ಇಡಿ ಶೋಧಕ್ಕೆ ಅಡ್ಡಿ; ತನಿಖೆಗೆ ಅಡ್ಡಿಪಡಿಸುವುದು ಒಳ್ಳೆಯ ಬೆಳವಣಿಗೆಯಲ್ಲ; ಸಿಎಂ ಮಮತಾ ಬ್ಯಾನರ್ಜಿ ನಡೆಗೆ ಸುಪ್ರೀಂ ಗರಂ | Supreme Court

ಸಿಎಂ ಮಮತಾ ಬ್ಯಾನರ್ಜಿ
ಸಿಎಂ ಮಮತಾ ಬ್ಯಾನರ್ಜಿ
Published on
ನವದೆಹಲಿ: ಜಾರಿ ನಿರ್ದೇಶನಲಾಯದ ತನಿಖೆಗೆ ಅಡ್ಡಿ ಪಡಿಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಸರ್ವೋಚ್ಚ ನ್ಯಾಯಾಲಯ(Supreme Court) ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಗರಂ ಆಗಿದ್ದು, ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಬುಧವಾರ(ಮಾ. 18) ಆಕ್ರೋಶ ವ್ಯಕ್ತಪಡಿಸಿದೆ.
ಜನವರಿ ತಿಂಗಳಲ್ಲಿ ಕಲ್ಲಿದ್ದಿಲು ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣಾ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್ ಸಂಸ್ಥೆಯ ಕಚೇರಿ ಮತ್ತು ಅದರ ಮಾಲೀಕ ಪ್ರತೀಕ್ ಜೈನ್ ಮನೆ ಮೇಲೆ ದಾಳಿ ಮಾಡಿದ ಸಮಯದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಸ್ಥಳಕ್ಕೆ ತೆರಳಿ ಅಧಿಕಾರಿಗಳ ಶೋಧಕ್ಕೆ ಅಡ್ಡಿಪಡಿಸಿ, ಅಲ್ಲಿದ್ದ ಕೆಲವು ದಾಖಲೆಗಳನ್ನು ಹೊತ್ತೊಯ್ದಿದ್ದು ಭಾರಿ ಸಂಚಲನ ಸೃಷ್ಟಿಸಿತ್ತು.
ಈ ಕುರಿತು ತಮ್ಮ ಕರ್ತವ್ಯಕ್ಕೆ ಸಿಎಂ ಮಮತಾ ಬ್ಯಾನರ್ಜಿ ಅಡ್ಡಿಪಡಿಸಿದ್ದಾರೆ ಮತ್ತು ಅವರ ವಿರುದ್ಧ ಕ್ರಮಕ್ಕೆ ಅನುಮತಿ ನೀಡುವಂತೆ ಕೋರಿ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​ನ ನ್ಯಾ. ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ನ್ಯಾ. ಎನ್ ವಿ ಅಂಜಾರಿಯಾ ನೇತೃತ್ವದ ಪೀಠವು ಆಕ್ರೋಶ ವ್ಯಕ್ತಪಡಿಸಿದೆ.
ರಾಜ್ಯದ ಮುಖ್ಯಮಂತ್ರಿಯೊಬ್ಬರು ಕೇಂದ್ರ ತನಿಖಾ ಸಂಸ್ಥೆಯ ಚಟುವಟಿಕೆಗಳಿಗೆ ಅಡ್ಡಿಪಡಿಸುತ್ತಾರೆಯೇ? ಇದಕ್ಕೆ ಪರಿಹಾರವೇನು? ಮತ್ತೊಂದು ರಾಜ್ಯದ ಸಿಎಂ ಕೂಡ ಇದೇ ರೀತಿ ಮಾಡಿದರೆ ಪರಿಸ್ಥಿತಿ ಏನಾಗುತ್ತದೆ? ಇದಕ್ಕೆ ಪರಿಹಾರವಿದ್ದಾಗ, ನಾವು ಸೂಕ್ತವಾಗಿ ಪ್ರತಿಕ್ರಿಯಿಸಬೇಕು ಎಂದು ಹೇಳಿ ಮುಂದಿನ ವಾರಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಜನವರಿ 8 ರಂದು, ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿರುವ ಐ-ಪ್ಯಾಕ್ ಕಚೇರಿ ಮತ್ತು ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಇಡಿ ದಾಳಿ ನಡೆಸಿತು. ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಈ ದಾಳಿಗಳನ್ನು ನಡೆಸಲಾಯಿತು. ಆದಾಗ್ಯೂ, ಸಿಎಂ ಮಮತಾ ಬ್ಯಾನರ್ಜಿ ಈ ದಾಳಿ ಸಮಯದಲ್ಲಿ ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆಗೆ ಹೋಗಿ ಇಡಿ ಚಟುವಟಿಕೆಗಳಿಗೆ ಅಡ್ಡಿಪಡಿಸಿದರು. ಇದಲ್ಲದೆ, ಅವರು ಪ್ರತೀಕ್ ಜೈನ್ ಅವರ ಲ್ಯಾಪ್‌ಟಾಪ್ ಮತ್ತು ಇತರ ಕೆಲವು ಪ್ರಮುಖ ದಾಖಲೆಗಳನ್ನು ತೆಗೆದುಕೊಂಡು ಬಂದು ಹೊರಗಡೆ ಸುದ್ದಿಗೋಷ್ಠಿ ನಡೆಸಿದ್ದರು.
ಇಡಿ ಅಧಿಕಾರಿಗಳು ನಮ್ಮ ಪಕ್ಷದ ಚುನಾವಣಾ ತಂತ್ರಗಾರಿಕೆ ಮತ್ತು ಅಭ್ಯರ್ಥಿಗಳ ಪಟ್ಟಿಯನ್ನು ಕದಿಯಲು ಪ್ರಯತ್ನಿಸಿದ್ದಾರೆ. ಅದಕ್ಕೆ ನಾನು ಇಲ್ಲಿಂದ ಪಕ್ಷಕ್ಕೆ ಸಂಬಂಧಿಸಿದ ದಾಖಲೆಗಳನ್ನು ತೆಗೆದುಕೊಂಡು ಹೋಗುತ್ತಿದ್ದೇನೆ ಎಂದು ಹೇಳಿದ್ದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net