ಕಠ್ಮಂಡು: ನೇಪಾಳದ ಟಿಬೆಟ್‌ನ ಗಡಿಯಲ್ಲಿರುವ ರಸುವಾ ಜಿಲ್ಲೆಯಲ್ಲಿ ಬುಧವಾರ(ಆ. 26) ಸಂಭವಿಸಿದ ಹಠಾತ್ ಪ್ರವಾಹ ದುರಂತದಲ್ಲಿ(Nepal flood tragedy) ಮಡಿದವರ ಸಂಖ್ಯೆ 332ಕ್ಕೆ ಏರಿಕೆಯಾಗಿದ್ದು, 288 ಭಾರತೀಯರು ಸೇರಿ ಒಟ್ಟು 1500 ಮಂದಿ ಕಾಣೆಯಾಗಿದ್ದಾರೆ. ಮತ್ತು 21 ಜನ ಭಾರತೀಯರನ್ನು ರಕ್ಷಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಈ ಕುರಿತು ಮಾತನಾಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಟಿಬೆಟ್‌ನ ಚೀನಾದ ಗಡಿಯಲ್ಲಿ ಹಲವಾರು ಭಾರತೀಯರು ಇನ್ನೂ ಸಿಲುಕಿಕೊಂಡಿದ್ದಾರೆ. 200 ಕ್ಕೂ ಹೆಚ್ಚು ಭಾರತೀಯರು ಸಹಾಯ ಕೋರಿದ್ದು, ಅವರಲ್ಲಿ 95 ಮಂದಿ ಡಾರ್ಚೆನ್‌ನಲ್ಲಿದ್ದಾರೆ.
ರಕ್ಷಿಸಲ್ಪಟ್ಟ 21 ಭಾರತೀಯರು ತಮಿಳುನಾಡಿನವರಾಗಿದ್ದು, ಅವರನ್ನು ಭಾರತಕ್ಕೆ ಕರೆತರಲಾಗುತ್ತಿದೆ. ಸಂಪರ್ಕ ಕಡಿತಗೊಂಡಿರುವ 288 ಭಾರತೀಯರ ಪೈಕಿ, ನೇಪಾಳದ ಪ್ರವಾಹ ಪೀಡಿತ ಪ್ರದೇಶವೊಂದಾದ ತ್ರಿಶೂಲಿಯಲ್ಲಿರುವ ವಿದ್ಯುತ್ ಯೋಜನೆಯೊಂದರಲ್ಲಿ ಕೆಲಸ ಮಾಡುತ್ತಿರುವ 73 ಮಂದಿಯೂ ಸೇರಿದ್ದಾರೆ ಎಂದು ತಿಳಿಸಿದ್ದಾರೆ.
ಭೋಟಿ ಕೋಶಿ ನದಿಯ ಉಪನದಿಯಾದ ಲ್ಹೆಂಡೆ ನದಿಗೆ ಹಿಮ ಕುಸಿದು ನೀರು ತಡೆದು ನಿಂತಿತ್ತು. ಆ ತಡೆಗೋಡೆ ಒಮ್ಮೆಲೆ ಒಡೆದುಬಿದ್ದಿದ್ದರಿಂದ ಈ ಭೀಕರ ವಿಕೋಪ ಸಂಭವಿಸಿದೆ. ರಸುವಾ ಜೊತೆಗೆ ನೆರೆಯ ನುವಾಕೋಟ್ ಮತ್ತು ಧಾಡಿಂಗ್ ಜಿಲ್ಲೆಗಳ ಕೆಲವು ಭಾಗಗಳ ಮೇಲೆ ಪರಿಣಾಮ ಬೀರಿದೆ. ನೀರಿನ ರಭಸಕ್ಕೆ ವಾಹನಗಳು, ಸರಕುಗಳು, ಸೇತುವೆಗಳು ಮತ್ತು ಇತರ ಮೂಲಸೌಕರ್ಯಗಳನ್ನು ಕೊಚ್ಚಿ ಹೋಗಿವೆ.
ನೇಪಾಳ ವಿದೇಶಾಂಗ ಸಚಿವ ಶಿಶಿರ್ ಖನಾಲ್ ಅವರು, ಅಧಿಕಾರಿಗಳು ಇನ್ನೂ ದುರಂತದ ಸಂಪೂರ್ಣ ವ್ಯಾಪ್ತಿಯನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ನೇಪಾಳ ಮತ್ತು ಟಿಬೆಟ್‌ನಾದ್ಯಂತ ಕನಿಷ್ಠ 800 ವಿದೇಶಿಯರು ಸೇರಿದಂತೆ ಸುಮಾರು 1,500 ಜನರು ಕಾಣೆಯಾಗಿದ್ದಾರೆ. ಸಾವಿರಾರು ಕುಟುಂಬಗಳು ಮನೆಗಳನ್ನು ಕಳೆದುಕೊಂಡಿವೆ ಎಂದು ಹೇಳಿದ್ದಾರೆ.
ಭಾರತ ಪರಿಹಾರ
ದುರಂತದ ಭೀಕರತೆ ತಿಳಿಯುತ್ತಿದ್ದಂತೆ ಜಗತ್ತಿನಾದ್ಯಂತ ನೆರವು ಹರಿದುಬರುತ್ತಿದೆ. ಭಾರತ ಮೊದಲ ಕಂತಿ 10 ಟನ್, ಎರಡನೇ ಕಂತಿನಲ್ಲಿ 37.5 ಟನ್ ಮಾನವೀಯ ಪರಿಹಾರ ಸಾಮಗ್ರಿಗಳು, ಅಮೆರಿಕ 5 ಲಕ್ಷ ಡಾಲರ್ ತುರ್ತು ನೆರವು ಘೋಷಿಸಿದ್ದರೆ, ರೆಡ್ ಕ್ರಾಸ್ ಸಂಸ್ಥೆಯು 14 ಲಕ್ಷ ಡಾಲರ್ ಪರಿಹಾರ ಹಣ ಬಿಡುಗಡೆ ಮಾಡಿದೆ (ಏಜೆನ್ಸೀಸ್).