ಓಣಂ ಬಂಪರ್​ ಲಾಟರಿ ಬಹುಮಾನ  
ದೇಶ

ಓಣಂ ಬಂಪರ್​ ಲಾಟರಿ ಬಹುಮಾನ ಬರಲಿಲ್ಲ ಅಂತ ಅಂಗಡಿ ಮಾಲಕಿಗೆ ಚಾಕು ಇರಿದ ವ್ಯಕ್ತಿ: 30 ಕೋಟಿ ಒಲಿದಿದ್ದು ಯಾರಿಗೆ? Onam Bumper

ಕೇರಳದ ನೆನ್ಮೆನಿ ಪ್ರದೇಶದಲ್ಲಿ 'ಪೂಂಕಾವನಂ ಲಾಟರಿ' ಹೆಸರಿನ ಅಂಗಡಿ ಇದೆ. ವಿನೀತಾ ರಾಜೀಶ್ ಎಂಬ ಮಹಿಳಾ ಲಾಟರಿ ಮಾರಾಟಗಾರ್ತಿ ಇದೇ ಅಂಗಡಿಯನ್ನು ನಂಬಿ ಜೀವನ ನಡೆಸುತ್ತಿದ್ದಾಳೆ. ಆಕೆಯ ಮೇಲೆ ಗ್ರಾಹಕನೊಬ್ಬ ಭೀಕರವಾಗಿ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದಾನೆ.

ತಿರುವನಂತಪುರಂ : ಕೇರಳದ ವಯನಾಡು ಜಿಲ್ಲೆಯಲ್ಲಿ ಓಣಂ ಬಂಪರ್ ( Onam Bumper ) ಲಾಟರಿ ಲಕ್ಕಿ ಡ್ರಾ ಫಲಿತಾಂಶದ ಬಳಿಕ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ಲಾಟರಿ ಬಹುಮಾನ ಬರಲಿಲ್ಲ ಅಂತ ಗ್ರಾಹಕನೊಬ್ಬ ಅಂಗಡಿ ಮಾಲಕಿಗೆ ಚಾಕು ಇರಿದಿದ್ದಾನೆ.

ಕೇರಳದ ನೆನ್ಮೆನಿ ಪ್ರದೇಶದಲ್ಲಿ 'ಪೂಂಕಾವನಂ ಲಾಟರಿ' ಹೆಸರಿನ ಅಂಗಡಿ ಇದೆ. ವಿನೀತಾ ರಾಜೀಶ್ ಎಂಬ ಮಹಿಳಾ ಲಾಟರಿ ಮಾರಾಟಗಾರ್ತಿ ಇದೇ ಅಂಗಡಿಯನ್ನು ನಂಬಿ ಜೀವನ ನಡೆಸುತ್ತಿದ್ದಾಳೆ. ಆಕೆಯ ಮೇಲೆ ಗ್ರಾಹಕನೊಬ್ಬ ಭೀಕರವಾಗಿ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದಾನೆ.

ತಮಿಳುನಾಡಿನ ಪಟ್ಟವೇಲ್ ಮೂಲದ ಶಿವಕುಮಾರ್ ಎಂಬಾತ ಈ ಕೃತ್ಯವೆಸಗಿದ್ದು, ಸ್ಥಳದಲ್ಲಿದ್ದ ಸಾರ್ವಜನಿಕರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ವಿನೀತಾ ಅವರನ್ನು ಚಿಕಿತ್ಸೆಗಾಗಿ ಬಥೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆರೋಪಿ ಶಿವಕುಮಾರ್ ನಿತ್ಯವೂ ವಿನೀತಾ ಅವರ ಅಂಗಡಿಯಿಂದಲೇ ಲಾಟರಿ ಟಿಕೆಟ್‌ಗಳನ್ನು ಖರೀದಿಸುತ್ತಿದ್ದನಲ್ಲದೆ, ಈ ಬಾರಿಯ ಓಣಂ ಬಂಪರ್ ಟಿಕೆಟ್‌ಗಳನ್ನೂ ಅಲ್ಲಿಯೇ ಖರೀದಿಸಿದ್ದ. ಆದರೆ, ಲಾಟರಿ ಫಲಿತಾಂಶ ಬಂದಾಗ ತನಗೆ ಯಾವುದೇ ಬಹುಮಾನ ಬಂದಿಲ್ಲ ಎಂಬ ತೀವ್ರ ನಿರಾಶೆ ಹಾಗೂ ಆಕ್ರೋಶದಿಂದ ಆತ ಕುದಿಯುತ್ತಿದ್ದ.

ಭಾನುವಾರ ಮಧ್ಯಾಹ್ನ ನೇರವಾಗಿ ಅಂಗಡಿಗೆ ಬಂದ ಶಿವಕುಮಾರ್, ತನಗೆ ಬಂಪರ್ ಪ್ರಶಸ್ತಿ ಸಿಗಲಿಲ್ಲವೆಂದು ವಿನೀತಾ ಅವರೊಂದಿಗೆ ತೀವ್ರ ಮಾತಿಗೆ ಇಳಿದು ವಾಗ್ವಾದ ನಡೆಸಿದ್ದಾನೆ. ಈ ವೇಳೆ ಮಾತು ವಿಕೋಪಕ್ಕೆ ತಿರುಗಿ, ಆಕ್ರೋಶಗೊಂಡ ಆತ ತನ್ನ ಬಳಿಯಿದ್ದ ಚಾಕುವನ್ನು ತೆಗೆದು ವಿನೀತಾ ಅವರ ಕುತ್ತಿಗೆ ಹಾಗೂ ತಲೆ ಭಾಗಕ್ಕೆ ಮನಬಂದಂತೆ ಇರಿದಿದ್ದಾನೆ.

