ಬಾಂಬೆ ಹೈಕೋರ್ಟ್ ಮೆಟ್ಟಲೇರಲು ಸಿದ್ಧವಾದ ಕೇಂದ್ರ ಸಚಿವ ನಿತಿನ್ ಗಡ್ಕರಿ
- ದೇಶದಲ್ಲಿ ಜಾರಿಯಾಗಿರುವ ಇ-20 ಇಂಧನ ನೀತಿ
- ಈ ನೀತಿಯಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ವೈಯಕ್ತಿಕ ಲಾಭ ಎಂದು ಟ್ರೋಲ್
- ಡೀಪ್ಫೇಕ್ ವಿಡಿಯೋಗಳ ಮೂಲಕ ನನ್ನ ಹಾಗೂ ಕುಟುಂಬದವರ ತೆಜೋವಧೆ ನಡೆಯುತ್ತಿದೆ
- ಬಾಂಬೆ ಹೈಕೋರ್ಟ್ ಮೆಟ್ಟಲೇರಲು ಸಿದ್ಧವಾದ ಕೇಂದ್ರ ಸಚಿವ ನಿತಿನ್ ಗಡ್ಕರಿ
ಮುಂಬೈ: ದೇಶದಲ್ಲಿ ನೀಟ್ ಪ್ರತಿಭಟನೆ ಕಾವು ಕಡಿಮೆಯಾಗುತ್ತಿದ್ದಂತೆ ನೇಪಥ್ಯಕ್ಕೆ ಸರಿದಿದ್ದ ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣ ಮಾಡುವ ವಿಚಾರ ವಿವಾದದ ಸ್ವರೂಪ ತೆಗೆದುಕೊಳ್ಳುತ್ತಿದೆ.
ಈ ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯ ಯೋಜನೆಯನ್ನು ರೂಪಿಸಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಹಾಗೂ ಅವರ ಕುಟುಂಬದವರ ಕುರಿತು ಕೃತಕ ಬುದ್ಧಿಮತ್ತೆಯನ್ನು ಬಳಸಿ ಮಾನಹಾನಿಕರ ವಿಡಿಯೋಗಳನ್ನು ಸೃಷ್ಟಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಈ ಕುರಿತು ಕೆಂಡಾಮಂಡಲವಾಗಿರುವ ನಿತಿನ್ ಗಡ್ಕರಿ (Nitin Gadkari Moves Bombay High Court), ನೆಟ್ಟಿಗರ ವಿರುದ್ಧ ಬಾಂಬೆ ಹೈಕೋರ್ಟ್ ಮೆಟ್ಟಿಲೇರಲು ಸಜ್ಜಾಗಿದ್ದಾರೆ ಎಂದು ತಿಳಿದು ಬಂದಿದೆ.
ನನಗೆ ಇದರಿಂದ ವೈಯಕ್ತಿಕ ಲಾಭವಿಲ್ಲ!
ಪೆಟ್ರೋಲ್ನಲ್ಲಿ ಎಥೆನಾಲ್ ಅನ್ನು ಮಿಶ್ರಣ ಮಾಡಿದರೆ ಎಥನಾಕ್ ತಯಾರಕ ಕಂಪನಿಗಳಿಗೆ ಲಾಭವಾಗುತ್ತದೆ. ಗಡ್ಕರಿ ಅವರ ಮಕ್ಕಳದೇ ಎಥೆನಾಲ್ ಕಂಪನಿ ಇರುವ ಕಾರಣ ತಮ್ಮ ಮಕ್ಕಳಿಗೆ ಲಾಭ ಮಾಡಿಕೊಡಲು ಈ ನೀತಿಯನ್ನು ಜಾರಿಗೆ ತಂದಿದ್ದಾರೆಂದು ಆನ್ಲೈನ್ನಲ್ಲಿ ಟ್ರೋಲ್ ಮಾಡಲಾಗುತ್ತಿದೆ.
