

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಾಲ್ಕು ವರ್ಷಗಳ ಬಳಿಕ ಶನಿವಾರ(ಅ. 24) ಜೈ ಸಿಂಗ್ ರಸ್ತೆಯಲ್ಲಿರುವ ದೆಹಲಿ ಪೊಲೀಸ್ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಭೆ ನಡೆಸಿ ರಾಷ್ಟ್ರ ರಾಜಧಾನಿಯ ಕಾನೂನು ಸುವ್ಯವಸ್ಥೆ ಕುರಿತು ಚರ್ಚಿಸಿದ್ದಾರೆ.
2022 ಅಗಸ್ಟ್ 30ರಂದು ಕೊನೆ ಬಾರಿಗೆ ದೆಹಲಿ ಪೊಲೀಸ್ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದ ಶಾ, ಅವರು ಇಂದು ಮಧ್ಯಾಹ್ನ 3 ಗಂಟೆಗೆ ಆಗಮಿಸಿ ಹಿರಿಯ ಅಧಿಕಾರಿಗಳ ಜೊತೆ ಹಲವು ಗಂಟೆಗಳ ಕಾಲ ಸಭೆ ನಡೆಸಿದ್ದಾರೆ. ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಸಹ ಭಾಗಿಯಾಗಿದ್ದರು.
ಜುಲೈ ತಿಂಗಳಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ನಡೆಸಿದ 'ಸಂಸದ್ ಚಲೋ' ಮೆರವಣಿಗೆಯ ವೇಳೆ, ಪ್ರತಿಭಟನಾಕಾರರ ವಿರುದ್ಧ ಅತಿಯಾದ ಬಲಪ್ರಯೋಗ ನಡೆಸಲಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ತೀವ್ರ ಟೀಕೆಗೆ ಒಳಗಾಗಿರುವ ಸಂದರ್ಭದಲ್ಲೇ ಶಾ ಸಭೆ ನಡೆಸಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಮತ್ತು ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ನವೆಂಬರ್ 1ರಂದು ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಮತ್ತು ಇತರ ಇಂಡಿಯಾ ಬ್ಲಾಕ್ ಪಕ್ಷಗಳು ರ್ಯಾಲಿಗೆ ಸಿದ್ಧತೆ ನಡೆಸಿವೆ. ಇದರ ನಡುವೆ ಶಾ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿರುವುದು ಕುತೂಹಲ ಮೂಡಿಸಿದೆ.
ಇನ್ನೂ ಸಭೆಯಲ್ಲಿ ಅಧಿಕಾರಿಗಳು ಅವರಿಗೆ ಪಡೆಯ ಕಾರ್ಯಕ್ಷಮತೆ, ತನಿಖೆಗಳು ಮತ್ತು ಕಾನೂನು ಜಾರಿಗೊಳಿಸುವಲ್ಲಿನ ಪ್ರಮುಖ ಸವಾಲುಗಳ ಕುರಿತು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ (ಏಜೆನ್ಸೀಸ್).