ಇರಾನ್ ಮೇಲೆ ಅಮೆರಿಕದ ದಾಳಿ ‘ಯುದ್ಧ ಅಪರಾಧ’! UN ತನಿಖಾ ವರದಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ! UN Report on Iran US War

ಇರಾನ್ ಮೇಲಿನ ಅಮೆರಿಕದ ದಾಳಿಗಳು ಯುದ್ಧಾಪರಾಧಗಳು ಎಂದ ವಿಶ್ವಸಂಸ್ಥೆಯ ತನಿಖಾ ವರದಿ
ಇರಾನ್ ಮೇಲಿನ ಅಮೆರಿಕದ ದಾಳಿಗಳು ಯುದ್ಧಾಪರಾಧಗಳು ಎಂದ ವಿಶ್ವಸಂಸ್ಥೆಯ ತನಿಖಾ ವರದಿ
Published on
ಜಿನೀವಾ: ಜಿನೀವಾದಲ್ಲಿರುವ ವಿಶ್ವಸಂಸ್ಥೆ (UN) ಯ ಮಾನವ ಹಕ್ಕುಗಳ ಮಂಡಳಿಗೆ ಸಿದ್ಧಪಡಿಸಲಾದ ವಿಶೇಷ ತನಿಖಾ ವರದಿಯಲ್ಲಿ, ಫೆಬ್ರವರಿ 2026 ರಲ್ಲಿ ಇರಾನ್‌ನಲ್ಲಿ ನಡೆದ ಎರಡು ಭೀಕರ ಮಿಲಿಟರಿ ದಾಳಿಗಳ (UN Report on Iran US War) ಹಿಂದೆ ಅಮೆರಿಕದ ಪಡೆಗಳ ಕೈವಾಡವಿದೆ ಎಂಬುದಕ್ಕೆ ಬಲವಾದ ಸಾಕ್ಷ್ಯಗಳಿವೆ ಎಂದು ಗಂಭೀರ ಆರೋಪ ಮಾಡಲಾಗಿದೆ. ಅಷ್ಟೇ ಅಲ್ಲದೆ, ಈ ದಾಳಿಗಳನ್ನು ‘ಯುದ್ಧ ಅಪರಾಧಗಳು’ ಎಂದು ಅಧಿಕೃತವಾಗಿ ಪರಿಗಣಿಸಲಾಗಿದೆ.
ಯುದ್ಧದ ಕಾರ್ಮೋಡ ಹಾಗೂ ಆಂತರಿಕ ಸಂಘರ್ಷಗಳ ನಡುವೆ ಮುಗ್ಧ ಜೀವಗಳು ಬಲಿಯಾಗಿರುವ ಈ ಪ್ರಕರಣ ಈಗ ಜಾಗತಿಕ ಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿದೆ.

ಮಿನಾಬ್ ಶಾಲೆಯ ಮೇಲಿನ ಭೀಕರ ಕ್ಷಿಪಣಿ ದಾಳಿ

ಫೆಬ್ರವರಿ 28, 2026 ರಂದು ಇರಾನ್‌ನ ಹಾರ್ಮೋಜ್ಗನ್ ಪ್ರಾಂತ್ಯದ ಮಿನಾಬ್‌ನಲ್ಲಿರುವ ಶಜರೆಹ್ ತಯ್ಯೆಬೆಹ್ ಪ್ರಾಥಮಿಕ ಶಾಲೆಯ ಮೇಲೆ ಅತ್ಯಂತ ನಿಖರವಾದ ವಾಯುದಾಳಿ ನಡೆದಿತ್ತು. ಈ ಹೇಯ ಕೃತ್ಯದಲ್ಲಿ ಸುಮಾರು 120 ಶಾಲಾ ಮಕ್ಕಳು ಸೇರಿದಂತೆ ಒಟ್ಟು 150ಕ್ಕೂ ಹೆಚ್ಚು ಅಮಾಯಕರು ಸಾವನ್ನಪ್ಪಿದ್ದರು.
ವಿಶ್ವಸಂಸ್ಥೆಯ ತನಿಖಾ ಸಮಿತಿಯ ವರದಿಯ ಪ್ರಕಾರ, ಆ ಶಾಲೆಯು ಸ್ಪಷ್ಟವಾಗಿ ಗುರುತಿಸಬಹುದಾದ ನಾಗರಿಕ ವಲಯವಾಗಿತ್ತು ಮತ್ತು ಅಲ್ಲಿ ಯಾವುದೇ ರೀತಿಯ ಮಿಲಿಟರಿ ಚಟುವಟಿಕೆಗಳು ನಡೆಯುತ್ತಿರಲಿಲ್ಲ. ಹಿರಿಯ ಇರಾನಿನ ಕಮಾಂಡರ್ ಒಬ್ಬರು ಆಸುಪಾಸಿನಲ್ಲಿದ್ದಾರೆ ಎಂಬ ಅಮೆರಿಕನ್ ಗುಪ್ತಚರ ಇಲಾಖೆಯ ಅನುಮಾನದ ಮೇರೆಗೆ, ಯಾವುದೇ ಸರಿಯಾದ ಪರಿಶೀಲನೆ ಮಾಡದೆ ಕ್ಷಿಪಣಿಯನ್ನು ಉಡಾಯಿಸಲಾಗಿದೆ. ನಾಗರಿಕ ಜೀವಗಳ ಸುರಕ್ಷತೆಯನ್ನು ಗಾಳಿಗೆ ತೂರಿ ಅಮೆರಿಕ ನಡೆಸಿದ ಈ ದಾಳಿಯನ್ನು ಯುಎನ್ ವಿವೇಚನಾರಹಿತ ಯುದ್ಧ ಅಪರಾಧ ಎಂದು ಬಣ್ಣಿಸಿದೆ.
ಇದೇ ವೇಳೆ, ಲ್ಯಾಮರ್ಡ್ ಪ್ರದೇಶದ ಕ್ರೀಡಾಂಗಣದ ಮೇಲೆ ನಡೆದ ಮತ್ತೊಂದು ದಾಳಿಯಲ್ಲಿ 22 ನಾಗರಿಕರು ಸಾವನ್ನಪ್ಪಿ, ಸುತ್ತಮುತ್ತಲಿನ ಮನೆಗಳು ಧ್ವಂಸವಾಗಿದ್ದವು. ಇದನ್ನು ಕೂಡ ಯುಎನ್ ಗಂಭೀರ ಯುದ್ಧ ಅಪರಾಧ ಎಂದು ಘೋಷಿಸಿದೆ.

