ಜನತೆಗೆ ಧನ್ಯವಾದ ಅರ್ಪಿಸಿದ ಪ್ರಿಯಾಂಕಾ ಗಾಂಧಿ
ತಿರುವನಂತಪುರ: ಕೇರಳದ ವಿಧಾನಸಭಾ ಚುನಾವಣಾ ಫಲಿತಾಂಶ ಅಂತಿಮ ಹಂತಕ್ಕೆ ತಲುಪಿದ್ದು, ದೇವನಾಡಿನ ಮತದಾರರು ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಕೈ ಹಿಡಿದಿದ್ದಾರೆ. ಒಂದು ದಶಕದ ಕಾಲ ರಾಜ್ಯವನ್ನಾಳಿದ ಎಲ್‌ಡಿಎಫ್ ಆಡಳಿತಕ್ಕೆ ಬ್ರೇಕ್ ಹಾಕಿ, ಯುಡಿಎಫ್ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ನೀಡಿದ ಕೇರಳದ ಜನತೆಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi) ಮನದುಂಬಿ ಧನ್ಯವಾದ ಅರ್ಪಿಸಿದ್ದಾರೆ.
ಫಲಿತಾಂಶದ ಸುನಾಮಿ ಎಷ್ಟಿದೆ ಎಂದರೆ, ಕೇರಳದ 140 ವಿಧಾನಸಭಾ ಕ್ಷೇತ್ರಗಳ ಪೈಕಿ 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಯುಡಿಎಫ್ ಮುನ್ನಡೆ ಸಾಧಿಸುವ ಮೂಲಕ ಆರಾಮದಾಯಕವಾಗಿ ಅಧಿಕಾರದ ಗದ್ದುಗೆ ಏರಲು ಸಜ್ಜಾಗಿದೆ.
ವಯನಾಡು ಕೊಟ್ಟ 'ಸ್ಪೆಷಲ್ ಗಿಫ್ಟ್'ಗೆ ಪ್ರಿಯಾಂಕಾ ಭಾವುಕ
ವಯನಾಡಿನ ಸಂಸದೆಯೂ ಆಗಿರುವ ಪ್ರಿಯಾಂಕಾ ಗಾಂಧಿ, ತಮ್ಮ ಲೋಕಸಭಾ ವ್ಯಾಪ್ತಿಯ ವಯನಾಡಿನ ಜನ ನೀಡಿದ ಬೆಂಬಲಕ್ಕೆ ವಿಶೇಷ ಕೃತಜ್ಞತೆ ಸಲ್ಲಿಸಿದ್ದಾರೆ. ವಯನಾಡಿನ ನನ್ನ ಕುಟುಂಬಕ್ಕೆ, ನೀವು ಯುಡಿಎಫ್ ಮೇಲೆ ಇಟ್ಟಿರುವ ನಂಬಿಕೆಯನ್ನು ಸಾಬೀತುಪಡಿಸಿದ್ದೀರಿ.
ಇಲ್ಲಿನ 7ಕ್ಕೆ 7 ವಿಧಾನಸಭಾ ಕ್ಷೇತ್ರಗಳನ್ನೂ ಯುಡಿಎಫ್‌ಗೆ ನೀಡುವ ಮೂಲಕ ದೊಡ್ಡ ಜವಾಬ್ದಾರಿ ಕೊಟ್ಟಿದ್ದೀರಿ. ಈಗ ವಯನಾಡಿನ ಅಭಿವೃದ್ಧಿಗಾಗಿ ಕೆಲಸ ಮಾಡಲು ನಿಮಗೆ ನಾವೂ ಸೇರಿದಂತೆ 8 ಪ್ರತಿನಿಧಿಗಳ ಬಲ ಸಿಕ್ಕಿದೆ ಎಂದು ಅವರು ಎಕ್ಸ್ (ಟ್ವಿಟರ್) ಮೂಲಕ ಸಂತಸ ಹಂಚಿಕೊಂಡಿದ್ದಾರೆ.
