ಸಾಂದರ್ಭಿಕ ಚಿತ್ರ 
ದೇಶ

ಅನ್ನದ ಋಣ ತೀರಿಸಿದ ಬೀದಿನಾಯಿ: ಊಟ ಹಾಕಿದ ವ್ಯಕ್ತಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಕಣ್ಣೀರಿನ ವಿದಾಯ ಹೇಳಿದ ಶ್ವಾನ! Loyal Stray Dog

ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯ 75 ವರ್ಷದ ನಿವೃತ್ತ ಬ್ಯಾಂಕ್ ಉದ್ಯೋಗಿ ಮೋಹನ್‌ಲಾಲ್ ರೈಕ್ವಾರ್ ಅವರು ಪ್ರತಿದಿನ ತಮ್ಮ ಮನೆಯ ಸುತ್ತಮುತ್ತ ಓಡಾಡಿಕೊಂಡಿದ್ದ 'ಕಾಲು' ಎಂಬ ಬೀದಿನಾಯಿಗೆ ತಪ್ಪದೇ ಆಹಾರ ನೀಡುತ್ತಿದ್ದರು. ಪ್ರತಿನಿತ್ಯ ಅನ್ನ ಹಾಕಿ ಪ್ರೀತಿಯಿಂದ ಸಲಹುತ್ತಿದ್ದ ಕಾರಣ ಮೋಹನ್‌ಲಾಲ್ ಮತ್ತು ಕಾಲು ನಡುವೆ ಒಂದು ಅವಿನಾಭಾವ ಬಾಂಧವ್ಯ ಬೆಳೆದಿತ್ತು.

ಭೋಪಾಲ್​: ನಿಯತ್ತು ಅನ್ನೋ ಪದ ಕೇಳಿದರೆ ಸಾಕು ಮೊದಲು ನೆನಪಾಗುವುದೇ ನಾಯಿ ( Loyal Stray Dog ). ಒಂದು ಹೊತ್ತು ಊಟ ಹಾಕಿದರೆ ಸಾಕು ಆ ವ್ಯಕ್ತಿಯನ್ನು ಸಾಯೋವರೆಗೂ ಈ ಮೂಕ ಪ್ರಾಣಿ ಮರೆಯುವುದಿಲ್ಲ ಎಂಬುದಕ್ಕೆ ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯಲ್ಲಿ ನಡೆದ ಮನಕಲಕುವ ಘಟನೆಯೊಂದು ಸಾಕ್ಷಿಯಾಗಿದೆ. ಪ್ರತಿದಿನ ತನಗೆ ಊಟ ನೀಡುತ್ತಿದ್ದ ನಿವೃತ್ತ ಬ್ಯಾಂಕ್ ಉದ್ಯೋಗಿ ನಿಧನರಾದಾಗ, ಬೀದಿನಾಯಿಯೊಂದು ಅಂತ್ಯಕ್ರಿಯೆ ಮುಗಿಯುವವರೆಗೂ ಸ್ಮಶಾನದಲ್ಲೇ ಇದ್ದು, ಬಳಿಕ ಶ್ರದ್ಧಾಂಜಲಿ ಸಭೆಯಲ್ಲೂ ಪಾಲ್ಗೊಂಡು ತನ್ನ ನಿಷ್ಠೆ ಮೆರೆದಿದೆ.

ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯ 75 ವರ್ಷದ ನಿವೃತ್ತ ಬ್ಯಾಂಕ್ ಉದ್ಯೋಗಿ ಮೋಹನ್‌ಲಾಲ್ ರೈಕ್ವಾರ್ ಅವರು ಪ್ರತಿದಿನ ತಮ್ಮ ಮನೆಯ ಸುತ್ತಮುತ್ತ ಓಡಾಡಿಕೊಂಡಿದ್ದ 'ಕಾಲು' ಎಂಬ ಬೀದಿನಾಯಿಗೆ ತಪ್ಪದೇ ಆಹಾರ ನೀಡುತ್ತಿದ್ದರು. ಪ್ರತಿನಿತ್ಯ ಅನ್ನ ಹಾಕಿ ಪ್ರೀತಿಯಿಂದ ಸಲಹುತ್ತಿದ್ದ ಕಾರಣ ಮೋಹನ್‌ಲಾಲ್ ಮತ್ತು ಕಾಲು ನಡುವೆ ಒಂದು ಅವಿನಾಭಾವ ಬಾಂಧವ್ಯ ಬೆಳೆದಿತ್ತು.

