ಸೌಜನ್ಯ ಪ್ರಕರಣ ಮರು ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ 
ದೇಶ

ಸೌಜನ್ಯ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​: ಮರು ತನಿಖೆಗೆ ಸುಪ್ರೀಂ ಕೋರ್ಟ್​ ಆದೇಶ; 3 ತಿಂಗಳಲ್ಲಿ ವರದಿ ಸಲ್ಲಿಸಲು ಗಡುವು! Sowjanya Case

ಸೌಜನ್ಯ ಪ್ರಕರಣ (Sowjanya Case) ದಲ್ಲಿ ಬಿಗ್ ಟ್ವಿಸ್ಟ್: ಮರು ತನಿಖೆಗೆ ಸುಪ್ರೀಂ ಕೋರ್ಟ್ ಆದೇಶಿಸಿದ್ದು, 3 ತಿಂಗಳಲ್ಲಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ. ಸಂಪೂರ್ಣ ವರದಿ ಇಲ್ಲಿದೆ.

ನವದೆಹಲಿ: ಕರ್ನಾಟಕ ಸೇರಿದಂತೆ ದೇಶದಲ್ಲೇ ಭಾರಿ ಚರ್ಚೆಗೆ ಕಾರಣವಾಗಿದ್ದ ಧರ್ಮಸ್ಥಳ ನಿವಾಸಿ ಸೌಜನ್ಯ ಪ್ರಕರಣದಲ್ಲಿ ಹೊಸದೊಂದು ಬೆಳವಣಿಕೆ ಕಂಡುಬಂದಿದೆ.

ತನ್ನ ಮಗಳ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಸರಿಯಾದ ತನಿಖೆ ನಡೆದಿಲ್ಲ ಎಂದು ಸೌಜನ್ಯ ತಾಯಿ ಕುಸುಮಾವತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್​, ಈ ಪ್ರಕರಣದ ಮರು ತನಿಖೆ ನಡೆಸುವಂತೆ ಆದೇಶಿಸಿದೆ.

ಈ ಪ್ರಕರಣವನ್ನು ಕರ್ನಾಟಕದ ಸಿಐಡಿ ಹಾಗೂ ಕೇಂದ್ರದ ಸಿಬಿಐ ಅಧಿಕಾರಿಗಳು ತನಿಖೆ ನಡೆಸಿದ್ದರೂ ಸಹ ಅಪರಾಧಿಗಳನ್ನು ಕಂಡು ಹಿಡಿಯುವುದರಲ್ಲಿ ಸಫಲರಾಗಿರಲಿಲ್ಲ. ಆದ್ದರಿಂದ ಕುಸುಮಾವತಿ ತನ್ನ ಮಗಳ ಸಾವಿಗೆ ನ್ಯಾಯ ದೊರೆತಿಲ್ಲವೆಂದು ಮರು ತನಿಖೆಗೆ ಮನವಿ ಸಲ್ಲಿಸಿದ್ದರು. ಈಗ ಈ ಮನವಿಯನ್ನು ಸಮ್ಮತಿಸಿರುವ ಸುಪ್ರೀಂ ಕೋರ್ಟ್​ ಮೂರು ತಿಂಗಳಲ್ಲಿ ತನಿಖೆ ಪೂರೈಸಿ, ವರದಿ ಸಲ್ಲಿಸುವಂತೆ ನಿರ್ದೇಶಿಸಿದೆ.

ಸಿಬಿಐ ಮೇಲೆ ಸುಪ್ರೀಂ ಅಸಮಾಧಾನ!

ಈ ಪ್ರಕರಣದ ಪ್ರಮುಖ ಆರೋಪಿ ಎಂದು ಸಿಬಿಐ ಅಧಿಕಾರಿಗಳು ಬಂಧಿಸಿದ್ದ ಸಂತೋಷ್​ ರಾವ್​ನನ್ನು ಸಿಬಿಐ ನ್ಯಾಯಾಲಯ ಅಪರಾಧಿಯಲ್ಲ ಎಂದು ಬಿಡುಗಡೆ ಮಾಡಿದ ನಂತರ ಕುಸುಮಾವತಿ, ತನ್ನ ಮಗಳ ಪ್ರಕರಣವನ್ನು ಪೊಲೀಸರು ಸರಿಯಾಗಿ ನಡೆಸಿಲ್ಲ, ಇಲ್ಲಿ ಪ್ರಭಾವಿಗಳ ಕೈವಾಡವಿದೆ ಎಂದು ಆರೋಪಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಅದರಲ್ಲೂ ಕರಾವಳಿ ಭಾಗದಲ್ಲಿ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ನ್ಯಾಯ ಸಿಗಬೇಕೆಂದು ದೊಡ್ಡ ಮಟ್ಟದಲ್ಲಿ ಹೋರಾಟ ನಡೆದಿತ್ತು.

ಸಂತೋಷ್​ ರಾವ್​ನ ಬಿಡುಗಡೆ ನಂತರ, ಕುಸುಮಾವತಿ ಸಿಬಿಐ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ, ಕರ್ನಾಟಕ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದು, ನ್ಯಾಯಪೀಠ ಈ ಅರ್ಜಿಯನ್ನು ವಜಾಮಾಡಿತ್ತು. ನಂತರ ಸೌಜನ್ಯ ತಾಯಿ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದರು.

