ಪಂಜಾಬ್‌ನ ಫಾರ್ಮಸಿ ಆಫೀಸರ್ ಪರೀಕ್ಷೆಯಲ್ಲಿ ಪೆನ್ ಕ್ಯಾಮೆರಾ ಹಾಗೂ ಬ್ಲೂಟೂತ್ ಬಳಸಿ ಹೈಟೆಕ್ ಕಾಪಿ 
ದೇಶ

NEET ಬೆನ್ನಲ್ಲೆ ಪಂಜಾಬ್​ನಲ್ಲಿ ಫಾರ್ಮಸಿ ಸ್ಕ್ಯಾಮ್​: ಬ್ಲೂಟೂತ್ ಮೂಲಕ ಹೈಟೆಕ್​ ಕಾಪಿ; ಕೇಜ್ರಿವಾಲ್‌ ವಿರುದ್ಧ ಹರಿಹಾಯ್ದ BJP! Pharmacy Exam Scam in Punjab

ಪ್ರಮುಖ ಮುಖ್ಯಾಂಶಗಳು

  • ಪಂಜಾಬ್‌ನ ಫಾರ್ಮಸಿ ಆಫೀಸರ್ ಪರೀಕ್ಷೆಯಲ್ಲಿ ಪೆನ್ ಕ್ಯಾಮೆರಾ ಹಾಗೂ ಬ್ಲೂಟೂತ್ ಬಳಸಿ ಹೈಟೆಕ್ ಕಾಪಿ
  • 5 ಮಂದಿಯನ್ನು ಅರೆಸ್ಟ್
  • ಅರವಿಂದ್ ಕೇಜ್ರಿವಾಲ್ ವಿರುದ್ಧ ಹರಿಹಾಯ್ದ ಬಿಜೆಪಿ
ಪಂಜಾಬ್​: ನೀಟ್​ ಪರೀಕ್ಷೆಯಲ್ಲಿ ನಡೆದ ಅಕ್ರಮವನ್ನು ವಿರೋಧಿಸಿ, ದೆಹಲಿಯ ಜಂತರ್​ ಮಂತರ್​​ನಲ್ಲಿ ಪ್ರತಿಭಟನೆ ನಡೆಯುತ್ತಿದೆ, ಇನ್ನೊಂದೆಡೆ ಪಂಜಾಬ್​ನಲ್ಲಿ ಫಾರ್ಮಸಿ ಪರೀಕ್ಷೆಯಲ್ಲಿ ಭಾರಿ ಅಕ್ರಮ (Pharmacy Exam Scam in Punjab) ನಡೆದಿರುವುದು ಬೆಳಕಿಗೆ ಬಂದಿದೆ.
ಭಾನುವಾರ (ಜು.19) ನಡೆದ ಫಾರ್ಮಸಿ ಆಫೀಸರ್ ನೇಮಕಾತಿ ಪರೀಕ್ಷೆಯಲ್ಲಿ ಕದ್ದುಮುಚ್ಚಿ ಹೈಟೆಕ್ ಸಾಧನಗಳನ್ನು ಬಳಸಿ ಅಭ್ಯರ್ಥಿಗಳಿಗೆ ಕಾಪಿ ಹೊಡೆಯಲು ಸಹಾಯ ಮಾಡುತ್ತಿದ್ದ ಅಂತಾರಾಜ್ಯ ವಂಚನೆ ಜಾಲವನ್ನು ಪಂಜಾಬ್ ಪೊಲೀಸರು ಭೇದಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಾಸ್ಟರ್‌ಮೈಂಡ್ ವೈರ್‌ಲೆಸ್ ಕಿಂಗ್‌ಪಿನ್‌ಗಳು ಹಾಗೂ 28 ಅಭ್ಯರ್ಥಿಗಳು ಸೇರಿದಂತೆ ಒಟ್ಟು 35 ಜನರನ್ನು ಪೊಲೀಸರು ಕಂಬಿ ಎಣಿಸುವಂತೆ ಮಾಡಿದ್ದಾರೆ.

ಸ್ಪೈ ಸಿನಿಮಾ ಶೈಲಿಯಲ್ಲಿ ಹೆಣೆದಿದ್ದರು ಪ್ಲಾನ್!

ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಈ ಗ್ಯಾಂಗ್ ಸಿನಿಮಾ ಶೈಲಿಯಲ್ಲಿ ಸ್ಕ್ಯಾಮ್ ನಡೆಸಲು ಪ್ಲಾನ್ ಮಾಡಿತ್ತು. ಪರೀಕ್ಷಾ ಕೇಂದ್ರಕ್ಕೆ ಹೋದ ಆಯುಷ್ ಎಂಬ ಅಭ್ಯರ್ಥಿ ಪೆನ್ ಕ್ಯಾಮೆರಾ ಬಳಸಿ ಪ್ರಶ್ನೆ ಪತ್ರಿಕೆಯನ್ನು ರಹಸ್ಯವಾಗಿ ಫೋಟೋ ಹೊಡೆದು, ಹರಿಯಾಣದಲ್ಲಿದ್ದ ಸಜನ್ ಎಂಬಾತನಿಗೆ ವಾಟ್ಸಾಪ್ ಮಾಡಿದ್ದ.
ಅಲ್ಲಿಂದ ಪ್ರಶ್ನೆ ಪತ್ರಿಕೆಯು ಫರೀದ್‌ಕೋಟ್‌ನ ರಹಸ್ಯ ಕಂಟ್ರೋಲ್ ರೂಮ್ ನಲ್ಲಿದ್ದ ದೀಪಕ್ ಹಾಗೂ ಮಂಜಿತ್ ಸಿಂಗ್ ಕೈ ಸೇರುತ್ತಿತ್ತು. ಇವರಿಬ್ಬರು ತಕ್ಷಣವೇ ಅಭ್ಯರ್ಥಿಗಳಿಗೆ ಕಿವಿ ಭಾಗದಲ್ಲಿ ಧರಿಸಿದ್ದ ಪುಟ್ಟ ಬ್ಯಾಟರಿ ಚಾಲಿತ ವೈರ್‌ಲೆಸ್ ಬ್ಲೂಟೂತ್ ಮೈಕ್ರೋ ಡಿವೈಸ್ ಮೂಲಕ ನೇರವಾಗಿ ಉತ್ತರಗಳನ್ನು ಓದಿ ಹೇಳುತ್ತಿದ್ದರು ಎಂದು ತಿಳಿದು ಬಂದಿದೆ.

