ಲಖನೌ: ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ನಡುವೆ ಮುಂಬರುವ 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಸೀಟು ಹಂಚಿಕೆ ವಿಚಾರದಲ್ಲಿ ಆರಂಭಿಕ ಭಿನ್ನಾಭಿಪ್ರಾಯ ದಿನೇ ದಿನೇ ಹೆಚ್ಚಾಗುತ್ತಲೇ ಇದ್ದು, ಈ ನಡುವೆ ಎಸ್‌ಪಿ ಸಂಸದ ಶಿವಪಾಲ್ ಸಿಂಗ್ ಪಟೇಲ್ (Shiv Pal Singh Patel) ಕಾಂಗ್ರೆಸ್‌ಗೆ 150 ಕ್ಷೇತ್ರಗಳನ್ನು ಬಿಟ್ಟುಕೊಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಸೀಟು ಹಂಚಿಕೆಯ ಮಾತುಕತೆಗಳು ಇದೇ ತಿಂಗಳಲ್ಲಿ ನಡೆಯುವ ನಿರೀಕ್ಷೆ ಇದ್ದು, ಈ ನಡುವೆ ಕಾಂಗ್ರೆಸ್‌ನ ಉತ್ತರ ಪ್ರದೇಶ ಉಸ್ತುವಾರಿ ರಾಜೇಂದ್ರ ಪಾಲ್ ಗೌತಮ್, ಮೈತ್ರಿಕೂಟದ ವ್ಯವಸ್ಥೆಯಡಿ ತಮ್ಮ ಪಕ್ಷವು ರಾಜ್ಯದ 403 ವಿಧಾನಸಭಾ ಕ್ಷೇತ್ರಗಳಲ್ಲಿ 150 ಕ್ಕಿಂತ ಕಡಿಮೆ ಸ್ಥಾನಗಳಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆಜ್ ತಕ್ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಎಸ್‌ಪಿ ಸಂಸದ ಪಟೇಲ್, ಉತ್ತರ ಪ್ರದೇಶದಲ್ಲಿ ಆ ಪಕ್ಷದ ಚುನಾವಣಾ ಸ್ಥಾನಮಾನಕ್ಕೆ ತಕ್ಕಂತೆ ಸೀಟು ಹಂಚಿಕೆ ಇರಬೇಕು, ಸುಖಾಸುಮ್ಮನೆ 150 ಸ್ಥಾನಗಳು ಬೇಕು ಎನ್ನುವುದು ಸರಿಯಲ್ಲ, ಅವರಿಗೆ 50 ಸ್ಥಾನಗಳನ್ನು ನೀಡುವುದೇ ಒಂದು ದೊಡ್ಡ ವಿಷಯ ಎಂದಿದ್ದಾರೆ. ಇಷ್ಟಾಗಿಯೂ ಮುಂಬರುವ ವಿಧಾನಸಭಾ ಚುನಾವಣೆಗೆ ಎಸ್‌ಪಿ-ಕಾಂಗ್ರೆಸ್ ಮೈತ್ರಿ ಮುಂದುವರಿಯಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಎರಡೂ ಪಕ್ಷಗಳು ಇನ್ನೂ ತಮ್ಮ ಸೀಟು ಹಂಚಿಕೆಯ ಸೂತ್ರವನ್ನು ಅಧಿಕೃತವಾಗಿ ಅಂತಿಮಗೊಳಿಸುವುದಕ್ಕು ಮುಂಚೆಯೇ ಈ ಭಿನ್ನಾಭಿಪ್ರಾಯ ತಲೆದೋರಿದ್ದು, ರಾಜ್ಯದಲ್ಲಿ ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ ಸೀಟು ಹಂಚಿಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
2024ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಹುಲ್ ಗಾಂಧಿ ರಾಯ್‌ಬರೇಲಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ನಿರ್ಧಾರದ ಕುರಿತಾಗಿಯೂ ಪಟೇಲ್ ಮಾತನಾಡಿದ್ದು, ಅವರಿಗೆ ಅಲ್ಲಿಂದ ಸ್ಪರ್ಧಿಸಲು ಭಯವಿತ್ತು. ಈ ವಿಷಯವಾಗಿ ಅಖಿಲೇಶ್ ಯಾದವ್ ಜೊತೆ ಮಾತನಾಡಿದಾಗ, ನೀವು ಸ್ಪರ್ಧಿಸದಿದ್ದರೆ ನಾನೇ ಸ್ವಂತ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಅಖಿಲೇಶ್ ಹೇಳಿದರು. ಆ ಬಳಿಕವಷ್ಟೇ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸಿದರು ಎಂದು ಪಟೇಲ್ ತಿಳಿಸಿದ್ದಾರೆ.
