ಅಪ್ಪನನ್ನು ಕೊಲ್ಲಲೆಂದೇ ಭದ್ರತೆ ಹಿಂಪಡೆಯಲಾಗಿತ್ತು: ರಾಜೀವ್ ಗಾಂಧಿ ಹತ್ಯೆಯ ಕುರಿತು ರಾಹುಲ್ ಗಾಂಧಿ ಗಂಭೀರ ಆರೋಪ! Rahul Gandhi

ತಮ್ಮ ತಾಯಿ ಸೋನಿಯಾ ಗಾಂಧಿ ಅವರ ಆತ್ಮಕಥೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಪುಸ್ತಕದ ಕುರಿತಾಗಿ ಸೋನಿಯಾ ಹಾಗೂ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ನಡೆಸಿದ ಸಂವಾದದಲ್ಲಿ ರಾಹುಲ್ ಈ ಸ್ಫೋಟಕ ಹೇಳಿಕೆ ನೀಡಿದ್ದಾರೆ.
Rahul Gandhi
ರಾಜೀವ್ ಗಾಂಧಿ ಹತ್ಯೆಯ ಕುರಿತು ರಾಹುಲ್ ಗಾಂಧಿ ಗಂಭೀರ ಆರೋಪ
Published on: 

ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿಯ ಹತ್ಯೆಯಾಗಿ ದಶಕಗಳೇ ಕಳೆದಿದ್ದರೂ, ಆ ಕರಾಳ ಘಟನೆಯ ಹಿಂದಿನ ನೋವು ಗಾಂಧಿ ಕುಟುಂಬವನ್ನು ಇಂದಿಗೂ ಕಾಡುತ್ತಿದೆ. ಸೋನಿಯಾ ಗಾಂಧಿ ಅವರ ಆತ್ಮಕಥೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಕುರಿತಂತೆ ನಡೆದ ಅಪರೂಪದ ಕೌಟುಂಬಿಕ ಸಂವಾದದಲ್ಲಿ ರಾಹುಲ್ ಗಾಂಧಿ ಅತ್ಯಂತ ಸ್ಫೋಟಕ ಹಾಗೂ ಭಾವುಕ ಹೇಳಿಕೆಯೊಂದನ್ನು ನೀಡಿದ್ದಾರೆ. ತಮ್ಮ ತಂದೆಯನ್ನು ಹತ್ಯೆ ಮಾಡಲೆಂದೇ ಉದ್ದೇಶಪೂರ್ವಕವಾಗಿ ಅವರ ಭದ್ರತೆಯನ್ನು ಹಿಂಪಡೆಯಲಾಗಿತ್ತು ಮತ್ತು ಅಂತಹದೊಂದು ವಾತಾವರಣವನ್ನು ಸೃಷ್ಟಿಸಲಾಗಿತ್ತು ಎಂದು ರಾಹುಲ್ ಗಾಂಧಿ ( Rahul Gandhi ) ಗಂಭೀರ ಆರೋಪ ಮಾಡಿದ್ದಾರೆ.

ತಮ್ಮ ತಾಯಿ ಸೋನಿಯಾ ಗಾಂಧಿ ಅವರ ಆತ್ಮಕಥೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಪುಸ್ತಕದ ಕುರಿತಾಗಿ ಸೋನಿಯಾ ಹಾಗೂ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ನಡೆಸಿದ ಸಂವಾದದಲ್ಲಿ ರಾಹುಲ್ ಈ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಅಪ್ಪನನ್ನು ಕೊಲ್ಲಲೆಂದೇ ಅವರ ಭದ್ರತೆಯನ್ನು ತೆಗೆದುಹಾಕಲಾಗಿತ್ತು. ಅದಕ್ಕಾಗಿ ಪೂರಕ ವಾತಾವರಣವನ್ನೂ ಸೃಷ್ಟಿಸಲಾಗಿತ್ತು. ಏನು ನಡೆಯುತ್ತಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತಿತ್ತು. ಈ ಬಗ್ಗೆ ನಾನು ತಂದೆ ಮತ್ತು ತಾಯಿ ಇಬ್ಬರಿಗೂ ಹೇಳಿದ್ದೆ, ಅಲ್ಲದೆ ಇದೇ ವಿಚಾರವಾಗಿ ತಂದೆಯೊಂದಿಗೆ ವಾದವನ್ನೂ ಮಾಡಿದ್ದೆ" ಎಂದು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ರಾಹುಲ್ ಗಾಂಧಿ ಹೇಳಿಕೊಂಡಿದ್ದಾರೆ.

