flydubai Co-Pilot: ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನವನ್ನು ಪತನಗೊಳಿಸಲು ಸಂಚು ರೂಪಿಸಿದ್ದ ಒಮಾನ್ ಸಹ-ಪೈಲಟ್ ಹಮಾಮ್ ಅಲ್-ಹಮ್ಮಮಿ, ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ಹಲ್ಲೆ ನಡೆಸಿ ಇಸ್ರೇಲ್‌ನ ಬೆನ್ ಗುರಿಯನ್ ವಿಮಾನ ನಿಲ್ದಾಣದ ಕಟ್ಟಡ ಅಥವಾ ಅಲ್ಲಿ ನಿಲ್ಲಿಸಿದ್ದ ಜೆಟ್‌ಗೆ ವಿಮಾನವನ್ನು ಡಿಕ್ಕಿ ಹೊಡೆಸುವ ಮೂಲಕ 9/11 ಶೈಲಿಯ ಭೀಕರ ದಾಳಿ ನಡೆಸಲು ಯೋಜಿಸಿದ್ದಾಗಿ ಯುಎಇಯಲ್ಲಿ ತನಿಖಾಧಿಕಾರಿಗಳ ಬಳಿ ಒಪ್ಪಿಕೊಂಡಿದ್ದಾನೆಂದು ಇಸ್ರೇಲ್ ಮಾಧ್ಯಮಗಳು ವರದಿ ಮಾಡಿವೆ.
ವಿಮಾನವು ಇಸ್ರೇಲ್ ಸಮೀಪಿಸುತ್ತಿದ್ದಂತೆ ಜೋರ್ಡಾನ್ ವಾಯುಪ್ರದೇಶದ ಮೇಲಿದ್ದಾಗ ಅಲ್-ಹಮ್ಮಮಿ ಕ್ಯಾಪ್ಟನ್ ಮಚ್ಚಾರ್ ಮೇಲೆ ದಾಳಿ ನಡೆಸಿದ್ದನು ಎಂದು ವೈನೆಟ್ ವರದಿ ಮಾಡಿದೆ. ಕೊನೆಯ ಕ್ಷಣದವರೆಗೆ ಕಾಯುವುದರಿಂದ ಯಾರೂ ಪರಿಸ್ಥಿತಿಯನ್ನು ಗ್ರಹಿಸಲು ಸಾಧ್ಯವಿಲ್ಲ ಹಾಗೂ ತನ್ನ ಯೋಜನೆಯನ್ನು ತಡೆಯಲು ಅಥವಾ ಎಚ್ಚರಿಕೆ ನೀಡಲು ಯಾರಿಗೂ ಸಮಯ ಸಿಗುವುದಿಲ್ಲ ಎಂದು ಆತ ನಂಬಿದ್ದನು. ವಿಮಾನ ನಿಲ್ದಾಣದಲ್ಲಿ ತನ್ನ ಯೋಜನೆ ವಿಫಲಗೊಂಡರೆ, ಟೆಲ್ ಅವೀವ್‌ನ ಗಗನಚುಂಬಿ ಕಟ್ಟಡದ ಮೇಲೆ ಅಥವಾ ಜೋರ್ಡಾನ್‌ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ವಿಮಾನವನ್ನು ಅಪ್ಪಳಿಸಲು ಸಂಚು ಹೂಡಿದ್ದೆ ಎಂದೂ ಆತ ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ.
ಈ ನಡುವೆ ಭಾರತೀಯ ಪೈಲಟ್ ತೀವ್ರವಾಗಿ ಗಾಯಗೊಂಡಿದ್ದರೂ ಸಹ ಧೈರ್ಯಗೆಡದೆ ತಿರುಗಿ ಬಿದ್ದು, ಕಾಕ್‌ಪಿಟ್ ಬಾಗಿಲು ತೆರೆದರು. ಇದರಿಂದಾಗಿ ಸಿಬ್ಬಂದಿ ಹಾಗೂ ಪ್ರಯಾಣಿಕರು ಒಳಗೆ ಬಂದು ಸಹ-ಪೈಲಟ್ ಅನ್ನು ಕಟ್ಟಿಹಾಕಿ ವಿಮಾನದ ನಿಯಂತ್ರಣವನ್ನು ತಮ್ಮ ಕೈಗೆ ತೆಗೆದುಕೊಂಡರು. ಬಳಿಕ, ಆ ಸಮಯದಲ್ಲಿ ಕೆಲಸದಲ್ಲಿಲ್ಲದ (ಆಫ್-ಡ್ಯೂಟಿ) ಇಬ್ಬರು ಪೈಲಟ್‌ಗಳು ಸೇರಿ ಆ ವಿಮಾನವನ್ನು ಸೌದಿ ಅರೇಬಿಯಾದಲ್ಲಿ ಸುರಕ್ಷಿತವಾಗಿ ಕೆಳಗೆ ಇಳಿಸಿದರು.
ಅಬುಧಾಬಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ಯಾಪ್ಟನ್ ಮಚ್ಚಾರ್ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಮಾತನಾಡುವಾಗ ಘಟನೆಯ ಬಗ್ಗೆ ವಿವರಿಸಿದ್ದಾರೆ. ತನ್ನ ತಲೆಯ ಮೇಲೆ ಕೊಡಲಿಯಿಂದ (ಕ್ರ್ಯಾಶ್ ಆಕ್ಸ್) ಬಲವಾಗಿ ಹೊಡೆಯುವ ಮುನ್ನ ಅಲ್-ಹಮ್ಮಮಿ ತಾನು ಪ್ರಾರ್ಥನೆ ಮಾಡಿದ್ದ ಎಂದು ಕ್ಯಾಪ್ಟನ್ ತಿಳಿಸಿದ್ದಾರೆ. ಆರಂಭದಲ್ಲಿ ವಿಮಾನಕ್ಕೆ ಹೊರಗಿನಿಂದ ಏನಾದರೂ ಬಡಿದಿರಬಹುದು ಎಂದು ತಾನು ಭಾವಿಸಿದ್ದೆ ಎಂದಿರುವ ಅವರು, ಆದರೆ ಪೆಟ್ಟುಗಳು ಹಾಗೆಯೇ ಮುಂದುವರಿದವು. ಆಗ ಇದು ವಿಮಾನದ ಸಮಸ್ಯೆಯಲ್ಲ, ಕಾಕ್‌ಪಿಟ್‌ನಲ್ಲಿ ನನ್ನ ಜೊತೆ ಇರುವ ವ್ಯಕ್ತಿಯೇ ನನ್ನ ಮೇಲೆ ದಾಳಿ ಮಾಡುತ್ತಿದ್ದಾನೆ ಎಂಬುದು ನನಗೆ ತಿಳಿಯಿತು ಎಂದು ಹೇಳಿದ್ದಾರೆ.
ಅಲ್-ಹಮ್ಮಮಿ ಮೂಲತಃ ಜುಲೈ ತಿಂಗಳಲ್ಲಿಯೇ ತನ್ನ ಯೋಜನೆಯನ್ನು ಕಾರ್ಯಗತಗೊಳಿಸಲು ಉದ್ದೇಶಿಸಿದ್ದನು, ಆದರೆ ವಿಮಾನ ಸಿಬ್ಬಂದಿಯೊಬ್ಬರೊಂದಿಗೆ ತನಗಿದ್ದ ಸ್ನೇಹದಿಂದಾಗಿ ಕೊನೆಯ ಕ್ಷಣದಲ್ಲಿ ತನ್ನ ಕಾರ್ಯಾಚರಣೆಯನ್ನು ಮುಂದೂಡಿದ್ದನು ಎಂದು ಇಸ್ರೇಲ್‌ನ ಚಾನೆಲ್ 12 ರ ಮೂಲಗಳು ತಿಳಿಸಿವೆ. ಫ್ಲೈದುಬೈಗೆ ಸೇರಿದ ನಂತರ ಆತ ಇತ್ತೀಚಿನ ತಿಂಗಳುಗಳಲ್ಲಿ ಹಲವಾರು ಬಾರಿ ಬೆನ್ ಗುರಿಯನ್ ವಿಮಾನ ನಿಲ್ದಾಣಕ್ಕೆ ಹಾರಾಟ ನಡೆಸಿದ್ದನು. ಜೂನ್ ತಿಂಗಳಲ್ಲಿ ಇಸ್ರೇಲ್‌ಗೆ ಭೇಟಿ ನೀಡಿದಾಗ ತನ್ನ ಸಂಪೂರ್ಣ ಗಮನವನ್ನು ಬೇಹುಗಾರಿಕೆ ನಡೆಸಲು ಮತ್ತು ದಾಳಿಯ ಯೋಜನೆಗೆ ಮೀಸಲಿಟ್ಟಿದ್ದೆ ಎಂದು ಆತ ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ.
