ಬಿಯರ್ ಬಾಟಲಿ ಒಳಗೆ ಜೀವಂತ ಮೀನು ಪತ್ತೆ
- ಬಿಯರ್ ಬಾಟಲಿ ಒಳಗೆ ಜೀವಂತ ಮೀನು ಪತ್ತೆ
- ಹೈದರಾಬಾದ್‌ನಲ್ಲಿ ನಡೆದಿರುವ ಘಟನೆ
- ವೈನ್ ಶಾಪ್‌ನಲ್ಲಿ ಹೈಡ್ರಾಮಾ
ಹೈದರಾಬಾದ್: ಸಾಮಾನ್ಯವಾಗಿ ಬಿಯರ್ ಬಾಟಲಿ ಓಪನ್ ಮಾಡಿದ್ರೆ ಬುರುಗೊಡುವ ನೊರೆ ಬರಬೇಕು, ನಂತರ ಒಗರು ರುಚಿಯೊಂದಿದೆ ಗಂಟಲಿನಲ್ಲಿ ತಂಪಾಗಿ ಇಳಿಯಬೇಕು. ಆದರೆ ಹೈದರಾಬಾದಿನ ವ್ಯಕ್ತಿಯೊಬ್ಬ ಖರೀದಿಸಿದ ಬಿಯರ್ನಲ್ಲಿ, ಜೀವಂತವಾದ ಮೀನು ಪ್ರತ್ಯಕ್ಷವಾಗಿದ್ದು, ಈಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ನಡೆದಿದ್ದೇನು?
ಹೈದರಾಬಾದ್‌ನ ಮಲ್ಲಾಪುರದಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ಸಂಜೆ ಪಾರ್ಟಿಗೆಂದು ಹತ್ತಿರದ ವೈನ್ ಶಾಪ್‌ಗೆ ಹೋಗಿ ಒಂದು 'ಕಿಂಗ್‌ಫಿಷರ್' ಬಿಯರ್ ಬಾಟಲಿ ಖರೀದಿಸಿದ್ದಾನೆ. ಮನೆಗೆ ಬಂದು ಬಾಟಲಿ ಓಪನ್ ಮಾಡೋಕೆ ಹೋದಾಗ ಬಾಟಲಿಯಲ್ಲಿ ಏನೋ ಅಸಹಜವಾಗಿ ಕಂಡಿದೆ. ಸೀಲ್ ಆಗಿರೋ ಬಾಟಲಿಯ ಒಳಗಡೆ ಸಣ್ಣ ಮೀನೊಂದು ಆರಾಮವಾಗಿ ಈಜಾಡುತ್ತಿರುವ ದೃಶ್ಯ ನೋಡಿದ ಗ್ರಾಹಕನ ಕುಡಿಯೋ ಆಸೆ ಭಗ್ನವಾಗಿದೆ.
ವೈನ್ ಶಾಪ್‌ನಲ್ಲಿ ಹೈಡ್ರಾಮಾ!
ತಕ್ಷಣ ಬಿಯರ್ ಬಾಟಲಿ ಹಿಡಿದು ವೈನ್ ಶಾಪ್‌ಗೆ ಬಂದ ವ್ಯಕ್ತಿ,
ನೋಡ್ರಪ್ಪಾ ನಿಮ್ಮ ಅಂಗಡಿಯಲ್ಲಿ ಖರೀದಿಸಿದ ಬಿಯರ್ ಬಾಟಲಿಯಲ್ಲಿ ಮೀನು ತೇಲಾಡುತ್ತಿದೆ, ಇದನ್ನ ಕುಡಿದಿದ್ರೆ ನನ್ನ ಕಥೆ ಏನಾಗುತ್ತಿತ್ತು ಎಂದು ವೈನ್ ಶಾಪ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾನೆ.
