2,000 ರೂ. ಮೇಲ್ಪಟ್ಟ ವಹಿವಾಟುಗಳಿಗೆ ಎಂಡಿಆರ್ ಶುಲ್ಕ ವಿಧಿಸುವ ಸರ್ಕಾರದ ನೂತನ ತಿದ್ದುಪಡಿ
- ಭಾರತದಲ್ಲಿ ಉಚಿತ UPI ಪಾವತಿ ವ್ಯವಸ್ಥೆಗೆ ಬ್ರೇಕ್ ಬೀಳುತ್ತಾ?
- 2,000 ರೂ. ಮೇಲ್ಪಟ್ಟ ವಹಿವಾಟುಗಳಿಗೆ ಎಂಡಿಆರ್ ಶುಲ್ಕ ವಿಧಿಸುವ ಸರ್ಕಾರದ ನೂತನ ತಿದ್ದುಪಡಿ
- ಯುಪಿಐ ಪಾವತಿಗಳಲ್ಲಿ ದೊಡ್ಡ ಬದಲಾವಣೆ ತರಲು ಮುಂದಾದ ಕೇಂದ್ರ ಸರ್ಕಾರ
ನವದೆಹಲಿ: ಭಾರತದಲ್ಲಿ ಡಿಜಿಟಲ್ ಕ್ರಾಂತಿ ಸೃಷ್ಟಿಸಿರುವ ಯುಪಿಐ
(UPI Payments) ಪಾವತಿ ವ್ಯವಸ್ಥೆಯಲ್ಲಿ ಮುಂಬರುವ ದಿನಗಳಲ್ಲಿ ಮಹತ್ವದ ಬದಲಾವಣೆಯೊಂದು ಜಾರಿಗೆ ಬರುವ ಸಾಧ್ಯತೆಯಿದೆ.
ದೇಶದ ಉಚಿತ ಯುಪಿಐ ವ್ಯವಸ್ಥೆಗೆ ಸಂಬಂಧಿಸಿದಂತೆ ಅತಿ ದೊಡ್ಡ ನೀತಿ ಬದಲಾವಣೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಸಂಸತ್ತಿನಲ್ಲಿ ಮಹತ್ವದ ತಿದ್ದುಪಡಿ ಮಂಡಿಸಿದೆ.
ಭವಿಷ್ಯದಲ್ಲಿ ಆಯ್ದ ಯುಪಿಐ ವಹಿವಾಟುಗಳ ಮೇಲೆ ವ್ಯಾಪಾರಿ ಶುಲ್ಕ ಅಂದರೆ ಎಂಡಿಆರ್ (MDR) ವಿಧಿಸಲು ಅನುಕೂಲವಾಗುವಂತೆ 'ಪಾವತಿ ಮತ್ತು ವಸಾಹತು ವ್ಯವಸ್ಥೆಗಳ ಕಾಯ್ದೆ'ಗೆ ತಿದ್ದುಪಡಿಗಳನ್ನು ತರಲಾಗಿದೆ. ಸದ್ಯಕ್ಕೆ ಯಾವುದೇ ಹೊಸ ಶುಲ್ಕಗಳನ್ನು ಅಧಿಕೃತವಾಗಿ ಜಾರಿಗೆ ತಂದಿಲ್ಲವಾದರೂ, ಈ ಪ್ರಸ್ತಾವಿತ ಕಾನೂನು ಬದಲಾವಣೆಯು ಡಿಜಿಟಲ್ ಪಾವತಿ ವಲಯಕ್ಕೆ ಹೊಸ ದಾರಿ ಮಾಡಿಕೊಟ್ಟಿದೆ.
ಯಾರಿಗೆ ಅನ್ವಯವಾಗಲಿದೆ ಈ ಶುಲ್ಕ?
