EPFO: ನಿವೃತ್ತಿ ಪಡೆದ ನಂತರವು ಕೈಗೆ ಸಿಗುವ ಪಿಎಫ್ ಹಣವನ್ನು ಒಮ್ಮೆಲೆ ಖಾಲಿ ಮಾಡಬೇಕೆಂಬ ಚಿಂತೆ ಇನ್ಮುಂದೆ ಇರಲಿದೆಯೇ? ತಿಂಗಳಿಗೆ ಅಥವಾ ನಿಗದಿತ ಅವಧಿಗೆ ಸ್ವಲ್ಪ ಸ್ವಲ್ಪ ಹಣ ಪಡೆದುಕೊಳ್ಳುತ್ತಾ, ಉಳಿದ ಮೊತ್ತದ ಮೇಲೂ ಬಡ್ಡಿ ಪಡೆಯುವ ಅವಕಾಶ ಶೀಘ್ರದಲ್ಲೇ ಸಿಗುತ್ತಾ ಎಂಬ ಪ್ರಶ್ನೆಗೆ ಇದೀಗ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಅಸ್ತು ಎನ್ನುವ ಮೂಲಕ ಉತ್ತರಿಸಿದೆ.
ನಿವೃತ್ತ ಉದ್ಯೋಗಿಗಳಿಗೆ ಅನುಕೂಲವಾಗುವಂತೆ ಹೊಸ ವ್ಯವಸ್ಥೆಯೊಂದಕ್ಕೆ ಇಪಿಎಫ್ಓ ಅನುಮೋದನೆ ನೀಡಿದೆ. ಇದರಿಂದ ಪಿಎಫ್ ಹಣವನ್ನು ಕಂತುಗಳಲ್ಲಿ ಹಿಂಪಡೆಯುವ ಜತೆಗೆ, ಉಳಿದ ಹಣವನ್ನು ಇಪಿಎಫ್ಓನಲ್ಲೇ ಹೂಡಿಕೆಯಾಗಿ ಮುಂದುವರಿಸಬಹುದು. ಹಾಗಾದರೆ, ಈ ಹೊಸ ಸೌಲಭ್ಯ ಹೇಗೆ ವರ್ಕ್ ಆಗಲಿದೆ? ಯಾರಿಗೆಲ್ಲ ಲಾಭ ತರಲಿದೆ? ಎಂಬುದರ ಸಂಪೂರ್ಣ ಮಾಹಿತಿ ಹೀಗಿದೆ ನೋಡಿ.
ನಿವೃತ್ತಿಯ ನಂತರ ಪಿಎಫ್ ಖಾತೆಯಲ್ಲಿರುವ ಸಂಪೂರ್ಣ ಹಣವನ್ನು ಒಂದೇ ಸಲ ಹಿಂಪಡೆಯಬೇಕೆಂಬ ನಿಯಮಕ್ಕೆ ಪರ್ಯಾಯವಾಗಿ ಹೊಸ ಆಯ್ಕೆಯೊಂದು ಲಭ್ಯವಾಗಲಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ನಿವೃತ್ತ ಉದ್ಯೋಗಿಗಳು ತಮ್ಮ ಪಿಎಫ್ ಹಣವನ್ನು ಕಂತುಗಳಲ್ಲಿ ಹಿಂಪಡೆಯಲು ಅವಕಾಶ ಕೊಡುವ ವ್ಯವಸ್ಥಿತ ಹಣ ಹಿಂಪಡೆಯುವ ಯೋಜನೆಗೆ (Systematic Withdrawal Plan - SWP) ಗ್ರೀನ್ ಸಿಗ್ನಲ್ ನೀಡಿದೆ.
