ಬ್ಯಾಂಕಿಂಗ್ ಪರವಾನಗಿಯನ್ನು ಅಧಿಕೃತವಾಗಿ ರದ್ದುಗೊಳಿಸಿದ ಕೇಂದ್ರ ಬ್ಯಾಂಕ್ 
ದೇಶ

ಪೇಟಿಎಂ ಬ್ಯಾಂಕ್​ಗೆ ಬೀಗ ಜಡಿದ ಆರ್​ಬಿಐ: ಪರವಾನಗಿ ರದ್ದತಿ; ಗ್ರಾಹಕರ ಹಣದ ಗತಿಯೇನು? RBI on Paytm

ಪ್ರಮುಖ ಮುಖ್ಯಾಂಶಗಳು

  • ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ಶಾಕ್ ನೀಡಿದ ಆರ್‌ಬಿಐ
  • ಬ್ಯಾಂಕಿಂಗ್ ಪರವಾನಗಿಯನ್ನು ಅಧಿಕೃತವಾಗಿ ರದ್ದುಗೊಳಿಸಿದ ಕೇಂದ್ರ ಬ್ಯಾಂಕ್
  • ಗ್ರಾಹಕರ ಹಣಕ್ಕೆ ಅಪಾಯವಿದೆಯೇ?
ಮುಂಬೈ: ದೇಶದ ಡಿಜಿಟಲ್ ಪಾವತಿ ಲೋಕದಲ್ಲಿ ಕ್ರಾಂತಿ ಮಾಡಿದ್ದ ಪೇಟಿಎಂಗೆ ಈಗ ಅತಿದೊಡ್ಡ ಆಘಾತ ಎದುರಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್‌ನ ಬ್ಯಾಂಕಿಂಗ್ ಪರವಾನಗಿಯನ್ನು ಇಂದಿನಿಂದ (ಏ.24) ಅಧಿಕೃತವಾಗಿ ರದ್ದುಗೊಳಿಸಿ (Paytm License Cancelled), ಪೇಟಿಎಂ ಬ್ಯಾಂಕ್ ತನ್ನೆಲ್ಲಾ ಬ್ಯಾಂಕಿಂಗ್ ವ್ಯವಹಾರಗಳನ್ನು ಸ್ಥಗಿತಗೊಳಿಸುವಂತೆ ಆರ್‌ಬಿಐ ಕಟ್ಟುನಿಟ್ಟಿನ ಆದೇಶ ನೀಡಿದೆ.

ಕೊನೆಗೂ ಬಿತ್ತು ಬೀಗ: ಏನಿದು ಪ್ರಕರಣ?

ಕಳೆದ ಎರಡು ವರ್ಷಗಳಿಂದ ನಿಯಮಗಳ ಉಲ್ಲಂಘನೆ ಮತ್ತು ಗ್ರಾಹಕರ ದತ್ತಾಂಶದ ಸುರಕ್ಷತೆಯಲ್ಲಿ ಪದೇ ಪದೇ ಎಡವಿದ್ದಕ್ಕಾಗಿ 2022ರಿಂದಲೇ ಪೇಟಿಎಂ ಬ್ಯಾಂಕ್ ಮೇಲೆ ಆರ್‌ಬಿಐ ನಿರ್ಬಂಧಗಳನ್ನು ವಿಧಿಸಿತ್ತು. ಆದರೆ, ಬ್ಯಾಂಕಿನ ನಡವಳಿಕೆಯಲ್ಲಿ ಯಾವುದೇ ಸುಧಾರಣೆ ಕಂಡುಬರದ ಹಿನ್ನೆಲೆಯಲ್ಲಿ ಈಗ ಪರವಾನಗಿಯನ್ನೇ ರದ್ದು ಮಾಡುವ ನಿರ್ಧಾರವನ್ನು ಕೇಂದ್ರ ಬ್ಯಾಂಕ್ ತೆಗೆದುಕೊಂಡಿದೆ.
ಆರ್‌ಬಿಐ ಈ ಕಠಿಣ ನಿರ್ಧಾರ ತಗೆದುಕೊಂಡಿದ್ದು ಏಕೆ?
ಆರ್‌ಬಿಐ ನೀಡಿರುವ ಅಧಿಕೃತ ಹೇಳಿಕೆಯ ಪ್ರಕಾರ, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಹಲವು ಗಂಭೀರ ತಪ್ಪುಗಳನ್ನು ಮಾಡಿದೆ. ಬ್ಯಾಂಕಿನ ಕಾರ್ಯನಿರ್ವಹಣೆಯು ಠೇವಣಿದಾರರ ಮತ್ತು ಸಾರ್ವಜನಿಕರ ಹಿತಾಸಕ್ತಿಗೆ ವಿರುದ್ಧವಾಗಿತ್ತು. ಇದು ಗ್ರಾಹಕರ ಹಿತಾಸಕ್ತಿಗೆ ಧಕ್ಕೆ ಉಂಟು ಮಾಡುತ್ತಿತ್ತು.
ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಸೆಕ್ಷನ್ 22ರ ಅಡಿಯಲ್ಲಿ ವಿಧಿಸಲಾದ ಷರತ್ತುಗಳನ್ನು ಪಾಲಿಸಲು ಪೇಟಿಎಂ ವಿಫಲವಾಗಿದೆ. ಬ್ಯಾಂಕಿನ ನಿರ್ವಹಣಾ ಮಂಡಳಿಯು ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿಲ್ಲ ಇದು ಗ್ರಾಹಕರಿಗೆ ಅಪಾಯಕಾರಿ ಎಂದು ಆರ್‌ಬಿಐ ತಿಳಿಸಿದೆ.