ಕೇಂದ್ರೀಯ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಈ ತಿದ್ದುಪಡಿಯಿಂದಾಗಿ ತಕ್ಷಣವೇ ಗ್ರಾಹಕರ ಜೇಬಿಗೆ ಕತ್ತರಿ ಬೀಳುವುದಿಲ್ಲ. ಆದರೆ, ಭವಿಷ್ಯದಲ್ಲಿ ಸರ್ಕಾರಕ್ಕೆ ಅನಿಸಿದರೆ MDR ಜಾರಿಗೊಳಿಸಲು ಈ ಕಾನೂನು ಚೌಕಟ್ಟು ದಾರಿ ಮಾಡಿಕೊಡುತ್ತದೆ. ವರದಿಗಳ ಪ್ರಕಾರ, ರೂ. 2,000 ಕ್ಕಿಂತ ಹೆಚ್ಚಿನ ಮೊತ್ತದ ಯುಪಿಐ ವಹಿವಾಟುಗಳ ಮೇಲೆ ಶೇ. 0.3 ರಿಂದ ಶೇ. 0.5 ರಷ್ಟು ಎಂಡಿಆರ್ ಶುಲ್ಕ ವಿಧಿಸುವ ಕುರಿತು ಚರ್ಚೆ ನಡೆಸಲಾಗುತ್ತಿದೆ.
ಆದರೆ, ಈ ನಿಯಮ ಎಲ್ಲರಿಗೂ ಅನ್ವಯವಾಗುವುದಿಲ್ಲ; ವಾರ್ಷಿಕ ರೂ. 1.5 ಕೋಟಿಗಿಂತ ಹೆಚ್ಚು ವಹಿವಾಟು ನಡೆಸುವ ದೊಡ್ಡ ವ್ಯಾಪಾರಿಗಳಿಗೆ ಮಾತ್ರ ಇದು ಅನ್ವಯಿಸುವ ನಿರೀಕ್ಷೆಯಿದೆ. ಇದರರ್ಥ ಸಾಮಾನ್ಯ ಗ್ರಾಹಕರು ಅಥವಾ ಸಣ್ಣಪುಟ್ಟ ಅಂಗಡಿಕಾರರು ಹಾಗೂ ಚಿಲ್ಲರೆ ವ್ಯಾಪಾರಿಗಳು ಯಾವುದೇ ಶುಲ್ಕವಿಲ್ಲದೆ ಎಂದಿನಂತೆ ಉಚಿತವಾಗಿ ಯುಪಿಐ ಪಾವತಿಗಳನ್ನು ಮುಂದುವರಿಸಬಹುದು.
ಎಂಡಿಆರ್ (MDR) ಎಂದರೇನು?
ನಾವು ಅಂಗಡಿಗಳಲ್ಲಿ ಕಾರ್ಡ್ ಮೂಲಕ ಹಣ ಪಾವತಿಸಿದಾಗ, ಈ ಪೇಮೆಂಟ್ ಮಾಡುವ ವ್ಯವಸ್ಥೆಯನ್ನು ನಿರ್ವಹಿಸಲು ಬ್ಯಾಂಕುಗಳು ಮತ್ತು ಪಾವತಿ ಕಂಪನಿಗಳು ವ್ಯಾಪಾರಿಯಿಂದ ಪಡೆದುಕೊಳ್ಳುವ ಶುಲ್ಕವನ್ನು ಎಂಡಿಆರ್ (ಮರ್ಚೆಂಟ್ ಡಿಸ್ಕೌಂಟ್ ರೇಟ್) ಎನ್ನಲಾಗುತ್ತದೆ.
ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್ ಬಳಕೆಗೆ ಶೇ. 1.5 ರಷ್ಟು ಶುಲ್ಕ ವಿಧಿಸಲಾಗುತ್ತದೆ. ಆದರೆ ಇದುವರೆಗೆ ಯುಪಿಐ ಸಂಪೂರ್ಣವಾಗಿ ಈ ಶುಲ್ಕದಿಂದ ಮುಕ್ತವಾಗಿತ್ತು. ಇದೇ ಕಾರಣಕ್ಕೆ ಗ್ರಾಹಕರು ಮತ್ತು ವರ್ತಕರು ಯುಪಿಐ ಅನ್ನು ಹೆಚ್ಚು ಬಳಕೆ ಮಾಡುತ್ತಿದ್ದಾರೆ.
ಈ ಬದಲಾವಣೆಗೆ ಕಾರಣವೇನು?
