Ketan Agarwal Murder  
ದೇಶ

ಪುಣೆ ಕೊಲೆ ಪ್ರಕರಣ: 6 ತಿಂಗಳಲ್ಲಿ 2,004 ಕರೆಗಳು 238 ಗಂಟೆ ಮಾತುಕತೆ!

ಪುಣೆ: ಯುವ ಉದ್ಯಮಿ ಕೇತನ್ ವಿಶಾಲ್ ಅಗರ್ವಾಲ್(26) ಅವರ ಹತ್ಯೆ ಪ್ರಕರಣ(Ketan Agarwal Murder) ಭೇದಿಸಿರುವ ಪೊಲೀಸರು, ಅವರ ಭಾವಿಪತ್ನಿ ಸಿಯಾ ಗೋಯಲ್(20) ಮತ್ತು ಆಕೆಯ ಪ್ರಿಯಕರ ಚೇತನ್ ಬಬುಲಾಲ್ ಚೌಧರಿ(22) ನಡುವಿನ ಕರೆ ವಿವರ (ಸಿಡಿಆರ್) ಮೂಲಕ ಕೊಲೆ ಸಂಚನ್ನು ಬಯಲು ಮಾಡಿದ್ದಾರೆ. ಈ ಇಬ್ಬರು ಕಳೆದ ಆರು ತಿಂಗಳಲ್ಲಿ ಬರೋಬ್ಬರಿ 2,004 ಬಾರಿ ಕರೆ ಮಾಡಿ, ಒಟ್ಟು 238 ಗಂಟೆಗಳ ಕಾಲ ಮಾತನಾಡಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಕೇತನ್‌ನನ್ನು ಪುಣೆಯ ಲೋನಾವಾಲಾ ಸಮೀಪದ ಲೋಹಗಡ ಕೋಟೆಗೆ ಸಿಯಾ ಜೂನ್ 18ರಂದು ಕರೆದೊಯ್ದಿದ್ದಳು. ಅಲ್ಲಿ ಮೊದಲೇ ಕಾದು ಕುಳಿತಿದ್ದ ಚೇತನ್‌, ಕೇತನ್‌ನನ್ನು ಕಮರಿಗೆ ತಳ್ಳಿ ಹತ್ಯೆ ಮಾಡಿದ್ದ. ಸಿಯಾ-ಚೇತನ್ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ, ಕುಟುಂಬದ ಮರ್ಯಾದೆಗೆ ಹೆದರಿ ಓಡಿಹೋಗಲು ಸಿಯಾ ನಿರಾಕರಿಸಿದ್ದಳು. ಹೀಗಾಗಿ ತನ್ನೊಂದಿಗೆ ನಿಶ್ಚಿತಾರ್ಥವಾಗಿದ್ದ ಕೇತನ್‌ನನ್ನು ಕೊಲೆ ಮಾಡಲು ಅವರಿಬ್ಬರೂ ಜೂನ್ 16-17ರಂದು ಒಟ್ಟಾಗಿ ಸಂಚು ರೂಪಿಸಿದ್ದರು.
ಕೇತನ್ ಮತ್ತು ಸಿಯಾಳನ್ನು ಚೇತನ್ ಹಿಂಬಾಲಿಸುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಜತೆಗೆ ತನ್ನ ಲೊಕೇಶನ್ ಟ್ರ್ಯಾಕ್ ಆಗುವುದನ್ನು ತಪ್ಪಿಸಲು ತನ್ನ ನೌಕರನ ಮೊಬೈಲ್‌ಫೋನ್ ಬಳಸಿದ್ದ. ಈ ಸಿಸಿಟಿವಿ ದೃಶ್ಯಾವಳಿ, ತಾಂತ್ರಿಕ ವಿಶ್ಲೇಷಣೆ ಮತ್ತು ಕರೆಗಳ ದಾಖಲೆಗಳ ಆಧಾರದ ಮೇಲೆ ಪೊಲೀಸರು ಸಿಯಾ ಹಾಗೂ ಚೇತನ್ ನನ್ನು ಬಂಧಿಸಿ, ತನಿಖೆ ಮುಂದುವರಿಸಿದ್ದಾರೆ. ಫೆಬ್ರವರಿಯಲ್ಲಿ ಕೇತನ್- ಸಿಯಾ ನಿಶ್ಚಿತಾರ್ಥವಾಗಿದ್ದು, ನವೆಂಬರ್‌ನಲ್ಲಿ ಜೈಪುರದಲ್ಲಿ ವಿವಾಹ ಎಂದು ನಿಗದಿಯಾಗಿತ್ತು.
ಗೂಗಲ್ ಸರ್ಚ್‌ನಿಂದ ಸುಳಿವು: 'ಕೊಲೆಯನ್ನು ಅಪಘಾತದಂತೆ ಬಿಂಬಿಸುವುದು ಹೇಗೆ?' ಮತ್ತು 'ಸಿಕ್ಕಿಬೀಳದಂತೆ ತಪ್ಪಿಸಿಕೊಳ್ಳುವುದು ಹೇಗೆ?' ಎಂದು ಕೊಲೆಗೂ ಕೆಲವು ದಿನಗಳ ಮುನ್ನ ಗೂಗಲ್‌ನಲ್ಲಿ ಹುಡುಕಾಟ ನಡೆಸಿದ್ದಳು. ಸಿಯಾಳ ಗೂಗಲ್ ಸರ್ಚ್ ಹಿಸ್ಟರಿ ಕೂಡ ಈ ಪೂರ್ವನಿಯೋಜಿತ ಕೊಲೆಯ ಸಂಚನ್ನು ಸಾಬೀತುಪಡಿಸಿದೆ.

