ಟೀಂ ಇಂಡಿಯಾಗೆ ಬಿಗ್ ಶಾಕ್! ಆಫ್ಘನ್ ಸರಣಿಯಿಂದ ಹಾರ್ದಿಕ್ ಪಾಂಡ್ಯ ಔಟ್! ಅಸಲಿ ಕಾರಣವೇನು? Hardik Pandya Injury

ಟೀಂ ಇಂಡಿಯಾಗೆ ಬಿಗ್ ಶಾಕ್! ಆಫ್ಘನ್ ಸರಣಿಯಿಂದ ಹಾರ್ದಿಕ್ ಪಾಂಡ್ಯ ಔಟ್! ಅಸಲಿ ಕಾರಣವೇನು?
ಟೀಂ ಇಂಡಿಯಾಗೆ ಬಿಗ್ ಶಾಕ್! ಆಫ್ಘನ್ ಸರಣಿಯಿಂದ ಹಾರ್ದಿಕ್ ಪಾಂಡ್ಯ ಔಟ್! ಅಸಲಿ ಕಾರಣವೇನು?
Published on
ನವದೆಹಲಿ: ಆಫ್ಘಾನಿಸ್ತಾನ ವಿರುದ್ಧ ಜೂನ್ 13 ರಿಂದ ಆರಂಭವಾಗಲಿರುವ 3 ಪಂದ್ಯಗಳ ಏಕದಿನ ಸರಣಿಗೂ ಮುನ್ನ ಟೀಮ್ ಇಂಡಿಯಾಗೆ ಮತ್ತೊಂದು ಭಾರಿ ಆಘಾತ ಎದುರಾಗಿದೆ. ತಂಡದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ(Hardik Pandya Injury) ಕಾಲಿನ ಗಾಯದ ಸಮಸ್ಯೆಯಿಂದಾಗಿ ಸರಣಿಯಿಂದ ಸಂಪೂರ್ಣವಾಗಿ ಹೊರಬಿದ್ದಿದ್ದಾರೆ. ಇತ್ತೀಚೆಗಷ್ಟೇ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಹ್ಯಾಮ್‌ಸ್ಟ್ರಿಂಗ್ ಗಾಯದಿಂದಾಗಿ ಸರಣಿಯಿಂದ ಹೊರಬಿದ್ದ ಬೆನ್ನಲ್ಲೇ, ಈಗ ಪಾಂಡ್ಯ ಕೂಡ ಅಲಭ್ಯರಾಗಿರುವುದು ಭಾರತಕ್ಕೆ ಆತಂಕವನ್ನು ಹೆಚ್ಚಿಸಿದೆ.
ಬೆಂಗಳೂರಿನ ಬಿಸಿಸಿಐ ಉನ್ನತ ಸಾಧನಾ ಕೇಂದ್ರದಲ್ಲಿ (CoE) ಫಿಟ್‌ನೆಸ್ ಪರೀಕ್ಷೆಗೆ ಒಳಗಾಗುತ್ತಿದ್ದ ಪಾಂಡ್ಯ, ಸರಣಿಗೆ ಸಂಪೂರ್ಣ ಫಿಟ್ ಆಗಲಿದ್ದಾರೆ ಎಂದೇ ನಂಬಲಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಎದುರಾದ ಈ ಕಾಲಿನ ಸ್ನಾಯು ಸೆಳೆತದ ಸಮಸ್ಯೆಯು ಅವರ ಆಡುವ ಆಸೆಗೆ ತಣ್ಣೀರು ಎರಚಿದೆ.

ಬೆಂಗಳೂರಿನಲ್ಲಿ ಚೇತರಿಸಿಕೊಳ್ಳುತ್ತಿದ್ದ ಪಾಂಡ್ಯಗೆ ಕಡೇ ಕ್ಷಣದ ಶಾಕ್!

ಈ ಬಾರಿಯ ಐಪಿಎಲ್ ವೇಳೆ ಮುಂಬೈ ಇಂಡಿಯನ್ಸ್ ಪರ ಆಡುವಾಗ ಹಾರ್ದಿಕ್ ಪಾಂಡ್ಯ ಬೆನ್ನುನೋವಿನ ಸಮಸ್ಯೆಯಿಂದಾಗಿ ಕೆಲವು ಪಂದ್ಯಗಳನ್ನು ಮಿಸ್ ಮಾಡಿಕೊಂಡಿದ್ದರು. ಇದಾದ ನಂತರ ಜೂನ್ 2 ರಿಂದ ಅವರು ಬೆಂಗಳೂರಿನ CoE ಕೇಂದ್ರದಲ್ಲೇ ಮೊಕ್ಕಾಂ ಹೂಡಿದ್ದರು. ಆಫ್ಘಾನಿಸ್ತಾನ ಸರಣಿಗಾಗಿ ಫಿಟ್‌ನೆಸ್ ಪ್ರಮಾಣಪತ್ರ ಪಡೆಯಲು ಅವರು ನೆಟ್ಸ್‌ನಲ್ಲಿ ಪೂರ್ಣ ಪ್ರಮಾಣದ ಬೌಲಿಂಗ್, ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ ಅಭ್ಯಾಸವನ್ನು ಯಾವುದೇ ತೊಂದರೆಯಿಲ್ಲದೆ ನಡೆಸುತ್ತಿದ್ದರು.
ಆದರೆ, ಬುಧವಾರ ಮುಂಜಾನೆ ನಡೆಸಿದ ತೀವ್ರ ಅಭ್ಯಾಸದ ವೇಳೆ ಅವರ ಕಾಲಿಗೆ ಸಣ್ಣ ಗಾಯವಾಗಿದ್ದು, ಗುಣಮುಖರಾಗಲು ಕನಿಷ್ಠ ಕೆಲವು ವಾರಗಳ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯಕೀಯ ಮಂಡಳಿ ತಿಳಿಸಿದೆ. ಹಾರ್ದಿಕ್ ಸರಣಿಗೆ ಆಯ್ಕೆಯಾಗಲು ಸಂಪೂರ್ಣ ಸಿದ್ಧರಾಗಿದ್ದರು. ಆದರೆ ಕಡೇ ಕ್ಷಣದಲ್ಲಿ ಕಾಲಿನ ಸ್ನಾಯು ಸೆಳೆದಿದ್ದರಿಂದ ಅವರು ಸರಣಿಯಿಂದ ವಂಚಿತರಾಗಿದ್ದಾರೆ. ಸದ್ಯ ಅವರು ಬೆಂಗಳೂರಿನಲ್ಲೇ ಉಳಿದು ಚಿಕಿತ್ಸೆ ಪಡೆಯಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. 2025 ರ ಚಾಂಪಿಯನ್ಸ್ ಟ್ರೋಫಿ ಗೆಲುವಿನ ನಂತರ ಪಾಂಡ್ಯ ಯಾವುದೇ ಏಕದಿನ ಪಂದ್ಯವನ್ನು ಆಡಿಲ್ಲ. ಈಗ ಅವರ ಕಾಯುವಿಕೆ ಮತ್ತಷ್ಟು ಸುದೀರ್ಘವಾಗಿದೆ. ಜುಲೈನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಸರಣಿಗಾದರೂ ಅವರು ಫಿಟ್ ಆಗಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ಕೊಹ್ಲಿ, ಪಾಂಡ್ಯ ಔಟ್: ಶಿವಂ ದುಬೆಗೆ ಒಲಿದ ಅದೃಷ್ಟದ ಬಾಗಿಲು?

2027ರ ಏಕದಿನ ವಿಶ್ವಕಪ್‌ಗಾಗಿ ಬಲಿಷ್ಠ ತಂಡವನ್ನು ಸಿದ್ಧಪಡಿಸುವ ಭಾರತದ ಯೋಜನೆಗೆ ಈ ಇಬ್ಬರು ಹಿರಿಯ ಆಟಗಾರರ ಗಾಯದ ಸಮಸ್ಯೆ ದೊಡ್ಡ ಹಿನ್ನಡೆಯಾಗಿದೆ. ವಿರಾಟ್ ಕೊಹ್ಲಿ ಅವರ ಜಾಗಕ್ಕೆ ಈಗಾಗಲೇ ಯಶಸ್ವಿ ಜೈಸ್ವಾಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಈಗ ಹಾರ್ದಿಕ್ ಪಾಂಡ್ಯ ಅವರ ಅನುಪಸ್ಥಿತಿಯಿಂದಾಗಿ ಮತ್ತೊಬ್ಬ ಸ್ಫೋಟಕ ಆಲ್‌ರೌಂಡರ್ ಶಿವಂ ದುಬೆ ಅವರಿಗೆ ತಂಡದಲ್ಲಿ ಸ್ಥಾನ ಸಿಗುವ ಸಾಧ್ಯತೆ ದಟ್ಟವಾಗಿದೆ. ಭಾರತ ತಂಡದಲ್ಲಿ ಈಗಾಗಲೇ ನಿತೀಶ್ ಕುಮಾರ್ ರೆಡ್ಡಿ ಅವರಂತಹ ಯುವ ಆಲ್‌ರೌಂಡರ್ ಇದ್ದರೂ, ಹಾರ್ದಿಕ್ ಅವರ ಅನುಭವಕ್ಕೆ ಪರ್ಯಾಯವಾಗಿ ದುಬೆ ಅವರನ್ನು ಕಣಕ್ಕಿಳಿಸಲು ಮ್ಯಾನೇಜ್‌ಮೆಂಟ್ ಆಲೋಚಿಸುತ್ತಿದೆ.
ಜೂನ್ 13 ರಂದು ಧರ್ಮಶಾಲಾದಲ್ಲಿ ಮೊದಲ ಪಂದ್ಯ ನಡೆಯಲಿದ್ದು, ನಂತರದ ಪಂದ್ಯಗಳು ಲಖನೌ ಮತ್ತು ಚೆನ್ನೈನಲ್ಲಿ ಜರುಗಲಿವೆ. ಹಿರಿಯ ಆಟಗಾರರಿಲ್ಲದ ಭಾರತ ತಂಡ ಆಫ್ಘನ್ ಪಡೆಯ ಸ್ಪಿನ್ ಜಾಲವನ್ನು ಹೇಗೆ ಎದುರಿಸಲಿದೆ ಎಂಬುದು ಕ್ರೀಡಾಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net