ಇರಾನ್ ಸರ್ಕಾರದ ವಿರುದ್ಧವೂ ಅಪರಾಧ ಆರೋಪ

ಒಂದೆಡೆ ಅಮೆರಿಕದ ದಾಳಿಯನ್ನು ತರಾಟೆಗೆ ತೆಗೆದುಕೊಂಡಿರುವ ವಿಶ್ವಸಂಸ್ಥೆ, ಮತ್ತೊಂದೆಡೆ ಇರಾನ್ ಸರ್ಕಾರದ ದೇಶೀಯ ದಮನಕಾರಿ ನೀತಿಗಳ ವಿರುದ್ಧವೂವು ಚಾಟಿ ಬೀಸಿದೆ. ಕಳೆದ ಡಿಸೆಂಬರ್ ಅಂತ್ಯದಲ್ಲಿ ಇರಾನ್‌ನಲ್ಲಿ ಭುಗಿಲೆದ್ದ ರಾಷ್ಟ್ರವ್ಯಾಪಿ ಆರ್ಥಿಕ ಮತ್ತು ಸರ್ಕಾರಿ ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಇರಾನಿನ ಭದ್ರತಾ ಪಡೆಗಳು ನಾಗರಿಕರ ಮೇಲೆ ಮೃಗೀಯ ದಾಳಿ ನಡೆಸಿವೆ ಎಂದಿದೆ.
ಕಾನೂನುಬಾಹಿರ ಹತ್ಯೆಗಳು, ಅಮಾನುಷ ಚಿತ್ರಹಿಂಸೆ, ಅನಿಯಂತ್ರಿತ ಬಂಧನಗಳು ಮತ್ತು ಬಲವಂತದ ಕಣ್ಮರೆಗಳನ್ನು ಎಸಗಿರುವ ಇರಾನ್ ಸರ್ಕಾರದ ಕ್ರಮಗಳನ್ನು ‘ಮಾನವೀಯತೆಯ ವಿರುದ್ಧದ ಅಪರಾಧಗಳು’ ಎಂದು ಯುಎನ್ ತಜ್ಞರು ಖಂಡಿಸಿದ್ದಾರೆ. ಇರಾನಿನ ಅಧಿಕೃತ ಮೂಲಗಳ ಪ್ರಕಾರವೇ 3,038ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 25,000 ಜನರು ಗಾಯಗೊಂಡಿದ್ದಾರೆ. ಆದರೆ ನೈಜ ಸಾವುನೋವುಗಳ ಸಂಖ್ಯೆ ಇದಕ್ಕಿಂತಲೂ ಹಲವು ಪಟ್ಟು ಹೆಚ್ಚಿದೆ ಎಂದು ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ.

ಅಮೆರಿಕ ಮತ್ತು ಇರಾನ್ ಮೌನ; ರಾಜತಾಂತ್ರಿಕ ವಲಯದಲ್ಲಿ ತಳಮಳ

ವಿಶ್ವಸಂಸ್ಥೆಯ ಈ ಸ್ಫೋಟಕ ವರದಿ ಹೊರಬಂದ ತಕ್ಷಣವೇ ಜಿನೀವಾದಲ್ಲಿರುವ ಅಮೆರಿಕ ಅಥವಾ ಇರಾನ್‌ನ ಯಾವುದೇ ತಕ್ಷಣದ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಅಮೆರಿಕದ ಪೆಂಟಗನ್ ಈ ಬಗ್ಗೆ ಆಂತರಿಕ ತನಿಖೆ ನಡೆಸುತ್ತಿರುವುದಾಗಿ ಈ ಹಿಂದೆ ಹೇಳಿಕೊಂಡಿದ್ದರೂ, ತಮ್ಮ ಕಾರ್ಯಾಚರಣೆಗಳು ಸಶಸ್ತ್ರ ಸಂಘರ್ಷದ ಕಾನೂನಿಗೆ ಬದ್ಧವಾಗಿವೆ ಎಂದು ಸಮರ್ಥಿಸಿಕೊಳ್ಳುತ್ತಾ ಬಂದಿದೆ. ಮತ್ತೊಂದೆಡೆ ಇರಾನ್ ಸರ್ಕಾರವು ತನ್ನ ಮೇಲಿನ ವ್ಯವಸ್ಥಿತ ಹಕ್ಕುಗಳ ಉಲ್ಲಂಘನೆಯ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದು, ವಿದೇಶಿ ಪ್ರಚೋದನೆಯಿಂದಲೇ ಇಂತಹ ಅಶಾಂತಿ ಉಂಟಾಗಿದೆ ಎಂದು ವಾದಿಸುತ್ತಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net