ಕಾಲು ಕೂಡ ಮೋಹನ್‌ಲಾಲ್ ಅವರ ಮೇಲೆ ವಿಶೇಷವಾದ ಪ್ರೀತಿ ಮತ್ತು ಅಕ್ಕರೆಯನ್ನು ಬೆಳೆಸಿಕೊಂಡಿತ್ತು. ಆದರೆ ಕಳೆದ ವಾರ ವಯೋಸಹಜ ಅನಾರೋಗ್ಯದಿಂದ ಮೋಹನ್‌ಲಾಲ್ ಅವರು ಇಹಲೋಕ ತ್ಯಜಿಸಿದರು. ಈ ವಿಷಯ ತಿಳಿಯುತ್ತಿದ್ದಂತೆ ಮೂಕಪ್ರಾಣಿ ಕಾಲು ತೀವ್ರ ದುಃಖಕ್ಕೊಳಗಾಗಿ, ಅನ್ನದಾತನ ಅಂತಿಮ ದರ್ಶನಕ್ಕಾಗಿ ಮನೆಯ ಬಳಿಯೇ ಬಂದು ನಿಂತಿತ್ತು.

ಮೋಹನ್‌ಲಾಲ್ ಅವರ ಅಂತಿಮ ಸಂಸ್ಕಾರ ನಡೆಸಲು ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ಅಂತಿಮ ಯಾತ್ರೆಯನ್ನು ಆರಂಭಿಸಿದಾಗ, ಬೀದಿನಾಯಿ ಕಾಲು ಕೂಡ ಯಾರೂ ಕರೆಯದಿದ್ದರೂ ಅವರೊಂದಿಗೆ ಹೆಜ್ಜೆ ಹಾಕಿತು. ಅಂತಿಮ ಯಾತ್ರೆಯ ಹಿಂದೆಯೇ ಅತ್ಯಂತ ಮೌನವಾಗಿ ಮತ್ತು ಶಿಸ್ತಿನಿಂದ ನಡೆದುಕೊಂಡು ಸ್ಮಶಾನದವರೆಗೂ ತಲುಪಿದ ಕಾಲು, ಅಲ್ಲಿ ಅಂತ್ಯಕ್ರಿಯೆಯ ವಿಧಿವಿಧಾನಗಳು ಸಂಪೂರ್ಣವಾಗಿ ಮುಗಿಯುವವರೆಗೂ ತನಗೆ ಅನ್ನ ನೀಡಿದ ವ್ಯಕ್ತಿಯ ಪಕ್ಕದಲ್ಲೇ ತಾಳ್ಮೆಯಿಂದ ಕುಳಿತಿತ್ತು. ಮೂಕಪ್ರಾಣಿಯ ಈ ವರ್ತನೆ ಮತ್ತು ಅಗಲಿಕೆಯ ನೋವನ್ನು ಕಂಡು ಸ್ಮಶಾನಕ್ಕೆ ಬಂದಿದ್ದ ನೂರಾರು ಜನರು ಭಾವುಕರಾದರು.

ಅಂತ್ಯಕ್ರಿಯೆ ಮುಗಿದ ಬಳಿಕ ಸ್ಮಶಾನದಲ್ಲಿ ಏರ್ಪಡಿಸಲಾಗಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಕಾಲು ತೋರಿದ ವರ್ತನೆ ಎಲ್ಲರನ್ನೂ ಅಚ್ಚರಿಗೊಳಿಸಿತು. ಸಭೆಯಲ್ಲಿ ಭಾಗವಹಿಸಿದ್ದ ಜನರ ಎದುರು ಬಂದು ಅತ್ಯಂತ ಶಾಂತವಾಗಿ ಕುಳಿತುಕೊಂಡ ಕಾಲು, ಮೋಹನ್‌ಲಾಲ್ ಅವರ ಆತ್ಮಕ್ಕೆ ಶಾಂತಿ ಕೋರಿ ಎಲ್ಲರೂ ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡುವಾಗ ತಾನೂ ಕೂಡ ಮೌನವಾಗಿ ಅಲ್ಲೇ ಕುಳಿತು ಗೌರವ ಸಲ್ಲಿಸಿತು. ಬಳಿಕ ಸಂಪ್ರದಾಯದಂತೆ ಕುಟುಂಬಸ್ಥರು ಮತ್ತು ಸಂಬಂಧಿಕರು ಮೋಹನ್‌ಲಾಲ್ ಅವರ ಮನೆಗೆ ಮರಳಿದಾಗ, ಅವರ ಹಿಂದೆಯೇ ಮನೆಗೆ ಬಂದ ಕಾಲು, ಸ್ವಲ್ಪ ಸಮಯ ಅಲ್ಲೇ ಇದ್ದು ತನಗೆ ಪ್ರೀತಿ ತೋರಿದ ಜೀವಕ್ಕೆ ಅಂತಿಮ ನಮನ ಸಲ್ಲಿಸುವಂತೆ ಮೌನವಾಗಿ ಅಲ್ಲಿಂದ ಹೊರಟುಹೋಯಿತು. ಈ ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಕಾಲು ಶ್ವಾನದ ಸ್ವಾಮಿನಿಷ್ಠೆಗೆ ತಲೆಬಾಗಿದ್ದಾರೆ.

