ಮಕ್ಕಳ ತಪ್ಪಿಗೆ ಎಲ್ಲದಕ್ಕೂ ಅಪ್ಪ-ಅಮ್ಮನನ್ನು ದೂಷಿಸಬೇಡಿ: ಕಂಗನಾ ರಣಾವತ್
- ಪುಣೆಯ ಉದ್ಯಮಿ ಕೇತನ್ ಅಗರ್ವಾಲ್ ಭೀಕರ ಕೊಲೆ ಪ್ರಕರಣ
- ಕೇತನ್ ಕೇಸ್‌ಗೆ ಕಂಗನಾ ರಣಾವತ್ ರಿಯಾಕ್ಷನ್
- ಮಕ್ಕಳ ತಪ್ಪಿಗೆ ಎಲ್ಲದಕ್ಕೂ ಅಪ್ಪ-ಅಮ್ಮನನ್ನು ದೂಷಿಸಬೇಡಿ: ಕಂಗನಾ ರಣಾವತ್
ಪುಣೆ: ಕೆಲ ದಿನಗಳ ಹಿಂದೆ ಪುಣೆಯಲ್ಲಿ ಯುವ ಉದ್ಯಮಿ ಕೇತನ್ ಅಗರ್ವಾಲ್ನನ್ನು ಆತನ ಭಾವಿ ಪತ್ನಿ ಸಿಯಾ ಗೋಯಲ್ ಹಾಗೂ ಆಕೆಯ ಪ್ರೇಮಿ ಚೇನತ್ ಚೌಧರಿ ಕೊಲೆ ಮಾಡಿರುವ ಸುದ್ದಿ ದೇಶದಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಇದೀಗ ಈ ಘಟನೆಗೆ ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ (Kangana Ranaut on Ketan Aggarwal Case) ಪ್ರತಿಕ್ರಿಯೆ ನೀಡಿದ್ದು, ತಮ್ಮ ಮಕ್ಕಳ ಜೀವನದಲ್ಲಿ ಏನಾಗುತ್ತಿದೆ ಎಂದು ತಂದೆ-ತಾಯಿಯರಿಗೆ ಗೊತ್ತಿಲ್ಲದ ಕಾರಣ ಈ ರೀತಿಯ ಘಟನೆಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.
ಎಲ್ಲದಕ್ಕೂ ಅಪ್ಪ-ಅಮ್ಮನನ್ನು ದೂಷಿಸಬೇಡಿ!
ಪುಣೆಯ ಕೇತನ್ ಅಗರ್ವಾಲ್ ಕೊಲೆ ಪ್ರಕರಣಕ್ಕೆ ಪ್ರತಿಕ್ರಿಸಿರುವ ನಟಿ, ಸಂಸದೆ ಕಂಗನಾ ರಣಾವತ್, ಮಕ್ಕಳ ಜೀವನದಲ್ಲಿ ನಡೆಯುವ ಎಲ್ಲದಕ್ಕೂ ಅಪ್ಪ-ಅಮ್ಮನನ್ನು ದೂಷಿಸುವಂತಿಲ್ಲ ಎಂದಿದ್ದಾರೆ. ಮಕ್ಕಳು ಏನೇ ತಪ್ಪು ಮಾಡಿದರೂ ಮನೆಯಲ್ಲಿ ಅವರಿಗೆ ಏನು ಕಲಿಸಿದ್ದಾರೆ, ಅವರ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಹೇಳಿ ಬಿಡುತ್ತೆವೆ. ಆದರೆ ಮಕ್ಕಳು ಕೇವಲ ಅಪ್ಪ-ಅಮ್ಮನಿಂದ ಮಾತ್ರವಲ್ಲ, ಸಮಾಜದ ಅನೇಕ ಜನರಿಂದ ಪ್ರಭಾವಿತರಾಗಿರುತ್ತಾರೆ. ಸಮಾಜದ ಹಲವಾರು ಘಟನೆಗಳು, ವ್ಯಕ್ತಿಗಳು ಅವರ ಮೇಲೆ ಪ್ರಭಾವ ಬಿರುತ್ತವೆ.
