ಹಳೇ ರಾಜಕೀಯ ದ್ವೇಷಕ್ಕೆ ರಕ್ತಸಿಕ್ತ ತಿರುವು: ನಾಲ್ವರು ಯುವಕರ ಹತ್ಯೆ ಕೇಸ್‌ನಲ್ಲಿ ಮಾಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆಯ ಪುತ್ರಿಯ ಹೆಸರು! Janhvi Malik Case

Janhvi Malik Case
ಹಳೇ ರಾಜಕೀಯ ದ್ವೇಷಕ್ಕೆ ರಕ್ತಸಿಕ್ತ ತಿರುವು: ನಾಲ್ವರು ಯುವಕರ ಹತ್ಯೆ ಕೇಸ್‌ನಲ್ಲಿ ಮಾಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆಯ ಪುತ್ರಿಯ ಹೆಸರು!
Published on: 

ಚಂಡೀಗಢ : ಹರಿಯಾಣದ ರೋಹ್ಟಕ್‌ನಲ್ಲಿ ನಡೆದ ಭೀಕರ ಗುಂಡಿನ ದಾಳಿ ಮತ್ತು ನಾಲ್ವರು ಯುವಕರ ಹತ್ಯೆ ಪ್ರಕರಣವು ಈಗ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ 27 ವರ್ಷಗಳ ಹಳೆಯ ರಕ್ತಸಿಕ್ತ ರಾಜಕೀಯ ದ್ವೇಷದತ್ತ ಬೆರಳು ತೋರಿಸಿದೆ. ನವೆಂಬರ್ 26ರ ರಾತ್ರಿ ದೆಹಲಿ ರಸ್ತೆಯ ಮಿಲನ್ ಢಾಬಾದಲ್ಲಿ ನಡೆದ ಈ ಮಾರಣಹೋಮದ ಹಿಂದೆ ಪಶ್ಚಿಮ ಉತ್ತರ ಪ್ರದೇಶದ ಬಹಾವಡಿ ಗ್ರಾಮದ ಮಾಜಿ ಪಂಚಾಯಿತಿ ಅಧ್ಯಕ್ಷ ಬಬ್ಲಿ ಅವರ ಪುತ್ರಿ ಜಾಹ್ನವಿ ಮಲಿಕ್ ( Janhvi Malik Case ) ಹೆಸರು ಬಲವಾಗಿ ಕೇಳಿಬರುತ್ತಿದೆ. ಗ್ಯಾಂಗ್‌ಸ್ಟರ್ ಸನ್ನಿ ರಿಟೌಲಿಯಾನನ್ನು ಮುಗಿಸಲು ನಡೆದ ಈ ಸಂಚಿನಲ್ಲಿ ಜಾಹ್ನವಿ ಪ್ರಮುಖ ಪಾತ್ರ ವಹಿಸಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿದ್ದು, ಸದ್ಯ ರೋಹ್ಟಕ್ ಪೊಲೀಸರು ಬಹಾವಡಿ ಗ್ರಾಮದಲ್ಲಿ ಬೀಡುಬಿಟ್ಟು ಹಳೆಯ ದ್ವೇಷ ಮತ್ತು ಸಂಬಂಧಗಳ ಜಾಲವನ್ನು ಭೇದಿಸಲು ತನಿಖೆ ತೀವ್ರಗೊಳಿಸಿದ್ದಾರೆ.

ರೋಹ್ಟಕ್‌ನ ಮಿಲನ್ ಢಾಬಾದಲ್ಲಿ ನಡೆದ ಈ ಗುಂಡಿನ ದಾಳಿಯಲ್ಲಿ ನಾಲ್ವರು ಯುವಕರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ದಾಳಿಕೋರರ ಅಸಲಿ ಗುರಿ ಕುಖ್ಯಾತ ಗ್ಯಾಂಗ್‌ಸ್ಟರ್ ಸನ್ನಿ ರಿಟೌಲಿಯಾ ಆಗಿದ್ದನಾದರೂ, ಆತ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಜಾಹ್ನವಿ ಮಲಿಕ್ ಹೆಸರು ಮುನ್ನೆಲೆಗೆ ಬಂದಿದ್ದು, ಇದು ಶಾಮ್ಲಿಯ ಬಹಾವಡಿ ಗ್ರಾಮದಲ್ಲಿ ಕಳೆದ 27 ವರ್ಷಗಳಿಂದ ನಡೆಯುತ್ತಿರುವ ಚುನಾವಣಾ ವೈಷಮ್ಯದ ಕರಾಳ ಇತಿಹಾಸವನ್ನು ಮತ್ತೆ ಕೆದಕಿದೆ. ಈ ಗ್ರಾಮದಲ್ಲಿ ರಾಜಕೀಯ ಮತ್ತು ಸರಪಂಚ್ ಚುನಾವಣೆಯ ದ್ವೇಷಕ್ಕೆ ಇದುವರೆಗೆ ಬರೋಬ್ಬರಿ 11 ಮಂದಿ ಬಲಿಯಾಗಿದ್ದಾರೆ.

