ಪಾತಾಳಕ್ಕೆ ಕುಸಿದ ಬೆಳ್ಳಿ ದರ! ಜನವರಿಯಲ್ಲಿ 2 ಲಕ್ಷ ಹೂಡಿಕೆ ಮಾಡಿದವರ ಕಥೆ ಈಗೇನು? Silver Crash

ಚಿನ್ನದಷ್ಟೇ ಬೆಳ್ಳಿಯೂ ಸುರಕ್ಷಿತ ಹೂಡಿಕೆ ಎಂದು ನಂಬಿ ಹಣ ಹಾಕಿದ್ದವರಿಗೆ ಈಗ ನಿಜಕ್ಕೂ ಬರಸಿಡಿಲು ಬಡಿದಂತಾಗಿದೆ. ವರ್ಷದ ಆರಂಭದಲ್ಲಿ ಆಕಾಶದೆತ್ತರಕ್ಕೆ ಏರಿ ದಾಖಲೆ ಬರೆದಿದ್ದ ಬೆಳ್ಳಿ ಬೆಲೆ, ಈಗ ಒಂದೇ ಸಮನೆ ಪಾತಾಳಕ್ಕೆ ಕುಸಿದಿದೆ. ಜನವರಿಯಲ್ಲಿ ಬೆಳ್ಳಿ ಖರೀದಿಸಿ ಬೀಗುತ್ತಿದ್ದವರು, ಇಂದಿನ ಬೆಲೆ ನೋಡಿದರೆ ತಲೆ ಮೇಲೆ ಕೈಹೊತ್ತು ಕೂರುವುದು ಗ್ಯಾರಂಟಿ. ಅಷ್ಟಕ್ಕೂ, ಅಂದು 2 ಲಕ್ಷ ಹೂಡಿಕೆ ಮಾಡಿದ್ದವರ ಹಣ ಈಗ ಎಷ್ಟಾಗಿದೆ ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ.
ಪಾತಾಳಕ್ಕೆ ಕುಸಿದ ಬೆಳ್ಳಿ ದರ!
ಪಾತಾಳಕ್ಕೆ ಕುಸಿದ ಬೆಳ್ಳಿ ದರ! WEB
Published on: 

Silver Crash: ಚಿನ್ನದಷ್ಟೇ ಬೆಳ್ಳಿಯೂ ಸುರಕ್ಷಿತ ಹೂಡಿಕೆ ಎಂದು ನಂಬಿ ಹಣ ಹಾಕಿದ್ದವರಿಗೆ ಈಗ ನಿಜಕ್ಕೂ ಬರಸಿಡಿಲು ಬಡಿದಂತಾಗಿದೆ. ವರ್ಷದ ಆರಂಭದಲ್ಲಿ ಆಕಾಶದೆತ್ತರಕ್ಕೆ ಏರಿ ದಾಖಲೆ ಬರೆದಿದ್ದ ಬೆಳ್ಳಿ ಬೆಲೆ, ಈಗ ಒಂದೇ ಸಮನೆ ಪಾತಾಳಕ್ಕೆ ಕುಸಿದಿದೆ. ಜನವರಿಯಲ್ಲಿ ಬೆಳ್ಳಿ ಖರೀದಿಸಿ ಬೀಗುತ್ತಿದ್ದವರು, ಇಂದಿನ ಬೆಲೆ ನೋಡಿದರೆ ತಲೆ ಮೇಲೆ ಕೈಹೊತ್ತು ಕೂರುವುದು ಗ್ಯಾರಂಟಿ. ಅಷ್ಟಕ್ಕೂ, ಅಂದು 2 ಲಕ್ಷ ಹೂಡಿಕೆ ಮಾಡಿದ್ದವರ ಹಣ ಈಗ ಎಷ್ಟಾಗಿದೆ ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ

ಜನವರಿಯ ದಾಖಲೆ ಬೆಲೆ ಈಗ ಇತಿಹಾಸ

ಜನವರಿ 29ರಂದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಳ್ಳಿ ಪ್ರತಿ ಔನ್ಸ್‌ಗೆ ಸುಮಾರು 121 ಡಾಲರ್‌ಗೆ ಏರಿ ದಾಖಲೆ ಬರೆದಿತ್ತು. ಆದರೆ ಈಗ ಅದೇ ಬೆಳ್ಳಿ 42 ಡಾಲರ್‌ಗೆ ಇಳಿದಿದೆ. ಅಂದರೆ ದಾಖಲೆ ಮಟ್ಟದಿಂದ ಬರೋಬ್ಬರಿ ಶೇ. 65ರಷ್ಟು ಕುಸಿತ ಕಂಡಿದೆ.

