ಮಣಿಪುರ : ಮದ್ಯ ಸೇವನೆ ಕೆಲವೊಮ್ಮೆ ಜೀವಕ್ಕೆ ಎಷ್ಟು ಅಪಾಯಕಾರಿಯಾಗಬಹುದು ಎಂಬುದಕ್ಕೆ ಮಣಿಪುರದಲ್ಲಿ ನಡೆದಿರುವ ಘಟನೆ ಸಾಕ್ಷಿಯಾಗಿದೆ. ಕಲುಷಿತ ಮದ್ಯ ಸೇವಿಸಿದ ಪರಿಣಾಮ ಸಾವಿನ ಸಂಖ್ಯೆ 16ಕ್ಕೆ ಏರಿಕೆಯಾಗಿದ್ದು, ಸುಮಾರು 600 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ದುರಂತ ಇಡೀ ಪ್ರದೇಶದಲ್ಲಿ ಆತಂಕ ಮೂಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಮದ್ಯ ಪೂರೈಕೆಯ ಆರೋಪದ ಮೇಲೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಣಿಪುರದ ಚಾಂಡೆಲ್ ಜಿಲ್ಲೆಯ ಚಕ್ಪಿಕರಾಂಗ್ ಉಪವಿಭಾಗ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನವೆಂಬರ್ 18ರಿಂದ ಈ ಘಟನೆ ವರದಿಯಾಗಲು ಆರಂಭಿಸಿದೆ. ಕಲುಷಿತ ಮದ್ಯ ಸೇವಿಸಿದ ಬಳಿಕ ಹಲವರು ಅಸ್ವಸ್ಥರಾಗಿದ್ದು, ತಕ್ಷಣ ಅವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮತ್ತೆ ಮೂವರು ಮೃತಪಟ್ಟಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 16ಕ್ಕೆ ತಲುಪಿದೆ. ಚಾಂಡೆಲ್ ಜಿಲ್ಲೆಯಲ್ಲಿ ಈವರೆಗೆ 600ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿ ವಿವಿಧ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಐಜಿಪಿ ಥೆಮ್ಥಿಂಗ್ ನಗಾಶಾಂಗ್ವಾ ತಿಳಿಸಿದ್ದಾರೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಕಲುಷಿತ ಮದ್ಯ ಪೂರೈಕೆಯಲ್ಲಿ ಭಾಗಿಯಾಗಿರುವ ಶಂಕೆಯ ಮೇಲೆ ಆರು ಮಂದಿಯನ್ನು ಬಂಧಿಸಲಾಗಿದೆ. ಮದ್ಯ ಎಲ್ಲಿಂದ ಬಂದಿದೆ, ಅದರಲ್ಲಿ ಯಾವ ರೀತಿಯ ರಾಸಾಯನಿಕ ಅಥವಾ ವಿಷಕಾರಿ ಅಂಶಗಳಿವೆ ಎಂಬುದನ್ನು ಪತ್ತೆಹಚ್ಚಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.
ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಅಬಕಾರಿ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸುಗ್ನು ಮತ್ತು ಚಕ್ಪಿಕರಾಂಗ್ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯದ ಬಗ್ಗೆಯೂ ಮಾಹಿತಿ ಸಂಗ್ರಹಿಸಿದ್ದಾರೆ.