ರಾಹುಲ್ ಗಾಂಧಿ ಅಂತಿಮವಾಗಿ 2024ರ ಲೋಕಸಭಾ ಚುನಾವಣೆಯಲ್ಲಿ ರಾಯ್‌ಬರೇಲಿಯಿಂದ ಸ್ಪರ್ಧಿಸಿ ಜಯಗಳಿಸಿದರು. ಈ ಕ್ಷೇತ್ರವು ಸಾಂಪ್ರದಾಯಿಕವಾಗಿ ಕಾಂಗ್ರೆಸ್‌ಗೆ ನಂಟನ್ನು ಹೊಂದಿದ್ದು, ಹಿಂದೆ ಸೋನಿಯಾ ಗಾಂಧಿ ಅವರು ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
ಕಳೆದ ವಾರ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಾಜೇಂದ್ರ ಪಾಲ್ ಗೌತಮ್ ಅವರು, 2027ರ ವಿಧಾನಸಭಾ ಚುನಾವಣೆಯ ಮೈತ್ರಿಕೂಟದ ಭಾಗವಾಗಿ ಕಾಂಗ್ರೆಸ್ 150ಕ್ಕಿಂತ ಕಡಿಮೆ ಸ್ಥಾನಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಎಸ್‌ಪಿ ಸಂಸದರ ಈ ಪ್ರತಿಕ್ರಿಯೆ ಬಂದಿದೆ. ಈ ತಿಂಗಳಲ್ಲಿ ಸೀಟು ಹಂಚಿಕೆ ಅಂತಿಮಗೊಳ್ಳುವ ಸಾಧ್ಯತೆ ಇದ್ದು, 403 ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಅಭ್ಯರ್ಥಿಗಳಿದ್ದು, ಮೈತ್ರಿಕೂಟದಡಿ ಶೇ. 50ರಷ್ಟು ಸೀಟುಗಳು ಸಿಗಬೇಕು. ನಾವು 150ಕ್ಕಿಂತ ಕಡಿಮೆ ಸ್ಥಾನಗಳಲ್ಲಿ ಸ್ಪರ್ಧಿಸುವುದಿಲ್ಲ ಎಂದು ಎಎನ್‌ಐಗೆ ಗೌತಮ್ ತಿಳಿಸಿದ್ದಾರೆ.
ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ 2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಾಗಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದವು. ಆ ಸಂದರ್ಭದಲ್ಲಿ ಎರಡೂ ಪಕ್ಷಗಳು 298:105 ರ ಸೀಟು ಹಂಚಿಕೆ ಸೂತ್ರವನ್ನು ಒಪ್ಪಿಕೊಂಡಿದ್ದವು. ಈ ವ್ಯವಸ್ಥೆಯಡಿಯಲ್ಲಿ, ರಾಜ್ಯದ ಒಟ್ಟು 403 ವಿಧಾನಸಭಾ ಕ್ಷೇತ್ರಗಳ ಪೈಕಿ ಎಸ್‌ಪಿ 298 ಸ್ಥಾನಗಳಲ್ಲಿ ಸ್ಪರ್ಧಿಸಬೇಕಿದ್ದರೆ, ಕಾಂಗ್ರೆಸ್‌ಗೆ 105 ಸ್ಥಾನಗಳನ್ನು ಹಂಚಿಕೆ ಮಾಡಲಾಗಿತ್ತು. ಆದಾಗ್ಯೂ, ಈ ಸೂತ್ರವು ಕೆಲವು ಅನುಷ್ಠಾನದ ಸಮಸ್ಯೆಗಳನ್ನು ಎದುರಿಸಿತು ಮತ್ತು ಅಂತಿಮವಾಗಿ ಎರಡೂ ಪಕ್ಷಗಳು ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದವು. 2017ರ ಚುನಾವಣೆಯಲ್ಲಿ ಎಸ್‌ಪಿ 311 ಸ್ಥಾನಗಳಲ್ಲಿ ಸ್ಪರ್ಧಿಸಿದರೆ, ಕಾಂಗ್ರೆಸ್ 114 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಅಂತಿಮವಾಗಿ ಎಸ್‌ಪಿ 47 ಸ್ಥಾನಗಳನ್ನು ಗೆದ್ದುಕೊಂಡರೆ, ಕಾಂಗ್ರೆಸ್ ಪಕ್ಷವು ಕೇವಲ ಏಳು ಸ್ಥಾನಗಳಿಗೆ ತೃಪ್ತಿಪಡಬೇಕಾಯಿತು.
ಮುಂಬರುವ ಚುನಾವಣೆಗೆ ಸೀಟು ಹಂಚಿಕೆ ಕಸರತ್ತು ಸದ್ಯದ ಮಟ್ಟಿಗೆ ಕಗ್ಗಂಟಾಗಿಯೇ ಉಳಿದಿದ್ದು, ಇದರ ಭಾಗವಾಗಿಯೇ ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಇತ್ತೀಚಿನ ಇಂಡಿಯಾ ಕೂಟದ ಸಭೆಗೂ ಗೈರಾಗಿದ್ದರು ಎಂದು ತಿಳಿದುಬಂದಿದೆ. ಕಾಂಗ್ರೆಸ್ ಪಕ್ಷವು ಕನಿಷ್ಠ 150 ಸ್ಥಾನಗಳಲ್ಲಿ ಸ್ಪರ್ಧಿಸಲು ಪಟ್ಟುಹಿಡಿದಿದ್ದರೆ, ಸಮಾಜವಾದಿ ಪಕ್ಷವು ಚುನಾವಣಾ ಕಾರ್ಯಕ್ಷಮತೆ ಹಾಗೂ 2024ರ ಲೋಕಸಭಾ ಫಲಿತಾಂಶದ ಆಧಾರದ ಮೇಲೆ ಕೇವಲ 53 ರಿಂದ 55 ಸ್ಥಾನಗಳನ್ನು ಮಾತ್ರ ಬಿಟ್ಟುಕೊಡಲು ಚಿಂತಿಸಿದೆ.
ಎಸ್‌ಪಿ ಸ್ವತಃ ಸುಮಾರು 350 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸಿದೆ. 2017ರ ಮೈತ್ರಿಕೂಟದ ಕಹಿ ಅನುಭವಗಳ ಹಿನ್ನೆಲೆಯಲ್ಲಿ, ಪ್ರಸ್ತುತ ಸೀಟು ಹಂಚಿಕೆ ವಿಚಾರವಾಗಿ ಎರಡೂ ಪಕ್ಷಗಳ ನಡುವೆ ಬಿಕ್ಕಟ್ಟು ಮುಂದುವರಿದಿದ್ದು, ಅಂತಿಮ ಒಪ್ಪಂದ ಹೇಗಿರಲಿದೆ ಎಂಬುದು ಇಡೀ ರಾಷ್ಟ್ರದ ಕುತುಹಲ ಹೆಚ್ಚಿಸಿದೆ(ಏಜೆನ್ಸೀಸ್).