‘ಆಪರೇಷನ್ ಸಿಂಧೂರ್’ ಸಿನಿಮಾಗೆ ಅರ್ಜುನ್ ಸರ್ಜಾ ಆಕ್ಷನ್ ಕಟ್; ಅಯೋಧ್ಯೆಯಲ್ಲಿ ಮುಹೂರ್ತ | Operation Sindoor Movie

Operation Sindoor Movie
ಆಪರೇಷನ್ ಸಿಂಧೂರ್ ಹಿನ್ನೆಲೆಯ ಸಿನಿಮಾದ ಪೂಜಾ ಕಾರ್ಯಕ್ರಮದಲ್ಲಿ ನಟ ಹಾಗೂ ನಿರ್ದೇಶಕ ಅರ್ಜುನ್ ಸರ್ಜಾ
Published on: 

Operation Sindoor Movie: ಪಹಲ್ಗಾಮ್ ಉಗ್ರ ದಾಳಿ ಹಾಗೂ ಆಪರೇಷನ್ ಸಿಂಧೂರ್ ಘಟನೆಗಳನ್ನಾಧರಿಸಿ ಹೊಸ ಸಿನಿಮಾ ನಿರ್ದೇಶನಕ್ಕೆ ನಟ ಅರ್ಜುನ್ ಸರ್ಜಾ ಸಜ್ಜಾಗಿದ್ದಾರೆ. ಅನೂಪ್ ಮೋಹನ್ ನಿರ್ಮಾಣದಲ್ಲಿ, ಪ್ರೆಸಿಡೆನ್ಷಿಯಲ್ ಮೂವೀಸ್ ಇಂಟರ್‌ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ಮೂಡಿಬರಲಿದೆ. ಈಗಾಗಲೇ ಅಯೋಧ್ಯೆಯಲ್ಲಿ ಚಿತ್ರದ ಮುಹೂರ್ತ ನೆರವೇರಿದ್ದು, ಸಿನಿಮಾ ಒಟ್ಟು 9 ಭಾಷೆಗಳಲ್ಲಿ ತೆರೆಗೆ ಬರಲು ಸಿದ್ಧವಾಗುತ್ತಿದೆ.

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದಲ್ಲಿ ಶನಿವಾರ ಚಿತ್ರದ ಪೂಜಾ ಕಾರ್ಯಕ್ರಮ ನಡೆದಿದ್ದು, ಈ ಸಮಾರಂಭದ ಫೋಟೋಗಳನ್ನು ಚಿತ್ರತಂಡ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.

2025ರ ಏಪ್ರಿಲ್‌ನಲ್ಲಿ ನಡೆದ ಪಹಲ್ಗಾಮ್ ಉಗ್ರ ದಾಳಿ ಹಾಗೂ ಅದಕ್ಕೆ ಪ್ರತಿಯಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ್ ಘಟನೆಗಳ ಸುತ್ತ ಚಿತ್ರದ ಕಥೆ ಸಾಗಲಿದೆ. ನೈಜ ಘಟನೆಗಳನ್ನು ಆಧರಿಸಿ ಸಿನಿಮಾ ನಿರ್ಮಾಣವಾಗುತ್ತಿರುವುದರಿಂದ, ಕಥೆಯಲ್ಲಿ ಯಾವ ವಿಚಾರಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂಬ ಕುತೂಹಲ ಮೂಡಿದೆ.

ಚಿತ್ರದ ಕಥೆ ಮತ್ತು ಚಿತ್ರಕಥೆಯನ್ನು ಮೇಜರ್ ವಿಜಯ್ ಭಾರ್ಗವ್ ಬರೆದಿದ್ದಾರೆ. ಸೇನಾ ಹಿನ್ನೆಲೆ ಹೊಂದಿರುವ ಅವರು, ಸೇವೆ, ತ್ಯಾಗ ಹಾಗೂ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ತಮ್ಮ ಅನುಭವಗಳನ್ನು ಕಥೆಯಲ್ಲಿ ಅಳವಡಿಸುವ ಪ್ರಯತ್ನ ಮಾಡಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.

9 ಭಾಷೆಗಳಲ್ಲಿ ಸಿನಿಮಾ ನಿರ್ಮಾಣವಾಗುತ್ತಿರುವುದು ಚಿತ್ರದ ಮತ್ತೊಂದು ವಿಶೇಷ. ಚಿತ್ರದ ತಾರಾಗಣ, ಚಿತ್ರೀಕರಣ ಹಾಗೂ ಬಿಡುಗಡೆ ಸೇರಿದಂತೆ ಹೆಚ್ಚಿನ ವಿವರಗಳನ್ನು ಚಿತ್ರತಂಡ ಮುಂದಿನ ದಿನಗಳಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ: ಗುರುತು ಸಿಗದಷ್ಟು ಬದಲಾದ ಲಂಕೇಶ್ ಪತ್ರಿಕೆ ನಟಿ ವಸುಂಧರಾ ದಾಸ್: ಇತ್ತೀಚಿನ ಫೋಟೋ ವೈರಲ್...! Vasundhara Das

ನೈಜ ಘಟನೆಗಳ ಹಿನ್ನೆಲೆ ಹೊಂದಿರುವ ಈ ಸಿನಿಮಾ ಯಾವ ರೀತಿಯಲ್ಲಿ ಕಥೆಯನ್ನು ತೆರೆಗೆ ತರುತ್ತದೆ, ವಾಸ್ತವಿಕ ಅಂಶಗಳಿಗೆ ಎಷ್ಟು ಮಹತ್ವ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.