ಇದರಿಂದ ನಿವೃತ್ತರು ತಮ್ಮ ಅಗತ್ಯಕ್ಕೆ ತಕ್ಕಂತೆ ಹಣ ಪಡೆಯುವುದರ ಜತೆಗೆ, ಖಾತೆಯಲ್ಲಿ ಉಳಿದಿರುವ ಮೊತ್ತದ ಮೇಲೆ ಬಡ್ಡಿಯನ್ನೂ ಗಳಿಸಬಹುದು. ನವೆಂಬರ್ 19ರಂದು ನಡೆದ ಕೇಂದ್ರ ಟ್ರಸ್ಟಿಗಳ ಮಂಡಳಿಯ (CBT) 240ನೇ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. 55 ವರ್ಷ ಮೇಲ್ಪಟ್ಟ ಮತ್ತು ಪಿಎಫ್ ಖಾತೆಯಲ್ಲಿ 5 ಲಕ್ಷ ರೂಪಾಯಿಗಿಂತ ಹೆಚ್ಚು ಹಣ ಹೊಂದಿರುವ ಸುಮಾರು 6.32 ಲಕ್ಷ ಸದಸ್ಯರಿಗೆ ಈ ಸೌಲಭ್ಯದಿಂದ ಪ್ರಯೋಜನವಾಗುವ ನಿರೀಕ್ಷೆಯಿದೆ.
ಈವರೆಗೆ ಬಹುತೇಕ ಉದ್ಯೋಗಿಗಳು ನಿವೃತ್ತಿಯಾದ ಬಳಿಕ ತಮ್ಮ ಪಿಎಫ್ ಖಾತೆಯಲ್ಲಿರುವ ಸಂಪೂರ್ಣ ಹಣವನ್ನು ಒಮ್ಮೆಲೆ ಹಿಂಪಡೆಯುತ್ತಿದ್ದರು. ನಂತರ ಆ ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು, ನಿವೃತ್ತಿ ಜೀವನಕ್ಕೆ ಬೇಕಾದ ಆದಾಯವನ್ನು ಹೇಗೆ ನಿರ್ವಹಿಸಬೇಕು ಎಂಬ ನಿರ್ಧಾರವನ್ನು ಅವರೇ ಕೈಗೊಳ್ಳಬೇಕಾಗಿತ್ತು. ಆದರೀಗ, ಹೊಸ SWP ವ್ಯವಸ್ಥೆಯಡಿ ಪಿಎಫ್ ಹಣವನ್ನು ಒಮ್ಮೆಲೆ ಪಡೆಯುವ ಬದಲು, ನಿಗದಿತ ಅವಧಿಯಲ್ಲಿ ಕಂತುಗಳ ರೂಪದಲ್ಲಿ ಹಿಂಪಡೆಯಬಹುದು. ಹೀಗೆ ವಿತ್ಡ್ರಾ ಮಾಡಿದ ಖಾತೆಯಲ್ಲಿ ಉಳಿದಿರುವ ಹಣ ಇಪಿಎಫ್ಒನಲ್ಲೇ ಮುಂದುವರಿಯಲಿದ್ದು, ಅನ್ವಯವಾಗುವ ಬಡ್ಡಿದರದ ಪ್ರಕಾರ ಬಡ್ಡಿಯನ್ನೂ ಗಳಿಸಲಿದೆ.
1. ನಿಯಮಿತ ಕಂತುಗಳಲ್ಲಿ ಹಣ ಹಿಂಪಡೆಯುವುದು: ಪಿಎಫ್ ಖಾತೆಯಲ್ಲಿರುವ ಒಟ್ಟು ಹಣವನ್ನು ನಿಗದಿತ ಅವಧಿಯಲ್ಲಿ ಸ್ವಲ್ಪ ಸ್ವಲ್ಪವಾಗಿ ಪಡೆಯಬಹುದು.
2. ಭಾಗಶಃ ಮೊತ್ತವನ್ನು ಒಂದೇ ಸಲ ಡ್ರಾ: ಆರಂಭದಲ್ಲೇ ಒಂದು ಭಾಗದ ಹಣವನ್ನು ಹಿಂಪಡೆದು, ಉಳಿದ ಮೊತ್ತವನ್ನು ನಿಗದಿತ ಕಂತುಗಳಲ್ಲಿ ಪಡೆಯಬಹುದು.
