ಹೈಕೋರ್ಟ್ ನ್ಯಾಯಾಧೀಶೆ ಸ್ವರ್ಣಕಾಂತ ಶರ್ಮಾ ಮತ್ತು ಮಾಜಿ ಸಿಎಂ ಕೇಜ್ರಿವಾಲ್ 
ದೇಶ

ಅಬಕಾರಿ ನೀತಿ ಹಗರಣ ಪ್ರಕರಣ; ನನ್ನ ಕರ್ತವ್ಯ ಪೂರೈಸುತ್ತೇನೆ; ವಿಚಾರಣೆಯಿಂದ ಹಿಂದೆ ಸರಿಯಲ್ಲ ಎಂದ ನ್ಯಾ.ಸ್ವರ್ಣಕಾಂತ ಶರ್ಮಾ | Justice Swarna Kanta Sharma

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯುವಂತೆ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿ 21 ಮಂದಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ(Justice Swarna Kanta Sharma), ನನ್ನ ಕರ್ತವ್ಯವನ್ನು ನಾನೂ ಪೂರೈಸುತ್ತೇನೆ, ಆಧಾರರಹಿತ ಆರೋಪಗಳಿಂದ ವಿಚಾರಣೆಯಿಂದ ಹಿಂದೆ ಸರಿಯಲ್ಲ ಎಂದು ಹೇಳಿದ್ದಾರೆ.
ಅಬಕಾರಿ ನೀತಿ ಪ್ರಕರಣದಲ್ಲಿ ಮಾಜಿ ಸಿಎಂ ಕೇಜ್ರಿವಾಲ್, ಡಿಸಿಎಂ ಸಿಸೋಡಿಯಾ ಸೇರಿ 21 ಮಂದಿಯನ್ನು ಖುಲಾಸೆಗೊಳಿಸಿದ ಫೆ. 27ರಂದು ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್​ಗೆ ಸಿಬಿಐ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುತ್ತಿದ್ದು, ತೀರ್ಪನ್ನು ಪರಿಶೀಲಿಸುವ ಅಗತ್ಯವಿದೆ ಎಂದು ನ್ಯಾ. ಸ್ವರ್ಣಕಾಂತ ಶರ್ಮಾ ಅವರ ಪೀಠ ಮಾ. 09ರಂದು ನೋಟಿಸ್ ನೀಡಿತ್ತು.
ಬಳಿಕ ಪ್ರಕರಣವನ್ನು ನ್ಯಾ. ಸ್ವರ್ಣಕಾಂತ ಶರ್ಮಾಅವರ ಪೀಠದಿಂದ ವರ್ಗಾಯಿಸುವಂತೆ ಕೇಜ್ರಿವಾಲ್ ಸೇರಿ 21 ಆರೋಪಿಗಳು ಹೈಕೋರ್ಟ್ ಮುಖ್ಯನ್ಯಾಯಾಮೂರ್ತಿಗೆ ಪತ್ರ ಬರೆದಿದ್ದರು. ಆದರೆ ಮುಖ್ಯನ್ಯಾಯಮೂರ್ತಿಗಳು ಅದನ್ನು ತಿರಸ್ಕರಿಸಿದ್ದರು. ನ್ಯಾಯಾಧೀಶರ ಬಳಿಯೇ ಅದನ್ನು ಮನವರಿಕೆ ಮಾಡುವಂತೆ ಸೂಚಿಸಿದ್ದರು. ಈ ಹಿನ್ನೆಲೆ ಸ್ವತಃ ಕೇಜ್ರಿವಾಲ್ ನ್ಯಾ. ಸ್ವರ್ಣಕಾಂತ ಶರ್ಮಾ ಅವರ ನಿಷ್ಪಕ್ಷಪಾತತೆಯನ್ನು ಪ್ರಶ್ನಿಸಿದ್ದರು.
ಈ ಕುರಿತು ವಾದ ಪ್ರತಿವಾದ ಆಲಿಸಿ ಸೋಮವಾರ(ಏ. 20) ಅಂತಿಮ ಆದೇಶ ಹೊರಡಿಸಿ ಅವರು, ಯಾವುದೇ ಪುರಾವೆಗಳಿಲ್ಲದೆ ನ್ಯಾಯಾಧೀಶರ ವಿರುದ್ಧ ದಾವೆ ಹೂಡಲು ದೂರುದಾರರಿಗೆ ಅವಕಾಶ ನೀಡಲಾಗುವುದಿಲ್ಲ. ಪಕ್ಷಪಾತದ ಆಧಾರರಹಿತ ಅನುಮಾನವನ್ನು ಪೂರೈಸಲು ನ್ಯಾಯಾಧೀಶರು ವಿಚಾರಣೆಯಿಂದ ಹಿಂದೆ ಸರಿಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಈ ಅರ್ಜಿಯೂ ಪುರಾವೆಗಳೊಂದಿಗೆ ಬಂದಿಲ್ಲ. ಅನುಮಾನ ಮತ್ತು ಊಹಾಪೋಹಗಳೊಂದಿಗೆ ಮಾತ್ರ ಬಂದಿದೆ. ಯಾವುದೇ ಪುರಾವೆಗಳಿಲ್ಲದೆ ವ್ಯವಸ್ಥೆಯನ್ನು ಹಾನಿಗೊಳಿಸಲು ರಾಜಕಾರಣಿಗಳಿಗೆ ಅವಕಾಶ ನೀಡಲಾಗುವುದಿಲ್ಲ. ನ್ಯಾಯಾಧೀಶರ ಮೇಲಿನ ವೈಯಕ್ತಿಕ ದಾಳಿ ನ್ಯಾಯಾಂಗದ ಮೇಲಿನ ದಾಳಿಯಾಗಿದೆ. ಈ ನ್ಯಾಯಾಲಯವು ವ್ಯವಸ್ಥೆಗಾಗಿ ತನ್ನನ್ನು ತಾನು ಪ್ರತಿನಿಧಿಸುತ್ತದೆ. ನಾನೂ ಎಲ್ಲಿಗೂ ಹೋಗುವುದಿಲ್ಲ. ನನ್ನ ಕರ್ತವ್ಯವನ್ನು ಪೂರ್ಣಗೊಳಿಸಿದ ನಂತರವೇ ಹೋಗುತ್ತೇನೆ ಎಂದಿದ್ದಾರೆ.