ಈ ಸಂವಾದದ ವೇಳೆ ಸೋನಿಯಾ ಗಾಂಧಿ ಅವರು, ರಾಜೀವ್ ಗಾಂಧಿ ವಿಪಕ್ಷದ ನಾಯಕರಾಗಿದ್ದಾಗ ಕೈಗೊಂಡಿದ್ದ ಬಿಹಾರ ಪ್ರವಾಸದ ಕರಾಳ ಅನುಭವವನ್ನು ಮೆಲುಕು ಹಾಕಿದರು. ಆ ಪ್ರವಾಸದ ವೇಳೆ ರಾಜೀವ್ ಗಾಂಧಿ ತೆರೆದ ಜೀಪಿನಲ್ಲಿ ಪ್ರಯಾಣಿಸುತ್ತಿದ್ದಾಗ ಅವರ ಮೇಲೆ ಕಲ್ಲು ತೂರಾಟ ನಡೆದು, ತೀವ್ರ ಪ್ರತಿಭಟನೆ ಮತ್ತು ಕೂಗಾಟಗಳು ಎದುರಾಗಿದ್ದವು ಎಂದು ಸೋನಿಯಾ ವಿವರಿಸಿದರು.

Also Read
ಇಷ್ಟು ಕೆಳಮಟ್ಟಕ್ಕೆ ಇಳಿದಿದ್ದೀರಾ? ಸೋನಿಯಾ ಪುಸ್ತಕ ಸ್ವೀಕರಿಸಿದ ಉದ್ಧವ್‌ಗೆ ರಾಮ್ ಕದಂ ಟಾಂಗ್! Sonia gandhi
Rahul Gandhi

ವಿಪಕ್ಷಗಳ ಆಡಳಿತವಿರುವ ರಾಜ್ಯಗಳಿಗೆ ಭೇಟಿ ನೀಡುವ ನಾಯಕರ ಭದ್ರತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, "ನಿಮಗೆ ಸರಿಯಾದ ಭದ್ರತೆ ಇಲ್ಲದಿದ್ದಾಗ, ಬಿಜೆಪಿ ಅಥವಾ ವಿಪಕ್ಷಗಳ ಸರ್ಕಾರವಿರುವ ರಾಜ್ಯಗಳಿಗೆ ಹೋದರೆ ಅಲ್ಲಿನ ಆಡಳಿತದವರು ಭದ್ರತೆಯ ಬಗ್ಗೆ ಅಷ್ಟು ಗಮನ ಹರಿಸುವುದಿಲ್ಲ ಎಂದರು. ಆ ಭಯಾನಕ ಪ್ರವಾಸದಲ್ಲಿ ತಂದೆಯೊಂದಿಗಿದ್ದ ರಾಹುಲ್, ಕಲ್ಲು ತೂರಾಟವನ್ನು ಕಣ್ಣಾರೆ ಕಂಡು ಮನೆಗೆ ಬಂದ ತಕ್ಷಣ "ಅಮ್ಮಾ, ಅಪ್ಪನ ಭದ್ರತೆಗೆ ಏನಾದರೂ ಮಾಡದಿದ್ದರೆ, ನಾನು ಅತಿ ಶೀಘ್ರದಲ್ಲೇ ಅವರ ಅಂತ್ಯಕ್ರಿಯೆಗೆ ಬರಬೇಕಾಗುತ್ತದೆ" ಎಂದು ಆತಂಕ ವ್ಯಕ್ತಪಡಿಸಿದ್ದರು ಎಂದು ಸೋನಿಯಾ ನೆನಪಿಸಿಕೊಂಡರು.

