ಮುಂಬೈ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಬರೆದಿರುವ ‘Belonging: A Journey of Love’ ಆತ್ಮಕಥನದ ಸುತ್ತ ಮಹಾರಾಷ್ಟ್ರ ರಾಜಕೀಯದಲ್ಲಿ ವಿವಾದ ಭುಗಿಲೆದ್ದಿದೆ. ವೀರ ಸಾವರ್ಕರ್ ಹಾಗೂ ಶಿವಸೇನೆಯ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರ ವಿಚಾರಗಳು ಚರ್ಚೆಯಲ್ಲಿರುವ ಬೆನ್ನಲ್ಲೇ, ಪುಸ್ತಕವನ್ನು ಸ್ವೀಕರಿಸಿದ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ವಿರುದ್ಧ ಬಿಜೆಪಿ ಶಾಸಕ ರಾಮ್ ಕದಂ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಮ್ಮ ತಂದೆ ಬಾಳಾಸಾಹೇಬ್ ಠಾಕ್ರೆ ಅವರ ಸಿದ್ಧಾಂತವನ್ನೇ ಉದ್ಧವ್ ಠಾಕ್ರೆ ರಾಜಕೀಯ ಅಧಿಕಾರಕ್ಕಾಗಿ ಬದಿಗಿಟ್ಟಿದ್ದಾರೆ ಎಂದು ರಾಮ್ ಕದಂ ಆರೋಪಿಸಿದ್ದಾರೆ.
ಸುದ್ದಿಸಂಸ್ಥೆ ಐಎಎನ್ಎಸ್ ಜೊತೆ ಮಾತನಾಡಿದ ರಾಮ್ ಕದಂ, ಉದ್ಧವ್ ಠಾಕ್ರೆ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವೀರ ಸಾವರ್ಕರ್ ಅವರನ್ನು ಅವಮಾನಿಸಿದ ಕಾಂಗ್ರೆಸ್ ನಾಯಕರ ವಿರುದ್ಧ ಬಾಳಾಸಾಹೇಬ್ ಠಾಕ್ರೆ ಕಠಿಣವಾಗಿ ಪ್ರತಿಕ್ರಿಯಿಸುತ್ತಿದ್ದರು. ಆದರೆ ಅವರ ಪುತ್ರನೇ ಇದೀಗ ಸೋನಿಯಾ ಗಾಂಧಿ ಬರೆದಿರುವ ಪುಸ್ತಕವನ್ನು ಗೌರವದಿಂದ ಸ್ವೀಕರಿಸಿದ್ದಾರೆ ಎಂದು ಟೀಕಿಸಿದ್ದಾರೆ.
ಒಂದು ಕಾಲದಲ್ಲಿ ಸ್ವಾತಂತ್ರ್ಯವೀರ ಸಾವರ್ಕರ್ ಅವರ ಕುರಿತು ಟೀಕಿಸುತ್ತಿದ್ದ ಕಾಂಗ್ರೆಸ್ ನಾಯಕರ ನಿಲುವನ್ನು ಬಾಳಾಸಾಹೇಬ್ ಠಾಕ್ರೆ ತೀವ್ರವಾಗಿ ಖಂಡಿಸುತ್ತಿದ್ದರು. ಆದರೆ ಇಂದು ಅವರ ಪುತ್ರ ಉದ್ಧವ್ ಠಾಕ್ರೆ, ಸಾವರ್ಕರ್ ವಿಚಾರದಲ್ಲಿ ಭಿನ್ನ ನಿಲುವು ಹೊಂದಿರುವ ಸೋನಿಯಾ ಗಾಂಧಿ ಅವರ ಪುಸ್ತಕವನ್ನು ಗೌರವದಿಂದ ಸ್ವೀಕರಿಸುತ್ತಿರುವುದು ವಿಪರ್ಯಾಸ. ಉದ್ಧವ್ ಜೀ, ನಿಮ್ಮ ರಾಜಕೀಯ ನಿಲುವು ಎಷ್ಟರಮಟ್ಟಿಗೆ ಬದಲಾಗಿದೆ? ಉದ್ಧವ್ ಜೀ, ನೀವು ಎಷ್ಟು ಕೆಳಮಟ್ಟಕ್ಕೆ ಇಳಿದಿದ್ದೀರಿ? ಎಂದು ಕಿಡಿಕಾರಿದ್ದಾರೆ.
ಅಧಿಕಾರ ಇಂದು ಬರುತ್ತದೆ, ನಾಳೆ ಹೋಗುತ್ತದೆ. ಆದರೆ ಅದಕ್ಕಾಗಿ ತಮ್ಮ ಸಿದ್ಧಾಂತವನ್ನೇ ಬಿಟ್ಟುಕೊಡುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ. ಮಹಾರಾಷ್ಟ್ರದ ಜನರು ಮಾತ್ರವಲ್ಲದೆ, ದೇಶದ ಜನರೂ ಉದ್ಧವ್ ಠಾಕ್ರೆಯಿಂದ ದೂರವಾಗಿದ್ದಾರೆ. ಅವರ ಶಾಸಕರು, ಸಂಸದರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಕೂಡ ಪಕ್ಷ ತೊರೆದಿದ್ದಾರೆ ಎಂದು ಆರೋಪಿಸಿದ್ದಾರೆ.
