ಅಹಮದಾಬಾದ್: ತಮ್ಮ ಹಾಡುಗಳ ಸಾಹಿತ್ಯದ ಬಗ್ಗೆ ವ್ಯಕ್ತವಾಗಿರುವ ಆಕ್ಷೇಪಗಳಿಗೆ ಖ್ಯಾತ ಗಾಯಕ ದಿಲ್ಜಿತ್ ದೋಸಾಂಜ್ ವೇದಿಕೆಯಲ್ಲೇ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶನಿವಾರ ಸಂಜೆ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಕೋಲ್ಡ್ಪ್ಲೇ ಹಾಡೊಂದನ್ನು ಉಲ್ಲೇಖಿಸಿದ ಅವರು, ಅದರಲ್ಲಿ ಡ್ರಂಕ್ ಅಂಡ್ ಹೈ ಎಂಬ ಪದಗಳಿದ್ದರೂ ಯಾವುದೇ ಆಕ್ಷೇಪ ವ್ಯಕ್ತವಾಗುವುದಿಲ್ಲ. ಆದರೆ ತಮ್ಮ ಹಾಡುಗಳ ವಿಚಾರದಲ್ಲಿ ಮಾತ್ರ ಏಕೆ ಇಷ್ಟೊಂದು ವಿರೋಧ ಎಂದು ಪ್ರಶ್ನಿಸಿದ್ದಾರೆ.ನಿಷೇಧ ಹೇರಬೇಕೆಂದರೆ ಅದು ನನ್ನ ಮೇಲೆಯೇ ಹೇರಬೇಕು ಎಂಬ ಅರ್ಥದಲ್ಲಿ ಪಾಬಂದಿ ಮುಝ್ ಪರ್ ಹೀ ಲಗಾನಿ ಹೈ ಎಂದು ಹೇಳುವ ಮೂಲಕ ನೆರೆದಿದ್ದ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ಕಾರ್ಯಕ್ರಮದ ಆರಂಭದಲ್ಲಿ ಮಾತನಾಡಿದ ದಿಲ್ಜಿತ್, ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪ್ರದರ್ಶನ ನೀಡುವುದು ಬಹುದಿನಗಳ ಕನಸಾಗಿತ್ತು ಎಂದು ಸಂತಸ ಹಂಚಿಕೊಂಡರು. ಈಗಾಗಲೇ ಲಂಡನ್ನ ವೆಂಬ್ಲಿ ಸೇರಿದಂತೆ ಹಲವು ಪ್ರಸಿದ್ಧ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದರೂ, ವಿಶ್ವದ ಅತಿದೊಡ್ಡ ಕ್ರೀಡಾಂಗಣಗಳಲ್ಲಿ ಒಂದಾದ ಅಹಮದಾಬಾದ್ನ ಈ ಮೈದಾನದಲ್ಲಿ ಹಾಡುವುದು ತಮ್ಮ ಬಹುದಿನಗಳ ಆಸೆಯಾಗಿತ್ತು ಎಂದರು.
ನಾವು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿದ್ದೇವೆ ಎಂಬ ಹೆಮ್ಮೆ ನಮಗಿರಬೇಕು. ವೆಂಬ್ಲಿಯಲ್ಲೂ ಪ್ರದರ್ಶನ ನೀಡಿದ್ದೇವೆ. ಆದರೆ ಈ ಸ್ಥಳದಲ್ಲಿ ಕಾರ್ಯಕ್ರಮ ನೀಡಬೇಕು ಎಂಬುದು ನನ್ನ ಬಹುದಿನಗಳ ಕನಸಾಗಿತ್ತು. ನಿಮ್ಮಿಂದಾಗಿ ಆ ಕನಸು ನನಸಾಗಿದೆ. ಧನ್ಯವಾದಗಳು, ನಿಮ್ಮನ್ನು ಪ್ರೀತಿಸುತ್ತೇನೆ ಎಂದು ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಇದನ್ನೂ ಓದಿ : ವಿಮಾನ ಹತ್ತುವ ಮುನ್ನವೇ ಹೈಡ್ರಾಮಾ! ಪ್ರಯಾಣಿಕರನ್ನು ಎಳೆದೊಯ್ದ ICE ಅಧಿಕಾರಿಗಳು | Seattle airport
ಅಹಮದಾಬಾದ್ ಕಾರ್ಯಕ್ರಮಕ್ಕೂ ಮುನ್ನ ಚಂಡೀಗಢದ ಪಿಜಿಜಿಸಿ-46 ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಪಂಡಿತ್ ರಾವ್ ಧರೆನ್ನಾವರ್ ಅವರು ದಿಲ್ಜಿತ್ ಅವರ ನಾಲ್ಕು ಹಾಡುಗಳನ್ನು ಕಾರ್ಯಕ್ರಮದ ಪಟ್ಟಿಯಿಂದ ಕೈಬಿಡುವಂತೆ ಆಗ್ರಹಿಸಿದ್ದರು. ಈ ಹಾಡುಗಳ ಸಾಹಿತ್ಯ ಮದ್ಯಪಾನ, ಮಾದಕ ವಸ್ತುಗಳು ಹಾಗೂ ಬಂದೂಕು ಸಂಸ್ಕೃತಿಯನ್ನು ಉತ್ತೇಜಿಸುತ್ತದೆ ಎಂಬುದು ಅವರ ಆರೋಪವಾಗಿತ್ತು.