ತಾಯಿಯ ಮಾತಿಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಬಿಹಾರ ಪ್ರವಾಸವು ತಾವು ಮೊದಲಿನಿಂದಲೂ ವ್ಯಕ್ತಪಡಿಸುತ್ತಿದ್ದ ಆತಂಕಕ್ಕೆ ಕೊನೆಯ ಕಿಡಿಯಾಗಿತ್ತು ಎಂದರು. ಇದೇ ವೇಳೆ ಮಾತನಾಡಿದ ಪ್ರಿಯಾಂಕಾ ಗಾಂಧಿ, ತಮ್ಮ ಅಜ್ಜಿ ಇಂದಿರಾ ಗಾಂಧಿ ಅವರ ಹತ್ಯೆಯ ನಂತರ ರಾಹುಲ್ ಗಾಂಧಿ ಅವರು ತಂದೆಯ ಭದ್ರತೆಯ ವಿಚಾರದಲ್ಲಿ ಅತಿಯಾದ ಎಚ್ಚರಿಕೆ ವಹಿಸಲು ಆರಂಭಿಸಿದ್ದರು ಎಂದು ಹೇಳಿದರು. ಮನೆಯ ಸುತ್ತಲಿನ ಮುಳ್ಳುತಂತಿಗಳನ್ನು ಪರಿಶೀಲಿಸುವುದು ಮತ್ತು ಕಾವಲುಗಾರರು ಎಚ್ಚರವಾಗಿದ್ದಾರೆಯೇ ಎಂದು ರಾಹುಲ್ ಗಮನಿಸುತ್ತಿದ್ದುದನ್ನು ಪ್ರಿಯಾಂಕಾ ನೆನಪಿಸಿಕೊಂಡರು. ತಾವು ಕೂಡ ಆ ದಿನಗಳಲ್ಲಿ ತಂದೆ ಮನೆಗೆ ಮರಳಿ ಅವರ ಹೆಜ್ಜೆ ಸಪ್ಪಳ ಕೇಳಿಸುವವರೆಗೂ ನಿದ್ದೆ ಮಾಡುತ್ತಿರಲಿಲ್ಲ ಎಂದು ಹೇಳಿದ ಪ್ರಿಯಾಂಕಾ, ರಾಹುಲ್ ಅವರ ಭಯ ತರ್ಕಬದ್ಧವಾಗಿದ್ದರೆ, ತಮ್ಮ ಭಯ ಸಂಪೂರ್ಣ ಭಾವನಾತ್ಮಕವಾಗಿತ್ತು ಎಂದರು.

ರಾಜಕೀಯ ಪಯಣದಲ್ಲಿ ಸೋನಿಯಾ ಗಾಂಧಿ ಅವರು ಎದುರಿಸಿದ ವೈಯಕ್ತಿಕ ದಾಳಿಗಳು ಮತ್ತು ಅವಮಾನಗಳ ಬಗ್ಗೆಯೂ ಸಂವಾದದಲ್ಲಿ ಚರ್ಚೆಯಾಯಿತು. ಜನರು ತಮ್ಮನ್ನು ಎಷ್ಟು ಕ್ರೂರವಾಗಿ ನಡೆಸಿಕೊಂಡರು ಮತ್ತು ಕೆಲವರ ನಿಜವಾದ ಮುಖವೇನು ಎಂಬ ನೋವಿನ ಸಂಗತಿಗಳನ್ನು ತಾಯಿ ತಮ್ಮ ಪುಸ್ತಕದಲ್ಲಿ ಬರೆದಿಲ್ಲ ಎಂದು ರಾಹುಲ್ ಬೇಸರ ವ್ಯಕ್ತಪಡಿಸಿದರು. ನನ್ನ ತಾಯಿಯನ್ನು ಅತ್ಯಂತ ಕ್ರೂರವಾಗಿ ಅವಮಾನಿಸುವುದನ್ನು ಮತ್ತು ನಿಂದಿಸುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಗೌರವಾನ್ವಿತರು ಎಂದು ಕರೆಸಿಕೊಳ್ಳುವ ಜನರ ಸಣ್ಣತನ ಮತ್ತು ಮಹಿಳೆಯೊಬ್ಬರ ಮೇಲಿನ ಈ ನಿಂದನೆ ಒಬ್ಬ ಮಗನಾಗಿ ನನಗೆ ಅಸಹ್ಯ ತರಿಸಿತ್ತು ಎಂದು ರಾಹುಲ್ ಕಿಡಿಕಾರಿದರು. ಭಾರತದ ಹೊರಗೆ ಜನಿಸಿದರು ಎಂಬ ಕಾರಣಕ್ಕೆ ನನ್ನ ತಾಯಿ ವಾಗ್ದಾಳಿಯನ್ನು ಎದುರಿಸಬೇಕಾಯಿತು ಎಂದು ಪ್ರಿಯಾಂಕಾ ಹೇಳಿದರೆ, "ಭಾರತದ ಬಹುಪಾಲು ಜನರು ನನ್ನನ್ನು ತಮ್ಮ ಮಗಳಂತೆ ಸ್ವೀಕರಿಸಿ ಪ್ರೀತಿ ನೀಡಿದ್ದಾರೆ, ಅದಕ್ಕಾಗಿಯೇ ನಾನು ಭಾರತವನ್ನು ಪ್ರೀತಿಸುತ್ತೇನೆ" ಎಂದು ಸೋನಿಯಾ ಗಾಂಧಿ ಭಾವುಕರಾಗಿ ನುಡಿದರು.