ಶಿವಸೇನೆ (ಯುಬಿಟಿ) ತನ್ನ ಮೂಲ ಸಿದ್ಧಾಂತದಿಂದ ದೂರ ಸರಿದಿರುವ ಕಾರಣ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಸಂಘಟನೆಯಿಂದ ಹೊರಹೋಗುತ್ತಿದ್ದಾರೆ ಎಂದು ರಾಮ್ ಕದಂ ಹೇಳಿದ್ದಾರೆ. ಅಲ್ಲದೆ, ನೀವು ಕಾಂಗ್ರೆಸ್ ಮಾದರಿಯ ನಕಲಿ ಶಿವಸೇನೆಯಾಗಿ ಬದಲಾಗಿದ್ದೀರಿ ಎಂದು ವ್ಯಂಗ್ಯವಾಡಿದ್ದಾರೆ.
ಉದ್ಧವ್ ಠಾಕ್ರೆ ನಿಜವಾದ ಶಿವಸೈನಿಕರಾಗಿದ್ದರೆ ಈ ಪುಸ್ತಕವನ್ನು ಸ್ವೀಕರಿಸುತ್ತಿರಲಿಲ್ಲ. ಬದಲಿಗೆ ಕಸದ ಬುಟ್ಟಿಗೆ ಎಸೆಯುತ್ತಿದ್ದರು ಎಂದು ಟೀಕಿಸಿದ್ದಾರೆ. ಪುಸ್ತಕವನ್ನು ತಿರಸ್ಕರಿಸುವ ಧೈರ್ಯ ಶಿವಸೇನೆ (ಯುಬಿಟಿ) ನಾಯಕರಲ್ಲಿ ಯಾರಿಗೂ ಇಲ್ಲ. ಈ ನಡೆ ಕಂಡಿದ್ದರೆ ಬಾಳಾಸಾಹೇಬ್ ಠಾಕ್ರೆ ಅವರೇ ನಾಚಿಕೊಳ್ಳುತ್ತಿದ್ದರು ಎಂದೂ ಆರೋಪಿಸಿದ್ದಾರೆ.
ಸೋನಿಯಾ ಗಾಂಧಿ ಅವರ ‘Belonging: A Journey of Love’ ಪುಸ್ತಕದಲ್ಲಿನ ವೀರ ಸಾವರ್ಕರ್ ಕುರಿತ ಉಲ್ಲೇಖವೇ ಈ ವಿವಾದಕ್ಕೆ ಪ್ರಮುಖ ಕಾರಣವಾಗಿದೆ. ಪುಸ್ತಕದ ಒಂದು ಭಾಗದಲ್ಲಿ, ಬ್ರಿಟಿಷರ ವಿರುದ್ಧ ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟಗಾರರು ಹಲ್ಲೆ ಮತ್ತು ಜೈಲು ಶಿಕ್ಷೆಗಳನ್ನು ಎದುರಿಸುತ್ತಿದ್ದ ಸಂದರ್ಭದಲ್ಲಿ, ಆರ್ಎಸ್ಎಸ್ನ ಹಿರಿಯ ಸೈದ್ಧಾಂತಿಕ ನಾಯಕರಲ್ಲಿ ಒಬ್ಬರಾದ ವಿನಾಯಕ ದಾಮೋದರ್ ಸಾವರ್ಕರ್ ಬ್ರಿಟಿಷ್ ಆಡಳಿತಗಾರರಿಗೆ ಕ್ಷಮಾದಾನ ಅರ್ಜಿಗಳನ್ನು ಸಲ್ಲಿಸುತ್ತಿದ್ದರು. ಅವರ ಸಂಘಟನೆಯ ಸದಸ್ಯರು ಬ್ರಿಟಿಷ್ ಅಧಿಕಾರಿಗಳೊಂದಿಗೆ ಮಾಹಿತಿದಾರರಾಗಿ ಸಹಕರಿಸುತ್ತಿದ್ದರು ಎಂಬ ಅರ್ಥದ ಹೇಳಿಕೆ ಉಲ್ಲೇಖಿಸಲಾಗಿದೆ. ಈ ಹೇಳಿಕೆ ಹೊರಬಿದ್ದ ಬೆನ್ನಲ್ಲೇ ಬಿಜೆಪಿ ಹಾಗೂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾವರ್ಕರ್ ಅವರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ವಿವಾದ ತೀವ್ರಗೊಂಡ ಬೆನ್ನಲ್ಲೇ ಏಕನಾಥ್ ಶಿಂಧೆ ಬಣದ ಶಿವಸೇನೆ ನಾಯಕರು ಪುಸ್ತಕದ ಪುಟಗಳನ್ನು ಹರಿದು ಸಾಂಕೇತಿಕ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ, ಮಹಾರಾಷ್ಟ್ರದಲ್ಲಿ ಈ ಪುಸ್ತಕದ ಮಾರಾಟವನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಸಾವರ್ಕರ್ ಕುರಿತ ಹೇಳಿಕೆ, ಸೋನಿಯಾ ಗಾಂಧಿ ಅವರ ಪುಸ್ತಕ ಸ್ವೀಕಾರ ಹಾಗೂ ಉದ್ಧವ್ ಠಾಕ್ರೆ ವಿರುದ್ಧದ ರಾಮ್ ಕದಂ ಟೀಕೆಗಳು ಇದೀಗ ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿವೆ.