ನವದೆಹಲಿ: ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಇಂಡಿಯಾ ಮೈತ್ರಿಕೂಟವು ಸುಪ್ರೀಂ ಕೋರ್ಟ್ ಕಡೆಗೆ ಹಮ್ಮಿಕೊಂಡಿರುವ ಪಾದಯಾತ್ರೆಯು ನ್ಯಾಯಾಂಗ ವ್ಯವಸ್ಥೆಯನ್ನು ಬೆದರಿಸುವ ಯತ್ನವಾಗಿದೆ ಎಂದು ಬಿಜೆಪಿ ಸಂಸದ ಅನುರಾಗ್ ಠಾಕೂರ್ (Anurag Thakur) ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಸದ ಠಾಕೂರ್, ರಾಹುಲ್ ಗಾಂಧಿ ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ನಿರಂತರವಾಗಿ ಆರೋಪಗಳನ್ನು ಮಾಡುತ್ತಾ ಬಂದು, ಕೊನೆಗೆ ಕಾನೂನಿನೆದುರು ಹಿನ್ನಡೆ ಅನುಭವಿಸುತ್ತಾರೆ ಅಥವಾ ಕ್ಷಮೆ ಯಾಚಿಸುತ್ತಾರೆ. ಕಾಂಗ್ರೆಸ್ ನಾಯಕರ ಧೋರಣೆಯು ನಿರಂತರ ಚುನಾವಣಾ ಸೋಲುಗಳಿಂದ ಪ್ರೇರಿತವಾಗಿವೆ. ಅವರ ಆರೋಪಗಳೆಲ್ಲವೂ ಗಾಳಿಯಲ್ಲಿ ಗುಂಡು ಹಾರಿಸಿದಂತೆ ಎಂದು ಟೀಕಿಸಿದ್ದಾರೆ.
ತಮ್ಮ ಬೇಡಿಕೆ ಈಡೇರದಿದ್ದರೆ ಬೀದಿಗಿಳಿದು ಪ್ರತಿಭಟನೆ ನಡೆಸುವುದಾಗಿ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಬಿಜೆಪಿ ಸಂಸದ ಅನುರಾಗ್ ಠಾಕೂರ್ ಗಂಭೀರವಾಗಿ ಆರೋಪಿಸಿದ್ದಾರೆ. ಇಂತಹ ಕ್ರಮಗಳು ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ದುರ್ಬಲಗೊಳಿಸಬಹುದು ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಆಡಳಿತಾತ್ಮಕ ಸಭೆಗಳನ್ನು ಕೋರುವ ಬದಲು ಸುಪ್ರೀಂ ಕೋರ್ಟ್ ಸೂಚಿಸಿದಂತೆ ಔಪಚಾರಿಕವಾಗಿ ಅರ್ಜಿ ಸಲ್ಲಿಸುವ ಮಾರ್ಗವನ್ನು ಅನುಸರಿಸುವುದನ್ನು ಬಿಟ್ಟು, ಸಾಂವಿಧಾನಿಕ ಸಂಸ್ಥೆಗಳ ಮೇಲೆ ಒತ್ತಡ ಹೇರುವ ಧೋರಣೆಯನ್ನು ವಿಪಕ್ಷಗಳು ಮುಂದುವರಿಸಿವೆ ಎಂದು ಠಾಕೂರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನ್ಯಾಯಾಲಯವು ಔಪಚಾರಿಕವಾಗಿ ಅರ್ಜಿ ಸಲ್ಲಿಸುವ ಸರಿಯಾದ ಕಾನೂನು ಮಾರ್ಗವನ್ನು ಸೂಚಿಸಿದ್ದರೂ, ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗ, ಇವಿಎಂಗಳು ಹಾಗೂ ಮುಖ್ಯ ಚುನಾವಣಾ ಆಯುಕ್ತರಂತಹ ಸಾಂವಿಧಾನಿಕ ಸಂಸ್ಥೆಗಳನ್ನೇ ಗುರಿಯಾಗಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಹುಲ್ ಗಾಂಧಿ ಅವರ ಚುನಾವಣಾ ದಾಖಲೆಯನ್ನು ಎಳೆದುತಂದ ಠಾಕೂರ್, ಅವರು 99 ಚುನಾವಣೆಗಳಲ್ಲಿ ಸೋತಿದ್ದಾರೆ ಎಂದು ವ್ಯಂಗ್ಯವಾಡಿದರು. ಮುಖದ ಮೇಲೆ ಧೂಳಿದ್ದರೂ ಕನ್ನಡಿ ಒರೆಸಲು ಯತ್ನಿಸುವ ರೀತಿಯಲ್ಲಿ ರಾಹುಲ್ ಗಾಂಧಿ ಅವರ ರಾಜಕೀಯ ನಡೆಯಿದೆ, ಅಲ್ಲದೆ, ಆಧಾರರಹಿತ ಆರೋಪಗಳು ಹಾಗೂ ರಾಜಕೀಯ ಚರ್ಚೆಗೆ ಒಪ್ಪದ ಪದಗಳನ್ನು ಅವರು ಬಳಸುತ್ತಿದ್ದಾರೆ ಎಂದು ದೂರಿದರು.
ತುರ್ತು ಪರಿಸ್ಥಿತಿ ಹಾಗೂ 1989ರಲ್ಲಿ ರಾಜೀವ್ ಗಾಂಧಿ ಮತ್ತು ರಾಜ್‌ಮೋಹನ್ ಗಾಂಧಿ ನಡುವಿನ ಚುನಾವಣಾ ಸ್ಪರ್ಧೆಯನ್ನು ಉದಾಹರಣೆ ನೀಡಿದ ಅನುರಾಗ್ ಠಾಕೂರ್, ಚುನಾವಣಾ ಪಾವಿತ್ರ್ಯತೆಯ ಇತಿಹಾಸದ ಕುರಿತು ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸಿದರು. ಆ ಅವಧಿಯಲ್ಲಿ ಮತಗಟ್ಟೆ ರಿಗ್ಗಿಂಗ್ ನಡೆದಿದೆ ಎಂಬ ಆರೋಪಗಳ ಬಗ್ಗೆ ಕಾಂಗ್ರೆಸ್ ಸ್ಪಷ್ಟನೆ ನೀಡಬೇಕು ಎಂದು ಸವಾಲು ಹಾಕಿದರು(ಏಜೆನ್ಸೀಸ್).