ಶ್ವಾನಗಳ ಇಂತಹದೇ ಹೃದಯವಿದ್ರಾವಕ ಸ್ವಾಮಿನಿಷ್ಠೆಯ ಮತ್ತೊಂದು ಘಟನೆ ಕಳೆದ ಜುಲೈ ತಿಂಗಳಲ್ಲಿ ಮಧ್ಯಪ್ರದೇಶದಲ್ಲೇ ನಡೆದಿತ್ತು. ಬೆತುಲ್ ಜಿಲ್ಲೆಯ 67 ವರ್ಷದ ಪ್ರದೀಪ್ ಜೈನ್ ಅವರು ಭೋಪಾಲ್‌ನ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದರು. ಅವರ ಪಾರ್ಥಿವ ಶರೀರವನ್ನು ಮನೆಗೆ ತಂದಾಗ, ಕಳೆದ 15 ವರ್ಷಗಳಿಂದ ಅವರೊಂದಿಗೆ ಇದ್ದ ಸಾಕುನಾಯಿ 'ಡುಗ್ಗು' ತನ್ನ ಮಾಲೀಕನ ಶವವನ್ನು ಬಿಟ್ಟು ಕದಲಲು ನಿರಾಕರಿಸಿತ್ತು. ಮಾಲೀಕ ಇನ್ನಿಲ್ಲ ಎಂಬುದನ್ನು ಅರಿತ ಡುಗ್ಗು ತೀವ್ರ ಆಘಾತಕ್ಕೊಳಗಾಗಿ ಅನ್ನ-ನೀರು ಬಿಟ್ಟು ರೋದಿಸಿತ್ತು.

ಕುಟುಂಬ ಸದಸ್ಯರು ಕೊನೆಯ ಬಾರಿಗೆ ಮಾಲೀಕನ ಪಕ್ಕದಲ್ಲಿ ಕುಳಿತುಕೊಳ್ಳಲು ಅವಕಾಶ ನೀಡಿದಾಗ, ಡುಗ್ಗು ಕೆಲವು ನಿಮಿಷಗಳ ಕಾಲ ಪಾರ್ಥಿವ ಶರೀರದ ಬಳಿ ಮೌನವಾಗಿ ಕುಳಿತಿತ್ತು. ಬಳಿಕ ಅಂತಿಮ ಯಾತ್ರೆ ಆರಂಭವಾದಾಗ ಶವಪೆಟ್ಟಿಗೆಯ ಜತೆಗೇ ಸ್ವಲ್ಪ ದೂರ ನಡೆದುಕೊಂಡು ಹೋದ ಡುಗ್ಗು, ಮಾಲೀಕನ ಅಗಲಿಕೆಯ ಆಘಾತ ತಾಳಲಾರದೆ ದಾರಿಯಲ್ಲೇ ಏಕಾಏಕಿ ಕುಸಿದು ಬಿದ್ದು ಪ್ರಾಣ ಬಿಟ್ಟಿತ್ತು. ಒಟ್ಟಾರೆಯಾಗಿ, ಮನುಷ್ಯರು ಸ್ವಾರ್ಥಕ್ಕಾಗಿ ಸಂಬಂಧಗಳನ್ನು ಮರೆಯುತ್ತಿರುವ ಇಂದಿನ ಕಾಲದಲ್ಲಿ, ಅನ್ನ ನೀಡಿದವರನ್ನು ಸಾವಿನಲ್ಲೂ ಹಿಂಬಾಲಿಸುವ ಇಂತಹ ಶ್ವಾನಗಳ ನಿಷ್ಠೆ ಇಡೀ ಮನುಕುಲಕ್ಕೆ ದೊಡ್ಡ ಪಾಠವಾಗಿದೆ, (ಏಜೆನ್ಸೀಸ್​).