ಪಟಿಯಾಲ ಪೆಗ್, ಪಂಜ್ ತಾರಾ, ಜೆ ಬಿಚ್ಚೋ ಫೀಮ್ ಲಬ್ಬಿಯಾ ಮತ್ತು ಜಟ್ ಉಠೇ ಫೈರ್ ಕರ್ಡಾ, ಹಾಡುಗಳನ್ನು ಅವರು ಹೆಸರಿಸಿದ್ದರು. ಒಂದು ವೇಳೆ ಈ ಹಾಡುಗಳನ್ನು ಕಾರ್ಯಕ್ರಮದಲ್ಲಿ ಹಾಡಿದರೆ, ನ್ಯಾಯಾಲಯದ ಆದೇಶ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಗುಜರಾತ್ ಹೈಕೋರ್ಟ್ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುವುದಾಗಿಯೂ ಎಚ್ಚರಿಕೆ ನೀಡಿದ್ದರು.
ಇನ್ನು ಕಾರ್ಯಕ್ರಮದ ವೇಳೆ ದಿಲ್ಜಿತ್ ಕೋಲ್ಡ್ಪ್ಲೇ ಹಾಡಿನ ವಿಚಾರ ಪ್ರಸ್ತಾಪಿಸಿ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದರು. ಭಾರತದಲ್ಲೇ ಹುಟ್ಟಿ ಬೆಳೆದಿರುವುದಾಗಿ ಹೇಳಿದ ಅವರು, ತಮಾಷೆಯಾಗಿ ಹವಾಯಿಯ ಹೊನೊಲುಲು ನಗರವನ್ನೂ ಉಲ್ಲೇಖಿಸಿದರು. ತಮ್ಮೊಂದಿಗೆ ವಿಶ್ವದ ವಿವಿಧೆಡೆ ಪ್ರಯಾಣಿಸುವ ಸಂಗೀತ ತಂಡದ ಸದಸ್ಯರೆಲ್ಲರೂ ಭಾರತೀಯರು ಎಂಬುದನ್ನೂ ನೆನಪಿಸಿದರು. ತಾವು ಕಾರ್ಯಕ್ರಮವನ್ನು ಸಂಪೂರ್ಣವಾಗಿ ಆನಂದಿಸುತ್ತಿರುವುದಾಗಿ ಹೇಳಿದ ದಿಲ್ಜಿತ್, ಟೀಕಾಕಾರರಿಗೂ ಐ ಲವ್ ಯು ಎಂದು ಹೇಳುವ ಮೂಲಕ ವ್ಯಂಗ್ಯಭರಿತ ಸಂದೇಶ ನೀಡಿದರು. ಯಾರಾದರೂ ತಮ್ಮನ್ನು ಕೆಣಕಿದರೆ ಅದಕ್ಕೆ ತಕ್ಕ ಉತ್ತರ ನೀಡುವುದಾಗಿ ಹೇಳಿ ಮತ್ತೊಂದು ಚುಟುಕು ಮಾತಿನ ಮೂಲಕ ಅಭಿಮಾನಿಗಳನ್ನು ರಂಜಿಸಿದರು.