ವಿಮಾನ ಲ್ಯಾಂಡಿಂಗ್ ಆಗುತ್ತಿದ್ದಾಗಲೇ ಕಂಪಿಸಿದ ಭೂಮಿ: ನೋಡುಗರ ಎದೆ ಝಲ್ ಎನಿಸುವ ಭೀಕರ ದೃಶ್ಯ ವೈರಲ್..! Earthquake

ಲ್ಯಾಂಡಿಂಗ್‌ಗೆ ಕ್ಷಣಗಣನೆ ಆರಂಭವಾಗಿದ್ದ 'ಡೆಲ್ಟಾ ಫ್ಲೈಟ್ 1972' ವಿಮಾನಕ್ಕೆ ಏರ್ ಟ್ರಾಫಿಕ್ ಕಂಟ್ರೋಲ್ ನೀಡಿದ ತುರ್ತು ಸೂಚನೆ ಭಾರಿ ಅನಾಹುತವೊಂದನ್ನು ತಪ್ಪಿಸಿದೆ.
Earthquake
ವಿಮಾನ ಲ್ಯಾಂಡಿಂಗ್ ಆಗುತ್ತಿದ್ದಾಗಲೇ ಕಂಪಿಸಿದ ಭೂಮಿ: ನೋಡುಗರ ಎದೆ ಝಲ್ ಎನಿಸುವ ಭೀಕರ ದೃಶ್ಯ ವೈರಲ್..!
Published on: 

ವಾಷಿಂಗ್ಟನ್​: ಅಮೆರಿಕದ ಲಾಸ್ ಏಂಜಲೀಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್​ ಆಗಲು ಸಿದ್ಧವಾಗಿದ್ದ ಡೆಲ್ಟಾ ಏರ್‌ಲೈನ್ಸ್ ವಿಮಾನವೊಂದಕ್ಕೆ ಭೂಕಂಪದ ( Earthquake ) ಆಘಾತ ಎದುರಾದ ಆಘಾತಕಾರಿ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ಭಯಾನಕ ವಿಡಿಯೋ ವೈರಲ್​ ಆಗಿದೆ.

ದಕ್ಷಿಣ ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಶನಿವಾರ ಬೆಳಗ್ಗೆ 5.0 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಈ ವೇಳೆ ವಿಮಾನ ನಿಲ್ದಾಣದ ಲೈವ್‌ಸ್ಟ್ರೀಮ್ ಕ್ಯಾಮೆರಾಗಳು ತೀವ್ರವಾಗಿ ಅಲುಗಾಡಿವೆ. ಭೂಮಿ ಕಂಪಿಸುತ್ತಿದ್ದಂತೆಯೇ ತಕ್ಷಣ ಎಚ್ಚೆತ್ತುಕೊಂಡ ಏರ್ ಟ್ರಾಫಿಕ್ ಕಂಟ್ರೋಲ್ (ATC) ಅಧಿಕಾರಿಗಳು, ರನ್‌ವೇ ಸಮೀಪಿಸುತ್ತಿದ್ದ ವಿಮಾನದ ಪೈಲಟ್‌ಗಳಿಗೆ ಲ್ಯಾಂಡಿಂಗ್ ರದ್ದುಗೊಳಿಸಿ ತಕ್ಷಣವೇ ವಿಮಾನವನ್ನು ಮೇಲಕ್ಕೆ ಹಾರಿಸುವಂತೆ ತುರ್ತು ಸಂದೇಶ ರವಾನಿಸಿದ್ದಾರೆ. ಈ ಭಯಾನಕ ಕ್ಷಣಗಳ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.

ಲ್ಯಾಂಡಿಂಗ್‌ಗೆ ಕ್ಷಣಗಣನೆ ಆರಂಭವಾಗಿದ್ದ 'ಡೆಲ್ಟಾ ಫ್ಲೈಟ್ 1972' ವಿಮಾನಕ್ಕೆ ಏರ್ ಟ್ರಾಫಿಕ್ ಕಂಟ್ರೋಲ್ ನೀಡಿದ ತುರ್ತು ಸೂಚನೆ ಭಾರಿ ಅನಾಹುತವೊಂದನ್ನು ತಪ್ಪಿಸಿದೆ. ವಿಮಾನ ನಿಲ್ದಾಣದ ಲೈವ್ ವಿಡಿಯೋದಲ್ಲಿ ಕ್ಯಾಮೆರಾ ಅಲುಗಾಡುವುದರ ಜತೆಗೆ ಹಿನ್ನೆಲೆಯಲ್ಲಿ ಕಾರುಗಳ ಅಲಾರಾಂಗಳು ಜೋರಾಗಿ ಮೊಳಗುತ್ತಿರುವುದು ಸ್ಪಷ್ಟವಾಗಿ ಕೇಳಿಸಿದೆ. ಈ ವೇಳೆ ಎಟಿಸಿ ಅಧಿಕಾರಿಗಳು, "ಡೆಲ್ಟಾ 1972, ಗೋ ಅರೌಂಡ್ (ಮತ್ತೆ ಸುತ್ತು ಹಾಕಿ), ಇಲ್ಲಿ ದೊಡ್ಡ ಭೂಕಂಪ ಸಂಭವಿಸುತ್ತಿದೆ ಎಂದು ಪೈಲಟ್‌ಗಳಿಗೆ ಎಚ್ಚರಿಕೆ ನೀಡಿದ್ದಾರೆ.