ಉತ್ತಮ ಭವಿಷ್ಯದ ಭರವಸೆ
ಕೇರಳದ ಜನತೆಗೆ ನೀಡಿರುವ ಸಂದೇಶದಲ್ಲಿ, ನಿಮ್ಮ ಈ ಅಗಾಧ ಬೆಂಬಲ ಮತ್ತು ನಂಬಿಕೆಯು ಯುಡಿಎಫ್‌ಗೆ ಮಾರ್ಗದರ್ಶಿ ಶಕ್ತಿಯಾಗಿದೆ. ನಿಮ್ಮ ಪ್ರತಿಯೊಬ್ಬರಿಗೂ ಉತ್ತಮ ಭವಿಷ್ಯವನ್ನು ನಿರ್ಮಿಸಲು ನಾವು ಶ್ರದ್ಧೆಯಿಂದ ಕೆಲಸ ಮಾಡುತ್ತೇವೆ ಎಂಬ ಪ್ರತಿಜ್ಞೆ ಮಾಡುತ್ತೇನೆ. ಮುಂಬರುವ ಐದು ವರ್ಷಗಳಲ್ಲಿ ನಾವು ನೀಡಿದ ಭರವಸೆಗಳನ್ನು ಪ್ರಾಮಾಣಿಕತೆ ಮತ್ತು ನಮ್ರತೆಯಿಂದ ಈಡೇರಿಸುತ್ತೇವೆ. ನಮ್ಮ ಕೃತಜ್ಞತೆ ಕೇವಲ ಮಾತಿನಲ್ಲಿರುವುದಿಲ್ಲ, ನಮ್ಮ ಕೆಲಸಗಳಲ್ಲಿ ನಿಮಗೆ ಪ್ರತಿದಿನವೂ ಕಾಣಿಸುತ್ತದೆ ಎಂದು ಪ್ರಿಯಾಂಕಾ ಭರವಸೆ ನೀಡಿದ್ದಾರೆ.
ಕಾರ್ಯಕರ್ತರ ಶ್ರಮಕ್ಕೆ ಸಲಾಂ
ಪ್ರಗತಿಪರ ಕೇರಳದ ಸಂದೇಶವನ್ನು ಮನೆ ಮನೆಗೆ ತಲುಪಿಸಲು ಹಗಲಿರುಳು ಶ್ರಮಿಸಿದ ಯುಡಿಎಫ್ ಕಾರ್ಯಕರ್ತರು ಮತ್ತು ನಾಯಕರನ್ನು ಪ್ರಿಯಾಂಕಾ ಗಾಂಧಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸೋಲಿಲ್ಲದ ಸಂಘಟನಾ ಶಕ್ತಿಯಿಂದ ದುಡಿದ ಪ್ರತಿಯೊಬ್ಬ ಕಾರ್ಯಕರ್ತನಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ದಣಿವರಿಯದ ಪ್ರಯತ್ನವೇ ಇಂದು ಈ ಗೆಲುವಿಗೆ ಕಾರಣ ಎಂದು ಅವರು ಬೆನ್ನುತಟ್ಟಿದ್ದಾರೆ.
ಕೇರಳದಲ್ಲಿ ಬದಲಾದ ರಾಜಕೀಯ ಗಾಳಿ
ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಕೇರಳದ ಮತದಾರರು ಆಡಳಿತಾರೂಢ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಸರ್ಕಾರವನ್ನು ತಿರಸ್ಕರಿಸಿ, ಕಾಂಗ್ರೆಸ್ ಮೈತ್ರಿಕೂಟಕ್ಕೆ ಸಂಪೂರ್ಣ ಬಹುಮತ ನೀಡಿದ್ದಾರೆ.
ದಶಕದ ನಂತರ ಮತ್ತೆ ಅಧಿಕಾರಕ್ಕೆ ಮರಳುತ್ತಿರುವ ಕಾಂಗ್ರೆಸ್ ಪಾಳಯದಲ್ಲಿ ಈಗ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಅಭಿವೃದ್ಧಿ, ಬದಲಾವಣೆ ಮತ್ತು ಪ್ರಗತಿಯ ಆಶಯದೊಂದಿಗೆ ಕೇರಳ ಜನತೆ ಯುಡಿಎಫ್‌ಗೆ ಮನ್ನಣೆ ನೀಡಿದ್ದಾರೆ ಎಂಬುದು ಈ ಫಲಿತಾಂಶದಿಂದ ಸ್ಪಷ್ಟವಾಗಿದೆ,(ಏಜನ್ಸೀಸ್).