35 ವರ್ಷಗಳ ಬಳಿಕ ಜಮ್ಮು-ಕಾಶ್ಮೀರ ಎಸ್‌ಐಟಿಯಿಂದ ಯಾಸಿನ್ ಮಲಿಕ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ
- 1990ರ ಕಾಶ್ಮೀರ ನರಮೇಧದ ಕರಾಳ ನೆನಪು
- ಕಾಶ್ಮೀರಿ ಪಂಡಿತೆ ಸರಳಾ ಭಟ್ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!
- ನರ್ಸ್ ಸರಳಾ ಭಟ್ ಅಪಹರಣ, ಕೊಲೆ ಪ್ರಕರಣ
- 35 ವರ್ಷಗಳ ಬಳಿಕ ಜಮ್ಮು-ಕಾಶ್ಮೀರ ಎಸ್‌ಐಟಿಯಿಂದ ಯಾಸಿನ್ ಮಲಿಕ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ
ಜಮ್ಮು-ಕಾಶ್ಮೀರ: ಸುಮಾರು 35 ವರ್ಷಗಳ ಹಿಂದೆ ಅಂದರೆ 1990 ರಲ್ಲಿ ಕಾಶ್ಮೀರದಿಂದ ಪಂಡಿತರ ಮೇಲೆ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಜೆಕೆಎಲ್ಎಫ್ ಸಂಘಟನೆಯ ಯಾಸಿನ್ ಮಲಿಕ್, ನರ್ಸ್ ಸರಳಾ ಭಟ್ (Yasin Malik in Sarala Bhat Case) ಳನ್ನು ಅಪಹರಣ, ಅತ್ಯಾಚಾರ, ಕೊಲೆ ಪ್ರಕರಣದ ಚಾರ್ಜ್ಶೀಟ್ನ್ನು ಎಸ್ಐಟಿ ಸೋಮವಾರ (ಜೂನ್.29) ಸಲ್ಲಿಸಿದ್ದು ಇದೀಗ ಈ ಪ್ರಕರಣದ ವಿಚಾರಣೆ ನಡೆಯಲಿದೆ.
ಕಾಶ್ಮೀರಿ ಪಂಡಿತರನ್ನು ಅವರ ಮನೆಯಿಂದ ಓಡಿಸಿ, ಅವರ ಮೇಲೆ ಅತ್ಯಾಚಾರ, ಅನಾಚಾರ ನಡೆಸಿದವರಲ್ಲಿ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (JKLF) ಪಾತ್ರ ಪ್ರಮುಖವಾಗಿದ್ದು, ಈಗ ಈ ಸಂಘಟನೆ ನಾಯಕ ಯಾಸಿನ್ ಮಲಿಕ್ ಮತ್ತೆ ಕಾನೂನು ಸಮರವನ್ನು ಎದುರಿಸಬೇಕಾಗಿದೆ.
35 ವರ್ಷ ಹಳೆಯ ಪ್ರಕರಣ!
ಈ ನರ್ಸ್ ಸರಳಾ ಅತ್ಯಾಚಾರ, ಕೊಲೆ ಪ್ರಕರಣ ಸುಮಾರು 35 ವರ್ಷ ಹಳೆಯದ್ದಾಗಿದ್ದು, ಜಮ್ಮು-ಕಾಶ್ಮೀರ ಎಸ್ಐಟಿ ಪ್ರತ್ಯಕ್ಷದರ್ಶಿಗಳ ಸಾಕ್ಷ್ಯಗಳು, ವಿಧಿವಿಜ್ಞಾನ ಸಾಕ್ಷ್ಯಗಳು, ಸಾಕ್ಷ್ಯಚಿತ್ರ ದಾಖಲೆಗಳು, ಎಲೆಕ್ಟ್ರಾನಿಕ್ ಸಾಕ್ಷ್ಯಗಳು ಮತ್ತು ಸಮಕಾಲೀನ ವಸ್ತುಗಳನ್ನು ಆಧರಿಸಿ ಸುಮಾರು 737 ಪುಟಗಳ ಚಾರ್ಜ್ಶೀಟ್ನ್ನು ಸಲ್ಲಿಸಲಾಗಿದೆ.
ಸ್ಕಿಮ್ಸ್ ಸೌರಾದಲ್ಲಿ ಶಿಶುಶಾಸ್ತ್ರ ವಿಭಾಗದಲ್ಲಿ ನರ್ಸ್ ಆಗಿದ್ದ ಸರಳಾ ಭಟ್ ಏಪ್ರಿಲ್ 18, 1990 ರಂದು ಆಸ್ಪತ್ರೆಯಲ್ಲಿ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಅಪಹರಿಸಲಾಗಿದೆ. ನಂತರ ಅವಳನ್ನು ಇಲಾಹಿಬಾಗ್-ಲಾಲ್ ಬಜಾರ್ ಪ್ರದೇಶಕ್ಕೆ ಕರೆದೊಯ್ದು, ಅಲ್ಲಿ ಆಕೆ ಮೇಲೆ ಅತ್ಯಾಚಾರ ನಡೆಸಿ, ಚಿತ್ರಹಿಂಸೆ ನೀಡಿ ನಂತರ ಗುಂಡು ಹಾರಿಸಿ ಸಾಯಿಸಲಾಗಿದೆ. ಮರುದಿನ ಶ್ರೀನಗರದ ಮಲ್ಲಾಬಾಗ್-ಓಮರ್ ಕಾಲೋನಿ ರಸ್ತೆಯಲ್ಲಿ ಸರಳಾದ ಶವ ಪತ್ತೆಯಾಗಿದೆ.