3. ಬಡ್ಡಿ ಮಾತ್ರ ಹಿಂಪಡೆಯುವಿಕೆ: ಮೂಲ ಹಣವನ್ನು ಖಾತೆಯಲ್ಲೇ ಉಳಿಸಿಕೊಂಡು, ಅದರಿಂದ ಬರುವ ಬಡ್ಡಿಯನ್ನು ಮಾತ್ರ ಹಿಂಪಡೆಯುವ ಆಯ್ಕೆಯೂ ಇರಬಹುದು.
ಇದಲ್ಲದೆ, ಸದಸ್ಯರು ಬಯಸಿದರೆ ಮಧ್ಯದಲ್ಲೇ ಈ ಯೋಜನೆಯಿಂದ ಹೊರಬಂದು, ಉಳಿದ ಸಂಪೂರ್ಣ ಹಣವನ್ನು ಹಿಂಪಡೆಯಲು ಅವಕಾಶ ನೀಡುವ ಸಾಧ್ಯತೆಯೂ ಇದೆ. ಆದರೆ, ಈ ಎಲ್ಲ ಆಯ್ಕೆಗಳ ಕುರಿತ ಅಂತಿಮ ನಿಯಮಗಳು ಇನ್ನಷ್ಟೇ ಪ್ರಕಟವಾಗಬೇಕಿದೆ.
ಕಂತುಗಳಲ್ಲಿ ಹಣ ಪಡೆಯುತ್ತಿರುವ ಅವಧಿಯಲ್ಲೇ ಪಿಎಫ್ ಖಾತೆದಾರರು ಮೃತಪಟ್ಟರೆ, ಅವರ ಕುಟುಂಬದವರಿಗೂ ಆಯ್ಕೆ ನೀಡುವ ಪ್ರಸ್ತಾಪವಿದೆ. ನಾಮಿನಿ ಅಥವಾ ಅವಲಂಬಿತರು ಖಾತೆಯಲ್ಲಿ ಉಳಿದಿರುವ ಸಂಪೂರ್ಣ ಮೊತ್ತವನ್ನು ಹಿಂಪಡೆಯಬಹುದು ಅಥವಾ ಮೊದಲಿನಂತೆ ಕಂತುಗಳಲ್ಲಿ ಹಣ ಪಡೆಯುವುದನ್ನು ಮುಂದುವರಿಸಬಹುದು ಎಂದು ನಿರೀಕ್ಷಿಸಲಾಗಿದೆ.
ಉದಾಹರಣೆಗೆ, ಒಬ್ಬ ಉದ್ಯೋಗಿ ನಿವೃತ್ತಿಯಾಗುವಾಗ ಅವರ ಪಿಎಫ್ ಖಾತೆಯಲ್ಲಿ 30 ಲಕ್ಷ ರೂಪಾಯಿ ಇದೆ ಎಂದಾದರೆ, ಈಗಿನ ವ್ಯವಸ್ಥೆಯಲ್ಲಿ ಅವರು ಸಂಪೂರ್ಣ 30 ಲಕ್ಷ ರೂ. ಅನ್ನು ಡ್ರಾ ಮಾಡಿಕೊಂಡು, ನಂತರ ಅದನ್ನು ಎಲ್ಲಿ ಹೂಡಿಕೆ ಮಾಡಬೇಕು ಎಂಬುದನ್ನು ನಿರ್ಧರಿಸಬಹುದು. ಆದರೆ, ಹೊಸ SWP ಸೌಲಭ್ಯ ಜಾರಿಗೆ ಬಂದರೆ, ಅವರು ಸಂಪೂರ್ಣ ಹಣವನ್ನು ಒಮ್ಮೆಲೆ ಪಡೆಯುವ ಬದಲು ಕಂತುಗಳಲ್ಲಿ ಹಿಂಪಡೆಯಬಹುದು. ಉಳಿದ ಹಣ ಇಎಫ್ಒನಲ್ಲೇ ಮುಂದುವರಿದು ಬಡ್ಡಿ ಗಳಿಸಲಿದೆ. ಇದರಿಂದ ನಿವೃತ್ತಿಯ ನಂತರದ ಮಾಸಿಕ ಖರ್ಚುಗಳನ್ನು ನಿರ್ವಹಿಸಲು ಅನುಕೂಲವಾಗಬಹುದು.
