ವಿಮಾನ ಹತ್ತುವ ಮುನ್ನವೇ ಹೈಡ್ರಾಮಾ! ಪ್ರಯಾಣಿಕರನ್ನು ಎಳೆದೊಯ್ದ ICE ಅಧಿಕಾರಿಗಳು | Seattle airport

ಅಮೆರಿಕದ ಸಿಯಾಟಲ್ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ನಡೆಸಿದ ದಿಢೀರ್ ಕಾರ್ಯಾಚರಣೆ ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ. ವಿಮಾನ ಹತ್ತಲು ಸಿದ್ಧರಾಗಿದ್ದ ಪ್ರಯಾಣಿಕರ ನಡುವೆಯೇ ಮಾಸ್ಕ್ ಧರಿಸಿದ್ದ ವಲಸೆ ಮತ್ತು ಕಸ್ಟಮ್ಸ್ ಜಾರಿ ಅಧಿಕಾರಿಗಳು (ICE) ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. Seattle airport
ಪ್ರಯಾಣಿಕರನ್ನು ಎಳೆದೊಯ್ದ ICE ಅಧಿಕಾರಿಗಳು
ಪ್ರಯಾಣಿಕರನ್ನು ಎಳೆದೊಯ್ದ ICE ಅಧಿಕಾರಿಗಳುWEB
Published on: 

ವಾಷಿಂಗ್ಟನ್: ಅಮೆರಿಕದ ಸಿಯಾಟಲ್ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ನಡೆಸಿದ ದಿಢೀರ್ ಕಾರ್ಯಾಚರಣೆ ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ. ವಿಮಾನ ಹತ್ತಲು ಸಿದ್ಧರಾಗಿದ್ದ ಪ್ರಯಾಣಿಕರ ನಡುವೆಯೇ ಮಾಸ್ಕ್ ಧರಿಸಿದ್ದ ವಲಸೆ ಮತ್ತು ಕಸ್ಟಮ್ಸ್ ಜಾರಿ ಅಧಿಕಾರಿಗಳು (ICE) ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಅಧಿಕಾರಿಗಳು ವ್ಯಕ್ತಿಯೊಬ್ಬರನ್ನು ನೆಲದ ಮೇಲೆ ಎಳೆದುಕೊಂಡು ಹೋಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಘಟನೆಯಿಂದ ವಿಮಾನ ಪ್ರಯಾಣವೂ ವಿಳಂಬವಾಗಿದೆ.

ಶನಿವಾರ ಸಿಯಾಟಲ್-ಟಕೋಮಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಲಾಸ್ ಏಂಜಲೀಸ್‌ಗೆ ತೆರಳಬೇಕಿದ್ದ ಅಲಾಸ್ಕಾ ಏರ್‌ಲೈನ್ಸ್‌ನ ಫ್ಲೈಟ್ 1306 ವಿಮಾನಕ್ಕೆ ಪ್ರಯಾಣಿಕರು ಹತ್ತುತ್ತಿದ್ದ ಸಂದರ್ಭದಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಮಹಿಳೆಯೊಬ್ಬರು ತನ್ನ ಮಗಳನ್ನು ಕರೆದೊಯ್ಯುತ್ತಿದ್ದಾರೆ, ಆಕೆಯ ಬಳಿ ಕೆಲಸದ ಪರವಾನಗಿ ಇದೆ ಎಂದು ಕಿರುಚುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ವೀಸಾ ಅವಧಿ ಮುಗಿದಿದ್ದೇ ಬಂಧನಕ್ಕೆ ಕಾರಣ

ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ಜಾರಿ ಸಂಸ್ಥೆ ICE ನೀಡಿರುವ ಹೇಳಿಕೆಯ ಪ್ರಕಾರ, ಮೆಕ್ಸಿಕೋ ಮೂಲದ ರಿಕಾರ್ಡೊ ಲಾರೊಂಡೊ ಮೆಂಡೋಜಾ ಎಂಬ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ಈ ಕಾರ್ಯಾಚರಣೆ ನಡೆಸಲಾಗಿದೆ. ಅವರು ವೀಸಾ ಅವಧಿ ಮುಗಿದ ಬಳಿಕವೂ ಅಮೆರಿಕದಲ್ಲಿ ಉಳಿದುಕೊಂಡಿದ್ದರು. ಇದು ದೇಶದ ವಲಸೆ ಕಾನೂನುಗಳ ಉಲ್ಲಂಘನೆಯಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಈ ವೇಳೆ ಮತ್ತೊಬ್ಬ ಮಹಿಳೆ ಅಧಿಕಾರಿಗಳ ಮೇಲೆ ಬಿಸಿ ಕಾಫಿ ಎರಚಿದ್ದಾರೆ ಎಂದು ICE ಆರೋಪಿಸಿದೆ. ಸೋಫಿಯಾ ಹೆರ್ನಾಂಡೆಜ್ ಮೆಜಿಯಾ ಎಂಬ ಆ ಮಹಿಳೆಯೂ ಮೆಕ್ಸಿಕೋ ಮೂಲದವರಾಗಿದ್ದು, ವೀಸಾ ಅವಧಿ ಮುಗಿದ ನಂತರವೂ ಅಮೆರಿಕದಲ್ಲಿ ಉಳಿದುಕೊಂಡಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೆ, ಫೆಡರಲ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಅವರ ವಿರುದ್ಧ ಪ್ರಕರಣ ದಾಖಲಿಸುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

ವಿಮಾನಯಾನ ಸಂಸ್ಥೆ ಅಸಮಾಧಾನ

ಈ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಮುಂಚಿತವಾಗಿ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ಅಲಾಸ್ಕಾ ಏರ್‌ಲೈನ್ಸ್ ತಿಳಿಸಿದೆ. ವಿಮಾನ ಹತ್ತುವ ಸಂದರ್ಭದಲ್ಲಿ ನಡೆದ ಈ ಘಟನೆಯಿಂದ ಪ್ರಯಾಣಿಕರು ಮತ್ತು ಸಿಬ್ಬಂದಿ ಆತಂಕಕ್ಕೆ ಒಳಗಾಗಿದ್ದಾರೆ ಎಂದು ಸಂಸ್ಥೆ ಹೇಳಿದೆ. ಬೆಳಗ್ಗೆ 8.10ಕ್ಕೆ ಹೊರಡಬೇಕಿದ್ದ ಅಲಾಸ್ಕಾ ಫ್ಲೈಟ್ 1306 ವಿಳಂಬವಾಗಿದೆ. ಪ್ರಯಾಣಿಕರನ್ನು ಗೌರವದಿಂದ ನಡೆಸಿಕೊಳ್ಳುವುದು ತಮ್ಮ ಸಂಸ್ಥೆಯ ಬದ್ಧತೆಯಾಗಿದೆ ಎಂದು ಏರ್‌ಲೈನ್ಸ್ ಹೇಳಿದ್ದು, ವಿಮಾನ ನಿಲ್ದಾಣದ ನಿರ್ವಹಣಾ ಸಂಸ್ಥೆಯಾದ ಪೋರ್ಟ್ ಆಫ್ ಸಿಯಾಟಲ್ ಜೊತೆಗೂಡಿ ಘಟನೆಗೆ ಸಂಬಂಧಿಸಿದ ನಿಯಮಗಳು ಪಾಲನೆಯಾಗಿವೆಯೇ ಎಂಬುದನ್ನು ಪರಿಶೀಲಿಸುತ್ತಿರುವುದಾಗಿ ತಿಳಿಸಿದೆ.

ಇದನ್ನೂ ಓದಿ : ಮಧ್ಯರಾತ್ರಿ ಹೆದ್ದಾರಿಯಲ್ಲಿ ಜವರಾಯನ ಅಟ್ಟಹಾಸ: 9 ಮಂದಿ ಸಾವು | Kota Accident

