ದೇಶ

ಯಾರ ಶಾಂತಿಗಾಗಿ ನಾನು ಸಹಿ ಹಾಕಬೇಕು?: ಪೀಸ್ ಬಾಂಡ್​ಗೆ ಸಹಿ ಹಾಕಲು ನಿರಾಕರಿಸಿದ ನೇಹಾ ಬೋರಾ | Neha Bora

ಯಾರ ಶಾಂತಿಗಾಗಿ ನಾನು ಸಹಿ ಹಾಕಬೇಕು?, ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ರೆ ಶಾಂತಿ ಭಂಗವೇ ಎಂದು ಪ್ರಶ್ನಿಸಿರುವ ಭಾರತ ವಿದ್ಯಾರ್ಥಿ ಸಂಘದ (AISA) ರಾಷ್ಟ್ರೀಯ ಅಧ್ಯಕ್ಷೆ ನೇಹಾ ಬೋರಾ, ದೆಹಲಿ ಪೊಲೀಸರು ಹೊರಡಿಸಿದ 'ಪೀಸ್​ ಬಾಂಡ್'ಗೆ ಸಹಿ ಹಾಕಲು ನಿರಾಕರಿಸಿದ್ದಾರೆ.

ನವದೆಹಲಿ: ಯಾರ ಶಾಂತಿಗಾಗಿ ನಾನು ಸಹಿ ಹಾಕಬೇಕು?, ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ರೆ ಶಾಂತಿ ಭಂಗವೇ ಎಂದು ಪ್ರಶ್ನಿಸಿರುವ ಭಾರತ ವಿದ್ಯಾರ್ಥಿ ಸಂಘದ (AISA) ರಾಷ್ಟ್ರೀಯ ಅಧ್ಯಕ್ಷೆ ನೇಹಾ ಬೋರಾ, ದೆಹಲಿ ಪೊಲೀಸರು ಹೊರಡಿಸಿದ 'ಪೀಸ್​ ಬಾಂಡ್'ಗೆ ಸಹಿ ಹಾಕಲು ನಿರಾಕರಿಸಿದ್ದಾರೆ.

ಶನಿವಾರ ದೆಹಲಿಯ ಸಿಪಿಐ(ಎಂಎಲ್) ಲಿಬರೇಶನ್ ಪಾರ್ಲಿಮೆಂಟರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ಸರ್ಕಾರವು ಪ್ರತಿಭಟನೆ ನಡೆಸುವ ಮೂಲಭೂತ ಹಕ್ಕನ್ನು ಹತ್ತಿಕ್ಕಲು ಇಂತಹ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ಬಾಂಡ್‌ಗೆ ಸಹಿ ಹಾಕುವ ಮೂಲಕ ನಾನು ಯಾರ ಶಾಂತಿಯನ್ನು ಉಳಿಸಬೇಕು ಎಂದು ಪ್ರಶ್ನಿಸಿದ್ದಾರೆ.

ಪ್ರಜಾಪ್ರಭುತ್ವವಾಗಿರುವ ಪ್ರತಿಭಟನೆಗಳನ್ನು ಹತ್ತಿಕ್ಕಲು ಶಾಂತಿ ಬಾಂಡ್‌ಗಳನ್ನು ಅಸ್ತ್ರವಾಗಿ ಬಳಸಲಾಗುತ್ತಿದೆ. ಈ ಬಾಂಡ್‌ಗೆ ಸಹಿ ಹಾಕಿದರೆ, ನೀವು ಪ್ರತಿಭಟಿಸುವ ನಿಮ್ಮ ಸಾಂವಿಧಾನಿಕ ಹಕ್ಕನ್ನು ಬಿಟ್ಟುಕೊಟ್ಟಂತೆ ಆಗುತ್ತದೆ. ಅದಕ್ಕಾಗಿಯೇ ನಾನು ಅದಕ್ಕೆ ಸಹಿ ಹಾಕುವುದಿಲ್ಲ ಎಂದು ನೇಹಾ ಸ್ಪಷ್ಟಪಡಿಸಿದ್ದಾರೆ.