Also Read
ಉತ್ತರ ಪ್ರದೇಶ ಚುನಾವಣೆ: 15 ನಿಮಿಷದಲ್ಲೇ ಮುಗಿದ ಕಾಂಗ್ರೆಸ್, ಎಸ್​ಪಿ ಸೀಟು ಹಂಚಿಕೆಯ ಮೊದಲ ಸಭೆ: ನಾಳೆ ಮತ್ತೆ ಸಭೆ | Uttar Pradesh
Rahul Gandhi

2004ರಲ್ಲಿ ಪ್ರಧಾನಿ ಹುದ್ದೆಯನ್ನು ನಿರಾಕರಿಸಿದ ಐತಿಹಾಸಿಕ ನಿರ್ಧಾರದ ಕುರಿತು ಮಾತನಾಡಿದ ಸೋನಿಯಾ ಗಾಂಧಿ, ನನಗೆ ಅಧಿಕಾರದ ಆಸೆ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ, ದೇಶಾದ್ಯಂತ ಕಾಂಗ್ರೆಸ್ ಪರವಾಗಿ ಶ್ರಮಿಸಿದ ಕಾರ್ಯಕರ್ತರಿಗೆ ತಾವು ಋಣಿಯಾಗಿದ್ದೆ ಮತ್ತು ಚುನಾವಣಾ ಪ್ರಚಾರದ ನೇತೃತ್ವ ವಹಿಸಿದ್ದರಿಂದ ಹಿಂದೆ ಸರಿಯುವುದು ಕಾರ್ಯಕರ್ತರಿಗೆ ನಿರಾಸೆ ಮೂಡಿಸಬಹುದೇ ಎಂಬ ದ್ವಂದ್ವವಿತ್ತು ಎಂದು ಅವರು ವಿವರಿಸಿದರು. ಅಧಿಕಾರ ಒಮ್ಮೆ ಸಿಕ್ಕರೆ ಅದನ್ನು ಉಳಿಸಿಕೊಳ್ಳಲು ನಾನಾ ನೆಪಗಳನ್ನು ಹುಡುಕುತ್ತೇವೆ ಎಂದ ಸೋನಿಯಾ, ತಮ್ಮ ನಿರ್ಧಾರದ ಹಿಂದಿನ ನೈತಿಕ ಜವಾಬ್ದಾರಿಯನ್ನು ಸ್ಮರಿಸಿದರು. ಇನ್ನು ತಾಯಿಯ ಈ ನಿರ್ಧಾರದಿಂದ ಪ್ರಧಾನಿ ಹುದ್ದೆಯ ಕನಸು ಕಾಣುತ್ತಿದ್ದ ಕೆಲವರಿಗೆ ಸಂತಸವಾಗಿತ್ತು ಎಂದು ರಾಹುಲ್ ಮಾರ್ಮಿಕವಾಗಿ ನುಡಿದರು.

