ಬಿಹಾರ: ಒಂದು ರಾಂಗ್ ನಂಬರ್ ಕರೆ ಇಬ್ಬರ ಜೀವನವನ್ನೇ ಬದಲಿಸಿದ ಘಟನೆ ಬಿಹಾರದ ಜಮುಯಿ ಜಿಲ್ಲೆಯಲ್ಲಿ ನಡೆದಿದೆ. 19 ವರ್ಷದ ಯುವಕ ಮತ್ತು 36 ವರ್ಷದ ಐದು ಮಕ್ಕಳ ತಾಯಿ ಪರಸ್ಪರ(Love Story) ಪ್ರೀತಿಸಿ, ಅಂತಿಮವಾಗಿ ಮದುವೆಯಾಗಿರುವ ಘಟನೆ ಈಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಜಮುಯಿ ಜಿಲ್ಲೆಯ ಖೈರಾ ಪೊಲೀಸ್ ಠಾಣೆ ವ್ಯಾಪ್ತಿಯ ಖಡೂಯಿ ಬರಿಯಾರ್ಪುರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ, 36 ವರ್ಷದ ಬಿಂದು ದೇವಿಗೆ ಕೆಲವು ವರ್ಷಗಳ ಹಿಂದೆ ತಪ್ಪಾಗಿ ಬಂದ ಒಂದು ಫೋನ್ ಕರೆ ಮೂಲಕ 19 ವರ್ಷದ ಮಹಾವೀರ್ ಠಾಕೂರ್ ಪರಿಚಯವಾಗಿದ್ದನು. ಆರಂಭದಲ್ಲಿ ಸಾಮಾನ್ಯ ಮಾತುಕತೆಯಾಗಿ ಆರಂಭವಾದ ಪರಿಚಯ, ನಂತರ ಸ್ನೇಹವಾಗಿ ಮತ್ತು ಬಳಿಕ ಪ್ರೀತಿಯಾಗಿ ಬೆಳೆಯಿತು.
ಬಿಂದು ದೇವಿ ಈ ಹಿಂದೆ ಮನನ್ ಆಲಂ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದರು. ಆ ವೇಳೆ ಅವರು ಧರ್ಮ ಬದಲಿಸಿಕೊಂಡು ಸೀಮಾ ಪರ್ವೀನ್ ಎಂಬ ಹೆಸರನ್ನು ಸ್ವೀಕರಿಸಿದ್ದರು. ಆ ದಾಂಪತ್ಯ ಜೀವನದಲ್ಲಿ ಅವರಿಗೆ ಐದು ಮಕ್ಕಳು ಕೂಡ ಇದ್ದಾರೆ. ಆದರೆ ಮೊದಲ ಪತಿಯೊಂದಿಗೆ ಜೀವನ ಸುಖಕರವಾಗಿರಲಿಲ್ಲ ಎಂದು ಬಿಂದು ದೇವಿ ಆರೋಪಿಸಿದ್ದಾರೆ.
ಮಾನಸಿಕ ಒತ್ತಡ ಮತ್ತು ಕಿರುಕುಳದಿಂದ ಬೇಸತ್ತಿದ್ದ ಅವರು ಹೊಸ ಜೀವನ ಆರಂಭಿಸಲು ನಿರ್ಧರಿಸಿದ್ದಾರೆ. ಬಳಿಕ ಮಹಾವೀರ್ ಠಾಕೂರ್ ಜೊತೆ ಕೋಲ್ಕತ್ತಾಗೆ ತೆರಳಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಜೊತೆಗೆ ಮತ್ತೆ ತಮ್ಮ ಮೂಲ ಹೆಸರಾದ ಬಿಂದು ದೇವಿ ಹೆಸರನ್ನೇ ಬಳಸಲು ಆರಂಭಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಮಹಾವೀರ್ ಠಾಕೂರ್, "ಸುಮಾರು ಎರಡು ವರ್ಷಗಳ ಹಿಂದೆ ಮಿಸ್ ಕಾಲ್ ಮೂಲಕ ಪರಿಚಯವಾಯಿತು. ನಂತರ ನಾವು ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಪ್ರೀತಿಸಲು ಆರಂಭಿಸಿದ್ದೇವೆ. ಅವರ ಭೂತಕಾಲ(ಕಳೆದು ಹೋದ ಜೀವನ) ನನಗೆ ಮುಖ್ಯವಲ್ಲ. ಜೀವನಪೂರ್ತಿ ಅವರ ಜೊತೆಯಲ್ಲೇ ಇರಲು ಬಯಸುತ್ತೇನೆ" ಎಂದು ಹೇಳಿದ್ದಾರೆ.
ಇನ್ನು ಬಿಂದು ದೇವಿ ಕೂಡ, "ಮೊದಲ ವೈವಾಹಿಕ ಜೀವನದಲ್ಲಿ ನಾನು ಸಂತೋಷವಾಗಿರಲಿಲ್ಲ. ನನ್ನ ಇಚ್ಛೆಯಿಂದಲೇ ಹೊಸ ಜೀವನ ಆರಂಭಿಸಲು ನಿರ್ಧರಿಸಿದ್ದೇನೆ. ಈಗ ಮಹಾವೀರ್ ಜೊತೆ ಸಂತೋಷವಾಗಿದ್ದೇನೆ" ಎಂದು ತಿಳಿಸಿದ್ದಾರೆ.
ಈ ವಿಚಾರ ಗ್ರಾಮದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಮಾಹಿತಿ ತಿಳಿದ ಪೊಲೀಸರು ಇಬ್ಬರನ್ನೂ ಠಾಣೆಗೆ ಕರೆಸಿ ವಿಚಾರಣೆ ನಡೆಸಿದರು. ಇಬ್ಬರೂ ವಯಸ್ಕರಾಗಿದ್ದು, ತಮ್ಮ ಸ್ವಂತ ಇಚ್ಛೆಯಿಂದ ಮದುವೆಯಾಗಿರುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ಪೊಲೀಸರು ಅವರೊಂದಿಗೆ ತೆರಳಲು ಅನುಮತಿ ನೀಡಿದ್ದಾರೆ.ಈ ವಿಶಿಷ್ಟ ಪ್ರೇಮಕಥೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ,(ಏಜೆನ್ಸೀಸ್).