Piyush Mishra: ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಹಿರಿಯ ನಟ ನಾಸಿರುದ್ದೀನ್ ಶಾ ಭಾಗವಹಿಸಿದ್ದನ್ನು ಪ್ರಶ್ನಿಸಿರುವ ನಟ ಹಾಗೂ ಬರಹಗಾರ ಪಿಯೂಷ್ ಮಿಶ್ರಾ, ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಹಂಚಿಕೊಂಡು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವಿಡಿಯೋ ಸಂದೇಶದಲ್ಲಿ ಮಾತನಾಡಿರುವ ಪಿಯೂಷ್ ಮಿಶ್ರಾ, ಹೌದು ನಾಸಿರ್ ಸಾಬ್, ನಿಮಗೆ ನನ್ನ ನಮಸ್ಕಾರಗಳು. ನಾನು ನಿಮ್ಮ ಹಳೆಯ ಪರಿಚಯಸ್ಥ ಪಿಯೂಷ್ ಮಿಶ್ರಾ ಎಂದು ಹೇಳುತ್ತಾ, ಸಾಬ್, ಇತ್ತೀಚೆಗೆ ಟೆಲ್ ಅವೀವ್‌ನಿಂದ ಹೊರಟಿದ್ದ ಫ್ಲೈದುಬೈ ವಿಮಾನದಲ್ಲಿ ದೊಡ್ಡ ಅಪಘಾತವೊಂದು ತಪ್ಪಿದೆ. ಸ್ಮಿತ್ ಮಚ್ಚಾರ್ ಅವರು ತಮ್ಮ ಧೈರ್ಯದಿಂದ 180 ಜನರ ಪ್ರಾಣವನ್ನು ಉಳಿಸಿದ್ದಾರೆ. ದಯವಿಟ್ಟು ಇದರ ಬಗ್ಗೆಯೂ ತುಸು ಮಾತನಾಡಿ, ಅವರಿಗೆ ಅಭಿನಂದನೆಗಳನ್ನು ತಿಳಿಸಿ ಸಾಬ್ ಎಂದು ಕುಟುಕಿದ್ದಾರೆ.
ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಯಲ್ಲಿ ಇತ್ತೀಚೆಗೆ ನಡೆದ ವಿದ್ಯಾರ್ಥಿ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರು ನಡೆಸಿದ ಕ್ರಮದ ಬಗ್ಗೆಯೂ ನಾಸಿರುದ್ದೀನ್ ಶಾ ಅವರು ಯಾವುದೇ ಕಾಮೆಂಟ್ ಮಾಡಿಲ್ಲ ಎಂದು ಮಿಶ್ರಾ ಪ್ರಶ್ನಿಸಿದ್ದಾರೆ. ಈ ಹಿಂದೆ ವಿದ್ಯಾರ್ಥಿ ಚಳುವಳಿಗಳ ಕುರಿತು ಶಾ ಅವರು ಆಡಿದ್ದ ಮಾತುಗಳನ್ನು ಮಿಶ್ರಾ ಈ ವೇಳೆ ನೆನಪಿಸಿಕೊಂಡಿದ್ದಾರೆ. ನೀವು ಹಿಂದೆ, ಈ ವಿದ್ಯಾರ್ಥಿಗಳು ನನಗೆ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (NSD) ಮತ್ತು ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (FTII) ಕಲಿಸಿದಷ್ಟೇ ಪಾಠ ಕಲಿಸಿದ್ದಾರೆ ಎಂದು ಹೇಳಿದ್ದೀರಿ. ಈ ವಿದ್ಯಾರ್ಥಿಗಳು ಯಾವಾಗ ನಟನಾ ಶಿಕ್ಷಕರಾದರು ಎಂಬುದು ನನಗೆ ತಿಳಿಯುತ್ತಿಲ್ಲ. ಅದು ನಿಮಗೆ ಸಿಕ್ಕರೆ ದಯವಿಟ್ಟು ಬಹಿರಂಗಪಡಿಸಿ ಎಂದು ಮಿಶ್ರಾ ವ್ಯಂಗ್ಯವಾಡಿದ್ದಾರೆ.
ಅಲ್ಲದೆ, ಈ ಹಿಂದೆ ತಾವು ಜಾರ್ಖಂಡ್‌ನಲ್ಲಿ ತಳಮಟ್ಟದ ಪರಿಹಾರ ಕಾರ್ಯಗಳ ಕುರಿತು ನಾಸಿರುದ್ದೀನ್ ಶಾ ಅವರ ಸಹಾಯವನ್ನು ಕೋರಿದಾಗ, ಅವರು ಯಾವುದೇ ಭೌತಿಕ ಸಹಾಯವನ್ನು ನೀಡದೆ ಬದಲಿಗೆ ಪಾಕಿಸ್ತಾನಿ ಕವಿಯೊಬ್ಬರ ಕವಿತೆಯನ್ನು ಕಳುಹಿಸಿಕೊಟ್ಟಿದ್ದರು ಎಂದು ಮಿಶ್ರಾ ಆರೋಪಿಸಿದ್ದಾರೆ. ನಾನು ಜಾರ್ಖಂಡ್‌ಗಾಗಿ ನಿಮ್ಮ ಸಹಾಯ ಕೇಳಿದಾಗ, ನೀವು ನನಗೆ ಪಾಕಿಸ್ತಾನಿ ಕವಿಯ ಕವಿತೆಯನ್ನು ಕಳುಹಿಸಿಕೊಟ್ಟಿದ್ದೀರಿ. ಅಲ್ಲಿನ ಜನರಿಗೆ ಕವಿತೆಯ ಅಗತ್ಯವಿರಲಿಲ್ಲ. ಅವರಿಗೆ ಗೋಧಿ ಹಿಟ್ಟು, ಬೇಳೆ, ರೊಟ್ಟಿ, ಬೆಲ್ಲ ಸೇರಿದಂತೆ ಇತರ ಸೌಲಭ್ಯಗಳು ಬೇಕಾಗಿದ್ದವು ಎಂದು ಮಿಶ್ರಾ ಹೇಳಿದ್ದಾರೆ.