ಚಾನೆಲ್ 13 ವರದಿಯ ಪ್ರಕಾರ, ಇಸ್ರೇಲ್ ಮತ್ತು ಯುಎಇ ನಡುವೆ ವಿಮಾನಗಳನ್ನು ನಿರ್ವಹಿಸುವ ಕಡಿಮೆ ವೆಚ್ಚದ ಎಮಿರೇಟ್ಸ್ ಏರ್‌ಲೈನ್ಸ್ ಆದ ಫ್ಲೈದುಬೈ ಸೇರುವ ಮುಂಚೆಯೇ ಒಮಾನ್ ಸಹ-ಪೈಲಟ್ ಈ ದಾಳಿಯನ್ನು ಯೋಜಿಸಿದ್ದನು. ಯಾವ ಏರ್‌ಲೈನ್ಸ್ ಟೆಲ್ ಅವೀವ್‌ಗೆ ಹಾರುತ್ತದೆ ಎಂದು ನಾನು ಪರಿಶೀಲಿಸಿದೆ. ಅದಕ್ಕಾಗಿಯೇ ನಾನು ಫ್ಲೈದುಬೈ ಅನ್ನು ಆಯ್ಕೆ ಮಾಡಿದೆ. ನನ್ನನ್ನು ನೇಮಿಸಿಕೊಳ್ಳುವ ಮುಂಚೆಯೇ ನಾನು ಇದನ್ನು ಯೋಜಿಸಿದ್ದೆ ಎಂದು ಆತ ತನಿಖಾಧಿಕಾರಿಗಳಿಗೆ ತಿಳಿಸಿದ್ದನು ಎನ್ನಲಾಗಿದೆ.
ಹಮ್ಮಮಿ (29) ಒಮಾನ್ ಪ್ರಜೆಯಾಗಿದ್ದು, ಒಮಾನ್ ತಂದೆ ಮತ್ತು ಸಿರಿಯನ್ ತಾಯಿಗೆ ಜನಿಸಿದ್ದಾನೆ. ಸಿರಿಯನ್ ಅಂತರ್ಯುದ್ಧದ ಸಮಯದಲ್ಲಿ ಆತ ಸಿರಿಯಾದಲ್ಲಿ ವಾಸಿಸುತ್ತಿದ್ದನು ಮತ್ತು ಅಲ್-ಖೈದಾವನ್ನು ಬೆಂಬಲಿಸಿ ಆನ್‌ಲೈನ್‌ನಲ್ಲಿ ಸಂದೇಶಗಳನ್ನು ಪೋಸ್ಟ್ ಮಾಡಿದ್ದನು ಎಂದು ವರದಿಯಾಗಿದೆ. ಒಮಾನ್ ಪೈಲಟ್ ಅನ್ನು ಫ್ಲೈದುಬೈ ಭದ್ರತಾ ಅಪಾಯಕಾರಿ ಎಂದು ಗುರುತಿಸುವಲ್ಲಿ ಹೇಗೆ ವಿಫಲವಾಯಿತು ಎಂಬುದು ಸಹ ಸ್ಪಷ್ಟವಾಗಿಲ್ಲ. ಪ್ರಯಾಣಿಕರು ಮತ್ತು ಸಿಬ್ಬಂದಿಯ ರಾಷ್ಟ್ರೀಯತೆ ಸೇರಿದಂತೆ ಅವರ ವಿವರಗಳನ್ನು ಎಮಿರೇಟ್ಸ್ ಅಧಿಕಾರಿಗಳು ಹಂಚಿಕೊಂಡಿದ್ದರು ಎಂದು ಪ್ರಾದೇಶಿಕ ಅಧಿಕಾರಿಗಳು ಅಸೋಸಿಯೇಷನ್ ಪ್ರೆಸ್ಗೆ ತಿಳಿಸಿದ್ದಾರೆ(ಏಜೆನ್ಸೀಸ್).