ್ಯೆಗೈದ ಶೂಟರ್‌ಗಳು ಎರಡು ತಿಂಗಳಿಗೂ ಹೆಚ್ಚು ಕಾಲ ಸಂಚು ರೂಪಿಸಿದ್ದರು. ಗುರ್ಮೈಲ್ ಸಿಂಗ್ ಮತ್ತು ಧರ್ಮರಾಜ್ ಕಶ್ಯಪ್ ಸ್ಥಳದಲ್ಲೇ ಸಿಕ್ಕಿಬಿದ್ದರೆ, ಮುಖ್ಯ ಶೂಟರ್ ಶಿವಕುಮಾರ್ ಗೌತಮ್ ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ಸೆರೆಸಿಕ್ಕಿದ್ದನು. ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಷ್ಣೋಯ್ ಅಮೆರಿಕದಿಂದ ಈ ಹತ್ಯೆಗೆ ಆದೇಶಿಸಿದ್ದಾನೆ ಎಂದು ಗೌತಮ್ ಬಾಯಬಿಟ್ಟಿದ್ದ. ಬಳಿಕ ಅನ್ಮೋಲ್ ಬಿಷ್ಣೋಯ್ ನವೆಂಬರ್ 2025ರಲ್ಲಿ ಅಮೆರಿಕದಿಂದ ಗಡೀಪಾರಾಗಿ ಬಂಧನಕ್ಕೊಳಗಾಗಿದ್ದು, ಸದ್ಯ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾನೆ.

ಬಿಷ್ಣೋಯ್ ಗ್ಯಾಂಗ್ ಹಿಂದಿನಿಂದಲೂ ಸಲ್ಮಾನ್ ಖಾನ್ ಹಾಗೂ ಅವರ ಆಪ್ತರನ್ನು ಗುರಿಯಾಗಿಸುತ್ತಾ ಬಂದಿದೆ. 2024ರ ಏಪ್ರಿಲ್ 14ರಂದು ಸಲ್ಮಾನ್ ಮನೆ ಮೇಲೆ ಗುಂಡಿನ ದಾಳಿ ನಡೆಸಿ, ಇದನ್ನು ಕೇವಲ "ಟ್ರೈಲರ್" ಎಂದು ಎಚ್ಚರಿಸಲಾಗಿತ್ತು. ಇದೇ ರೀತಿ ಕಪಿಲ್ ಶರ್ಮಾ ಕೆನಡಾದ ಕೆಫೆ ಮೇಲಿನ ದಾಳಿ, ಚಿತ್ರನಿರ್ಮಾಪಕ ರೋಹಿತ್ ಶೆಟ್ಟಿ ಮನೆ ಮೇಲಿನ ಗುಂಡಿನ ದಾಳಿ ಹಾಗೂ ಪಂಜಾಬಿ ಗಾಯಕರಾದ ಎಪಿ ಧಿಲ್ಲೋ ಹಾಗೂ ಗುರು ರಂಧಾವಾ ಅವರ ಮೇಲಿನ ದಾಳಿಗಳೆಲ್ಲವೂ ಸಲ್ಮಾನ್ ಖಾನ್ ಜತೆಗಿನ ನಂಟಿನ ಕಾರಣಕ್ಕೇ ನಡೆದಿವೆ ಎಂದು ಬಿಷ್ಣೋಯ್ ಗ್ಯಾಂಗ್ ಪ್ರತಿಪಾದಿಸುತ್ತ ಬಂದಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net