Success Story : ವರ್ಷಕ್ಕೆ ₹25 ಲಕ್ಷದಷ್ಟು ಕೈತುಂಬಾ ಸಂಬಳ ಬರುವ ಪ್ರತಿಷ್ಠಿತ ವಿಮಾ ಕಂಪನಿಯ ಉದ್ಯೋಗಿಯೊಬ್ಬರು, ಕಚೇರಿ ಕೆಲಸ ಮುಗಿದ ಬಳಿಕ ತೆಂಗಿನಕಾಯಿ ಮಾರಾಟ ಮಾಡಿ ಒಂದೇ ವರ್ಷದಲ್ಲಿ ಬರೋಬ್ಬರಿ ₹1.17 ಕೋಟಿ ಗಳಿಸಿ ಆದಾಯ ತೆರಿಗೆ (IT) ಅಧಿಕಾರಿಗಳನ್ನೇ ಬೆರಗಾಗಿಸಿದ್ದಾರೆ.
ತಮಿಳುನಾಡಿನ ನಾಗರಕೋಯಿಲ್ ಮೂಲದ ಅನಿತಾ ಎಂಬ ಯುವತಿಯ ಬ್ಯಾಂಕ್ ಖಾತೆಗೆ ಆಕೆಯ ವಾರ್ಷಿಕ ಸಂಬಳಕ್ಕಿಂತ ಹಲವು ಪಟ್ಟು ಹೆಚ್ಚು ಹಣ ಜಮೆಯಾಗಿರುವುದನ್ನು ಕಂಡು ಐಟಿ ಇಲಾಖೆ ತನಿಖೆಗೆ ಇಳಿದಿತ್ತು. ಹಣದ ಮೂಲವನ್ನು ಬಹಿರಂಗಪಡಿಸುವಂತೆ ಅಧಿಕಾರಿಗಳು ನೋಟಿಸ್ ನೀಡಿದಾಗ, "ನಾನು ಆಫೀಸ್ ಅವಧಿಯ ನಂತರ ತೆಂಗಿನಕಾಯಿ ವ್ಯಾಪಾರ ಮಾಡಿ ಈ ಆದಾಯ ಗಳಿಸಿದ್ದೇನೆ" ಎಂದು ಆಕೆ ನೀಡಿದ ಉತ್ತರ ಅಧಿಕಾರಿಗಳನ್ನು ಮತ್ತಷ್ಟು ಗೊಂದಲಕ್ಕೀಡುಮಾಡಿತ್ತು. ಸದ್ಯ ಈ ಕುರಿತಾದ ಆದಾಯ ತೆರಿಗೆ ಇಲಾಖೆಯ ಕ್ರಮ ಮತ್ತು ಆ ಯುವತಿಯ ಕಾನೂನು ಹೋರಾಟ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ.
ನಾಗರಕೋಯಿಲ್ ಮೂಲದ ಅನಿತಾ ಅವರು ತಮ್ಮ ಖಾಸಗಿ ಕಂಪನಿಯ ಕೆಲಸದ ನಂತರದ ಬಿಡುವಿನ ವೇಳೆಯಲ್ಲಿ ತೆಂಗಿನಕಾಯಿ ಮಾರಾಟ ಮಾಡುವ ಉದ್ಯಮವನ್ನು ಆರಂಭಿಸಿದ್ದರು. ಆರಂಭದಲ್ಲಿ ತಮ್ಮದೇ ಸ್ವಂತ ತೋಟದ ತೆಂಗಿನಕಾಯಿಗಳನ್ನು ಮಾರಾಟ ಮಾಡುತ್ತಿದ್ದ ಅವರು, ಕ್ರಮೇಣ ಕನ್ಯಾಕುಮಾರಿ ಜಿಲ್ಲೆಯ ಇತರ ಭಾಗಗಳ ರೈತರಿಂದಲೂ ತೆಂಗಿನಕಾಯಿಗಳನ್ನು ಖರೀದಿಸಿ ಮಾರಾಟ ಮಾಡಲು ಶುರುಮಾಡಿದರು.
