ಸಾರ್ವಜನಿಕ ಸ್ಥಳದಲ್ಲಿ ನಮಾಜ್ ಮಾಡುವುದು ಧಾರ್ಮಿಕ ಸ್ವಾತಂತ್ರ್ಯವಲ್ಲ
- ಸಾರ್ವಜನಿಕ ಸ್ಥಳದಲ್ಲಿ ನಮಾಜ್ ಮಾಡುವುದು ಧಾರ್ಮಿಕ ಸ್ವಾತಂತ್ರ್ಯವಲ್ಲ
- ಅಲಹಾಬಾದ್ ಹೈಕೋರ್ಟ್ನಿಂದ ಐತಿಹಾಸಿಕ ತೀರ್ಪು!
- ಧಾರ್ಮಿಕ ಸ್ವಾತಂತ್ರ್ಯವನ್ನು ಸಂವಿಧಾನ ನೀಡಿದ್ದರು ಸಾರ್ವಜನಿಕ ಹಿತಾಸಕ್ತಿ ಪ್ರಮುಖವಾಗಿರುತ್ತದೆ
ಲಖನೌ: ಸಾರ್ವಜನಿಕ ಭೂಮಿಯನ್ನು ಧಾರ್ಮಿಕ ಪ್ರಾರ್ಥನೆಗಳಿಗೆ ಅಥವಾ ದೊಡ್ಡ ಮಟ್ಟದ ಸಭೆಗಳನ್ನು ನಡೆಸಲು "ಹಕ್ಕು" ಎಂಬಂತೆ ಬಳಸುವಂತಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ (Allahabad High Court on Namaz) ಮಹತ್ವದ ತೀರ್ಪು ನೀಡಿದೆ.
ಧಾರ್ಮಿಕ ಸ್ವಾತಂತ್ರ್ಯ ಎನ್ನುವುದು ಸಂವಿಧಾನ ಕೊಟ್ಟಿರುವ ಹಕ್ಕಾದರೂ, ಅದು ಸಾರ್ವಜನಿಕ ಸುವ್ಯವಸ್ಥೆ ಮತ್ತು ಇತರರ ಹಿತಾಸಕ್ತಿಗೆ ಒಳಪಟ್ಟಿರುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ ಏನು?
ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಇಕೋನಾ ಎಂಬ ಗ್ರಾಮದಲ್ಲಿ ಈ ವಿವಾದ ಶುರುವಾಗಿತ್ತು. ಆಸೀನ್ ಎಂಬುವವರು ಹೈಕೋರ್ಟ್ ಮೆಟ್ಟಿಲೇರಿ, ನನಗೆ ಸೇರಿದ ಖಾಸಗಿ ಜಾಗದಲ್ಲಿ ನಮಾಜ್ ಮಾಡಲು ಅಧಿಕಾರಿಗಳು ತಡೆಯೊಡ್ಡುತ್ತಿದ್ದಾರೆ, ಇದು ನನ್ನ ಧಾರ್ಮಿಕ ಹಕ್ಕಿನ ಉಲ್ಲಂಘನೆ ಎಂದು ಅರ್ಜಿ ಸಲ್ಲಿಸಿದ್ದರು. 2023ರಲ್ಲಿ ತಮಗೆ ಉಡುಗೊರೆಯಾಗಿ ಬಂದಿರುವ ಈ ಜಾಗದಲ್ಲಿ ಪ್ರಾರ್ಥನೆ ಸಲ್ಲಿಸಲು ರಕ್ಷಣೆ ನೀಡಬೇಕು ಎಂಬುದು ಅವರ ಬೇಡಿಕೆಯಾಗಿತ್ತು.
ಆದರೆ, ಈ ಅರ್ಜಿಯನ್ನು ಉತ್ತರ ಪ್ರದೇಶ ಸರ್ಕಾರ ಬಲವಾಗಿ ವಿರೋಧಿಸಿತು. ಕಂದಾಯ ದಾಖಲೆಗಳ ಪ್ರಕಾರ, ಆಸೀನ್ ಅವರು ಹೇಳುತ್ತಿರುವ ಜಾಗವು ವೈಯಕ್ತಿಕ ಆಸ್ತಿಯಲ್ಲ, ಬದಲಿಗೆ ಅದು ಅಬಾದಿ ಭೂಮಿ (ಜನವಸತಿ ಅಥವಾ ಸಾರ್ವಜನಿಕ ಬಳಕೆಯ ಜಾಗ). ಅಷ್ಟೇ ಅಲ್ಲದೆ, ಅರ್ಜಿದಾರರು ನೀಡಿದ ದಾಖಲೆಗಳಲ್ಲಿ ಭೂಮಿಯ ಗಡಿಗಳ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಅಧಿಕಾರಿಗಳು ಕೋರ್ಟ್‌ಗೆ ತಿಳಿಸಿದರು.
ಅಧಿಕಾರಿಗಳ ಪ್ರಕಾರ, ಇಲ್ಲಿ ವರ್ಷಕ್ಕೊಮ್ಮೆ ಈದ್ ಸಮಯದಲ್ಲಿ ನಮಾಜ್ ಮಾಡಲು ಮೊದಲಿನಿಂದಲೂ ಅವಕಾಶವಿತ್ತು. ಆದರೆ ಈಗ ಅರ್ಜಿದಾರರು ಹೊರಗಿನ ಜನರನ್ನು ಕರೆತಂದು ದೊಡ್ಡ ಮಟ್ಟದ ಸಾಮೂಹಿಕ ಪ್ರಾರ್ಥನೆಗಳನ್ನು ನಡೆಸಲು ಪ್ರಯತ್ನಿಸುತ್ತಿದ್ದಾರೆ. ಇದರಿಂದ ಗ್ರಾಮದ ಶಾಂತಿ ಮತ್ತು ಸಾಮಾಜಿಕ ಸಮತೋಲನಕ್ಕೆ ಧಕ್ಕೆಯಾಗುವ ಸಾಧ್ಯತೆಯಿದೆ ಎಂದು ಸರ್ಕಾರ ವಾದಿಸಿತು.