ಕುಟುಂಬದಲ್ಲಾದ ರಾಜಕೀಯ ದುರಂತಗಳು ತಮ್ಮ ತಾಯಿಯನ್ನು ಸಂಪೂರ್ಣವಾಗಿ ಬದಲಾಯಿಸಿಬಿಟ್ಟವು ಎಂದು ರಾಹುಲ್ ಮತ್ತು ಪ್ರಿಯಾಂಕಾ ಭಾವುಕರಾದರು. ಅಪ್ಪ ರಾಜಕೀಯಕ್ಕೆ ಸೇರುವ ಮೊದಲು ಅಮ್ಮ ಬೇರೆಯೇ ವ್ಯಕ್ತಿಯಾಗಿದ್ದರು. ಆದರೆ, ಅವರ ಮರಣದ ನಂತರ ಅಮ್ಮ ಸಂಪೂರ್ಣ ಬದಲಾದರು. ನನ್ನ ಮೊದಲಿನ ತಾಯಿ ಕಣ್ಮರೆಯಾಗಿದ್ದಾರೆ ಎಂದು ನನಗೆ ಅನೇಕ ಬಾರಿ ಅನಿಸುತ್ತಿತ್ತು ಎಂದು ರಾಹುಲ್ ನೋವು ತೋಡಿಕೊಂಡರು. ಪ್ರಿಯಾಂಕಾ ಕೂಡ ಇದಕ್ಕೆ ದನಿಗೂಡಿಸಿ, ಹಿಂದೆಂದೂ ತಾಯಿ ಅಷ್ಟು ಮುಕ್ತವಾಗಿ ನಗುವುದನ್ನು ಮತ್ತು ಸಂತೋಷವಾಗಿರುವುದನ್ನು ತಾವು ಮತ್ತೆ ನೋಡಲೇ ಇಲ್ಲ ಎಂದರು. ಇದೇ ವೇಳೆ ಅಜ್ಜಿ ಇಂದಿರಾ ಗಾಂಧಿ ಅವರೊಂದಿಗಿನ ಬಾಲ್ಯದ ಸಿಹಿ ನೆನಪುಗಳನ್ನು ಹಂಚಿಕೊಂಡ ಸಹೋದರರು, ರಾಹುಲ್ ಇಂದಿರಾ ಗಾಂಧಿಯವರ 'ಲಾಡ್ಲಾ' (ಅಚ್ಚುಮೆಚ್ಚಿನ ಮೊಮ್ಮಗ) ಆಗಿದ್ದರು ಎಂದು ತಮಾಷೆ ಮಾಡಿದರು.

ತುರ್ತು ಪರಿಸ್ಥಿತಿ ಮತ್ತು 1977ರ ಚುನಾವಣಾ ಸೋಲಿನ ನಂತರ ಶಾಲೆಯಲ್ಲಿ ತಾವು ಎದುರಿಸಿದ ಕಹಿ ಘಟನೆಯನ್ನು ರಾಹುಲ್ ಗಾಂಧಿ ನೆನಪಿಸಿಕೊಂಡರು. ರಾಜಕೀಯ ಬದಲಾವಣೆಯ ನಂತರ ಶಾಲೆಯಲ್ಲಿ ಸಹಪಾಠಿಗಳು ತಮ್ಮ ಪಕ್ಕ ಕುಳಿತುಕೊಳ್ಳಲು ಹಿಂದೇಟು ಹಾಕುತ್ತಿದ್ದರು ಎಂದರು. ಮಗನನ್ನು ಸಹಪಾಠಿಗಳೊಂದಿಗೆ ಬೆರೆಸಲು ಸೋನಿಯಾ ಗಾಂಧಿ ಅವರು ರಾಹುಲ್‌ನ 7ನೇ ಹುಟ್ಟುಹಬ್ಬಕ್ಕೆ 32 ಮಕ್ಕಳನ್ನು ಆಹ್ವಾನಿಸಿದ್ದರೂ, ಕೇವಲ ಒಬ್ಬನೇ ಒಬ್ಬ ಗೆಳೆಯ ಬಂದಿದ್ದನು. ಉಳಿದವರು ಬಾರದಿದ್ದನ್ನು ಕಂಡು ತಾಯಿ ತುಂಬಾ ಆತಂಕಕ್ಕೊಳಗಾಗಿದ್ದರು, ಆದರೆ ಅಂದು ಬಂದ ಆ ಒಬ್ಬ ಗೆಳೆಯ ಇಂದಿಗೂ ತಮ್ಮ ಸ್ನೇಹಿತನಾಗಿದ್ದಾನೆ ಎಂದು ರಾಹುಲ್ ತಿಳಿಸಿದರು. ಇನ್ನು ಶಾಲೆಯಲ್ಲಿ ಹುಡುಗನೊಬ್ಬ ತಮ್ಮ ಚಿಕ್ಕಪ್ಪನನ್ನು ಕಳ್ಳ ಎಂದು ಕರೆದಾಗ ತಾವು ಆತನಿಗೆ ಕಪಾಳಮೋಕ್ಷ ಮಾಡಿ ಶಿಕ್ಷಕರಿಂದ ಬೈಸಿಕೊಂಡಿದ್ದ ಘಟನೆಯನ್ನು ಪ್ರಿಯಾಂಕಾ ಹಂಚಿಕೊಂಡರು.

