ರಾಹುಲ್ ಗಾಂಧಿ ದ್ವಿಪೌರತ್ವ ಆರೋಪ; ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದ ಅಲಹಾಬಾದ್ ಹೈಕೋರ್ಟ್ ಜಡ್ಜ್ ​​| Rahul Gandhi

ರಾಹುಲ್ ಗಾಂಧಿ
ರಾಹುಲ್ ಗಾಂಧಿ
Published on
ಅಲಹಾಬಾದ್: ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi) ವಿರುದ್ಧ ಭಾರತ ಮತ್ತು ಇಂಗ್ಲೆಂಡ್​ ಎರಡು ದೇಶಗಳ ಪೌರತ್ವವನ್ನು ಹೊಂದಿದ ಆರೋಪ ಪ್ರಕರಣದ ವಿಚಾರಣೆಯಿಂದ ಸೋಮವಾರ(ಏ. 20) ಅಲಹಾಬಾದ್ ಹೈಕೋರ್ಟ್​ನ ನ್ಯಾ. ಸುಭಾಷ್ ವಿದ್ಯಾರ್ಥಿ ಹಿಂದೆ ಸರಿದಿದ್ದಾರೆ ಎಂದು ವರದಿಯಾಗಿದೆ.
ಬಾರ್ ಮತ್ತು ಬೆಂಚ್ ವರದಿ ಪ್ರಕಾರ, ನ್ಯಾ. ವಿದ್ಯಾರ್ಥಿ ಅವರು ದೂರುದಾರರ ಸಾಮಾಜಿಕ ಜಾಲತಾಣದ ಪೋಸ್ಟ್​​​ಗಳು ತಮ್ಮನ್ನು ಈ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯುವಂತೆ ಮಾಡಿವೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ವಿರುದ್ಧ ಎಫ್​ಐಆರ್ ದಾಖಲಿಸುವುದನ್ನು ವಿಳಂಬ ಮಾಡಲು ಕಳೆದ ವಾರ ನ್ಯಾಯಾಧೀಶರ ಆದೇಶವೇ ಕಾರಣ ಎಂದು ಪೋಸ್ಟ್​ಗಳಲ್ಲಿ ಟೀಕೆ ಮಾಡಿದ್ದಾರೆ ಎನ್ನಲಾಗಿದೆ.
ಹಿಂದೆ ಸರಿಯುವ ತಮ್ಮ ಹೇಳಿಕೆಯಲ್ಲಿ ನ್ಯಾ. ವಿದ್ಯಾರ್ಥಿ, ಸಾಮಾಜಿಕ ಜಾಲತಾಣಗಳಲ್ಲಿ ಅರ್ಜಿದಾರರು ನೀಡಿರುವ ಸಂದೇಶಗಳು ಅವರು ಈ ನ್ಯಾಯಾಲಯದ ವಿರುದ್ಧ ಆಕ್ಷೇಪಣೆಗಳನ್ನು ವ್ಯಕ್ತಪಡಿಸುತ್ತಿದ್ದಾರೆಂದು ಸೂಚಿಸುತ್ತವೆ. ಮತ್ತು ಈ ನ್ಯಾಯಾಲಯದ ಮೇಲೆ ಅವರು ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಅಂತಹ ಸಂದರ್ಭದಲ್ಲಿ ಈ ವಿಷಯವನ್ನು ಇನ್ಮುಂದೆ ವಿಚಾರಣೆ ಮಾಡುವುದು ಸೂಕ್ತವಲ್ಲ.
ದೂರುದಾರರು ನ್ಯಾಯಾಲಯದ ಮುಂದೆ ಸರಿಯಾದ ನಿಲುವನ್ನು ಮಂಡಿಸುವಲ್ಲಿನ ತಮ್ಮ ತಪ್ಪನ್ನು ಒಪ್ಪಿಕೊಳ್ಳುವ ಬದಲು, ಮುಕ್ತ ನ್ಯಾಯಾಲಯದಲ್ಲಿ ಆದೇಶಿಸಿದ ಆದೇಶವನ್ನು ಅಪ್‌ಲೋಡ್ ಮಾಡದಿದ್ದಕ್ಕಾಗಿ ನ್ಯಾಯಾಲಯವನ್ನು ದೂಷಿಸಿದ್ದಾರೆ ಎಂದು ಹೇಳಿದ್ದಾರೆ.

ಪ್ರಕರಣದ ಹಿನ್ನೆಲೆ

ರಾಹುಲ್ ಗಾಂಧಿ ದ್ವಿಪೌರತ್ವವನ್ನು ಹೊಂದಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಮೂಲದ ಬಿಜೆಪಿ ಕಾರ್ಯಕರ್ತ ಎಸ್ ವಿಘ್ನೇಶ್ ಶಿಶಿರ್ ಪ್ರಕರಣವನ್ನು ದಾಖಲಿಸಿದ್ದಾರೆ. ರಾಹುಲ್ ಗಾಂಧಿ 2003 ಆಗಸ್ಟ್​ನಲ್ಲಿ ಬ್ಯಾಕಾಪ್ಸ್ ಲಿಮಿಟೆಡ್ ಎಂಬ ಕಂಪನಿಯನ್ನು ಸ್ಥಾಪಿಸಿದ್ದಾರೆ. ಮತ್ತು 2005 ಮತ್ತು 2006ರಲ್ಲಿ ಸಲ್ಲಿಸಲಾದ ವಾರ್ಷಿಕ ರಿಟರ್ನ್ಸ್‌ಗಳಲ್ಲಿ ಅವರು ವಿದೇಶಿ ಪೌರತ್ವವನ್ನು ಹೊಂದಿರುವುದ ಕಂಡು ಬಂದಿದೆ. 2009ರಲ್ಲಿ ಆ ಕಂಪನಿಯನ್ನು ಮುಚ್ಚಿದ್ದಾರೆ.
ಈ ಹಿನ್ನೆಲೆ ಭಾರತೀಯ ನ್ಯಾಯ ಸಂಹಿತಾ, ಅಧಿಕೃತ ರಹಸ್ಯ ಕಾಯ್ದೆ, ವಿದೇಶಿಯರ ಕಾಯ್ದೆ ಮತ್ತು ಪಾಸ್‌ಪೋರ್ಟ್ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ರಾಹುಲ್ ಗಾಂಧಿಯವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net