ಉಪವಾಸ ಸತ್ಯಾಗ್ರಹ ಹಿಂಪಡೆಯಲು ಸೋನಮ್ ವಾಂಗ್‌ಚುಕ್ ನಿರಾಕರಣೆ
- ದೇಶದಲ್ಲಿ ನಡೆಯುತ್ತಿರುವ ಪರೀಕ್ಷಾ ಅಕ್ರಮಗಳ ವಿರುದ್ಧ 'ಚಲೋ ಸಂಸದ್' ಪ್ರತಿಭಟನೆ
- ದೆಹಲಿಯಲ್ಲಿ ತೀವ್ರಗೊಂಡ ಜನಾಕ್ರೋಶ
- ಕೇಂದ್ರದ ಸಂಧಾನಕ್ಕೂ ಒಪ್ಪದ ಪರಿಸರವಾದಿ!
- ಉಪವಾಸ ಸತ್ಯಾಗ್ರಹ ಹಿಂಪಡೆಯಲು ಸೋನಮ್ ವಾಂಗ್‌ಚುಕ್ ನಿರಾಕರಣೆ
ನವದೆಹಲಿ: ನೀಟ್ ಸೇರಿದಂತೆ ದೇಶದಲ್ಲಿ ನಡೆಯುತ್ತಿರುವ ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ ಕಾಕ್ರೋಚ್ ಜನತಾ ಪಾರ್ಟಿ ಸೋಮವಾರ (ಜು.20) ಜಂತರ್ ಮಂತರ್ನಿಂದ ಸಂಸತ್ ಭವನದವರೆಗೆ ಪ್ರತಿಭಟನಾ ರ‍್ಯಾಲಿಯನ್ನು ಹಮ್ಮಿಕೊಂಡಿದೆ.
ಈ ಪ್ರತಿಭಟನೆಯ ತೀವ್ರತೆಯನ್ನು ಅರಿತ ಕೇಂದ್ರ ಸರ್ಕಾರ ಕಾಕ್ರೋಜ್ ಜನತಾ ಪಾರ್ಟಿಯ ನಾಯಕರೊಂದಿಗೆ ಮಾತುಕತೆಗೆ ಮುಂದಾಗಿದ್ದಾರೆ. ಅಂತೆಯೇ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಸಿಜೆಪಿಯ ವಕ್ತಾರರೊಂದಿಗೆ ಚರ್ಚೆ ನಡೆಸಿ ಅವರ ಬೇಡಿಕೆಗಳನ್ನು ಕೇಳಿಸಿಕೊಂಡಿದ್ದಾರೆ.
ಕೇಂದ್ರ ಸರ್ಕಾರ ಮಾತುಕತೆಗೆ ಮುಂದಾಗುತ್ತಿದ್ದಂತೆ ಅಭಿಜಿತ್ ದೀಪ್ಕೆ ಕೂಡ ಎರಡು ದಿನದಿಂದ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ಹಿಂತೆಗೆದುಕೊಂಡಿದ್ದಾರೆ. ಆದರೆ ಸೋನಮ್ ವಾಂಗ್‌ಚುಕ್ (Sonam Wangchuk) ಮಾತ್ರ ಇದಕ್ಕೆ ಒಪ್ಪಿಗೆ ನೀಡಲು ನಿರಾಕರಿಸಿದ್ದು, ತಮ್ಮ ಉಪವಾಸ ಸತ್ಯಾಗ್ರಹ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ನನ್ನ ಹೋರಾಟ ನಿಲ್ಲುವುದಿಲ್ಲ!
ವಿದ್ಯಾರ್ಥಿಗಳು ತಮ್ಮ ಹಕ್ಕಿಗೋಸ್ಕರ ಈ ಹೋರಾಟವನ್ನು ಮಾಡುತ್ತಿದ್ದಾರೆ. ದಯವಿಟ್ಟು ಸರ್ಕಾರ ಅವರ ಮನವಿಯನ್ನು ಕೇಳಿಸಿಕೊಳ್ಳಬೇಕು. ಪ್ರತಿಭಟನಾಕಾರರು ಕೂಡ ತಾಳ್ಮೆ ಹಾಗೂ ಸಂಯಮದಿಂದ ವರ್ತಿಸಬೇಕೆಂದು ಸೋನಮ್ ವಾಂಗ್‌ಚುಕ್ ಮನವಿ ಮಾಡಿದ್ದಾರೆ.
ವಿದ್ಯಾರ್ಥಿಗಳು ಶಾಂತಯುತವಾಗಿ ಪ್ರತಿಭಟನೆ ಮಾಡುತ್ತಿದ್ದರೂ ಕೂಡ ಪೊಲೀಸರು ಬಲ ಪ್ರದರ್ಶನ ಮಾಡಿದ್ದಾರೆ, ಲಾಠಿ ಚಾರ್ಜ್, ಆಶ್ರುವಾಯುವನ್ನು ಪ್ರಯೋಗಿಸಿದ್ದಾರೆ. ಹೀಗಾಗಿ ಈ ವಿಷಯ ಸಂಪೂರ್ಣವಾಗಿ ಕೊನೆಕಾಣುವವರೆಗೆ ನಾನು ಉಪವಾಸವನ್ನು ಮುಂದುವರಿಸುತ್ತೆನೆಂದು ವಾಂಗ್‌ಚುಕ್ ಸೋಷಿಯಲ್ ಮೀಡಿಯಾನಲ್ಲಿ ಹಂಚಿಕೊಂಡಿದ್ದಾರೆ.
ಆಸ್ಪತ್ರೆಯಲ್ಲಿರುವ ವಾಂಗ್‌ಚುಕ್!
ದೇಶದಲ್ಲಿ ನಡೆಯುತ್ತಿರುವ ಪೇಪರ್ ಸೋರಿಕೆ ತಡೆಗೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು ಆಗ್ರಹಿಸಿ ಪರಿಸರವಾದಿ ಸೋನಮ್ ವಾಂಗ್‌ಚುಕ್ ಕಳೆದ 23 ದಿನಗಳಿಂದ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿದ್ದಾರೆ. ಇವರ ಆರೋಗ್ಯ ದಿನ ಕಳೆದಂತೆ ಹದಗೆಟ್ಟ ಹಿನ್ನಲೆ ದೆಹಲಿ ಹೈಕೋರ್ಟ್ಗೆ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ವಾಂಗ್‌ಚುಕ್ ಅವರ ಆರೋಗ್ಯದ ಜವಾಬ್ದಾರಿ ಸರ್ಕಾರದ್ದಾಗಿದೆ ಎಂದು ತಿಳಿಸಿತ್ತು.
ಈ ಹಿನ್ನಲೆಯಲ್ಲಿ, ಶನಿವಾರ (ಜು.18) ಬೆಳಿಗ್ಗೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ದೆಹಲಿ ಪೊಲೀಸರು ವಾಂಗ್‌ಚುಕ್ ಅವರನ್ನು ಜಂತರ್-ಮಂತರ್ನಿಂದ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಿದ್ದಾರೆ, (ಏಜನ್ಸೀಸ್).