ಲಖನೌ: ಉತ್ತರ ಪ್ರದೇಶದ ರಾಂಪುರ ಜಿಲ್ಲೆಯಲ್ಲಿ ಮಧ್ಯರಾತ್ರಿ ಪ್ರೇಯಸಿಯೊಂದಿಗೆ ( Girlfriend ) ಕೋಣೆಯಲ್ಲಿ ಸಿಕ್ಕಿಬಿದ್ದ ಪ್ರಿಯಕರನಿಗೆ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಸೇರಿ ಮದುವೆ ಮಾಡಿಸಿರುವ ಘಟನೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅಜೀಮ್ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಖೌದ್ ಚೌಕಿ ಬಳಿಯ ಗ್ರಾಮವೊಂದರಲ್ಲಿ ಮಂಗಳವಾರ ತಡರಾತ್ರಿ ಈ ಹೈಡ್ರಾಮಾ ನಡೆದಿದೆ.
ಸಿವಿಲ್ ಲೈನ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಗ್ರಾಮವೊಂದರ ಯುವಕನೊಬ್ಬ ಅಜೀಮ್ನಗರ ಪ್ರದೇಶದ ಯುವತಿಯನ್ನು ಕಳೆದ ಹಲವು ಸಮಯದಿಂದ ಗಾಢವಾಗಿ ಪ್ರೀತಿಸುತ್ತಿದ್ದು, ಇಬ್ಬರೂ ಜತೆಯಾಗಿ ಬಾಳುವ ನಿರ್ಧಾರ ಮಾಡಿದ್ದರು. ಇದೇ ಪ್ರೀತಿಯ ಗುಂಗಿನಲ್ಲಿ ಮಂಗಳವಾರ ತಡರಾತ್ರಿ ಪ್ರಿಯಕರನು ತನ್ನ ಪ್ರೇಯಸಿಯನ್ನು ಭೇಟಿಯಾಗಲು ಯಾರಿಗೂ ತಿಳಿಯದಂತೆ ಆಕೆಯ ಮನೆಯ ಬಾಗಿಲಿಗೆ ಬಂದು ನಿಂತಿದ್ದನು.
ಮನೆಯವರ ಕಣ್ಣು ತಪ್ಪಿಸಿ ಪ್ರೇಯಸಿಗೆ ಕರೆ ಮಾಡಿದ ಯುವಕ, ಆಕೆಯ ಮೂಲಕ ಮನೆಯ ಬಾಗಿಲನ್ನು ತೆಗೆಸಿ ಒಳಗೆ ಪ್ರವೇಶಿಸಿದ್ದಾನೆ. ಬಳಿಕ ಪ್ರೇಮಿಗಳಿಬ್ಬರೂ ಮನೆಯ ಒಳಗಿನ ಕೋಣೆಯೊಂದಕ್ಕೆ ತೆರಳಿ ಬಾಗಿಲು ಹಾಕಿಕೊಂಡು ಏಕಾಂತದಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಕೋಣೆಯೊಳಗಿಂದ ಸಣ್ಣದಾಗಿ ಶಬ್ದ ಕೇಳಿಬಂದಿದ್ದು, ಇದರಿಂದ ಎಚ್ಚರಗೊಂಡ ಯುವತಿಯ ಕುಟುಂಬಸ್ಥರು ತಕ್ಷಣವೇ ಮನೆಯ ದೀಪಗಳನ್ನು ಆನ್ ಮಾಡಿ ಅತ್ತಿತ್ತ ಹುಡುಕಾಟ ನಡೆಸಿದ್ದಾರೆ.
ಅನುಮಾನಗೊಂಡ ಮನೆಯವರು ಕೋಣೆಯ ಬಳಿ ಹೋಗಿ ನೋಡಿದಾಗ, ಪ್ರೇಮಿಗಳಿಬ್ಬರೂ ಸಂಶಯಾಸ್ಪದ ಸ್ಥಿತಿಯಲ್ಲಿ ಒಟ್ಟಿಗೆ ಇರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಈ ದೃಶ್ಯವನ್ನು ನೋಡುತ್ತಿದ್ದಂತೆಯೇ ಯುವತಿಯ ಮನೆಯವರು ತೀವ್ರ ಆಕ್ರೋಶಗೊಂಡಿದ್ದು, ಮನೆಯಲ್ಲಿ ದೊಡ್ಡ ಮಟ್ಟದ ಗದ್ದಲ ಶುರುವಾಗಿದೆ.