ICE ವಿರುದ್ಧ ವಾಷಿಂಗ್ಟನ್ ಗವರ್ನರ್ ಆಕ್ರೋಶ

ಘಟನೆಗೆ ಸಂಬಂಧಿಸಿದ ವಿಡಿಯೋ ಕುರಿತು ಪ್ರತಿಕ್ರಿಯಿಸಿರುವ ವಾಷಿಂಗ್ಟನ್ ರಾಜ್ಯದ ಗವರ್ನರ್ ಬಾಬ್ ಫರ್ಗ್ಯೂಸನ್, ICE ಅಧಿಕಾರಿಗಳ ಕಾರ್ಯವೈಖರಿಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಈ ದೃಶ್ಯಗಳು ಭಯಾನಕ ಮತ್ತು ಆತಂಕಕಾರಿ ಎಂದು ಹೇಳಿರುವ ಅವರು, ಪರಿಣಾಮಕಾರಿ, ನೈತಿಕ ಹಾಗೂ ಮಾನವೀಯ ವಲಸೆ ಜಾರಿ ವ್ಯವಸ್ಥೆಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಜೆಟ್ ಬ್ರಿಡ್ಜ್ ಪ್ರದೇಶಕ್ಕೆ ICE ಅಧಿಕಾರಿಗಳು ಹೇಗೆ ಪ್ರವೇಶಿಸಿದರು ಎಂಬ ಬಗ್ಗೆಯೂ ಪರಿಶೀಲನೆ ನಡೆಸುವುದಾಗಿ ಗವರ್ನರ್ ತಿಳಿಸಿದ್ದಾರೆ. ಅಧಿಕಾರಿಗಳು ಮುಖ ಮುಚ್ಚಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಮಾರ್ಚ್‌ನಲ್ಲಿ ಜಾರಿಗೆ ತಂದಿದ್ದ ರಾಜ್ಯ ಕಾನೂನನ್ನು ಉಲ್ಲಂಘಿಸಿರುವ ಸಾಧ್ಯತೆಯ ಬಗ್ಗೆಯೂ ಅವರು ಪ್ರಶ್ನೆ ಎತ್ತಿದ್ದಾರೆ.

ಪ್ರಯಾಣಿಕರಲ್ಲಿ ಆತಂಕ, ತನಿಖೆಗೆ ಮುಂದಾದ ಅಧಿಕಾರಿಗಳು

ಪೋರ್ಟ್ ಆಫ್ ಸಿಯಾಟಲ್ ಕೂಡ ಈ ಘಟನೆಯಿಂದ ಸಂಬಂಧಪಟ್ಟ ಕುಟುಂಬ ಮಾತ್ರವಲ್ಲದೆ ಇತರ ಪ್ರಯಾಣಿಕರಿಗೂ ಆತಂಕ ಉಂಟಾಗಿದೆ ಎಂದು ಹೇಳಿದೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸ್ಥಳೀಯ ಅಧಿಕಾರಿಗಳು ಫೆಡರಲ್ ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ ಎಂದು ತಿಳಿಸಿದೆ.

ಇನ್ನೊಂದೆಡೆ, ವಾಷಿಂಗ್ಟನ್ ಸ್ಟೇಟ್ ಲೇಬರ್ ಕೌನ್ಸಿಲ್ ಅಧ್ಯಕ್ಷೆ ಏಪ್ರಿಲ್ ಸಿಮ್ಸ್, ವಿಮಾನದಲ್ಲಿದ್ದ ಕಾರ್ಮಿಕ ಸಂಘಟನೆಯ ಸದಸ್ಯರ ಪ್ರಯಾಣಕ್ಕೂ ಈ ಕಾರ್ಯಾಚರಣೆಯಿಂದ ತೊಂದರೆಯಾಗಿದೆ ಎಂದು ಹೇಳಿದ್ದಾರೆ. ಈಗಾಗಲೇ ವಿಮಾನ ಪ್ರಯಾಣಿಕರು ಆತಂಕದಲ್ಲಿರುವ ಸಂದರ್ಭದಲ್ಲಿ ಇಂತಹ ಕಾರ್ಯಾಚರಣೆ ಮತ್ತಷ್ಟು ಗೊಂದಲ ಸೃಷ್ಟಿಸಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.ವಿಮಾನ ಹತ್ತುವ ಸಮಯದಲ್ಲಿ ನಡೆದ ಈ ದಿಢೀರ್ ವಲಸೆ ಕಾರ್ಯಾಚರಣೆ ಅಮೆರಿಕದಲ್ಲಿ ವಲಸೆ ನೀತಿ, ವಿಮಾನ ನಿಲ್ದಾಣಗಳ ಭದ್ರತೆ ಮತ್ತು ಪ್ರಯಾಣಿಕರ ಹಕ್ಕುಗಳ ಕುರಿತು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.