ಇಂದಿನಿಂದಲೇ ಜಾರಿ!

ಆರ್‌ಬಿಐ ಆದೇಶದ ಪ್ರಕಾರ, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಇಂದಿನಿಂದ ಯಾವುದೇ ಹೊಸ ಠೇವಣಿಗಳನ್ನು ಸ್ವೀಕರಿಸುವಂತಿಲ್ಲ ಅಥವಾ ಯಾವುದೇ ಬ್ಯಾಂಕಿಂಗ್ ಸೇವೆಗಳನ್ನು ನೀಡುವಂತಿಲ್ಲ. ನೀವು ಪೇಟಿಎಂ ವ್ಯಾಲೆಟ್ ಅಥವಾ ಬ್ಯಾಂಕ್ ಖಾತೆಯಲ್ಲಿ ಹಣ ಹೊಂದಿದ್ದರೆ, ಅದನ್ನು ಬಳಸಲು ಅಥವಾ ಹಿಂಪಡೆಯಲು ನೀಡಿರುವ ಕಾಲಮಿತಿಯ ಬಗ್ಗೆ ಬ್ಯಾಂಕ್ ಶೀಘ್ರದಲ್ಲೇ ಸೂಚನೆ ನೀಡಲಿದೆ.

ಗ್ರಾಹಕರ ಹಣಕ್ಕೆ ಅಪಾಯವಿದೆಯೇ?

ಇದು ಪ್ರತಿಯೊಬ್ಬ ಪೇಟಿಎಂ ಬಳಕೆದಾರರನ್ನು ಕಾಡುತ್ತಿರುವ ದೊಡ್ಡ ಪ್ರಶ್ನೆ. ಈ ಬಗ್ಗೆ ಆರ್‌ಬಿಐ ಸ್ಪಷ್ಟನೆ ನೀಡಿದ್ದು, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ತನ್ನ ಗ್ರಾಹಕರ ಹೊಣೆಗಾರಿಕೆಗಳನ್ನು ಮರುಪಾವತಿಸಲು ಸಾಕಷ್ಟು ಹಣವನ್ನು ಹೊಂದಿದೆ ಎಂದು ಭರವಸೆ ನೀಡಿದೆ. ಗ್ರಾಹಕರ ಹಿತರಕ್ಷಣೆಗೆ ಪೆಂಟಗನ್ ಆದ್ಯತೆ ನೀಡಲಿದ್ದು, ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದೆ.

ಬ್ಯಾಂಕ್ ಮುಚ್ಚಲು ಹೈಕೋರ್ಟ್‌ ಮೆಟ್ಟಿಲೇರಲಿರುವ ಆರ್‌ಬಿಐ

ಕೇವಲ ಪರವಾನಗಿ ರದ್ದು ಮಾಡುವುದಷ್ಟೇ ಅಲ್ಲದೆ, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಅನ್ನು ಸಂಪೂರ್ಣವಾಗಿ ವಜಾಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಆರ್‌ಬಿಐ ಈಗ ಹೈಕೋರ್ಟ್ ಮೊರೆ ಹೋಗುವುದಾಗಿ ಘೋಷಿಸಿದೆ,(ಏಜನ್ಸೀಸ್​).