ಇದನ್ನೂ ಓದಿ : ಪಾತಾಳಕ್ಕೆ ಕುಸಿದ ಬೆಳ್ಳಿ ದರ! ಜನವರಿಯಲ್ಲಿ 2 ಲಕ್ಷ ಹೂಡಿಕೆ ಮಾಡಿದವರ ಕಥೆ ಈಗೇನು? Silver Crash
ದುರಂತದ ಸಂಪೂರ್ಣ ವಿವರಗಳನ್ನು ಪತ್ತೆಹಚ್ಚಲು ಮಣಿಪುರ ಸರ್ಕಾರ ಉನ್ನತ ಮಟ್ಟದ ವಿಚಾರಣಾ ಸಮಿತಿಯನ್ನು ರಚಿಸಿದೆ. ಈ ಸಮಿತಿಯು ಸಾವುಗಳಿಗೆ ಕಾರಣವಾದ ಘಟನೆಗಳ ಸರಣಿ, ಕಲುಷಿತ ಮದ್ಯದ ಮೂಲ, ಅದರಲ್ಲಿರುವ ಅಂಶಗಳು ಹಾಗೂ ಮದ್ಯದ ಸ್ವರೂಪದ ಬಗ್ಗೆ ತನಿಖೆ ನಡೆಸಲಿದೆ. ಅಲ್ಲದೆ, ಮೃತರ ಮರಣೋತ್ತರ ಪರೀಕ್ಷೆಯ ವರದಿಗಳು, ರೋಗಿಗಳ ವೈದ್ಯಕೀಯ ಪರಿಸ್ಥಿತಿ ಮತ್ತು ಘಟನೆಗೆ ಸಂಬಂಧಿಸಿದಂತೆ ಆಡಳಿತ ವ್ಯವಸ್ಥೆಯಲ್ಲಿ ಏನಾದರೂ ಲೋಪಗಳಾಗಿವೆಯೇ ಎಂಬುದನ್ನೂ ಪರಿಶೀಲಿಸಲಿದೆ. ಒಂದು ತಿಂಗಳೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ.
ಇದನ್ನೂ ಓದಿ : ಕೋಲ್ಡ್ ಪ್ಲೇಗೆ ಇಲ್ಲದ ರೂಲ್ಸ್ ನನಗೇಕೆ? ವೇದಿಕೆಯಲ್ಲೇ ದಿಲ್ಜಿತ್ ದೋಸಾಂಜ್ ಕಿಡಿ | Diljit Dosanjh
ಮತ್ತೊಂದೆಡೆ, ಅಕ್ರಮ ಮದ್ಯ ಮಾರಾಟ ಮತ್ತು ಉತ್ಪಾದನೆಯನ್ನು ತಡೆಯಲು ಮಣಿಪುರ ಪೊಲೀಸರು ಹಾಗೂ ಅಬಕಾರಿ ಇಲಾಖೆ ಕಟ್ಟೆಚ್ಚರ ವಹಿಸಿವೆ. ವಿವಿಧ ಮಾರಾಟ ಕೇಂದ್ರಗಳು ಮತ್ತು ಮದ್ಯ ಉತ್ಪಾದನಾ ಘಟಕಗಳ ಮೇಲೆ ತಪಾಸಣೆ ನಡೆಸಿ, ಅನುಮಾನಾಸ್ಪದ ಮದ್ಯದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲು ಸೂಚಿಸಲಾಗಿದೆ. ಈ ನಡುವೆ ಮುಖ್ಯಮಂತ್ರಿ ಯುಮ್ನಾಮ್ ಖೇಮಚಂದ್ ಸಿಂಗ್ ಅವರು ಶುಕ್ರವಾರ ಲಾಂಫೆಲ್‌ಪತ್‌ನ ಶಿಜಾ ಆಸ್ಪತ್ರೆ ಮತ್ತು ಸಜಿವಾದ ಬಬಿನಾ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸಿದ್ದಾರೆ.
ಕಲುಷಿತ ಮದ್ಯದ ಸೇವನೆಯಿಂದ ಸಂಭವಿಸಿರುವ ಈ ದುರಂತ ಮಣಿಪುರದಲ್ಲಿ ಆತಂಕ ಸೃಷ್ಟಿಸಿದೆ. 16 ಜೀವಗಳನ್ನು ಬಲಿ ಪಡೆದಿರುವ ಪ್ರಕರಣದಲ್ಲಿ ಮದ್ಯದ ಮೂಲ ಯಾವುದು, ಅದರಲ್ಲಿರುವ ವಿಷಕಾರಿ ಅಂಶಗಳೇನು ಮತ್ತು ಈ ದುರಂತಕ್ಕೆ ಹೊಣೆ ಯಾರು ಎಂಬ ಪ್ರಶ್ನೆಗಳಿಗೆ ತನಿಖೆಯ ಬಳಿಕ ಉತ್ತರ ಸಿಗಬೇಕಿದೆ.