ಐಫೋನ್ 18 ಬಿಡುಗಡೆ ಮಾರಾಟಕ್ಕಾಗಿ ಮುಂಬೈನ ಆಪಲ್ ಸ್ಟೋರ್‌ನ ಹೊರಗೆ ಉದ್ದನೆಯ ಸಾಲಿನಲ್ಲಿ ನಿಂತಿರುವ ಗ್ರಾಹಕರು 
ದೇಶ

iPhone 18 ಕೊಳ್ಳಲು ಮುಗಿಬಿದ್ದ ಜನ; ಮುಂಬೈನಲ್ಲಿ ಕಿಲೋಮೀಟರ್‌ಗಟ್ಟಲೆ ಸರತಿ ಸಾಲು, ವಿಡಿಯೋ ವೈರಲ್!

ಮುಂಬೈ: ಇಂದು (ಶುಕ್ರವಾರ, ಸೆ.18) ಭಾರತದಲ್ಲಿ ಆ್ಯಪಲ್​ ಕಂಪನಿಯ ಐಫೋನ್​ 18 (iPhone 18) ಪ್ರೊ, ಐಫೋನ್​ 18 ಪ್ರೊ ಮ್ಯಾಕ್ಸ್​​ ಹಾಗೂ ಐಫೋನ್​ ಡ್ಯೂ​​ ಬಿಡುಗಡೆಯಾಗಿದೆ. ಅಮೆರಿಕದಲ್ಲಿ ತಯಾರಾಗುವ ಈ ಐಫೋನ್​ಗಳಿಗೆ ಭಾರತದಲ್ಲಿ ದೊಡ್ಡಮಟ್ಟದ ಗ್ರಾಹಕರಿದ್ದು, ಇಂದು ಮುಂಬೈನಲ್ಲಿ ಈ ಮೊಬೈಲ್​ ಖರೀದಿಗೆ ಕೀ.ಮೀ ಗಟ್ಟಲೇ ಸರತಿ ಸಾಲು ನಿಂತಿರುವ ದೃಶ್ಯಗಳು ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿದೆ. 
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ ಐಫೋನ್​ ಮಳಿಗೆಗಳ ಎದುರಿಗೆ ಜನರು ನಿನ್ನೆ ರಾತ್ರಿಯಿಂದಲೇ ಬಿಡುಬಿಟ್ಟಿದ್ದು, ಇಂದು ಬಿಡುಗಡೆಯಾಗುತ್ತಿರುವ ನೂತನ ಮೊಬೈಲ್​ ಅನ್ನು ಖರೀದಿಸಲು ಮುಗಿಬಿದ್ದಿದ್ದಾರೆ. 

ಹತ್ತು ಗಂಟೆಯಿಂದ ಸಾಲಿನಲ್ಲಿ ನಿಂತಿದ್ದೇನೆ!

ಇತ್ತ ಅಂಗಡಿ ಎದುರಿಗೆ ಜನರು ಸಾಲಿಗಟ್ಟಿ ನಿಂತಿರುವ ಮಾಹಿತಿ ಲಭ್ಯವಾಗುತ್ತಿದ್ದಂತೆ, ಕಂಟೆಂಟ್​ ಕ್ರಿಯೇಟರ್​ಗಳು ಹಾಗೂ ಕೆಲ ಮಾಧ್ಯಮ ಸಂಸ್ಥೆಗಳು ಸಾಲಿನಲ್ಲಿ ನಿಂತಿದ್ದ ಕೆಲವರ ಸಂದರ್ಶನವನ್ನು ತೆಗೆದುಕೊಂಡಿದ್ದಾರೆ. 
ಆಗ, ಸುದ್ದಿಗಾರರೊಂದಿಗೆ ಮಾತನಾಡಿರುವ ಹಿತೇಶ್​ ಪಟೇಲ್​ ಎನ್ನುವವರು, ನನಗೆ ಐಫೋನ್​ ಖರೀದಿಸುವುದು ಒಂದರ್ಥದಲ್ಲಿ ಸಂಪ್ರದಾಯವಾಗಿದೆ. ನಾನು ಪ್ರತಿ ವರ್ಷ ಬಿಡುಗಡೆಯಾಗುವ ಐಫೋನ್​ಗಳನ್ನು ಖರೀದಿಸುತ್ತೇನೆ. ಈಗ ನನ್ನ ಬಳಿ ಐಫೋನ್​ 17 ಪ್ರೊ ಮ್ಯಾಕ್ಸ್​ ಇದೆ, ಈಗ ನಾನು ಐಫೋನ್​ 18 ಪ್ರೊ ಮ್ಯಾಕ್ಸ್​ ಖರೀದಿಸಲು ಬಂದಿದ್ದೇನೆ ಎಂದಿದ್ದಾರೆ.
ಆದರೆ, ಈ ಭಾರಿ ಈ ಫೋನ್​ ಖರೀದಿಗೆ ಭಾರಿ ನೂಕು ನುಗ್ಗಲಿದೆ. ನಾನು ನಿನ್ನೆ ರಾತ್ರಿಯೇ ಸರತಿ ಸಾಲಿನಲ್ಲಿ ನಿಂತಿದ್ದೇನೆ. ಸುಮಾರು ಹತ್ತು ಗಂಟೆಗಳ ಕಾಲ ಲೈನ್​ನಲ್ಲಿ ನಿಂತ ಬಳಿಕ ನಾನು ಅಂಗಡಿ ಪ್ರವೇಶಿಸಿ, ನನ್ನ ನೆಚ್ಚಿನ ಫೋನ್​ ಅನ್ನು ಖರೀದಿಸಿದ್ದೇನೆಂದು, ಹಿತೇಶ್ ಪಟೇಲ್​ ಕ್ಯಾಮರಾಗೆ ಪೋಸ್​ ನೀಡಿದ್ದಾರೆ. 