ಪ್ರತಿಭಟನೆಯ ಸಮಯದಲ್ಲಿ ನಾವು ಶಾಂತಿಯನ್ನು ಭಂಗಗೊಳಿಸಲಿಲ್ಲ, ಆದರೆ ಪೊಲೀಸರು ಲಾಠಿ ಚಾರ್ಜ್ ಮಾಡಿದರು. ಮಹಿಳೆಯರ ಬಟ್ಟೆ ಹರಿದುಹಾಕುವುದು ಮತ್ತು ಪತ್ರಕರ್ತರ ಮೇಲೆ ದಾಳಿ ಮಾಡುವಂತಹ ಹಿಂಸಾಚಾರವನ್ನು ನಡೆಸಿದ್ದಾರೆ ಎಂದು ಆರೋಸಿದ್ದು, ಶಾಂತಿ ಸರ್ಕಾರಕ್ಕೆ ಮಾತ್ರವಲ್ಲ, ಜನರಿಗೆ ಸಹ ಆಗಬೇಕು ಎಂದಿದ್ದಾರೆ.

ಇನ್ನೂ ಪೊಲೀಸ್ ನೋಟಿಸ್ ಅನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದರೂ, ಪ್ರಕರಣದ ಅರ್ಹತೆಯನ್ನು ಅದು ಪರಿಶೀಲಿಸಲಿಲ್ಲ. ನ್ಯಾಯಾಲಯವು ತನಿಖೆಯಲ್ಲಿ ಭಾಗವಹಿಸಲು ಮಾತ್ರ ನಿರ್ದೇಶಿಸಿದೆ ಮತ್ತು ಶೋಕಾಸ್ ನೋಟಿಸ್ ನೀಡುವ ಮೂಲಕ ಯಾರನ್ನೂ ಬಾಂಡ್‌ಗೆ ಸಹಿ ಹಾಕುವಂತೆ ಒತ್ತಾಯಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.

ಅ. 16ರಂದು ಎಸ್​ಐಆರ್​ ವಿರೋಧಿ ಪ್ರತಿಭಟನೆ ವೇಳೆ ನೇಹಾ ಬೋರಾ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು. ಅ. 17ರಂದು ಬಿಎನ್​ಎಸ್ ಸೆಕ್ಷನ್ 126 ರ ಅಡಿಯಲ್ಲಿ ಅವರಿಗೆ ನೋಟಿಸ್ ಜಾರಿ ಮಾಡಿದ್ದರು. ಶಾಂತಿಗೆ ಭಂಗ ತರದಂತೆ ರೂ.10,000 ಮೊತ್ತದ ವೈಯಕ್ತಿಕ ಬಾಂಡ್​ ಮೇಲೆ ಸಹಿ ಒಬ್ಬರ ಜಾಮೀನು ನೀಡುವಂತೆ ಹಾಗೂ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಎದುರು ಹಾಜರಾಗಲು ಆದೇಶಿಸಲಾಗಿತ್ತು.

ಈ ನೋಟಿಸ್ ಪ್ರಶ್ನಿಸಿ ನೇಹಾ ಬೋರಾ ದೆಹಲಿ ಹೈಕೋರ್ಟ್​ ಮೆಟ್ಟಿಲೇರಿದ್ದರು. ಆದ್ರೆ ವಿಚಾರಣೆ ನಡೆಸಿದ ನ್ಯಾ. ಸುಬ್ರಹ್ಮಣ್ಯಂ ಪ್ರಸಾದ್ ಅವರಿದ್ದ ಪೀಠವು, ಅರ್ಜಿಯನ್ನು ವಜಾಗೊಳಿಸಿತ್ತು (ಏಜೆನ್ಸೀಸ್).