ವ್ಯವಹಾರ ವಿಸ್ತರಿಸುತ್ತಿದ್ದಂತೆಯೇ ಕೆಲವು ತೋಟಗಳನ್ನು ಗುತ್ತಿಗೆಗೆ ಪಡೆದು ಸ್ವತಃ ಕೃಷಿ ಮಾಡಲು ಆರಂಭಿಸಿದ ಅನಿತಾ, ಇದಕ್ಕಾಗಿ ಸಹಾಯಕರು ಮತ್ತು ಕಾರ್ಮಿಕರನ್ನೂ ನೇಮಿಸಿಕೊಂಡಿದ್ದರು. ಈ ವಹಿವಾಟಿನ ಮೂಲಕ 2020-21ರ ಆರ್ಥಿಕ ವರ್ಷದಲ್ಲಿ ಅವರು ತಮ್ಮ ಬ್ಯಾಂಕ್ ಖಾತೆಗೆ ₹1.17 ಕೋಟಿ ಹಣವನ್ನು ಜಮೆ ಮಾಡಿದ್ದರು. ವಾರ್ಷಿಕ ₹25 ಲಕ್ಷ ವೇತನ ಪಡೆಯುವ ಉದ್ಯೋಗಿಯ ಖಾತೆಗೆ ಇಷ್ಟೊಂದು ದೊಡ್ಡ ಮೊತ್ತದ ಹಣ ಎಲ್ಲಿಂದ ಬಂತು ಎಂಬ ಅನುಮಾನದ ಮೇಲೆ ಐಟಿ ಇಲಾಖೆ ತನಿಖೆ ಆರಂಭಿಸಿತ್ತು.
ತನಿಖೆಯ ಆರಂಭದಲ್ಲಿ ಅನಿತಾ ಅವರು, ಇದು ಸಂಪೂರ್ಣವಾಗಿ ಕೃಷಿಯಿಂದ ಬಂದ ಆದಾಯವಾಗಿದ್ದು, ತಾವು ಆದಾಯ ತೆರಿಗೆ ಪಾವತಿಸುವ ಅಗತ್ಯವಿಲ್ಲ ಎಂಬ ನಿಲುವು ತಳೆದಿದ್ದರು. ಆದರೆ, ಇದನ್ನು ಒಪ್ಪದ ಆದಾಯ ತೆರಿಗೆ ಇಲಾಖೆಯು, ಇದು ಕೇವಲ ಕೃಷಿ ಆದಾಯವಲ್ಲ ಬದಲಾಗಿ ವ್ಯಾಪಾರದಿಂದ ಬಂದ ಆದಾಯ ಎಂದು ಪರಿಗಣಿಸಿ ಸೆಕ್ಷನ್ 44AD ಅಡಿಯಲ್ಲಿ ಐಟಿಆರ್ (ITR) ಸಲ್ಲಿಸುವಂತೆ ತಿದ್ದುಪಡಿ ಮಾಡಿತು.
ಆದರೆ, ಈ ಕೋಟ್ಯಂತರ ರೂಪಾಯಿ ವಹಿವಾಟನ್ನು ದೃಢೀಕರಿಸಲು ಅನಿತಾ ಅವರ ಬಳಿ ಯಾವುದೇ ಸರಿಯಾದ ಲೆಕ್ಕಪತ್ರದ ಪುಸ್ತಕಗಳು ಅಥವಾ ಹಣಕಾಸಿನ ದಾಖಲೆಗಳು ಇರಲಿಲ್ಲ. ಇದರಿಂದಾಗಿ ಐಟಿ ಇಲಾಖೆಯು ಯುವತಿಯ ವಿವರಣೆಯನ್ನು ತಿರಸ್ಕರಿಸಿ, ಇಡೀ ₹1.17 ಕೋಟಿ ಮೊತ್ತವನ್ನು 'ಲೆಕ್ಕಕ್ಕೆ ಸಿಗದ ಹಣ' ಎಂದು ಘೋಷಿಸಿ, ಅದಕ್ಕೆ ಹೆಚ್ಚಿನ ಪ್ರಮಾಣದ ತೆರಿಗೆ ವಿಧಿಸುವುದಾಗಿ ಆದೇಶಿಸಿತ್ತು.