Also Read
ವೈಭವ್ ಸೂರ್ಯವಂಶಿಯನ್ನು ಬೇಗ ಔಟ್ ಮಾಡ್ಬೇಕಾ? ಹಾಗಾದ್ರೆ ಈ ರಣತಂತ್ರ ಪ್ರಯೋಗಿಸಿ ಎಂದ ನ್ಯೂಜಿಲೆಂಡ್‌ ದಿಗ್ಗಜ! Vaibhav Sooryavanshi
Earthquake

ತಕ್ಷಣ ಕಾರ್ಯಪ್ರವೃತ್ತರಾದ ಪೈಲಟ್‌ಗಳು ವಿಮಾನವನ್ನು ರನ್‌ವೇಯಿಂದ ಮೇಲಕ್ಕೆತ್ತಿ ಆಕಾಶದಲ್ಲಿ ಸುರಕ್ಷಿತವಾಗಿ ಸುತ್ತು ಹಾಕಿಸಿದ್ದಾರೆ. ಇದರಿಂದಾಗಿ ಈ ವಿಮಾನವು ನಿಗದಿತ ಸಮಯಕ್ಕಿಂತ 1 ಗಂಟೆ 13 ನಿಮಿಷಗಳ ಕಾಲ ತಡವಾಗಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದೆ ಎಂದು ಫ್ಲೈಟ್‌ಅವೇರ್ ದತ್ತಾಂಶಗಳು ತಿಳಿಸಿವೆ.

ಶನಿವಾರ ಬೆಳಗ್ಗೆ ಸುಮಾರು 9.30ರ (ಸ್ಥಳೀಯ ಕಾಲಮಾನ) ಸುಮಾರಿಗೆ ಸಂಭವಿಸಿದ ಈ ಭೂಕಂಪದ ಕೇಂದ್ರಬಿಂದು ಸಾಂಟಾ ಮೋನಿಕಾ ಕೊಲ್ಲಿಯ ಅಡಿಯಲ್ಲಿ, ಮ್ಯಾನ್‌ಹ್ಯಾಟನ್ ಬೀಚ್‌ನಿಂದ ನೈಋತ್ಯಕ್ಕೆ ಸುಮಾರು 5 ಕಿಲೋಮೀಟರ್ ದೂರದಲ್ಲಿತ್ತು ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (USGS) ಖಚಿತಪಡಿಸಿದೆ.

ಭೂಮಿಯ ಮೇಲ್ಮೈಯಿಂದ ಸುಮಾರು 12 ರಿಂದ 13 ಕಿಲೋಮೀಟರ್ ಆಳದಲ್ಲಿ ಈ ಕಂಪನ ಉಂಟಾಗಿದ್ದು, ಲಾಸ್ ಏಂಜಲೀಸ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರವಾಗಿ ಅನುಭವಕ್ಕೆ ಬಂದಿದೆ. ವಿಮಾನ ನಿಲ್ದಾಣದ ಟರ್ಮಿನಲ್ ಒಳಗೆ ಮೇಲ್ಛಾವಣಿಯ ಟೈಲ್ಸ್‌ಗಳು ಕಳಚಿ ಬಿದ್ದಿವೆ ಎಂದು ವರದಿಯಾಗಿದ್ದು, ಮನೆ ಮತ್ತು ಕಚೇರಿಗಳಲ್ಲಿನ ವಸ್ತುಗಳು ಅಲುಗಾಡುವ ವಿಡಿಯೋಗಳನ್ನು ಸ್ಥಳೀಯರು ಹಂಚಿಕೊಂಡಿದ್ದಾರೆ.

ಭೂಕಂಪದ ಬೆನ್ನಲ್ಲೇ ಲಾಸ್ ಏಂಜಲೀಸ್ ಅಗ್ನಿಶಾಮಕ ದಳ (LAFD) ತಕ್ಷಣವೇ ಕಾರ್ಯಾಚರಣೆಗೆ ಇಳಿದಿದ್ದು, ಎಲ್ಲಾ 106 ನೆರೆಹೊರೆಯ ಅಗ್ನಿಶಾಮಕ ಠಾಣೆಗಳ ಸಿಬ್ಬಂದಿಯನ್ನು ಹಾನಿಯ ಪರಿಶೀಲನೆಗೆ ನಿಯೋಜಿಸಿದೆ. ಸದ್ಯಕ್ಕೆ ಯಾವುದೇ ಪ್ರಾಣಹಾನಿ ಅಥವಾ ಕಟ್ಟಡಗಳಿಗೆ ದೊಡ್ಡ ಮಟ್ಟದ ಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದು ಅಗ್ನಿಶಾಮಕ ದಳದ ವಕ್ತಾರರಾದ ಲಿಂಡ್ಸೆ ಲ್ಯಾಂಟ್ಜ್ ಸ್ಪಷ್ಟಪಡಿಸಿದ್ದಾರೆ.

