ನವದೆಹಲಿ: 2002ರ ಗೋಧ್ರಾ ಗಲಭೆಗೆ ಕಾರಣವಾಗಿದ್ದ ಸಬರಮತಿ ಎಕ್ಸ್ಪ್ರೆಸ್ ರೈಲಿನ ನಾಲ್ಕು ಬೋಗಿಗಳ ಬೆಂಕಿ ಹೊತ್ತಿಕೊಂಡ ಘಟನೆ ಬಗ್ಗೆ ಸೋನಿಯಾ ಗಾಂಧಿಯವರು ತಮ್ಮ ಆತ್ಮಚರಿತ್ರೆ 'ಬಿಲಾಂಜಿಂಗ್: ಎ ಜರ್ನಿ ಆಫ್ ಲವ್' ಕೃತಿಯಲ್ಲಿ ಉಲ್ಲೇಖಿಸಿದ್ದು, ಬೆಂಕಿ ಹೊತ್ತಿಕೊಂಡ ಕಾರಣವನ್ನು ವಿವಾದಾತ್ಮಕ ಎಂದು ಹೇಳಿದ್ದಾರೆ. ಆದರೆ ಇದಕ್ಕೆ ಪ್ರಕರಣದ ತನಿಖೆ ನಡೆಸಿದ್ದ ಮಾಜಿ ಸಿಬಿಐ ಅಧಿಕಾರಿ ರಾಕೇಶ್ ಅಸ್ಥಾನ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸೋನಿಯಾ ಗಾಂಧಿ ಅವರು ತಮ್ಮ ಆತ್ಮಚರಿತ್ರೆಯಲ್ಲಿ, ಗೋಧ್ರಾದಲ್ಲಿ ಸಬರಮತಿ ಎಕ್ಸ್ಪ್ರೆಸ್ ರೈಲಿನ ನಾಲ್ಕು ಬೋಗಿಗಳಿಗೆ ಬೆಂಕಿ ಹಚ್ಚಿದಾಗ ಗಲಭೆಗಳು ಭುಗಿಲೆದ್ದವು. ಮತ್ತು 59 ಯಾತ್ರಾರ್ಥಿಗಳು ಮೃತಪಟ್ಟರು. ಅಯೋಧ್ಯೆಯಿಂದ ರಾಜ್ಯ ರಾಜಧಾನಿ ಅಹಮದಾಬಾದ್ಗೆ ಹಿಂದಿರುಗುತ್ತಿದ್ದ ಈ ರೈಲಿನಲ್ಲಿ, ರಾಮ ಮಂದಿರ ನಿರ್ಮಾಣಕ್ಕಾಗಿ ಸ್ವಯಂಸೇವಕರಾಗಿ ತೆರಳಿದ್ದ ಹಿಂದೂ 'ಕರಸೇವಕರು' ಇದ್ದರು. ಬೆಂಕಿ ಹತ್ತಿಕೊಂಡ ಕಾರಣ ಇನ್ನೂ ವಿವಾದಾತ್ಮಕವಾಗಿಯೇ ಉಳಿದಿದೆ, ಆದರೆ ಆ ನಂತರ ಉಂಟಾದ ಅಲ್ಲೋಲಕಲ್ಲೋಲವು ರಾಜ್ಯದ ಹಲವು ಭಾಗಗಳಿಗೆ ಹರಡಿತು ಎಂದು ಬರೆದಿದ್ದಾರೆ.
ಈ ಕುರಿತು ಸುದ್ದಿ ಸಂಸ್ಥೆ ಎಎನ್ಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ರಾಕೇಶ್ ಅಸ್ಥಾನ, ವಿಧಿವಿಜ್ಞಾನ ಸಾಕ್ಷ್ಯಗಳ ಮೂಲಕ ಬೆಂಕಿ ಹತ್ತಿಕೊಂಡ ಕಾರಣವನ್ನು ಖಚಿತಪಡಿಸಲಾಗಿದೆ. ತನಿಖಾ ಫಲಿತಾಂಶಗಳ ಬಗ್ಗೆ ಈಗಲೂ ವ್ಯಕ್ತವಾಗುತ್ತಿರುವ ಅನುಮಾನಗಳನ್ನು ರಾಜಕೀಯ ಕಾರಣಗಳಿಗಾಗಿ ಹುಟ್ಟುಹಾಕಲಾಗುತ್ತಿದೆ ಎಂದು ಹೇಳಿದ್ದಾರೆ.