ಈ ಅಪಹರಣ, ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (JKLF) ನ ನಾಯಕ ಮೊಹಮ್ಮದ್ ಯಾಸಿನ್ ಮಲಿಕ್ ಪ್ರಮುಖ ಆರೋಪಿಯಾಗಿದ್ದು, ಇವನ ನಿರ್ದೇಶನದಂತೆಯೇ ಈ ಕೃತ್ಯ ನಡೆದಿದೆ ಎಂದು ಚಾರ್ಜ್ಶೀಟ್ನಲ್ಲಿ ನಮೂದಿಸಲಾಗಿದೆ.
ಯಾರು ಈ ಯಾಸಿನ್ ಮಲಿಕ್?
ಯಾಸಿನ್ ಮಲಿಕ್ ಜಮ್ಮು ಮತ್ತು ಕಾಶ್ಮೀರದ ಒಬ್ಬ ಪ್ರಮುಖ ಪ್ರತ್ಯೇಕತಾವಾದಿ ನಾಯಕ ಮತ್ತು ಜಮ್ಮು ಕಾಶ್ಮೀರ ಲಿಬರೇಶನ್ ಫ್ರಂಟ್ (JKLF) ಸಂಘಟನೆಯ ಮುಖ್ಯಸ್ಥನಾಗಿದ್ದಾನೆ. ಆರಂಭದ ದಿನಗಳಲ್ಲಿ ಕಾಶ್ಮೀರ ಕಣಿವೆಯಲ್ಲಿ ಸಶಸ್ತ್ರ ಉಗ್ರಗಾಮಿ ಹೋರಾಟವನ್ನು ಮುನ್ನಡೆಸಿದ್ದ ಈತ, 1989ರಲ್ಲಿ ಆಗಿನ ಕೇಂದ್ರ ಗೃಹ ಸಚಿವ ಮುಫ್ತಿ ಮೊಹಮ್ಮದ್ ಸಯೀದ್ ಅವರ ಮಗಳು ರುಬಿಯಾ ಸಯೀದ್ ಅವರ ಅಪಹರಣ ಮತ್ತು 1990ರಲ್ಲಿ ಭಾರತೀಯ ವಾಯುಪಡೆಯ ನಾಲ್ಕು ಅಧಿಕಾರಿಗಳ ಹತ್ಯೆ ಪ್ರಕರಣ ಸೇರಿದಂತೆ ಹಲವು ಗಂಭೀರ ದೇಶದ್ರೋಹಿ ಕೃತ್ಯಗಳಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ.
1994ರ ನಂತರ ತಾನು ಹಿಂಸಾಚಾರದ ಹಾದಿ ಬಿಟ್ಟು ಶಾಂತಿಯುತ ಮತ್ತು ರಾಜತಾಂತ್ರಿಕ ಮಾರ್ಗದ ಮೂಲಕ ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ಹೋರಾಡುವುದಾಗಿ ಘೋಷಿಸಿಕೊಂಡಿದ್ದರೂ, ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಆತನ ಚಟುವಟಿಕೆಗಳು ನಿರಂತರವಾಗಿ ಮುಂದುವರಿದಿದ್ದವು.
ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪದ ಮೇಲೆ 2019ರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಯಾಸಿನ್ ಮಲಿಕ್‌ನನ್ನು ಬಂಧಿಸಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ವಿಶೇಷ ಎನ್‌ಐಎ ನ್ಯಾಯಾಲಯದ ಮುಂದೆ ತಾನು ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಗಳು ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ನಿಧಿ ಸಂಗ್ರಹಿಸಿದ್ದಾಗಿ ಮಲಿಕ್ ತಪ್ಪೊಪ್ಪಿಕೊಂಡಿದ್ದನು.
ಇದರ ಆಧಾರದ ಮೇಲೆ ಮೇ 2022ರಲ್ಲಿ ನ್ಯಾಯಾಲಯವು ಆತನಿಗೆ ಜೀವಾವಧಿ ಶಿಕ್ಷೆ ಮತ್ತು ಭಾರಿ ಮೊತ್ತದ ದಂಡವನ್ನು ವಿಧಿಸಿತು. ಸದ್ಯ ಆತನಿಗೆ ಮರಣದಂಡನೆ ವಿಧಿಸಬೇಕೆಂದು ಕೋರಿ ತನಿಖಾ ಸಂಸ್ಥೆಗಳು ಉನ್ನತ ನ್ಯಾಯಾಲಯದಲ್ಲಿ ಕಾನೂನು ಹೋರಾಟವನ್ನು ಮುಂದುವರಿಸಿದ್ದು, ಯಾಸಿನ್ ಮಲಿಕ್ ಪ್ರಸ್ತುತ ದೆಹಲಿಯ ತಿಹಾರ್ ಜೈಲಿನಲ್ಲಿ ಕಠಿಣ ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ, (ಏಜನ್ಸೀಸ್).