ವಿಚಾರಣೆಯಿಂದ ಹಿಂದೆ ಸರಿಯುವಂತೆ ವಾದಿಸಿದ್ದ ಕೇಜ್ರಿವಾಲ್

ಏಪ್ರಿಲ್ 13ರಂದು ಸ್ಚತಃ ಹೈಕೋರ್ಟ್​ನಲ್ಲಿ ನ್ಯಾ. ಸ್ವರ್ಣಕಾಂತ ಶರ್ಮಾ ಅವರನ್ನು ವಿಚಾರಣೆಯಿಂದ ಹಿಂದೆ ಸರಿಯುವಂತೆ ವಾದಿಸಿದ್ದ ಆಪ್ ಮುಖ್ಯಸ್ಥ ಮತ್ತು ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, ನೀವು ಆರ್​ಎಸ್ಎಸ್ ಮತ್ತು ಬಿಜೆಪಿಯ ಅಂಗ ಸಂಸ್ಥೆಯಾದ ಅಖಿಲ ಭಾರತೀಯ ಅಧಿವಕ್ತ ಪರಿಷತ್ ಆಯೋಜಿಸಿದ್ದ 4 ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೀರಿ, ನಿಮ್ಮಿಂದ ನಿಷ್ಪಕ್ಷಪಾತ ನ್ಯಾಯವನ್ನು ನಿರೀಕ್ಷಿಸಬಹುದೇ? ದಯವಿಟ್ಟು ಪ್ರಕರಣದಿಂದ ಹಿಂದೆ ಸರಿಯಿರಿ ಎಂದು ಮನವಿ ಮಾಡಿದ್ದರು.
ದೆಹಲಿ ಅಬಕಾರಿ ನೀತಿ ಪ್ರಕರಣ ರಾಜಕೀಯ ಪ್ರೇರಿತವಾಗಿದ್ದು, ಈಗಾಗಲೇ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದೆ. ವಿಚಾರಣಾ ನ್ಯಾಯಾಲಯವು ಸಿಬಿಐ ತನಿಖೆಯನ್ನು ತಿರಸ್ಕರಿಸಿದೆ. ಆದರೆ ಮಾ. 09ರ ತಮ್ಮ ಪೀಠ, 5 ಸಾವಿರ ಪುಟಗಳಿಗೂ ಹೆಚ್ಚು ಉದ್ದವಾದ ಕೆಳ ನ್ಯಾಯಾಲಯದ ತೀರ್ಪನ್ನು ಕೇವಲ ಐದು ನಿಮಿಷಗಳಲ್ಲಿ ವಜಾಗೊಳಿಸಿದೆ. ಆರ್‌ಎಸ್‌ಎಸ್‌ನ ಕಾನೂನು ವಿಭಾಗ ಎಂದೂ ಕರೆಯಲ್ಪಡುವ ಅಖಿಲ ಭಾರತೀಯ ಅಧಿವಕ್ತ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮಗಳಿಗೆ ನೀವು 4 ಬಾರಿ ಹಾಜರಾಗಿದ್ದೀರಿ. ನಾವು ಅವರ ಸಿದ್ಧಾಂತವನ್ನು ಬಹಿರಂಗವಾಗಿ ವಿರೋಧಿಸುತ್ತಿದ್ದೇವೆ. ಇದರಿಂದ ತಮ್ಮ ಪೀಠದಲ್ಲಿ ನಡೆಯುವ ವಿಚಾರಣೆ ನಿಷ್ಪಕ್ಷಪಾತ ಮತ್ತು ತಟಸ್ಥವಾಗಿರುವುದಿಲ್ಲ ಎಂಬ ಗಂಭೀರ, ಪ್ರಾಮಾಣಿವಾದ ಅನುಮಾನಗಳು ನನಗಿವೆ. ಅದಕ್ಕಾಗಿಯೇ ತಾವು ಮದ್ಯ ನೀತಿ ಪ್ರಕರಣದಲ್ಲಿ ಸಿಬಿಐ ಅರ್ಜಿಯ ವಿಚಾರಣೆಯಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದ್ದರು (ಏಜೆನ್ಸೀಸ್).