ವಿದ್ಯಾರ್ಥಿಗಳ ಸಮಸ್ಯೆಗಳ ವಿಷಯದಲ್ಲಿ ಪಿಯೂಷ್ ಮಿಶ್ರಾ ಸ್ವತಃ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅವರು ಈ ಹಿಂದೆ ಜಾರ್ಖಂಡ್‌ಗೆ ಪ್ರಯಾಣ ಬೆಳೆಸಿ, ಪ್ರತಿಭಟನಾ ನಿರತ ವಿದ್ಯಾರ್ಥಿಗಳೊಂದಿಗೆ ಒಗ್ಗಟ್ಟು ಪ್ರದರ್ಶಿಸಿದ್ದರು. ಅಲ್ಲದೆ, ತಳಮಟ್ಟದಲ್ಲಿ ಅವರ ಪ್ರತಿಭಟನೆಗಳಲ್ಲಿ ಭಾಗವಹಿಸಿ, ಚಲನಚಿತ್ರ ರಂಗವು ಆ ಹೋರಾಟಕ್ಕೆ ಬೆಂಬಲವನ್ನು ನೀಡದಿರುವುದನ್ನು ಪ್ರಶ್ನಿಸಿದ್ದರು.
ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್, ತಮ್ಮ ಸಹ-ಪೈಲಟ್ ನಡೆಸಲು ಯತ್ನಿಸಿದ್ದ 9/11 ಶೈಲಿಯ ವಾಯು ಮಾರ್ಗದ ವಿಮಾನ ಅಪಘಾತದ ಸಂಚನ್ನು ವಿಫಲಗೊಳಿಸುವ ಮೂಲಕ ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಕಾಕ್‌ಪಿಟ್‌ನಲ್ಲಿ ನಡೆದ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದರೂ ಸಹ, ಕ್ಯಾಪ್ಟನ್ ಮಚ್ಚಾರ್ ಅವರು ಬಾಗಿಲು ತೆರೆಯುವ ಸ್ವಿಚ್ ಅನ್ನು ಆನ್ ಮಾಡುವಲ್ಲಿ ಯಶಸ್ವಿಯಾಗಿದ್ದರು. ಇದರಿಂದ ಸಿಬ್ಬಂದಿ ಹಾಗೂ ಪ್ರಯಾಣಿಕರು ಒಳಗೆ ಪ್ರವೇಶಿಸಿ ಮಧ್ಯಪ್ರವೇಶಿಸಲು ಸಾಧ್ಯವಾಯಿತು ಮತ್ತು ವಿಮಾನವನ್ನು ಸುರಕ್ಷಿತವಾಗಿ ಬೇರೆಡೆಗೆ ತಿರುಗಿಸಿ 174 ಪ್ರಯಾಣಿಕರ ಪ್ರಾಣವನ್ನು ಉಳಿಸಲಾಯಿತು.
ಚುನಾವಣಾ ಆಯೋಗದ ವಿರುದ್ಧ ಸಿಜೆಪಿ ಪ್ರತಿಭಟನೆ ನಡೆಸುತ್ತಿದ್ದು, ಇದರ ಬೆನ್ನಲ್ಲೇ ಮುಂಬೈನಲ್ಲಿ ನಾಸಿರುದ್ದೀನ್ ಶಾ ಅವರಿಂದ ಈ ಭೇಟಿ ನಡೆದಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡದಿದ್ದರೆ, ಅಕ್ಟೋಬರ್ 10 ರಂದು ಹೊಸ ದೆಹಲಿಯ ಜಂತರ್ ಮಂತರ್‌ನಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸುವುದಾಗಿ ಆ ಪಕ್ಷವು ಘೋಷಿಸಿದೆ. ಜೊತೆಗೆ ಕೋಲ್ಕತ್ತಾ, ಬೆಂಗಳೂರು ಮತ್ತು ರಾಂಚಿ ಸೇರಿದಂತೆ ಇತರ ಪ್ರಮುಖ ನಗರಗಳಿಗೂ ತಮ್ಮ ಪ್ರತಿಭಟನೆಯನ್ನು ವಿಸ್ತರಿಸುವ ಯೋಜನೆಗಳನ್ನು ಹಾಕಿಕೊಂಡಿದೆ(ಏಜೆನ್ಸೀಸ್).