ನವದೆಹಲಿ: ಎಸ್ಐಆರ್ನಲ್ಲಿ ಅಕ್ರಮ ಆರೋಪ ಮತ್ತು ಚುನಾವಣಾ ಆಯೋಗದ ವಿರುದ್ಧದ ಹೋರಾಟದ ಭಾಗವಾಗಿ ನಿನ್ನೆ ನಡೆಯಬೇಕಿದ್ದ ಇಂಡಿಯಾ ಕೂಟದ ವಿಪಕ್ಷಗಳು ಅಣಕು ಸಂಸತ್ ಇಂದು(ಅ. 31) ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ನಿವಾಸದಲ್ಲಿ ನಡೆಯಲಿದೆ. ಮತ್ತು ಸಿಇಸಿ ಜ್ಞಾನೇಶ್ ಕುಮಾರ್ ಅವರ ಸಾರ್ವಜನಿಕ ದೋಷಾರೋಪಣೆ ನಡೆಯಲಿದೆ.
ಮಾಜಿ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅವರು ಅಣಕು ಸಂಸತ್ನ ಅಧ್ಯಕ್ಷತೆ ವಹಿಸಲಿದ್ದಾರೆ. ಒಟ್ಟು ಮೂರು ಗಂಟೆಗಳ ಕಾಲ ಅಣಕು ಸಂಸತ್ ನಡೆಯಲಿದೆ. ರಾಜ್ಯಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಖರ್ಗೆ ಅವರು ಕುಮಾರ್ ಅವರನ್ನು ಪದಚ್ಯುತಗೊಳಿಸುವ ಪ್ರಸ್ತಾವವನ್ನು ಮಂಡಿಸಲಿದ್ದಾರೆ. ಇತ್ತ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸಮಾರೋಪ ಭಾಷಣ ಮಾಡುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
21 ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸೇರಿದಂತೆ ಕನಿಷ್ಠ 30 ಭಾಷಣಕಾರರು ಅಣಕು ಸಂಸತ್ನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಬಿಜೆಡಿಗೆ ಆಹ್ವಾನ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ, ಆದರೆ ಪಕ್ಷವು ಇನ್ನೂ ಭಾಗವಹಿಸುವಿಕೆಯನ್ನು ದೃಢೀಕರಿಸಿಲ್ಲ.
ಏತನ್ಮಧ್ಯೆ, ಶುಕ್ರವಾರ(ಅ. 30) ಉತ್ತರ ಪ್ರದೇಶದಕ್ಕೆ ಭೇಟಿ ನೀಡಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು, ಇಂಡಿಯಾ ಕೂಟದ ಅಣಕು ಸಂಸತ್ ವಿರುದ್ಧವಾಗಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಸಮಾಜವಾದಿ ಪಕ್ಷದ (ಎಸ್ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಅವರಿಗೆ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮತದಾರರ ಪಟ್ಟಿಯ ವಿವಾದದ ಕುರಿತು ಚರ್ಚಿಸಲು ಸವಾಲು ಹಾಕಿದ್ದಾರೆ.
ನಾನು ನಿಮ್ಮಿಬ್ಬರಿಗೂ ಇಲ್ಲಿಯೇ ಮತ್ತು ಈಗಲೇ ಸವಾಲು ಹಾಕುತ್ತೇನೆ. ಭಾರತೀಯ ಜನತಾ ಪಕ್ಷವು ಸಂಸತ್ತಿನಲ್ಲಿ ಇದನ್ನು ಚರ್ಚಿಸಲು ಸಂಪೂರ್ಣವಾಗಿ ಸಿದ್ಧವಾಗಿದೆ. ನಮಗೆ ಮರೆಮಾಡಲು ಏನೂ ಇಲ್ಲ. ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯೋಣ ಎಂದಿದ್ದಾರೆ. ಆದರೆ ಅವರಿಗೆ ಅಲ್ಲಿ ಮಾತನಾಡುವ ಉದ್ದೇಶವಿಲ್ಲ. ಅವರು ಸಂಸತ್ತು ಕಾರ್ಯನಿರ್ವಹಿಸಲು ಬಿಡಲು ನಿರಾಕರಿಸುತ್ತಾರೆ. ಬದಲಾಗಿ, ಅವರು ಕೇವಲ ಗದ್ದಲವನ್ನು ಸೃಷ್ಟಿಸುತ್ತಾರೆ ಎಂದು ಕಿಡಿಕಾರಿದ್ದಾರೆ.
ಹರಿಯಾಣ, ಮಹಾರಾಷ್ಟ್ರ, ಬಿಹಾರ, ದೆಹಲಿ, ಪುದುಚೇರಿ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಬಿಜೆಪಿ ಸಾಧಿಸಿದ ಗೆಲುವುಗಳನ್ನು ಉಲ್ಲೇಖಿಸಿದ ಶಾ, ಬಂಗಾಳದಲ್ಲಿ ಬಿಜೆಪಿ ಗೆದ್ದ ಬಳಿಕ ಮಗೆ ಚುನಾವಣೆಗಳಲ್ಲಿ ಗೆಲ್ಲಲು ಸಾಧ್ಯವೇ ಇಲ್ಲ ಎಂಬುದು ಅವರಿಗೆ ಅರಿವಾಗಿದೆ. ಸೋಲನ್ನು ಒಪ್ಪಿಕೊಳ್ಳುವ ಬದಲು, ಅವರು ಅಂಪೈರ್ ಮೋಸ ಮಾಡಿದ್ದಾರೆ ಮತ್ತು ಮತಗಳನ್ನು ಕದಿಯಲಾಗಿದೆ ಎಂದು ಹೇಳುತ್ತಿದ್ದಾರೆ. ಸಂಸತ್ತಿನಲ್ಲಿ ಈ ವಿಷಯದ ಬಗ್ಗೆ ಎಂದಿಗೂ ಚರ್ಚಿಸುವುದಿಲ್ಲ, ಬದಲಾಗಿ ಬೀದಿಗಳಲ್ಲಿ ಗೊಂದಲ ಸೃಷ್ಟಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ (ಏಜೆನ್ಸೀಸ್).