Also Read
ಗುರುತು ಸಿಗದಷ್ಟು ಬದಲಾದ ಲಂಕೇಶ್ ಪತ್ರಿಕೆ ನಟಿ ವಸುಂಧರಾ ದಾಸ್: ಇತ್ತೀಚಿನ ಫೋಟೋ ವೈರಲ್...! Vasundhara Das
Janhvi Malik Case

ತನಿಖೆಯ ಪ್ರಕಾರ, ಜಾಹ್ನವಿ ಮಲಿಕ್ ಗ್ಯಾಂಗ್‌ಸ್ಟರ್ ಸನ್ನಿ ರಿಟೌಲಿಯಾನ ಪರಿಚಯ ಮಾಡಿಕೊಂಡು, ಆತನೊಂದಿಗೆ ನಿರಂತರ ಸಂಪರ್ಕದಲ್ಲಿದ್ದಳು ಎನ್ನಲಾಗಿದೆ. ಆತನ ಚಲನವಲನ ಮತ್ತು ಇರುವಿಕೆಯ ಬಗ್ಗೆ ನಿಖರ ಮಾಹಿತಿ ಸಂಗ್ರಹಿಸುತ್ತಿದ್ದ ಜಾಹ್ನವಿ, ದಾಳಿಗೂ ಮುನ್ನ ಸನ್ನಿ ಢಾಬಾದಲ್ಲಿರುವ ಬಗ್ಗೆ ಹಂತಕರಿಗೆ ಸುಳಿವು ನೀಡಿದ್ದಾಳೆ ಎಂದು ಪೊಲೀಸರು ಶಂಕಿಸಿದ್ದಾರೆ. ರೆಸ್ಟೋರೆಂಟ್‌ನಲ್ಲಿ ನಡೆದ ಭೇಟಿ ಒಂದು ಪೂರ್ವನಿಯೋಜಿತ ಸಂಚಾಗಿದ್ದು, ಸನ್ನಿಯ ಕಾಫಿಯಲ್ಲಿ ಮತ್ತು ಬರುವ ಔಷಧಿ ಬೆರೆಸಿ ಆತನನ್ನು ಅಪಹರಿಸುವ ಯೋಜನೆಯೂ ಇತ್ತು ಎನ್ನಲಾಗಿದೆ. ಘಟನೆಯ ಬೆನ್ನಲ್ಲೇ ಜಾಹ್ನವಿ ದೆಹಲಿ ವಿಮಾನ ನಿಲ್ದಾಣದಿಂದ ಬ್ಯಾಂಕಾಕ್‌ಗೆ ಪರಾರಿಯಾಗಿ, ಅಲ್ಲಿಂದ ಜಾರ್ಜಿಯಾದಲ್ಲಿರುವ ಹಿಮಾಂಶು ಭಾವು ಗ್ಯಾಂಗ್‌ನ ಸಂಪರ್ಕಕ್ಕೆ ಬಂದಿದ್ದಾಳೆ ಎಂಬ ವದಂತಿಗಳು ಹರಿದಾಡುತ್ತಿದ್ದು, ಪೊಲೀಸರು ಇದನ್ನು ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ.

ಈ ರಕ್ತಚರಿತ್ರೆಯ ಬೇರುಗಳು 1999ರಲ್ಲಿ ಬಹಾವಡಿ ಗ್ರಾಮದ ಸರಪಂಚ್ ಚುನಾವಣೆಯ ವೇಳೆ ಯಶ್‌ಪಾಲ್ ಮಲಿಕ್ ಮತ್ತು ದೇವೇಂದ್ರ ಮಲಿಕ್ ಗುಂಪುಗಳ ನಡುವೆ ನಡೆದ ಸಂಘರ್ಷದಲ್ಲಿ ಅಡಗಿವೆ. ಅದೇ ವರ್ಷ ಜಿತೇಂದ್ರ ಕುಮಾರ್ ಎಂಬುವವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ನಂತರ 2000ರಲ್ಲಿ ಸುರೇಶ್ ಮಲಿಕ್ ಹಾಗೂ 2001ರಲ್ಲಿ ಅವರ ಸಹೋದರ ಯಶ್‌ಪಾಲ್ ಮಲಿಕ್ ಹತ್ಯೆಯಾಯಿತು. ದ್ವೇಷದ ಜ್ವಾಲೆ ಇಷ್ಟಕ್ಕೇ ನಿಲ್ಲದೆ, ತೇಜ್‌ಪಾಲ್ ಅವರ ಆರು ವರ್ಷದ ಪುತ್ರ ಆನಂದ್ ಮತ್ತು ಮಹೇಂದ್ರ ಅವರ ಪುತ್ರ ರಣವೀರ್ ಅವರನ್ನೂ ಬಲಿಪಡೆಯಿತು. ಮುಂದುವರಿದು 2011ರಲ್ಲಿ ದೇವೇಂದ್ರ ಅವರ ಸಹೋದರ ವಿಜೇಂದ್ರ ಹತ್ಯೆಯಾದರೆ, ನಂತರದ ದಿನಗಳಲ್ಲಿ ಧರ್ಮೇಂದ್ರ ಮತ್ತು ದೇವೇಂದ್ರ ಕೂಡ ಇದೇ ವೈಷಮ್ಯಕ್ಕೆ ಬಲಿಯಾದರು.