ಹಲವು ಘಟನೆಗಳಲ್ಲಿ ತಮ್ಮ ಮಕ್ಕಳ ಜೀವನದಲ್ಲಿ ಏನಾಗುತ್ತಿದೆ ಎಂದು ಪಾಲಕರಿಗೆ ತಿಳಿದೇ ಇರುವುದಿಲ್ಲ. ಆದ್ದರಿಂದ ಮಕ್ಕಳ ತಪ್ಪಿಗಾಗಿ ಅಪ್ಪ-ಅಮ್ಮಂದಿರನ್ನು ದೋಷಿಗಳಂತೆ ನೋಡುವುದನ್ನು ಮೊದಲು ನಿಲ್ಲಿಸಬೇಕೆಂದು ನಟಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
ಏನಿದು ಕೇತನ್ ಅಗರ್ವಾಲ್ ಪ್ರಕರಣ?
ಮಹಾರಾಷ್ಟ್ರದ ಖ್ಯಾತ ಉದ್ಯಮಿಯ ಪುತ್ರನಾದ ಕೇತನ್ ಅಗರವಾಲ್ ಮತ್ತು ಸಿಯಾ ಗೋಯಲ್ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅರಮನೆಯೊಂದರಲ್ಲಿ ನವೆಂಬರ್‌ನಲ್ಲಿ ಅದ್ದೂರಿ ವಿವಾಹವನ್ನು ಯೋಜಿಸಲಾಗಿತ್ತು. ಆದರೆ ಜೂನ್ 18ರಂದು ಪುಣೆ ಸಮೀಪದ ಲೋಹಗಢ ಕೋಟೆಯಲ್ಲಿ ಸಿಯಾ ಹಾಗೂ ಆಕೆಯ ಪ್ರಿಯಕರ ಚೇತನ್ ಸೇರಿ ಕೇತನ್ನನ್ನು ಕಣಿವೆಗೆ ತಳ್ಳಿದ ಪರಿಣಾಮ ಮೃತಪಟ್ಟಿದ್ದಾರೆ ಎಂದು ತನಿಖೆ ಬಹಿರಂಗಪಡಿಸಿದೆ.
22 ವರ್ಷದ ಚೇತನ್ ಬಬುಲಾಲ್ ಚೌಧರಿ ಎಂಬಾತನೊಂದಿಗೆ ಸಿಯಾ ಕಳೆದ ವರ್ಷ ಸಭೆಯೊಂದರಲ್ಲಿ ಪರಿಚಯವಾಗಿದ್ದಳು. ಸಿಯಾ ಬೇಕರಿ ವ್ಯವಹಾರ ನಡೆಸುತ್ತಿದ್ದರೆ, ಚೇತನ್ ಡ್ರೈ ಫ್ರೂಟ್ಸ್ ವ್ಯಾಪಾರ ಮಾಡುತ್ತಿದ್ದನು. ಇವರಿಬ್ಬರ ಸಂಬಂಧ 2025ರ ನವೆಂಬರ್‌ನಲ್ಲಿ ಆರಂಭವಾಗಿತ್ತು. ಅದೇ ವೇಳೆಗೆ ಸಿಯಾ ಮತ್ತು ಕೇತನ್ ಅವರ ಕುಟುಂಬಗಳು ಮದುವೆ ಸಿದ್ಧತೆಯಲ್ಲಿ ತೊಡಗಿದ್ದವು.
ಪೊಲೀಸರ ಪ್ರಕಾರ, ಸಿಯಾ ಮತ್ತು ಕೇತನ ನಡುವಿನ ಸಂಬಂಧದಿಂದ ಚೇತನ್ ಅಸಮಾಧಾನಗೊಂಡಿದ್ದನು. ಕೇತನ ತಮ್ಮ ಸಂಬಂಧಕ್ಕೆ ಅಡ್ಡಿಯಾಗಿದ್ದಾರೆ ಎಂದು ಭಾವಿಸಿ ಇಬ್ಬರೂ ಸೇರಿ ಕೊಲೆ ಸಂಚು ರೂಪಿಸಿದ್ದರು. ಸಿಯಾ, ಪ್ರವಾಸದ ನೆಪದಲ್ಲಿ ಕೇತನನನ್ನು ಲೋಹಗಢ ಕೋಟೆಗೆ ಕರೆದುಕೊಂಡು ಹೋಗಿದ್ದಳು. ಬಳಿಕ ಚೇತನ್ ಸ್ಥಳಕ್ಕೆ ಆಗಮಿಸಿದ್ದಾನೆ. ಇಬ್ಬರೂ ಸೇರಿ ಕೇತನ್ನನ್ನು ಹಿಂಬದಿಯಿಂದ ತಳ್ಳಿದ ಪರಿಣಾಮ ಆಳವಾದ ಕಂದಕಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ, (ಏಜನ್ಸೀಸ್).