ಆದಾಯ ತೆರಿಗೆ ಇಲಾಖೆಯ ಈ ನಿರ್ಧಾರವನ್ನು ಪ್ರಶ್ನಿಸಿ ಅನಿತಾ ಅವರು ಚೆನ್ನೈನಲ್ಲಿರುವ ಆದಾಯ ತೆರಿಗೆ ಮೇಲ್ಮನವಿ ಪ್ರಾಧಿಕಾರದ ಮೊರೆ ಹೋಗಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿ ಇತ್ತೀಚೆಗೆ ಮಹತ್ವದ ತೀರ್ಪು ನೀಡಿರುವ ಪ್ರಾಧಿಕಾರವು, ಯುವತಿಯ ವಾದವನ್ನು ಭಾಗಶಃ ಪುರಸ್ಕರಿಸಿದೆ. ಬ್ಯಾಂಕ್ ಖಾತೆಗೆ ಜಮೆಯಾಗಿರುವ ಸಂಪೂರ್ಣ ₹1.17 ಕೋಟಿ ಮೊತ್ತವನ್ನು ಲೆಕ್ಕಕ್ಕೆ ಸಿಗದ ಆಸ್ತಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ. ತೆಂಗಿನಕಾಯಿ ವ್ಯಾಪಾರದಂತಹ ಕ್ಷೇತ್ರಗಳಲ್ಲಿ ನಗದು ವಹಿವಾಟು ಸಾಮಾನ್ಯವಾಗಿರುತ್ತದೆ ಎಂಬ ಯುವತಿಯ ವಾದವನ್ನು ನ್ಯಾಯಾಧಿಕರಣ ಒಪ್ಪಿಕೊಂಡಿದೆ.
ಆದಾಗ್ಯೂ, ವ್ಯವಹಾರಕ್ಕೆ ಸಂಬಂಧಿಸಿದಂತೆ ಯಾವುದೇ ಸೂಕ್ತ ಲೆಕ್ಕಪತ್ರಗಳನ್ನು ನಿರ್ವಹಿಸದ ಕಾರಣಕ್ಕಾಗಿ, ಒಟ್ಟು ವಹಿವಾಟಿನ ಮೊತ್ತವಾದ ₹1.17 ಕೋಟಿಯಲ್ಲಿ ಶೇ. 8 ರಷ್ಟನ್ನು, ಅಂದರೆ ₹9.41 ಲಕ್ಷವನ್ನು ಹೆಚ್ಚುವರಿ ವ್ಯಾಪಾರ ಆದಾಯವೆಂದು ಪರಿಗಣಿಸಿ ಅದಕ್ಕೆ ತೆರಿಗೆ ವಿಧಿಸುವಂತೆ ಪ್ರಾಧಿಕಾರ ನಿರ್ದೇಶನ ನೀಡಿದೆ. ಆದಾಯ ತೆರಿಗೆ ಇಲಾಖೆಯು ಈ ಹಿಂದೆ ವಿಧಿಸಿದ್ದ ₹10.20 ಲಕ್ಷ ತೆರಿಗೆಯ ಜತೆಗೆ ಈ ಹೆಚ್ಚುವರಿ ತೆರಿಗೆಯನ್ನು ಪಾವತಿಸುವಂತೆ ಸೂಚಿಸುವ ಮೂಲಕ ಪ್ರಾಧಿಕಾರವು ಪ್ರಕರಣಕ್ಕೆ ತಾರ್ಕಿಕ ಅಂತ್ಯ ಹಾಡಿದೆ.
ತೆಂಗಿನಕಾಯಿ ಮಾರಾಟದಂತಹ ಗ್ರಾಮೀಣ ಮತ್ತು ಕೃಷಿ ಆಧಾರಿತ ವ್ಯವಹಾರಗಳಲ್ಲಿ ನಗದು ಚಲಾವಣೆ ಸಹಜ ಎಂಬ ಅಂಶವನ್ನು ಈ ತೀರ್ಪು ಎತ್ತಿಹಿಡಿದಿದೆ ಎಂದು ಕಾನೂನು ತಜ್ಞರು ವಿಶ್ಲೇಷಿಸಿದ್ದಾರೆ. ಇನ್ನೊಂದೆಡೆ, ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ವರ್ಷಕ್ಕೆ ₹25 ಲಕ್ಷದಷ್ಟು ಕೈತುಂಬಾ ಸಂಬಳ ಪಡೆಯುತ್ತಿದ್ದರೂ ಕಚೇರಿ ಕೆಲಸದ ನಂತರ ತೆಂಗಿನಕಾಯಿ ಮಾರಾಟ ಮಾಡಲು ಆ ಯುವತಿ ಏಕೆ ನಿರ್ಧರಿಸಿದರು ಮತ್ತು ಅವರ ಈ ಉದ್ಯಮಶೀಲತೆಯ ಹಿಂದಿನ ಗುಟ್ಟೇನು ಎಂಬ ಬಗ್ಗೆ ನೆಟ್ಟಿಗರು ಬಗೆಬಗೆಯಾಗಿ ಚರ್ಚಿಸುತ್ತಿದ್ದಾರೆ, (ಏಜೆನ್ಸೀಸ್).