ನಮ್ಮ ದೇಶದ ಮಾರುಕಟ್ಟೆಯಲ್ಲೂ ಇದೇ ತಲ್ಲಣ ಶುರುವಾಗಿದೆ. ಜನವರಿ ಅಂತ್ಯದಲ್ಲಿ ಕೆ.ಜಿ.ಗೆ 4.20 ಲಕ್ಷ ರೂಪಾಯಿ ಮುಟ್ಟಿದ್ದ ಬೆಳ್ಳಿ ದರ, ನವೆಂಬರ್ 21ರ ಹೊತ್ತಿಗೆ 1.49 ಲಕ್ಷದಿಂದ 1.55 ಲಕ್ಷ ರೂಪಾಯಿಗೆ ಕುಸಿದಿದೆ. ಮಾರುಕಟ್ಟೆ ಏರಿಳಿತದ ನಡುವೆಯೂ ಗರಿಷ್ಠ ಬೆಲೆಗೆ ಹೋಲಿಸಿದರೆ ಸುಮಾರು ಶೇ. 63ರಿಂದ 65ರಷ್ಟು ಭಾರೀ ಇಳಿಕೆ ಕಂಡಿರುವುದು ಹೂಡಿಕೆದಾರರನ್ನು ಕಂಗಾಲು ಮಾಡಿದೆ.

2 ಲಕ್ಷ ಹೂಡಿಕೆ ಈಗ ಎಷ್ಟು ಉಳಿದಿದೆ?

ಇಲ್ಲಿದೆ ಹೂಡಿಕೆದಾರರಿಗೆ ಅಚ್ಚರಿ ಮೂಡಿಸುವ ಲೆಕ್ಕಾಚಾರ. ಜನವರಿಯಲ್ಲಿ ಪ್ರತಿ ಕೆ.ಜಿ.ಗೆ 4.20 ಲಕ್ಷ ಬೆಲೆ ಇದ್ದಾಗ ನೀವು 2 ಲಕ್ಷ ಹೂಡಿಕೆ ಮಾಡಿದ್ದೀರಿ ಎಂದುಕೊಳ್ಳಿ. ಆಗ ನಿಮಗೆ ಸುಮಾರು 476 ಗ್ರಾಂ ಬೆಳ್ಳಿ ಸಿಗುತ್ತಿತ್ತು. ಆದರೆ ಈಗಿನ ಮಾರುಕಟ್ಟೆ ಬೆಲೆಯ ಪ್ರಕಾರ ಅದೇ 476 ಗ್ರಾಂ ಬೆಳ್ಳಿಯ ಮೌಲ್ಯ ಕೇವಲ 71 ಸಾವಿರದಿಂದ 74 ಸಾವಿರದ ಆಸುಪಾಸಿನಲ್ಲಿದೆ. ಅಂದರೆ ಜನವರಿಯಲ್ಲಿ 2 ಲಕ್ಷ ಹೂಡಿಕೆ ಮಾಡಿದ್ದ ವ್ಯಕ್ತಿಯ ಬೆಳ್ಳಿ ಈಗ ಸುಮಾರು 1.26 ಲಕ್ಷದಿಂದ 1.29 ಲಕ್ಷದವರೆಗೆ ಮೌಲ್ಯ ಕಳೆದುಕೊಂಡಿದೆ. ಇದು ಖರೀದಿ ಬೆಲೆ ಮತ್ತು ಪ್ರಸ್ತುತ ಮಾರುಕಟ್ಟೆ ಬೆಲೆಯ ನಡುವಿನ ಅಂದಾಜು ಲೆಕ್ಕಾಚಾರವಾಗಿದ್ದು, ತೆರಿಗೆ, ಜಿಎಸ್‌ಟಿ, ಮೇಕಿಂಗ್ ಚಾರ್ಜ್‌ಗಳು ಹಾಗೂ ಮಾರಾಟದ ವೆಚ್ಚಗಳನ್ನು ಒಳಗೊಂಡಿಲ್ಲ.

ಬೆಳ್ಳಿ ಬೆಲೆ ಕುಸಿಯಲು ಕಾರಣವೇನು?

ಬೆಳ್ಳಿ ಬೆಲೆ ಕುಸಿತಕ್ಕೆ ಪ್ರಮುಖ ಕಾರಣ ಅಮೆರಿಕದ ಫೆಡರಲ್ ರಿಸರ್ವ್‌ನ ಬಡ್ಡಿದರ ನೀತಿ ಕುರಿತ ನಿರೀಕ್ಷೆಗಳು. ಅಮೆರಿಕದ ಕೇಂದ್ರ ಬ್ಯಾಂಕ್ ಬಡ್ಡಿದರವನ್ನು ನಿರೀಕ್ಷೆಗಿಂತ ಹೆಚ್ಚು ಕಾಲ ಏರಿಕೆಯ ಮಟ್ಟದಲ್ಲೇ ಉಳಿಸಬಹುದು ಎಂಬ ಅಭಿಪ್ರಾಯ ಮಾರುಕಟ್ಟೆಯಲ್ಲಿ ಬಲವಾಗುತ್ತಿದೆ. ಇದರಿಂದ ಡಾಲರ್ ಮೌಲ್ಯ ಮತ್ತು ಅಮೆರಿಕದ ಬಾಂಡ್‌ಗಳ ಇಳುವರಿ ಹೆಚ್ಚಾಗಿದ್ದು, ಚಿನ್ನ ಮತ್ತು ಬೆಳ್ಳಿಯಂತಹ ಬಡ್ಡಿ ಆದಾಯ ನೀಡದ ಹೂಡಿಕೆಗಳ ಆಕರ್ಷಣೆ ಕಡಿಮೆಯಾಗಿದೆ.