ಒಬ್ಬೊಬ್ಬರಿಂದ 3.5 ರಿಂದ 13 ಲಕ್ಷ ರೂ. ವಸೂಲಿ!

ಫಜಿಲ್ಕಾದ ಪಾಲಿಟೆಕ್ನಿಕ್ ಕಾಲೇಜಿನ ನೌಕರ ಗುರ್ಮೀತ್ ಸಿಂಗ್ ಈ ಇಡೀ ಜಾಲದ ಮಾಸ್ಟರ್‌ಮೈಂಡ್ ಎಂದು ತಿಳಿದುಬಂದಿದ್ದು, ಪರೀಕ್ಷೆಯಲ್ಲಿ ಪಾಸ್ ಮಾಡಿಸುವುದಾಗಿ ನಂಬಿಸಿ ಅಭ್ಯರ್ಥಿಗಳಿಂದ ಕನಿಷ್ಠ 3.5 ಲಕ್ಷದಿಂದ ಗರಿಷ್ಠ 13 ಲಕ್ಷದವರೆಗೆ ಹಣ ಪಡೆದಿದೆ ಎಂದು ತಿಳಿದು ಬಂದಿದೆ.

ಪ್ರಶ್ನೆಪತ್ರಿಕೆ ಸೋರಿಕೆಯಾಗಿಲ್ಲ, ಪರೀಕ್ಷಾ ಅಕ್ರಮ!

ಪ್ರಶ್ನೆ ಪತ್ರಿಕೆ ಮೊದಲೇ ಲೀಕ್ ಆಗಿಲ್ಲ, ಪರೀಕ್ಷೆ ಪ್ರಾರಂಭವಾದ ಮೇಲೆಯೇ ಹೈಟೆಕ್ ಸಾಧನ ಬಳಸಿ ರಿಯಲ್ ಟೈಮ್‌ನಲ್ಲಿ ಉತ್ತರಗಳನ್ನು ಸಪ್ಲೈ ಮಾಡಲಾಗಿದೆ, ಎಂದು ತನಿಖಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸದ್ಯ ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನಕ್ಕೆ ಹರಡಿದ್ದ ಈ ಜಾಲದ ಮೇಲಿನ ತನಿಖೆ ಮುಂದುವರಿದಿದೆ.

ಆಪ್‌ ಸರ್ಕಾರದ ವಿರುದ್ಧ ಮುಗಿಬಿದ್ದ ಬಿಜೆಪಿ!

ಪಂಜಾಬ್‌ನ ಬಿಎಫ್‌ಯುಎಚ್‌ಎಸ್ (BFUHS) ನಡೆಸಿದ 454 ಹುದ್ದೆಗಳ ಈ ಪರೀಕ್ಷೆಗೆ ಸುಮಾರು 7,000 ಅಭ್ಯರ್ಥಿಗಳು ಹಾಜರಾಗಿದ್ದರು. ಈಗ ಈ ಹಗರಣ ಬಯಲಾಗುತ್ತಿದ್ದಂತೆ, ದೆಹಲಿಯ ನೀಟ್ (NEET) ಪರೀಕ್ಷೆ ವಿಚಾರದಲ್ಲಿ ಹೋರಾಡುತ್ತಿದ್ದ ಆಮ್ ಆದ್ಮಿ ಪಾರ್ಟಿ (AAP) ವಿರುದ್ಧ ಬಿಜೆಪಿ ಭಾರಿ ವಾಗ್ದಾಳಿ ನಡೆಸಿದೆ.
ದೆಹಲಿಯಲ್ಲಿ ಪ್ರತಿಭಟನೆ ಮಾಡುವ ಅರವಿಂದ್ ಕೇಜ್ರಿವಾಲ್ ಅವರು ತಮ್ಮದೇ ಆಡಳಿತವಿರುವ ಪಂಜಾಬ್‌ನಲ್ಲಿ ನಡೆದ ಈ ಹೈಟೆಕ್ ಸ್ಕ್ಯಾಮ್ ಬಗ್ಗೆ ಏಕೇ ಮೌನವಾಗಿದ್ದಾರೆ? ಎಂದು ಬಿಜೆಪಿ ವಕ್ತಾರ ಅಮಿತ್ ಮಾಳವಿಯಾ ಪ್ರಹಾರ ನಡೆಸಿದ್ದಾರೆ. ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಕೂಡ ಟ್ವಿಟರ್​ನಲ್ಲಿ ಪೋಸ್ಟ್ ಮಾಡಿ ಆಪ್ ಸರ್ಕಾರದ ವೈಫಲ್ಯವನ್ನು ಖಂಡಿಸಿದ್ದಾರೆ, (ಏಜನ್ಸೀಸ್​).