ಐಫೋನ್​ 18 ಬಗ್ಗೆ

ಐಫೋನ್ 18 ಪ್ರೊ ಮತ್ತು ಪ್ರೊ ಮ್ಯಾಕ್ಸ್ (iPhone 18 Pro & Pro Max): ಈ ಎರಡೂ ಫೋನ್‌ಗಳು ಅತ್ಯಂತ ಶಕ್ತಿಶಾಲಿ A20 Pro ಚಿಪ್‌ಸೆಟ್ ಮತ್ತು ವೇಪರ್ ಚೇಂಬರ್ ಕೂಲಿಂಗ್ ಸಿಸ್ಟಮ್ ಅನ್ನು ಹೊಂದಿದ್ದು, ಗೇಮಿಂಗ್ ಹಾಗೂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ಕಾರ್ಯಕ್ಷಮತೆಯನ್ನು ಅತ್ಯುತ್ತಮವಾಗಿಸುತ್ತವೆ.
ಪ್ರೊ ಮಾದರಿಯು 6.3 ಇಂಚಿನ ಡಿಸ್‌ಪ್ಲೇ ಹೊಂದಿದ್ದರೆ, ಪ್ರೊ ಮ್ಯಾಕ್ಸ್ ಮಾದರಿಯು 6.9 ಇಂಚಿನ ದೊಡ್ಡ ಸೂಪರ್ ರೆಟಿನಾ XDR ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಕ್ಯಾಮೆರಾ ವಿಭಾಗದಲ್ಲಿ, ಇವು ವೇರಿಯಬಲ್ ಅಪರ್ಚರ್ (Variable Aperture) ತಂತ್ರಜ್ಞಾನದೊಂದಿಗೆ 48 ಮೆಗಾಪಿಕ್ಸೆಲ್ ಫ್ಯೂಷನ್ ಮುಖ್ಯ ಕ್ಯಾಮೆರಾವನ್ನು ಪಡೆದುಕೊಂಡಿವೆ. ಭಾರತದಲ್ಲಿ ಐಫೋನ್ 18 ಪ್ರೊ ಬೆಲೆಯು ಸುಮಾರು 1,64,900 ರೂ.ಗಳಿಂದ ಮತ್ತು ಪ್ರೊ ಮ್ಯಾಕ್ಸ್ ಬೆಲೆಯು ಸುಮಾರು 1,79,900 ರೂ.ಗಳಿಂದ ಆರಂಭವಾಗುತ್ತದೆ.
ಐಫೋನ್ ಡ್ಯೂ (iPhone Duo): ಇದು ಆಪಲ್ ಬಿಡುಗಡೆ ಮಾಡಿರುವ ಅತ್ಯಂತ ವಿಶೇಷವಾದ ಮೊದಲ ಫೋಲ್ಡೇಬಲ್  ಐಫೋನ್ ಆಗಿದೆ. ಇದು 7.6 ಇಂಚಿನ ಒಳಭಾಗದ ಡಿಸ್‌ಪ್ಲೇ ಮತ್ತು 5.4 ಇಂಚಿನ ಹೊರಭಾಗದ ಡಿಸ್‌ಪ್ಲೇಯನ್ನು ಹೊಂದಿದೆ. ಮಡಚಿದಾಗ ಅತ್ಯಂತ ತೆಳುವಾದ ವಿನ್ಯಾಸವನ್ನು ಹೊಂದಿರುವ ಈ ಫೋನ್ ಕೂಡ A20 Pro ಪ್ರೊಸೆಸರ್ ಹಾಗೂ ಅತ್ಯಾಧುನಿಕ ಮಲ್ಟಿಟಾಸ್ಕಿಂಗ್ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಭಾರತದಲ್ಲಿ ಇದರ ಆರಂಭಿಕ ಬೆಲೆಯು ಸುಮಾರು 2,99,900 ರೂ.ಗಳಷ್ಟಿದ್ದು, ಅಕ್ಟೋಬರ್‌ನಲ್ಲಿ ಅಧಿಕೃತ ಮಾರಾಟಕ್ಕೆ ಬರಲಿದೆ, (ಏಜೆನ್ಸೀಸ್​).