ಜನ್ಮದಿನಾಚರಣೆಗೆ 70 ರೂಮ್ಸ್ ಬುಕ್

ಜೂನ್ 20ರಂದು ಮಹಾಬಲೇಶ್ವರದಲ್ಲಿ ಆಕೆಯ ಜನ್ಮದಿನ ಒಟ್ಟಾಗಿ ಆಚರಿಸಲು ಯೋಜಿಸಿದ್ದರು. ಇದಕ್ಕಾಗಿ ಕೇತನ್ ತಂದೆ ಗಿರಿಧಾಮದ ಪಂಚತಾರಾ ಹೋಟೆಲ್‌ನಲ್ಲಿ 70 ಕೊಠಡಿಗಳನ್ನು ಕಾಯ್ದಿರಿಸಿದ್ದರು. ಆದರೆ, ಅವುಗಳನ್ನು ರದ್ದುಪಡಿಸಿ, ಬದಲಿಗೆ ಲೋಹಗಡ ಕೋಟೆಗೆ ಏಕಾಂಗಿಯಾಗಿ ಹೋಗುವಂತೆ ಸಿಯಾ, ಕೇತನ್‌ ಮನವೊಲಿಸಿದ್ದಳು ಎಂದು ಮೂಲಗಳು ತಿಳಿಸಿವೆ.

ಸಹೋದರಿಯ ಸಂಶಯ

ಆರಂಭದಲ್ಲಿ ಕೇತನ್ ಸಾವು ಅಪಘಾತ ಎಂದು ಆರೋಪಿಗಳು ಬಿಂಬಿಸಿದ್ದರು. ಅಲ್ಲದೆ ಸಾಂತ್ವನ ಹೇಳಲು ಮನೆಗೆ ಬಂದಿದ್ದ ಸಿಯಾಳನ್ನು ಕೇತನ್ ಸಹೋದರಿ ಪ್ರಶ್ನಿಸಿದಾಗ ಆಕೆಯ ಉತ್ತರಗಳಿಂದ ಅನುಮಾನ ಬಂದು ಅದನ್ನು ತನ್ನ ಕುಟುಂಬಸ್ಥರಿಗೆ ತಿಳಿಸಿದ್ದಳು. ಬಳಿಕ ಅವರು ಪೊಲೀಸರ ಮೊರೆಹೋಗಿ ಹೊಸದಾಗಿ ತನಿಖೆ ನಡೆಸುವಂತೆ ಕೋರಿದ್ದರು.