ಸೋನಿಯಾ ಗಾಂಧಿಯವರ ಉಲ್ಲೇಖ ಸಂಪೂರ್ಣವಾಗಿ ತಪ್ಪು. ಸಿಬಿಐ ನಡೆಸಿದ ತನಿಖೆಯು ಅಧಿಕೃತವಾದುದು. ಇದು ನ್ಯಾಯಾಲಯದಲ್ಲಿ ಸಾಬೀತಾಗಿದೆ. ಈಗಲೂ ಯಾರಾದರೂ ಇದರ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿದ್ದರೆ, ಅದಕ್ಕೆ ರಾಜಕೀಯ ಕಾರಣ ಬಿಟ್ಟು ಬೇರೆ ಯಾವುದೇ ವಿವರಣೆ ಇಲ್ಲ ಎಂದಿದ್ದಾರೆ.
ಗೋಧ್ರಾದಲ್ಲಿ ಮೃತಪಟ್ಟವರೆಲ್ಲರೂ ಹಿಂದೂಗಳಾಗಿದ್ದರು. ಆದರೆ, ಮೃತಪಟ್ಟವರು ಯಾರೇ ಆಗಿರಲಿ. ಅವರು ಹಿಂದೂ, ಮುಸ್ಲಿಂ, ಕ್ರೈಸ್ತ ಅಥವಾ ಸಿಖ್ ಸಾವು ಸಾವೇ, ಕೊಲೆ ಕೊಲೆಯೇ. ಆದ್ದರಿಂದ, ನಾವು ಇದನ್ನು ಒಂದು ಅಪರಾಧ ಕೃತ್ಯವೆಂದು ಪರಿಗಣಿಸಿ ತನಿಖೆ ನಡೆಸಿದೆವು. ಆದರೆ ದುರದೃಷ್ಟವಶಾತ್, ಈ ಪ್ರಕರಣವನ್ನು ತಿರುಚಿ, ಮೋದಿಯವರಿಗೆ ಅನುಕೂಲವಾಗುವ ರೀತಿಯಲ್ಲಿ ತನಿಖೆ ನಡೆಸಲಾಗಿದೆ ಎಂಬಂತೆ ಬಿಂಬಿಸುವ ಪ್ರಯತ್ನ ನಡೆಯಿತು ಎಂದು ಹೇಳಿದ್ದಾರೆ.
2002 ಫೆಬ್ರವರಿ 27ರಂದು ಹಿಂದೂ ಕರಸೇವಕರನ್ನು ಕರೆದೊಯ್ಯುತ್ತಿದ್ದ ಸಬರಮತಿ ಎಕ್ಸ್ಪ್ರೆಸ್ಗೆ ಗುಂಪೊಂದು ಬೆಂಕಿ ಹಚ್ಚಿತು. ಇದರ ಪರಿಣಾಮವಾಗಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 59 ಜನರು ಸಾವನ್ನಪ್ಪಿದರು. ಈ ಘಟನೆ ಪರಿಣಾಮವಾಗಿ ಬಳಿಕ ಗುಜರಾತ್ ರಾಜ್ಯದಾದ್ಯಂತ ಕೋಮು ಗಲಭೆಗಳು ನಡೆದು ನೂರಾರು ಜನರು ಸಾವನ್ನಪ್ಪಿದರು.
2011ರಲ್ಲಿ ಸಬರಮತಿ ರೈಲು ಸುಟ್ಟ ಘಟನೆಗೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯವು 31 ಜನರನ್ನು ದೋಷಿಗಳು ಎಂದು ತೀರ್ಪು ನೀಡಿತು. ಬಳಿಕ 2014ರಲ್ಲಿ ಗುಜರಾತ್ ಹೈಕೋರ್ಟ್ 11 ಜನರ ಶಿಕ್ಷೆಯನ್ನು ಎತ್ತಿಹಿಡಿದು ಇತರ 20 ಜನರನ್ನು ಖುಲಾಸೆಗೊಳಿಸಿತು. ಅಂತಿಮವಾಗಿ, ಗೋಧ್ರಾ ರೈಲು ದಹನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗಳು ಸಲ್ಲಿಸಿದ್ದ ಮೇಲ್ಮನವಿಗಳನ್ನು ವಜಾಗೊಳಿಸಿ, ಗುಜರಾತ್ ಹೈಕೋರ್ಟ್ ನೀಡಿದ ತೀರ್ಪನ್ನು ಭಾರತದ ಸುಪ್ರೀಂ ಕೋರ್ಟ್ ಸಹ ಎತ್ತಿಹಿಡಿದಿದೆ (ಏಜೆನ್ಸಿಸ್).