ಹೈಕೋರ್ಟ್ ಹೇಳಿದ್ದೇನು?
ಜಸ್ಟಿಸ್ ಸರಳ್ ಶ್ರೀವಾಸ್ತವ ಮತ್ತು ಜಸ್ಟಿಸ್ ಗರಿಮಾ ಪ್ರಸಾದ್ ಅವರಿದ್ದ ನ್ಯಾಯಪೀಠವು ಈ ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿ ಕೆಲವು ಪ್ರಮುಖ ಅಂಶಗಳನ್ನು ತಿಳಿಸಿದೆ.
ಸಾರ್ವಜನಿಕ ಹಿತಾಸಕ್ತಿಯೇ ಮೊದಲು: ಸಂವಿಧಾನವು ಪ್ರತಿಯೊಬ್ಬರಿಗೂ ಧಾರ್ಮಿಕ ಸ್ವಾತಂತ್ರ್ಯ ನೀಡಿದೆ. ಆದರೆ ಅದು ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಜನರ ಆರೋಗ್ಯಕ್ಕೆ ವಿರುದ್ಧವಾಗಿರಬಾರದು.
ಸಾರ್ವಜನಿಕ ಭೂಮಿ ಎಲ್ಲರಿಗಾಗಿ: ಸಾರ್ವಜನಿಕ ಜಾಗಗಳು ಜನರ ಓಡಾಟಕ್ಕೆ ಮತ್ತು ಸಾಮಾನ್ಯ ಬಳಕೆಗೆ ಇರುತ್ತವೆ. ಅಂತಹ ಜಾಗವನ್ನು ಪುನರಾವರ್ತಿತ ಧಾರ್ಮಿಕ ಚಟುವಟಿಕೆಗಳಿಗಾಗಿ ಮೀಸಲಿಡಲು ಅಥವಾ ಹಕ್ಕು ಸಾಧಿಸಲು ಬರುವುದಿಲ್ಲ.
ವೈಯಕ್ತಿಕ Vs ಸಾಮೂಹಿಕ ಪ್ರಾರ್ಥನೆ: ಮನೆಯೊಳಗೆ ಅಥವಾ ಖಾಸಗಿ ಜಾಗದಲ್ಲಿ ಒಬ್ಬರು ಪ್ರಾರ್ಥನೆ ಮಾಡುವುದು ಅವರ ವೈಯಕ್ತಿಕ ವಿಚಾರ. ಆದರೆ, ಯಾವಾಗ ಹೊರಗಿನ ಜನರನ್ನು ಸೇರಿಸಿ ದೊಡ್ಡ ಮಟ್ಟದ ಸಭೆ ನಡೆಸಲಾಗುತ್ತದೆಯೋ, ಅದು 'ಸಾರ್ವಜನಿಕ ಸ್ವರೂಪ' ಪಡೆದುಕೊಳ್ಳುತ್ತದೆ. ಅಂತಹ ಸಂದರ್ಭದಲ್ಲಿ ಸರ್ಕಾರದ ನಿಯಮಗಳನ್ನು ಪಾಲಿಸುವುದು ಕಡ್ಡಾಯ.
ಮುನ್ನೆಚ್ಚರಿಕೆ ಅಗತ್ಯ: ಶಾಂತಿ ಭಂಗವಾದ ಮೇಲೆ ಕ್ರಮ ಕೈಗೊಳ್ಳುವುದಕ್ಕಿಂತ, ಅಹಿತಕರ ಘಟನೆ ನಡೆಯದಂತೆ ತಡೆಯುವ ಹಕ್ಕು ಮತ್ತು ಜವಾಬ್ದಾರಿ ಸರ್ಕಾರಿ ಅಧಿಕಾರಿಗಳ ಮೇಲಿದೆ ಎಂದು ಕೋರ್ಟ್ ಹೇಳಿದೆ.
ಅಂತಿಮವಾಗಿ ಏನಾಯ್ತು?
ಅರ್ಜಿದಾರರು ಆ ಜಾಗದ ಮಾಲೀಕತ್ವವನ್ನು ಸಾಬೀತುಪಡಿಸಲು ವಿಫಲರಾದ ಕಾರಣ ಮತ್ತು ದಾಖಲೆಗಳಲ್ಲಿ ಅದು ಸಾರ್ವಜನಿಕ ಭೂಮಿ ಎಂದು ಇರುವುದರಿಂದ, ಹೈಕೋರ್ಟ್ ಆಸೀನ್ ಅವರ ಅರ್ಜಿಯನ್ನು ವಜಾಗೊಳಿಸಿತು. ಈ ತೀರ್ಪು ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸುವ ಬಗ್ಗೆ ನಡೆಯುತ್ತಿದ್ದ ಚರ್ಚೆಗಳಿಗೆ ಹೊಸ ಕಾನೂನು ಚೌಕಟ್ಟನ್ನು ನೀಡಿದೆ. ನಿಮ್ಮ ಧರ್ಮ ನಿಮ್ಮ ಹಕ್ಕು, ಆದರೆ ಅದು ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ಸಂದೇಶವನ್ನು ಈ ಮೂಲಕ ನ್ಯಾಯಾಲಯ ರವಾನಿಸಿದಂತಿದೆ,(ಏಜನ್ಸೀಸ್).