ಆದರೆ ವೈನ್ ಶಾಪ್ ನೌಕರರು ಮಾತ್ರ, ನೋಡಿ ನಾವೇನು ಬಿಯರ್ ತಯಾರು ಮಾಡಲ್ಲ. ಕಂಪನಿಯಿಂದ ಬಾಟಲಿ ಬರುತ್ತೆ, ನಾವು ಮಾರಾಟ ಮಾಡ್ತೀವಿ ಅಷ್ಟೇ. ಅದರಲ್ಲಿ ಮೀನು ಬಂದ್ರೆ ನಾವೇನು ಮಾಡೋಕೆ ಆಗುತ್ತೆ? ಅಂತ ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ. ಇದರಿಂದ ಕೋಪಗೊಂಡ ಗ್ರಾಹಕ ಮತ್ತು ಅಲ್ಲಿನ ಸಿಬ್ಬಂದಿ ನಡುವೆ ದೊಡ್ಡ ಮಾತಿನ ಚಕಮಕಿಯೇ ನಡೆದಿದೆ.
ಬಾಟಲಿ ಒಳಗೆ ಮೀನು ಬಂದಿದ್ದು ಹೇಗೆ?
ಈಗ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ ಒಂದೇ, ಸಂಪೂರ್ಣವಾಗಿ ಸೀಲ್ ಆಗಿರುವ ಬಾಟಲಿಯೊಳಗೆ ಈ ಮೀನು ಬಂದಿದ್ದಾದರೂ ಹೇಗೆ? ಉತ್ಪಾದನಾ ಘಟಕದಲ್ಲಿ ಬಾಟಲಿಗಳನ್ನು ತೊಳೆದು ತುಂಬಿಸುವಾಗ ಏನಾದರೂ ಎಡವಟ್ಟಾಗಿದೆಯೇ? ಅಥವಾ ಇದು ಶುದ್ಧತೆಯ ಹೆಸರಲ್ಲಿ ನಡೆಯುತ್ತಿರುವ ಮೋಸವೇ ಎಂಬ ಅನುಮಾನಗಳು ವ್ಯಕ್ತವಾಗಿವೆ. ಸದ್ಯ ಈ ಬಿಯರ್ ಫಿಶ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.
ಗ್ರಾಹಕರ ಆರೋಗ್ಯಕ್ಕೆ ಸಂಚಕಾರ
ಈ ಘಟನೆಯಿಂದ ಸ್ಥಳೀಯ ನಿವಾಸಿಗಳು ಕೆಂಡಾಮಂಡಲವಾಗಿದ್ದಾರೆ. ನಾವು ಕಷ್ಟಪಟ್ಟು ದುಡಿದ ಹಣ ಕೊಟ್ಟು ಪಾನೀಯ ಖರೀದಿಸ್ತೀವಿ. ಆದರೆ ಬಾಟಲಿ ಒಳಗೆ ಮೀನು, ಕಸ ಇವೆಲ್ಲಾ ಬಂದ್ರೆ ನಮ್ಮ ಆರೋಗ್ಯದ ಗತಿ ಏನು? ಎಣ್ಣೆ ಪ್ರಿಯರ ಜೀವಕ್ಕೆ ಬೆಲೆಯೇ ಇಲ್ವಾ? ಎಂದು ಪ್ರಶ್ನಿಸುತ್ತಿದ್ದಾರೆ. ಈ ಹಿಂದೆಯೂ ಇಂತಹ ಕಳಪೆ ಗುಣಮಟ್ಟದ ದೂರುಗಳು ಬಂದಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ತನಿಖೆಗೆ ಆಗ್ರಹ
ಬಿಯರ್ ಬಾಟಲಿಯಲ್ಲಿ ಮೀನು ಪತ್ತೆಯಾದ ಈ ಪ್ರಕರಣ ಈಗ ಅಬಕಾರಿ ಇಲಾಖೆಯ ಗಮನಕ್ಕೂ ಹೋಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ಕಳಪೆ ಗುಣಮಟ್ಟದ ಬಿಯರ್ ಪೂರೈಸುತ್ತಿರುವ ಕಂಪನಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ,(ಏಜನ್ಸೀಸ್).