Also Read
ಭಾರತಕ್ಕೆ ಮರಳಿದರೆ ಧ್ರುವ್ ರಾಠಿಗೆ ಕಾದಿದೆ ಸಂಕಷ್ಟ: ದೆಹಲಿ ಕೋರ್ಟ್‌ನಿಂದ ಹೊರಬಿತ್ತು ಮೂರನೇ ಶಾಕ್...! Dhruv Rathee
Rahul Gandhi

ಇಟಲಿಯಿಂದ ಭಾರತಕ್ಕೆ ಬಂದ ಆರಂಭಿಕ ದಿನಗಳನ್ನು ನೆನೆದ ಸೋನಿಯಾ ಗಾಂಧಿ, ರಾಜಕೀಯ ಮತ್ತು ಶ್ರೀಮಂತ ಕುಟುಂಬದ ವಾತಾವರಣಕ್ಕೆ ಮಗಳನ್ನು ಕಳುಹಿಸಲು ನನ್ನ ತಂದೆ ಆರಂಭದಲ್ಲಿ ವಿರೋಧಿಸಿದ್ದರು. 1968ರಲ್ಲಿ ಭಾರತಕ್ಕೆ ಬಂದಾಗ ದೆಹಲಿಯಲ್ಲೂ ಕಂಡುಬರುತ್ತಿದ್ದ ತೀವ್ರ ಬಡತನ ತಮಗೆ ದೊಡ್ಡ ಆಘಾತ ನೀಡಿತ್ತು ಎಂದರು. ಇನ್ನೂ 500ಕ್ಕೂ ಹೆಚ್ಚು ಪುಟಗಳಿರುವ ಈ ಆತ್ಮಕಥೆಯನ್ನು ಪೂರ್ಣಗೊಳಿಸಲು ಹಲವು ವರ್ಷಗಳೇ ಬೇಕಾಯಿತು ಎಂದು ಸೋನಿಯಾ ಗಾಂಧಿ ತಿಳಿಸಿದರು. ಈ ಪುಸ್ತಕವನ್ನು ರೂಪಿಸುವಲ್ಲಿ ತಮ್ಮ ಸ್ನೇಹಿತೆ ಮಂಜು ಮತ್ತು ಮಗಳು ಪ್ರಿಯಾಂಕಾ ಗಾಂಧಿ ನೀಡಿದ ಸಹಕಾರವನ್ನು ಅವರು ಕೃತಜ್ಞತೆಯಿಂದ ಸ್ಮರಿಸಿದರು.

ಒಟ್ಟಾರೆಯಾಗಿ, ಇಟಲಿಯ ಸಾಮಾನ್ಯ ಕುಟುಂಬದಿಂದ ಬಂದು ಭಾರತದ ಅತ್ಯಂತ ಪ್ರಭಾವಿ ರಾಜಕೀಯ ಕುಟುಂಬದ ಸೊಸೆಯಾಗಿ, ಹಲವು ದುರಂತಗಳು ಹಾಗೂ ಅವಮಾನಗಳನ್ನು ಮೆಟ್ಟಿನಿಂತ ಸೋನಿಯಾ ಗಾಂಧಿ ಅವರ ಜೀವನ ಪಯಣವು ಈ ಸಂವಾದದಲ್ಲಿ ಅನಾವರಣಗೊಂಡಿದೆ. ಅದರಲ್ಲೂ ರಾಜೀವ್ ಗಾಂಧಿ ಅವರ ಹತ್ಯೆಯ ಹಿಂದಿನ ಭದ್ರತಾ ವೈಫಲ್ಯದ ಕುರಿತು ರಾಹುಲ್ ಗಾಂಧಿ ಮಾಡಿರುವ ಗಂಭೀರ ಆರೋಪವು ದೇಶದ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ, (ಏಜೆನ್ಸೀಸ್​).