ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಜಂತರ್ ಮಂತರ್‌ನಲ್ಲಿ ಸೋನಮ್ ವಾಂಗ್‌ಚುಕ್ ಉಪವಾಸ ಸತ್ಯಾಗ್ರಹ!
- ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಜಂತರ್ ಮಂತರ್‌ನಲ್ಲಿ ಸೋನಮ್ ವಾಂಗ್‌ಚುಕ್ ಉಪವಾಸ ಸತ್ಯಾಗ್ರಹ!
- ಮೂರನೇ ದಿನ ತಲುಪಿದ ಸತ್ಯಾಗ್ರಹ
- ನನ್ನ ಆರೋಗ್ಯ ಹದಗೆಡುತ್ತಿದೆ... ಆದರೂ ಹೋರಾಟ ನಿಲ್ಲಿಸಲ್ಲ: ಸೋನಮ್ ವಾಂಗ್‌ಚುಕ್
ನವದೆಹಲಿ: ಲಡಾಖ್‌ನ ಪ್ರಸಿದ್ಧ ಹವಾಮಾನ ಮತ್ತು ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ (Sonam Wangchuk) ದೆಹಲಿಯ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಈ ಬಾರಿ ಪರಿಸರದ ಉಳಿವಿನ ಬದಲು ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಈ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಅವರ ಉಪವಾಸ ಸತ್ಯಾಗ್ರಹ ಈಗ 3ನೇ ದಿನಕ್ಕೆ ಕಾಲಿಟ್ಟಿದ್ದು, ಅವರ ಆರೋಗ್ಯದ ಬಗ್ಗೆ ಹಿತೈಷಿಗಳಲ್ಲಿ ತೀವ್ರ ಆತಂಕ ಮೂಡಿಸಿತ್ತು. ಈ ಬೆನ್ನಲ್ಲೇ ಸ್ವತಃ ಸೋನಮ್ ವಾಂಗ್‌ಚುಕ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಒಂದು ವಿಡಿಯೋ ಹಂಚಿಕೊಂಡಿದ್ದಾರೆ.
ನನಗೆ ಅಪಾಯ ಬರಬಹುದು, ಆದರೂ ಹೋರಾಟ ನಿಲ್ಲಿಸಲ್ಲ!
ತಮ್ಮ ದೇಹದ ಸದ್ಯದ ಸ್ಥಿತಿಯ ಬಗ್ಗೆ ಮಾಹಿತಿ ನೀಡಿರುವ ವಾಂಗ್‌ಚುಕ್, ತಮಗೆ ಈಗ ತೀವ್ರ ಸುಸ್ತು ಕಾಣಿಸಿಕೊಳ್ಳುತ್ತಿದೆ ಎಂದಿದ್ದಾರೆ. ನನಗೆ ಈಗ ಸ್ವಲ್ಪ ದಣಿವಾಗಿದೆ. ರಕ್ತದೊತ್ತಡ ಕಡಿಮೆಯಾಗಿದೆ ಎಂದು ವೈದ್ಯರು ಹೇಳಿದ್ದಾರೆ, ಹಾಗಾಗಿ ಇನ್ಮುಂದೆ ನೀರು ಮತ್ತು ಉಪ್ಪಿನ ಸೇವನೆಯನ್ನು ಹೆಚ್ಚಿಸುತ್ತೇನೆ. ನನ್ನ ರಕ್ತದಲ್ಲಿನ ಸಕ್ಕರೆ ಮಟ್ಟ 66 ಕ್ಕೆ ಕುಸಿದಿದೆ, ಎಂದು ಬರೆದುಕೊಂಡಿದ್ದಾರೆ.
3 ದಿನಗಳಿಂದ ಆಹಾರವಿಲ್ಲದ ಕಾರಣ ಅವರ ದೇಹ ಈಗ ಕೀಟೋಸಿಸ್ (Ketosis) ಹಂತ ತಲುಪಿದೆ. ಅಂದರೆ, ದೇಹಕ್ಕೆ ಹೊರಗಿನಿಂದ ಗ್ಲೂಕೋಸ್ ಸಿಗದಿದ್ದಾಗ, ಅದು ಬದುಕಲು ದೇಹದಲ್ಲಿನ ಕೊಬ್ಬನ್ನು ಕರಗಿಸಿ ಇಂಧನವಾಗಿ ಬಳಸಲು ಶುರು ಮಾಡುತ್ತದೆ. ದೀರ್ಘಕಾಲದ ಉಪವಾಸ ಮುಂದುವರಿದರೆ ದೇಹವು ಕೊನೆಯಲ್ಲಿ ಸ್ನಾಯುಗಳು ಮತ್ತು ಪ್ರಮುಖ ಅಂಗಾಂಗಗಳನ್ನೇ ತಿನ್ನಲು ಶುರು ಮಾಡುತ್ತದೆ. ಇದು ಸಾವಿಗೂ ಕಾರಣವಾಗಬಹುದು, ಆದರೆ ನಾನು ಇನ್ನು ಆ ಹಂತಕ್ಕೆ ಹೋಗಿಲ್ಲ. ಈಗಾಗಲೇ 2 ಕೆಜಿ ತೂಕ ಕಡಿಮೆಯಾಗಿದೆ ಎಂದು ವಿವರಿಸಿದ್ದಾರೆ.
ಕಳೆದ ಸೆಪ್ಟೆಂಬರ್‌ನಲ್ಲಿ ಪರೀಕ್ಷಾ ಅಕ್ರಮಗಳಿಂದ ನೊಂದು ಪ್ರಾಣ ತ್ಯಾಗ ಮಾಡಿದ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಲಡಾಖ್‌ನಲ್ಲಿ ಮಡಿದ 5 ಯುವಕರಿಗೆ ಹೋಲಿಸಿದರೆ ನಾನು ಈಗ ಅನುಭವಿಸುತ್ತಿರುವುದು ಏನು ಅಲ್ಲ ಎಂದಿದ್ದಾರೆ.
ಯಾರ ವಿರುದ್ಧ ಈ ಹೋರಾಟ? ಏನಿದು CJP ಪ್ರತಿಭಟನೆ?
ಪರೀಕ್ಷಾ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರವನ್ನು ವಿರೋಧಿಸಿ ಜೂನ್ 20 ರಿಂದ ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಕ್ಷ (CJP) ಪ್ರತಿಭಟನೆ ನಡೆಸುತ್ತಿದೆ. ಈ ಆಂದೋಲನಕ್ಕೆ ಬೆಂಬಲ ಸೂಚಿಸಿರುವ ಸೋನಮ್ ವಾಂಗ್‌ಚುಕ್, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ಪ್ರತಿಭಟನಾ ನಿರತ ಮುಖಂಡ ಅಭಿಜೀತ್ ದೀಪ್ಕೆ ಮಾತನಾಡಿ, ಇದು ಕೇವಲ ಒಂದು ಪರೀಕ್ಷೆಯ ಹಗರಣವಲ್ಲ. ಇದು ಇಡೀ ಶಿಕ್ಷಣ ವ್ಯವಸ್ಥೆಯಲ್ಲಿನ ಪಾರದರ್ಶಕತೆ ಮತ್ತು ಸಾರ್ವಜನಿಕ ನಂಬಿಕೆಯ ಕೊಲೆಯಾಗಿದೆ, ಎಂದು ಆಕ್ರೋಶ ಹೊರಹಾಕಿದ್ದಾರೆ, (ಏಜನ್ಸೀಸ್).