ಸಿಬಿಐ ತನಿಖೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ, ನ್ಯಾಯಪೀಠ, ಸಿಬಿಐ ಈ ಪ್ರಕರಣದಲ್ಲಿ ಸ್ವತಂತ್ರ ತನಿಖೆ ನಡೆಸಿಲ್ಲ, ಬದಲಾಯಿ ಈ ಹಿಂದೆ ಸಂಗ್ರಹವಾಗಿದ್ದ ಸಾಕ್ಷಿಗಳ ಆಧಾರದಲ್ಲಿ ವರದಿ ಸಲ್ಲಿಸಿದೆ ಎಂದು ಹೇಳಿದೆ. ಈ ರೀತಿಯ ತನಿಖೆ ಸಿಬಿಐ ನ ಕೆಟ್ಟ ಕಾರ್ಯವೈಖರಿಯನ್ನು ಪ್ರತಿಬಿಂಬಿಸುತ್ತದೆ ಎಂದು ನ್ಯಾಯಪೀಠ ಕಿಡಿಕಾರಿತ್ತು.

ಪ್ರಕರಣದ ಹಿನ್ನಲೆ!

ಧರ್ಮಸ್ಥಳದ ಎಸ್‌ಡಿಎಂ (SDM) ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದ ಸೌಜನ್ಯಾ, ಅಕ್ಟೋಬರ್ 9, 2012 ರಂದು ಕಾಲೇಜಿನಿಂದ ಮನೆಗೆ ಹಿಂತಿರುಗುವಾಗ ನಾಪತ್ತೆಯಾಗಿದ್ದಳು. ಮರುದಿನ ಅಂದರೆ ಅಕ್ಟೋಬರ್ 10 ರಂದು ಧರ್ಮಸ್ಥಳದ ನೇತ್ರಾವತಿ ನದಿಯ ಸಮೀಪದ ಅರಣ್ಯ ಪ್ರದೇಶದಲ್ಲಿ ಆಕೆಯ ಮೃತದೇಹ ಪತ್ತೆಯಾಗಿತ್ತು.

ವೈದ್ಯಕೀಯ ತಪಾಸಣೆಯಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆಸಿ, ಕ್ರೂರವಾಗಿ ಕೊಲೆ ಮಾಡಲಾಗಿರುವುದು ದೃಢಪಟ್ಟಿತ್ತು. ಈ ಘಟನೆಯು ಇಡೀ ಕರ್ನಾಟಕ ರಾಜ್ಯಾದ್ಯಂತ ಭಾರಿ ಜನಕ್ರೋಶ ಮತ್ತು ಪ್ರತಿಭಟನೆಗಳಿಗೆ ಕಾರಣವಾಯಿತು.

ಪ್ರಕರಣದ ಆರಂಭಿಕ ತನಿಖೆಯನ್ನು ಸ್ಥಳೀಯ ಪೊಲೀಸರು ನಡೆಸಿ, ಸಂತೋಷ್ ರಾವ್ ಎಂಬ ವ್ಯಕ್ತಿಯನ್ನು ಪ್ರಮುಖ ಆರೋಪಿಯನ್ನಾಗಿ ಬಂಧಿಸಿದರು. ಆದರೆ, ಸೌಜನ್ಯಾ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಸ್ಥಳೀಯ ಪೊಲೀಸರ ತನಿಖೆಯ ಮೇಲೆ ಅಪನಂಬಿಕೆ ವ್ಯಕ್ತಪಡಿಸಿ, ನೈಜ ಅಪರಾಧಿಗಳನ್ನು ರಕ್ಷಿಸಲಾಗುತ್ತಿದೆ ಎಂದು ಆರೋಪಿಸಿದರು. ಸಾರ್ವಜನಿಕ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಮೊದಲು ಸಿಐಡಿ (CID) ತನಿಖೆಗೆ ಮತ್ತು ನಂತರ ಸಿಬಿಐ (CBI) ತನಿಖೆಗೆ ವಹಿಸಲಾಯಿತು.

ದೀರ್ಘಾವಧಿಯ ವಿಚಾರಣೆಯ ನಂತರ, ಜೂನ್ 2023 ರಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಏಕೈಕ ಆರೋಪಿ ಸಂತೋಷ್ ರಾವ್ ಅವರನ್ನು ಖುಲಾಸೆಗೊಳಿಸಿತು. ತನಿಖಾ ಸಂಸ್ಥೆಗಳು ನೈಜ ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ವಿಫಲವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸೌಜನ್ಯಾ ಕುಟುಂಬ ಹಾಗೂ ಸಾಮಾಜಿಕ ಹೋರಾಟಗಾರರು, ನೈಜ ಆರೋಪಿಗಳಿಗೆ ಶಿಕ್ಷೆಯಾಗಬೇಕು ಮತ್ತು ಪ್ರಕರಣದ ಮರು ತನಿಖೆಯಾಗಬೇಕೆಂದು ಇಂದಿಗೂ ಹೋರಾಟ ಮುಂದುವರಿಸಿದ್ದಾರೆ, (ಏಜೆನ್ಸೀಸ್​).