ಜ್ಯೋತಿಷಿ ಕ್ಯಾಪ್ಟನ್ ಅಶೋಕ್ ಖರತ್ ಜೊತೆ ರೂಪಾಲಿ ಚಕಂಕರ್
ಮುಂಬೈ: ಮಹಿಳೆಯರನ್ನು ಲೈಂಗಿಕವಾಗಿ ಶೋಷಣೆ(Sexual assault) ಮಾಡಿದ ಆರೋಪದ ಮೇಲೆ ಮಹಾರಾಷ್ಟ್ರದ ಖ್ಯಾತ ಸ್ವಯಂಘೋಷಿತ ದೇವಮಾನವ ಮತ್ತು ಜ್ಯೋತಿಷಿ ಕ್ಯಾಪ್ಟನ್ ಅಶೋಕ್ ಖರತ್ ಅವರನ್ನು ನಾಸಿಕ್ನಲ್ಲಿ ಬುಧವಾರ(ಮಾ. 18) ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಆರೋಪಿ ಖರತ್ ಮಹಾರಾಷ್ಟ್ರದ ಹಲವಾರು ರಾಜಕಾರಣಿಗಳು, ಕೈಗಾರಿಕೋದ್ಯಮಿಗಳು ಮತ್ತು ಸೆಲೆಬ್ರಿಟಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆಂದು ತಿಳಿದುಬಂದಿದೆ. ಅವರ ಮೊಬೈಲ್ನಲ್ಲಿ ಸುಮಾರು ಮಹಿಳೆಯರ 58 ಅಶ್ಲೀಲ ವಿಡಿಯೋಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಖರತ್ ಮಹಿಳೆಯರಿಗೆ ಕುಡಿಸಿ, ಅದರ ವಿಡಿಯೋ ಮಾಡಿ, ನಂತರ ಆ ಧ್ವನಿಮುದ್ರಿಕೆಗಳನ್ನು ಬಳಸಿಕೊಂಡು ಅವರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ. ಆತನ ವಿರುದ್ಧ ಅತ್ಯಾಚಾರ ಆರೋಪಗಳನ್ನು ಹೊರಿಸಲಾಗಿದ್ದು, ಔಪಚಾರಿಕ ದೂರು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಹಲವಾರು ಸೆಲೆಬ್ರಿಟಿಗಳು, ಕೈಗಾರಿಕೋದ್ಯಮಿಗಳು ಹಾಗೂ ರಾಜಕಾರಣಿಗಳು ಸಲಹೆಗಾಗಿ ಅವರನ್ನು ಸಂಪರ್ಕಿಸುತ್ತಿದ್ದರು. ಖರತ್ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿಯಾಗಿದ್ದು, ವಿಶ್ವವಿಜ್ಞಾನ ಮತ್ತು ಅಂಕಗಣಿತದಲ್ಲಿ ಪರಿಣಿತರಾಗಿದ್ದರು. ಅವರು ನಾಸಿಕ್ ಮತ್ತು ಇತರ ಮಹಾನಗರಗಳಲ್ಲಿ ಹಲವಾರು ಎಕರೆ ಭೂಮಿಯನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.
ಇನ್ನೂ ಜ್ಯೋತಿಷಿ ಖರತ್ ಅವರ ಬಂಧನ ಮಹಾರಾಷ್ಟ್ರ ರಾಜಕೀಯದಲ್ಲಿ ಹಲಚಲ್ ಸೃಷ್ಟಿಸಿದ್ದು, ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಕಂಕರ್ ಮತ್ತು ಏಕನಾಥ್ ಶಿಂಧೆ ಅವರೊಂದಿಗಿನ ಖರತ್ ಅವರ ಛಾಯಾಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ಈ ಕುರಿತು ಮಾತನಾಡಿರುವ ಶಿವಸೇನೆಯ (ಯುಬಿಟಿ) ವಕ್ತಾರೆ ಸುಷ್ಮಾ ಅಂಧರೆ, ಮಹಿಳಾ ಆಯೋಗದ ಅಧ್ಯಕ್ಷೆ ಸ್ಥಾನಕ್ಕೆ ರೂಪಾಲಿ ಚಕಂಕರ್ ತಕ್ಷಣ ರಾಜೀನಾಮೆ ನೀಡಬೇಕು. ಖರತ್ ಅವರ ಚಟುವಟಿಕೆಗಳ ಬಗ್ಗೆ ರೂಪಾಲಿಯವರಿಗೆ ತಿಳಿದಿರಬಹುದು ಮತ್ತು ಅವರಿಗೆ ರಾಜಕೀಯ ರಕ್ಷಣೆ ನೀಡಬಹುದು. ನ್ಯಾಯಯುತ ತನಿಖೆ ನಡೆಯಬೇಕಾದರೆ ರೂಪಾಲಿಯವರು ಮಹಿಳಾ ಆಯೋಗದ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಯಬೇಕೆಂದು ಒತ್ತಾಯಿಸಿದ್ದಾರೆ.
ಇನ್ನೂ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಕಂಕರ್, ಸಾಮಾಜಿಕ ಕಾರ್ಯಕ್ಕಾಗಿ ಶಿವನಿಕಾ ಟ್ರಸ್ಟ್ ನಡೆಸಿದ ಸಭೆಗಳಲ್ಲಿ ಅವರೊಂದಿಗೆ ಭಾಗವಹಿಸಿದ್ದೇನೆ. ಆದರೆ ಖರತ್ ಅವರ ವಿರುದ್ಧದ ಆರೋಪಗಳ ಬಗ್ಗೆ ನಮಗೆ ತಿಳಿದಿಲ್ಲ. ಸತ್ಯವನ್ನು ತಿಳಿಯಲು ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಲಿ ಎಂದಿದ್ದಾರೆ (ಏಜೆನ್ಸೀಸ್).