ಇದನ್ನೂ ಓದಿ : ಚಿನ್ನದ ಬೆಲೆ ಇಳಿದಿದ್ದೇಗೆ? 1965ರ ಲಾಲ್ ಬಹದ್ದೂರ್ ಶಾಸ್ತ್ರಿ ಕರೆಯನ್ನು ಉದಾಹರಿಸಿ ಅಸಲಿ ಕಾರಣ ಬಿಚ್ಚಿಟ್ಟ ನಮೋ! | Narendra Modi

ಇದರ ಜತೆಗೆ ಕೃತಕ ಬುದ್ಧಿಮತ್ತೆ (AI) ಸಂಬಂಧಿತ ಷೇರುಗಳಲ್ಲಿನ ಇತ್ತೀಚಿನ ಮಾರಾಟದ ಒತ್ತಡವೂ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ. ಹೂಡಿಕೆದಾರರು ನಗದು ಸಂಗ್ರಹಿಸಲು ವಿವಿಧ ಹೂಡಿಕೆಗಳಿಂದ ಹಣ ಹಿಂಪಡೆಯುತ್ತಿರುವುದು ಬೆಳ್ಳಿ ಸೇರಿದಂತೆ ಅಮೂಲ್ಯ ಲೋಹಗಳ ಮೇಲಿನ ಒತ್ತಡವನ್ನು ಹೆಚ್ಚಿಸಿದೆ. ಕೊಟಕ್ ನಿಯೋ ಸಂಸ್ಥೆಯ ಕಮಾಡಿಟಿ ಸಂಶೋಧನಾ ವಿಭಾಗದ ಉಪಾಧ್ಯಕ್ಷೆ ಕಯ್ನಾತ್ ಚೈನ್‌ವಾಲಾ ಅವರ ಪ್ರಕಾರ, ಫೆಡರಲ್ ರಿಸರ್ವ್‌ನ ಕಠಿಣ ಬಡ್ಡಿದರ ನೀತಿಯ ನಿರೀಕ್ಷೆ, ಬಲಗೊಳ್ಳುತ್ತಿರುವ ಅಮೆರಿಕದ ಡಾಲರ್ ಮತ್ತು ಹೆಚ್ಚುತ್ತಿರುವ ಬಾಂಡ್ ಇಳುವರಿ ಚಿನ್ನ ಹಾಗೂ ಬೆಳ್ಳಿಯ ಬೆಲೆಗಳ ಮೇಲೆ ಒತ್ತಡ ಸೃಷ್ಟಿಸಿವೆ.

ಮುಂದಿನ ದಿನಗಳಲ್ಲಿ ಬೆಳ್ಳಿ ಬೆಲೆ ಏನಾಗಬಹುದು?

ಭಾರೀ ಕುಸಿತದ ನಡುವೆ ಬೆಳ್ಳಿ ದರದಲ್ಲಿ ಸಣ್ಣ ಮಟ್ಟದ ಚೇತರಿಕೆ ಕಂಡುಬಂದಿದ್ದರೂ, ಮಾರುಕಟ್ಟೆಯಲ್ಲಿ ಆತಂಕ ಮತ್ತು ಅನಿಶ್ಚಿತತೆ ಮಾತ್ರ ಕಡಿಮೆಯಾಗಿಲ್ಲ. ಬಲಿಷ್ಠವಾಗುತ್ತಿರುವ ಅಮೆರಿಕನ್ ಡಾಲರ್, ಏರುತ್ತಿರುವ ಬಾಂಡ್ ಇಳುವರಿ ಹಾಗೂ ಅಮೆರಿಕ ಫೆಡರಲ್ ರಿಸರ್ವ್‌ನ ಮುಂದಿನ ನಿರ್ಧಾರಗಳೇ ಬೆಳ್ಳಿ ಬೆಲೆಯ ಮುಂದಿನ ದಿಕ್ಕನ್ನು ನಿರ್ಧರಿಸಲಿವೆ.

ಕೆಲವೇ ತಿಂಗಳ ಹಿಂದೆ ಗಗನಕ್ಕೇರಿದ್ದ ಬೆಳ್ಳಿ ಈಗ ಭಾರೀ ಪತನ ಕಂಡಿದೆ. ಜನವರಿಯಲ್ಲಿ ಬೆಳ್ಳಿ ಖರೀದಿಸಿದವರಿಗೆ ಇದು ಕಹಿ ಅನುಭವ ನೀಡಿದ್ದರೆ, ಮಾರುಕಟ್ಟೆಯ ಆಟವನ್ನು ಗಮನಿಸುತ್ತಿರುವ ಹೊಸ ಹೂಡಿಕೆದಾರರಿಗೆ ಮುಂದಿನ ದಿನಗಳಲ್ಲಿ ಬೆಲೆ ಹೇಗೆ ಬದಲಾಗುತ್ತದೆ ಎಂಬ ಕುತೂಹಲ ಹೆಚ್ಚಿಸಿದೆ