ಟಿಎಂಸಿಯ 'ಹೂವು ಮತ್ತು ಹುಲ್ಲು' ಚಿಹ್ನೆ ಬಳಕೆಯನ್ನು ತಡೆಹಿಡಿದ ಭಾರತೀಯ ಚುನಾವಣಾ ಆಯೋಗ 
ದೇಶ

ಮಮತಾ ಬ್ಯಾನರ್ಜಿ ಕೈಜಾರಿದ TMC ನಾಯಕತ್ವ? ‘ಹೂವು-ಹುಲ್ಲು’ ಚಿಹ್ನೆ ಬಳಸದಂತೆ ಚುನಾವಣಾ ಆಯೋಗ ಆದೇಶ! Mamata Banerjee

ವಿನಾಯಕ ನಾಯಕ
ಕೊಲ್ಕತ: ಅಕ್ಟೋಬರ್ 6 ರಂದು ನಡೆಯಲಿರುವ ಉಪಚುನಾವಣೆಯಲ್ಲಿ, ಟಿಎಂಸಿಯ ಅಧಿಕೃತ ಹೆಸರು 'ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್' (AITC) ಪಕ್ಷದ ಚಿಹ್ನೆಯಾಗಿರುವ ಹೂವು ಮತ್ತು ಹುಲ್ಲು (Flowers & Grass) ಗುರುತನ್ನು ಬಳಸದಂದೆ ಚುನಾವಣಾ ಆಯೋಗ ತಾತ್ಕಾಲಿಕ ನಿಷೇಧವನ್ನು ಹೇರಿದೆ.  
ಪಕ್ಷದ ಒಳ ಜಗಳ ಹಾಗೂ ಎರಡು ಬಣಗಳ ನಡುವಿನ ಭುಗಿಲೆದ್ದಿರುವ ಅಧಿಕಾರ ಹಂಚಿಕೆಯ ವಿವಾದದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಈ ಮಧ್ಯಂತರ ಆದೇಶ ಹೊರಡಿಸಿದೆ. ಆದರೆ, ಸುಮಾರು 15 ವರ್ಷಗಳಿಂದ ರಾಜ್ಯದಲ್ಲಿ ಆಡಳಿತ ನಡೆಸಿದ್ದ ಮಮತಾ ಬ್ಯಾನರ್ಜಿ (Mamata Banerjee)  ನೇತೃತ್ವದ ತ್ರಣಮೂಲ ಕಾಂಗ್ರೆಸ್​ ಪಕ್ಷಕ್ಕೆ ಭಾರಿ ಹಿನ್ನಲೆಯಾಗಿದ್ದು, ಟಿಎಂಸಿ ನಾಯಕರು ಚುನಾವಣಾ ಆಯೋಗ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ಏನಿದು ವಿವಾದ? 

ಕಳೆದ ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ಟಿಎಂಸಿಯಲ್ಲಿ ಭಿನ್ನಮತ ಸ್ಫೋಟಗೊಂಡಿತ್ತು. ಪಕ್ಷದ ಆಂತರಿಕ ಬೆಳವಣಿಗೆಯಲ್ಲಿ ಉಂಟಾದ ಬಿರುಕಿನಿಂದಾಗಿ 58 ಬಂಡಾಯ ಶಾಸಕರು ಒಗ್ಗೂಡಿ ರಿತಬ್ರತ ಬ್ಯಾನರ್ಜಿ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿಕೊಂಡಿದ್ದರು. ಇದು 28 ವರ್ಷಗಳ ಇತಿಹಾಸವಿರುವ ಟಿಎಂಸಿ ಪಕ್ಷದಲ್ಲಿ ಉಂಟಾದ ಮೊದಲ ದೊಡ್ಡ ವಿಭಜನೆಯಾಗಿತ್ತು.   
ಕೇವಲ ಶಾಸಕರಷ್ಟೇ ಅಲ್ಲದೆ, ಸಂಸತ್ತಿನಲ್ಲೂ ಈ ಬಂಡಾಯ ಪ್ರತಿಧ್ವನಿಸಿತ್ತು. ಹಿರಿಯ ನಾಯಕರ ನೇತೃತ್ವದಲ್ಲಿ ಹಲವು ಸಂಸತ್ ಸದಸ್ಯರು ಕೂಡ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದು ಟಿಎಂಸಿಯನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿತ್ತು. ಈ ಹಿನ್ನಲೆ ಪಕ್ಷದ ಮೇಲಿನ ಹಕ್ಕಿಗಾಗಿ ಮಮತಾ ಬ್ಯಾನರ್ಜಿ ಬಣ ಮತ್ತು ಬಂಡಾಯ ಬಣ ಎರಡೂ ಚುನಾವಣಾ ಆಯೋಗದ ಮೆಟ್ಟಿಲೇರಿದ್ದವು.  