ಯಾವುದೇ ಶುಲ್ಕವಿಲ್ಲದೆ ಯುಪಿಐ ಸೇವೆಗಳನ್ನು ನಿರಂತರವಾಗಿ ನೀಡುವುದು ತಂತ್ರಜ್ಞಾನ ಕಂಪನಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಉದ್ಯಮದ ಪ್ರಮುಖರು ವಾದಿಸುತ್ತಿದ್ದಾರೆ. ಯುಪಿಐ ವಹಿವಾಟುಗಳಿಂದ ನೇರ ಲಾಭ ಬಾರದ ಕಾರಣ, ಹೊಸ ತಂತ್ರಜ್ಞಾನದ ಅಭಿವೃದ್ಧಿ ಹಾಗೂ ಮೂಲಸೌಕರ್ಯ ವಿಸ್ತರಣೆಗೆ ಹಿನ್ನಡೆಯಾಗುತ್ತಿದೆ ಎಂಬುದು ಇವರ ವಾದವಾಗಿದೆ.
ಪ್ರಸ್ತುತ ಯುಪಿಐ ವಹಿವಾಟುಗಳು ದಾಖಲೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದ್ದು, ಜುಲೈ ತಿಂಗಳಲ್ಲಿ ದೇಶದಲ್ಲಿ 23.6 ಬಿಲಿಯನ್ (23 ಸಾವಿರ ಕೋಟಿ) ವಹಿವಾಟುಗಳು ನಡೆದಿವೆ. ಜೆಫರೀಸ್ ವರದಿ ಪ್ರಕಾರ, 2,000 ರೂಪಾಯಿಗಿಂತ ಹೆಚ್ಚಿನ ವಹಿವಾಟುಗಳು ಒಟ್ಟು ಸಂಖ್ಯೆಯಲ್ಲಿ ಶೇ. 4 ರಷ್ಟಿದ್ದರೂ, ಒಟ್ಟು ಮೌಲ್ಯದಲ್ಲಿ ಶೇ. 67 ರಷ್ಟು ದೊಡ್ಡ ಪಾಲು ಹೊಂದಿವೆ.
ಈ ವಿಭಾಗದಲ್ಲಿ ಸಣ್ಣ ಪ್ರಮಾಣದ ಎಂಡಿಆರ್ ಜಾರಿಗೆ ಬಂದರೆ, ಡಿಜಿಟಲ್ ಪಾವತಿ ಕಂಪನಿಗಳಿಗೆ ವಾರ್ಷಿಕ ಬರೋಬ್ಬರಿ 5,000 ಕೋಟಿಯಿಂದ 10,000 ಕೋಟಿ ರೂ.ಗಳವರೆಗೆ ಆದಾಯ ಹರಿದುಬರಲಿದೆ. ಇದು ಪೇಟಿಎಂ ಹಾಗೂ ಪೈನ್ ಲ್ಯಾಬ್ಸ್‌ನಂತಹ ಕಂಪನಿಗಳಿಗೆ ಭಾರಿ ಲಾಭ ತಂದುಕೊಡಲಿದೆ.
ಸದ್ಯಕ್ಕೆ ಇದು ಕೇವಲ ಕಾನೂನುಬದ್ಧವಾಗಿ ಅನುಮತಿ ಪಡೆದುಕೊಳ್ಳುವ ಹೆಜ್ಜೆಯಷ್ಟೇ ಆಗಿದೆ. ಅಂತಿಮ ದರ ಎಷ್ಟು ಅಥವಾ ಇದು ಯಾವಾಗ ಜಾರಿಗೆ ಬರುತ್ತದೆ ಎಂಬ ಬಗ್ಗೆ ಸರ್ಕಾರ ಇನ್ನೂ ಯಾವುದೇ ಅಧಿಕೃತ ದಿನಾಂಕ ಘೋಷಿಸಿಲ್ಲ. ಅಲ್ಲಿಯವರೆಗೆ ಯುಪಿಐ ವ್ಯವಸ್ಥೆ ಸಂಪೂರ್ಣವಾಗಿ ಉಚಿತವಾಗಿ ಮುಂದುವರಿಯಲಿದೆ,
(ಏಜನ್ಸೀಸ್). #UPI #DigitalPayments #MDRCharges #Economy #Government #Fintech #KannadaNews #Vijayavani