ಇದನ್ನು ವಿರೋಧಿಸಿ, ಕೇಂದ್ರ ಸಚಿವರು, ನಾನು ಈ ನೀತಿಯನ್ನು ನನ್ನ ವೈಯಕ್ತಿಕ ಲಾಭಕ್ಕಾಗಿ ತಂದಿಲ್ಲ, ಇದರಿಂದ ನನ್ನ ವರ್ಚಸ್ಸು ಹಾಳಾಗುತ್ತಿದೆ ಎಂದು ಟ್ರೋಲ್ ಹಾಗೂ ವಿಡಿಯೋ ಮಾಡುತ್ತಿರುವವರ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. ಕೇಂದ್ರ ಸಚಿವರು ಪ್ರಕರಣವನ್ನು ದಾಖಲಿಸಲು ನ್ಯಾಯಾಲಯ ಕೂಡ ಒಪ್ಪಿಗೆ ಸೂಚಿಸಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಇದರ ವಿಚಾರಣೆ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ.
ಡೀಪ್ಫೇಕ್ ವಿಡಿಯೋ ಮಾಡುತ್ತಿದ್ದಾರೆ!
ಕೇವಲ ಸುಳ್ಳು ಮಾಹಿತಿಯನ್ನು ಸೃಷ್ಟಿಸಲು, ಡೀಪ್ಫೇಕ್ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ಹೀಗೆ ಹರಡುತ್ತಿರುವ ವಿಡಿಯೋನಲ್ಲಿ ನನ್ನ ಹಾಗೂ ನನ್ನ ಮಕ್ಕಳ ಭಾವಚಿತ್ರವನ್ನು ಬಳಸಲಾಗುತ್ತಿದೆ ಎಂದು ಗಡ್ಕರಿ ಆರೋಪಿಸಿದ್ದಾರೆ.
ಇ-20 ನೀತಿ ಮೂಲಕ ನಾನು ನನ್ನ ಕುಟುಂಬದವರಿಗೆ ಲಾಭ ಮಾಡಿಕೊಡಲು ಜಾರಿಗೆ ತಂದಿದ್ದೆನೆಂದು ಮಾಡುತ್ತಿರುವ ವೈಯಕ್ತಿಕ ದಾಳಿಯನ್ನು ತಪ್ಪಿಸಬೇಕೆಂದು ಗಡ್ಕರಿ ನ್ಯಾಯಾಲಕ್ಕೆ ಸಲ್ಲಿಸಲಿರುವ ಅರ್ಜಿಯಲ್ಲಿ ನಮೂದಿಸಲಿದ್ದಾರೆ.
ಇ-20 ಜನತಾ ಪಾರ್ಟಿ ಸ್ಥಾಪನೆ!
ನೀಟ್ ಅಕ್ರಮವನ್ನು ವಿರೋಧಿಸಿ, ಕಾಕ್ರೋಚ್ ಜನತಾ ಪಾರ್ಟಿ ಜನ್ಮತಾಳಿದಂತೆ, ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣವನ್ನು ವಿರೋಧಿಸಿ ಇ-20 ಜನತಾ ಪಾರ್ಟಿ ಎಂಬ ಸೋಷಿಯಲ್ ಮೀಡಿಯಾ ಅಕೌಂಟ್ ಹುಟ್ಟಿಕೊಂಡಿದೆ.
ಶುದ್ಧ ಪೆಟ್ರೋಲ್ ಅನ್ನು ಪಡೆಯುವುದು ಪ್ರತಿ ನಾಗರಿಕರ ಹಕ್ಕು, ಆದರೆ ಈ ನೀತಿ ಮೂಲಕ ಇದನ್ನು ಕಸಿದು ಕೊಳ್ಳಲಾಗುತ್ತಿದೆ. ಅಂತಯೇ, ಇ-20 ಪೆಟ್ರೋಲ್ ಅನ್ನು ಕಡ್ಡಾಯ ಮಾಡಿರುವುದು ಸರಿಯಲ್ಲ. ಹೀಗಾಗಿ ಈ ನೀತಿಯನ್ನು ಹಿಂಪಡೆಯಬೇಕು ಎನ್ನುವುದು ಈ ಪಾರ್ಟಿಯ ಆಗ್ರಹವಾಗಿದೆ, (ಏಜನ್ಸೀಸ್).