ಆಯೋಗದ ನಿರ್ದೇಶನವೇನು?  

ಅಕ್ಟೋಬರ್ 6 ರಂದು ನಂದಿಗ್ರಾಮ್ ಮತ್ತು ರೆಜಿನಗರ್ ಕ್ಷೇತ್ರಗಳಿಗೆ ಮತ್ತೊಮ್ಮೆ ಚುನಾವಣೆ ನಡೆಯಲಿದ್ದು, ಈ ಚುನಾವನೆಯಲ್ಲಿ ಸ್ಪರ್ಧಿಸುವ, ಯಾವುದೇ ಟಿಎಂಸಿ ಬಣದ ಅಭ್ಯರ್ಥಿ  'ಟಿಎಂಸಿ' ಹೆಸರು ಮತ್ತು 'ಹೂವು-ಹುಲ್ಲು' ಚಿಹ್ನೆಯನ್ನು ಬಳಸುವಂತಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ. 
ಚುನಾವಣೆ ಇನ್ನೇನು ಕೆಲವೇ ದಿನಗಳಲ್ಲಿ ನಡೆಯುವ ಕಾರಣ  ಎರಡೂ ಬಣಗಳು ತುರ್ತಾಗಿ ಬೇರೆ ಹೆಸರು ಮತ್ತು ಮುಕ್ತ ಚಿಹ್ನೆಗಳ ಪಟ್ಟಿಯಿಂದ ಹೊಸ ಚಿಹ್ನೆಗಳನ್ನು ಆಯ್ಕೆ ಮಾಡಿ ಸಲ್ಲಿಸುವಂತೆ ಆಯೋಗ ಸೂಚನೆ ನೀಡಿದೆ. ಆಯೋಗದ ಈ ಸೂಚನೆಯಂತೆ ತೀವ್ರ ಅಸಮಾಧಾನ ಹಾಗೂ ಪ್ರತಿಭಟನೆಯ ನಡುವೆಯೂ ಟಿಎಂಸಿಯ ಬಣಗಳು ರಾತ್ರೋರಾತ್ರಿ ಹೊಸ ಹೆಸರು ಮತ್ತು ಚಿಹ್ನೆಗಳ ಪಟ್ಟಿಯನ್ನು ಕಳುಹಿಸಿಕೊಟ್ಟಿವೆ.

ಮಮತಾ ಬ್ಯಾನರ್ಜಿಗೆ ಭಾರಿ ಹಿನ್ನಡೆ   

1998ರಲ್ಲಿ ಮಮತಾ ಬ್ಯಾನರ್ಜಿ ಕಾಂಗ್ರೆಸ್‌ನಿಂದ ಹೊರಬಂದು ಟಿಎಂಸಿ ಕಟ್ಟಿದಾಗಿನಿಂದಲೂ "ಹೂವು ಮತ್ತು ಹುಲ್ಲು" ಚಿಹ್ನೆಯು ಬಂಗಾಳದ ಮೂಲೆಮೂಲೆಗಳಲ್ಲಿ ಪಕ್ಷದ ಬಲವಾದ ಸಂಕೇತವಾಗಿ ಬೆಳೆದಿತ್ತು. ಕಳೆದ 28 ವರ್ಷಗಳಿಂದ ತಳಮಟ್ಟದಲ್ಲಿ ಜನರ ಮನಸ್ಸಿನಲ್ಲಿ ಬೇರೂರಿದ್ದ ಈ ಗುರುತು ತಾತ್ಕಾಲಿಕವಾಗಿಯಾದರೂ ಕೈತಪ್ಪಿ ಹೋಗುತ್ತಿರುವುದು ಮಮತಾ ಬ್ಯಾನರ್ಜಿ ಅವರಿಗೆ ರಾಜಕೀಯವಾಗಿ ಭಾರೀ ಹಿನ್ನಡೆಯಾಗಿದೆ. ಉಪಚುನಾವಣೆಯ ಅಖಾಡದಲ್ಲಿ ಹೊಸ ಹೆಸರು ಮತ್ತು ಹೊಸ ಚಿಹ್ನೆಯೊಂದಿಗೆ ಮತದಾರರ ಮುಂದೆ ಹೋಗುವುದು ಪಕ್ಷಕ್ಕೆ ಅಗ್ನಿಪರೀಕ್ಷೆಯಾಗಲಿದೆ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ, (ಏಜೆನ್ಸೀಸ್​).