ಲಾಸ್ ಏಂಜಲೀಸ್ ಮೇಯರ್ ಕರೆನ್ ಬಾಸ್ ಅವರು ಪರಿಸ್ಥಿತಿಯ ಮೇಲೆ ನಿಗಾ ಇರಿಸಿರುವುದಾಗಿ ತಿಳಿಸಿದ್ದು, ಮುಂದಿನ ಕಂಪನಗಳಿಗೆ ಸಿದ್ಧರಾಗಿರುವಂತೆ ಹಾಗೂ "ಬಗ್ಗಿ, ರಕ್ಷಿಸಿಕೊಳ್ಳಿ ಮತ್ತು ಗಟ್ಟಿಯಾಗಿ ಹಿಡಿದುಕೊಳ್ಳಿ" ಎಂಬ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ನಾಗರಿಕರಿಗೆ ಮನವಿ ಮಾಡಿದ್ದಾರೆ. ಕ್ಯಾಲಿಫೋರ್ನಿಯಾ ಗವರ್ನರ್ ಅವರ ತುರ್ತು ಸೇವೆಗಳ ಕಚೇರಿ ಕೂಡ ಸಾರ್ವಜನಿಕರಿಗೆ ಎಚ್ಚರಿಕೆಯಿಂದಿರಲು ಸೂಚಿಸಿದೆ.

Also Read
ಸಾಗರದ ಗರ್ಭದಲ್ಲಿ ಅಡಗಿದೆ ಸಾವಿನ ಬೆರಳು: ಅಂಟಾರ್ಕ್ಟಿಕಾ ಸಮುದ್ರದಾಳದ ಭಯಾನಕ ರಹಸ್ಯ ಬಯಲು...! Strange Phenomenon
Earthquake

ಪ್ರಬಲ ಭೂಕಂಪದ ನಂತರ ಕರಾವಳಿ ಭಾಗದಲ್ಲಿ ಸುನಾಮಿ ಭೀತಿ ಎದುರಾಗಿತ್ತಾದರೂ, ಅಮೆರಿಕದ ರಾಷ್ಟ್ರೀಯ ಸುನಾಮಿ ಎಚ್ಚರಿಕೆ ಕೇಂದ್ರವು ಯಾವುದೇ ಸುನಾಮಿ ಅಪಾಯವಿಲ್ಲ ಎಂದು ಅಧಿಕೃತವಾಗಿ ಘೋಷಿಸಿದೆ. ಇತ್ತೀಚಿನ ಭೂಕಂಪದಿಂದ ಯಾವುದೇ ಸುನಾಮಿ ಅಥವಾ ಅಪಾಯವಿಲ್ಲ ಎಂದು ಕೇಂದ್ರವು ಸ್ಪಷ್ಟಪಡಿಸಿದೆ.

ಮತ್ತೊಂದೆಡೆ, ವಿಮಾನ ನಿಲ್ದಾಣದ ಸಮೀಪವಿರುವ ಚೆವ್ರಾನ್‌ನ ಎಲ್ ಸೆಗುಂಡೋ ತೈಲ ಸಂಸ್ಕರಣಾಗಾರದಿಂದ ಭೂಕಂಪದ ನಂತರ ಭಾರಿ ಬೆಂಕಿಯ ಜ್ವಾಲೆಗಳು ಕಾಣಿಸಿಕೊಂಡಿದ್ದು ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿತ್ತು. ಆದರೆ, ಎಲ್ ಸೆಗುಂಡೋ ನಗರ ಆಡಳಿತವು ಈ ಕುರಿತು ಸ್ಪಷ್ಟನೆ ನೀಡಿದ್ದು, ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾದಾಗ ಹೆಚ್ಚುವರಿ ಅನಿಲವನ್ನು ಸುಡುವ ಸುರಕ್ಷತಾ ಪ್ರಕ್ರಿಯೆಯ ಭಾಗವಾಗಿ ಈ ಬೆಂಕಿ ಕಾಣಿಸಿಕೊಂಡಿದೆಯೇ ಹೊರತು, ಇದು ಭೂಕಂಪದ ಹಾನಿಯಿಂದ ಸಂಭವಿಸಿದ್ದಲ್ಲ ಎಂದು ತಿಳಿಸುವ ಮೂಲಕ ಜನರ ಆತಂಕವನ್ನು ದೂರ ಮಾಡಿದೆ, (ಏಜೆನ್ಸೀಸ್​).