ಮಹಿಳೆಯ ಆಕ್ರಂದನ ಮತ್ತು ಸಹಾಯಕ್ಕಾಗಿ ಅರಚಿದ ಶಬ್ದವನ್ನು ಕೇಳಿ ದೌಡಾಯಿಸಿ ಬಂದ ಸ್ಥಳೀಯರು ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿನೀತಾ ಅವರನ್ನು ರಕ್ಷಿಸಿದ್ದಾರೆ. ಘಟನೆಯ ನಂತರ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ ಆರೋಪಿ ಶಿವಕುಮಾರ್‌ನನ್ನು ಸ್ಥಳೀಯರು ಧೈರ್ಯದಿಂದ ಬೆನ್ನಟ್ಟಿ ಹಿಡಿದು, ನೂಲುಪುಳಾ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಓಣಂ ಹಬ್ಬದ ಸಂಭ್ರಮದ ನಡುವೆ ನಡೆದ ಈ ಅನಿರೀಕ್ಷಿತ ಹಾಗೂ ಮನುಕುಲವೇ ತಲೆತಗ್ಗಿಸುವಂತಹ ಘಟನೆಯು ಇಡೀ ವಯನಾಡು ಪ್ರದೇಶದಲ್ಲಿ ತೀವ್ರ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.

30 ಕೋಟಿ ರೂ. ಬಂಪರ್​ ಯಾರಿಗೆ?

ಕೇರಳ ಸರ್ಕಾರದ ಪ್ರತಿಷ್ಠಿತ ಓಣಂ ಬಂಪರ್ ಲಾಟರಿ ಫಲಿತಾಂಶ ಪ್ರಕಟವಾಗಿದ್ದು, ಬರೋಬ್ಬರಿ 30 ಕೋಟಿ ರೂ.ಗಳ ಪ್ರಥಮ ಬಹುಮಾನವನ್ನು TL 360615 ಸಂಖ್ಯೆಯ ಲಾಟರಿ ಟಿಕೆಟ್ ಪಡೆದುಕೊಂಡಿದೆ. ಕಣ್ಣೂರಿನ ಚಕ್ಕರಕಲ್‌ನಲ್ಲಿರುವ 'ಮುತ್ತು ಲಾಟರಿ ಏಜೆನ್ಸಿ'ಯಿಂದ ಈ ವಿಜೇತ ಟಿಕೆಟ್ ಮಾರಾಟವಾಗಿದೆ. ತಿರುವನಂತಪುರಂನ ಗೋರ್ಕಿಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಕೆ. ಮುರಳೀಧರನ್ ಅವರು ಲಾಟರಿ ಡ್ರಾವನ್ನು ಉದ್ಘಾಟಿಸಿದರು ಹಾಗೂ ಪೂಜಾ ಬಂಪರ್ ಟಿಕೆಟ್ ಬಿಡುಗಡೆಗೊಳಿಸಿದರು.

ಪ್ರಮುಖ ಬಹುಮಾನಗಳು

ದ್ವಿತೀಯ ಬಹುಮಾನ ತಲಾ 1 ಕೋಟಿ ರೂ., ತೃತೀಯ ಬಹುಮಾನ 25 ಲಕ್ಷ ರೂ., ನಾಲ್ಕನೇ ಬಹುಮಾನ 5 ಲಕ್ಷ ರೂ. ಹಾಗೂ ಐದನೇ ಬಹುಮಾನ 2 ಲಕ್ಷ ರೂ. ನೀಡಲಾಗುತ್ತದೆ. ಇದರೊಂದಿಗೆ 5000, 2000, 1000 ಮತ್ತು 500 ರೂ.ಗಳ ಸಮಾಧಾನಕರ ಬಹುಮಾನಗಳೂ ಇವೆ.

ಮೊತ್ತ ಪಡೆಯುವ ವಿಧಾನ

30 ಕೋಟಿ ರೂ.ಗಳ ಪ್ರಥಮ ಬಹುಮಾನಕ್ಕೆ ಅರ್ಹರಾಗಿದ್ದರೆ, ಆದಷ್ಟು ಬೇಗ ಲಾಟರಿ ಇಲಾಖೆಗೆ ಮಾಹಿತಿ ನೀಡಬೇಕು. ಅಗತ್ಯ ದಾಖಲೆಗಳೊಂದಿಗೆ ಟಿಕೆಟ್ ಸಲ್ಲಿಸಿದರೆ, ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡು ಸುಮಾರು 15 ರಿಂದ 20 ದಿನಗಳಲ್ಲಿ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.

ಐತಿಹಾಸಿಕ ದಾಖಲೆ

ರಾಜ್ಯ ಲಾಟರಿ ಇತಿಹಾಸದಲ್ಲೇ ಮೊದಲ ಬಾರಿಗೆ ಮುದ್ರಿಸಲಾದ ಎಲ್ಲಾ 90 ಲಕ್ಷ (9 ಮಿಲಿಯನ್) ಟಿಕೆಟ್‌ಗಳು ಸಂಪೂರ್ಣವಾಗಿ ಮಾರಾಟವಾಗಿವೆ! 30 ಕೋಟಿ ರೂ. ಪ್ರಥಮ ಬಹುಮಾನದ ಈ ಬಂಪರ್ ಟಿಕೆಟ್‌ಗಳ ಮಾರಾಟದಲ್ಲಿ ಪಾಲಕ್ಕಾಡ್ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ (20,95,300 ಟಿಕೆಟ್‌ಗಳು). ತ್ರಿಸ್ಸೂರು ಎರಡನೇ ಸ್ಥಾನದಲ್ಲಿದ್ದರೆ (10,62,000), ತಿರುವನಂತಪುರಂ ಮೂರನೇ ಸ್ಥಾನದಲ್ಲಿದೆ (8,64,100).