ಜಾಹ್ನವಿಯ ತಾಯಿ ಬಬ್ಲಿ ಅವರು ಮೊದಲು ಸುರೇಶ್ ಮಲಿಕ್ ಅವರನ್ನು ವಿವಾಹವಾಗಿದ್ದು, ಅವರಿಗೆ ಸಾಗರ್ ಮತ್ತು ಸೌರಭ್ ಎಂಬ ಇಬ್ಬರು ಪುತ್ರರಿದ್ದಾರೆ. 2000ರಲ್ಲಿ ಸುರೇಶ್ ಹತ್ಯೆಯಾದ ನಂತರ, ಬಬ್ಲಿ ಅವರು ಸುರೇಶ್ ಅವರ ಕಿರಿಯ ಸಹೋದರ ವಿವೇಕ್ ಮಲಿಕ್ (ವಿಕ್ಕಿ) ಅವರನ್ನು ವಿವಾಹವಾದರು. ವಿವೇಕ್ ಆ ಇಬ್ಬರೂ ಮಕ್ಕಳನ್ನು ಬೆಳೆಸಿದರಲ್ಲದೆ, ಬಳಿಕ ಬಬ್ಲಿ ಮತ್ತು ವಿವೇಕ್ ದಂಪತಿಗೆ ಜಾಹ್ನವಿ ಜನಿಸಿದಳು. ಕುಟುಂಬದ ರಾಜಕೀಯ ಹಿನ್ನೆಲೆಯಿಂದಾಗಿ 2015ರಲ್ಲಿ ಬಬ್ಲಿ ಅವರು ಗ್ರಾಮದ ಸರಪಂಚ್ ಆಗಿಯೂ ಆಯ್ಕೆಯಾಗಿದ್ದರು.

Also Read
‘ಆಪರೇಷನ್ ಸಿಂಧೂರ್’ ಸಿನಿಮಾಗೆ ಅರ್ಜುನ್ ಸರ್ಜಾ ಆಕ್ಷನ್ ಕಟ್; ಅಯೋಧ್ಯೆಯಲ್ಲಿ ಮುಹೂರ್ತ | Operation Sindoor Movie
Janhvi Malik Case

ಇನ್ನು ತಮ್ಮ ಪುತ್ರಿಯ ಮೇಲಿನ ಗಂಭೀರ ಆರೋಪಗಳನ್ನು ತಾಯಿ ಬಬ್ಲಿ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಜಾಹ್ನವಿ ದೆಹಲಿಯಲ್ಲಿ ವಾಸವಿದ್ದು, ನಾಗರಿಕ ಸೇವಾ ಪರೀಕ್ಷೆಗಳಿಗೆ (UPSC) ತಯಾರಿ ನಡೆಸುತ್ತಿದ್ದಾಳೆ ಮತ್ತು ಐಎಎಸ್ ಅಧಿಕಾರಿಯಾಗುವುದು ಆಕೆಯ ಕನಸಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ತಿಂಗಳಿಗೊಮ್ಮೆ ಊರಿಗೆ ಬರುತ್ತಿದ್ದ ಆಕೆ, ಹತ್ತು ದಿನಗಳ ಹಿಂದಷ್ಟೇ ಬಹಾವಡಿಗೆ ಬಂದು ಹೋಗಿದ್ದಳು, ಆಕೆಯ ವಿರುದ್ಧ ಕೇಳಿಬಂದಿರುವ ಆರೋಪಗಳೆಲ್ಲವೂ ಸುಳ್ಳು ಎಂದು ಬಬ್ಲಿ ಸಮರ್ಥಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಜಾಹ್ನವಿಯ ಸಮಾಜಸೇವೆಯ ಬಗ್ಗೆ ಚರ್ಚೆ ನಡೆಯುತ್ತಿದ್ದು, ಆಕೆ ರೋಹ್ಟಕ್‌ಗೆ ಯಾವಾಗ ಮತ್ತು ಯಾವ ಸಂದರ್ಭದಲ್ಲಿ ಬಂದಿದ್ದಳು ಹಾಗೂ ಯಾರೊಂದಿಗೆ ಸಂಪರ್ಕದಲ್ಲಿದ್ದಳು ಎಂಬುದರ ಕುರಿತು ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ, (ಏಜೆನ್ಸೀಸ್​).