ಮನೆಯೊಳಗಿನ ಗಲಾಟೆ ಮತ್ತು ಕಿರುಚಾಟದ ಶಬ್ದ ಕೇಳಿ ಅಕ್ಕಪಕ್ಕದ ಮನೆಯವರು ಹಾಗೂ ಗ್ರಾಮಸ್ಥರು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದಾರೆ. ಈ ವೇಳೆ ಯುವತಿಯ ಕುಟುಂಬಸ್ಥರು ಮತ್ತು ಸ್ಥಳೀಯರು ಸೇರಿ ಯುವಕನನ್ನು ಹಿಡಿದು ಥಳಿಸಿದ್ದು, ತಮ್ಮ ಕೋಪವನ್ನು ಹೊರಹಾಕಿದ್ದಾರೆ. ಬಳಿಕ ಪ್ರಿಯಕರನು ಅಲ್ಲಿಂದ ತಪ್ಪಿಸಿಕೊಂಡು ಹೋಗದಂತೆ ತಡೆಯಲು ಆತನನ್ನು ಅದೇ ಕೋಣೆಯೊಳಗೆ ಕೂಡಿಹಾಕಿ ಬೀಗ ಜಡಿದಿದ್ದಾರೆ. ಇತ್ತ ತಮ್ಮ ಮಗ ಯುವತಿಯ ಮನೆಯಲ್ಲಿ ಸಿಕ್ಕಿಬಿದ್ದು ಬಂಧಿಯಾಗಿರುವ ವಿಷಯ ತಿಳಿಯುತ್ತಿದ್ದಂತೆಯೇ, ಯುವಕನ ಕುಟುಂಬಸ್ಥರು ಗ್ರಾಮದ ಕೆಲವು ಗಣ್ಯರು ಮತ್ತು ಹಿರಿಯರೊಂದಿಗೆ ತಕ್ಷಣವೇ ಯುವತಿಯ ಮನೆಗೆ ದೌಡಾಯಿಸಿದ್ದಾರೆ.
ಯುವಕನ ಕಡೆಯವರು ಬರುತ್ತಿದ್ದಂತೆಯೇ ಎರಡೂ ಕುಟುಂಬಗಳು ಮತ್ತು ಗ್ರಾಮದ ಹಿರಿಯರ ನಡುವೆ ಸಂಧಾನ ಮಾತುಕತೆ ಹಾಗೂ ಪಂಚಾಯ್ತಿ ಆರಂಭವಾಯಿತು. ರಾತ್ರಿಯಿಂದ ಮರುದಿನ ಬೆಳಗಿನವರೆಗೆ ಸುಮಾರು 12 ಗಂಟೆಗಳ ಕಾಲ ಗ್ರಾಮದಲ್ಲಿ ಉದ್ವಿಗ್ನ ಹಾಗೂ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಸುದೀರ್ಘ 12 ಗಂಟೆಗಳ ಪಂಚಾಯ್ತಿಯ ಬಳಿಕ ಎರಡೂ ಕುಟುಂಬಗಳು ಒಮ್ಮತದ ನಿರ್ಧಾರಕ್ಕೆ ಬಂದಿದ್ದು, ಪೊಲೀಸರಿಗೆ ಯಾವುದೇ ದೂರು ನೀಡದೆ ಪ್ರೇಮಿಗಳಿಬ್ಬರಿಗೂ ಮದುವೆ ಮಾಡಿಸಲು ಒಪ್ಪಿಕೊಂಡಿವೆ. ಅದರಂತೆ ಕೋಣೆಯಲ್ಲಿ ಬಂಧಿಯಾಗಿದ್ದ ಪ್ರಿಯಕರನನ್ನು ಬಿಡುಗಡೆಗೊಳಿಸಿ, ಗ್ರಾಮದ ದೇವಸ್ಥಾನಕ್ಕೆ ಕರೆದೊಯ್ದು ಹಿರಿಯರ ಸಮ್ಮುಖದಲ್ಲಿ ಹಾರ ಬದಲಾಯಿಸಿ ಶಾಸ್ತ್ರೋಕ್ತವಾಗಿ ವಿವಾಹ ನೆರವೇರಿಸಲಾಯಿತು; ಮದುವೆಯ ಬಳಿಕ ಯುವಕನು ತನ್ನ ನವವಧುವನ್ನು ಸಂತೋಷದಿಂದ ಮನೆಗೆ ಕರೆದೊಯ್ದಿದ್ದಾನೆ, (ಏಜೆನ್ಸೀಸ್).