ಒಟ್ಟಾರೆ ಹಣವನ್ನು ಒಂದೇ ಸಲ ಖರ್ಚು ಮಾಡುವ ಅಥವಾ ಸೂಕ್ತವಲ್ಲದ ಹೂಡಿಕೆಗಳಲ್ಲಿ ತೊಡಗಿಸುವ ಅಪಾಯವನ್ನೂ ಇದು ಕಡಿಮೆ ಮಾಡಬಹುದು. 2025-26ನೇ ಹಣಕಾಸು ವರ್ಷಕ್ಕೆ CBT ಶಿಫಾರಸು ಮಾಡಿರುವ EPF ಬಡ್ಡಿದರ ಶೇ.8.25 ಆಗಿದೆ. ಆದರೆ, ಖಾತೆಯಲ್ಲಿ ಉಳಿಯುವ ಮೊತ್ತ ಮತ್ತು ಅನ್ವಯವಾಗುವ ಬಡ್ಡಿದರದ ಆಧಾರದ ಮೇಲೆ ನಿಜವಾದ ಆದಾಯ ನಿರ್ಧಾರವಾಗಲಿದೆ.
SWP ಯೋಜನೆಗೆ ಅನುಮೋದನೆ ನೀಡಿರುವುದರ ಜತೆಗೆ, ನಿವೃತ್ತಿಗೂ ಮುನ್ನ ಪಿಎಫ್ ಹಣದ ಭಾಗಶಃ ಹಿಂಪಡೆಯುವಿಕೆಗೆ ಸಂಬಂಧಿಸಿದ ನಿಯಮಗಳಲ್ಲೂ EPFO ಬದಲಾವಣೆಗಳನ್ನು ಮಾಡಿದೆ. ಹೊಸ ವ್ಯವಸ್ಥೆಯ ಪ್ರಕಾರ, 55 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅರ್ಹ ಸದಸ್ಯರು ತಮ್ಮ ಪಿಎಫ್ ಖಾತೆಯಲ್ಲಿರುವ ಅರ್ಹ ಮೊತ್ತದ ಶೇ.90ರವರೆಗೆ ಹಿಂಪಡೆಯಲು ಅವಕಾಶವಿದೆ. ಈ ಹಿಂದಿನ ಮಿತಿ ಶೇ.75ರಷ್ಟಿತ್ತು ಎಂದು ವರದಿ ತಿಳಿಸಿದೆ.
ನಿರುದ್ಯೋಗಕ್ಕೆ ಸಂಬಂಧಿಸಿದ ಕೆಲವು ಹಿಂಪಡೆಯುವಿಕೆಗಳಲ್ಲಿನ ಕಾಯುವ ಅವಧಿಯನ್ನೂ ಕಡಿತಗೊಳಿಸಲಾಗಿದೆ. ಈ ಹಿಂದೆ 12 ತಿಂಗಳು ಕಾಯಬೇಕಿದ್ದ ಸಂದರ್ಭಗಳಲ್ಲಿ ಈಗ ಎರಡು ತಿಂಗಳ ಬಳಿಕ ಹಣ ಡ್ರಾ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ವೈದ್ಯಕೀಯ ಚಿಕಿತ್ಸೆ, ಶಿಕ್ಷಣ, ಮದುವೆ ಮತ್ತು ಮನೆ ಖರೀದಿ, ನಿರ್ಮಾಣ, ಗೃಹಸಾಲ ಮರುಪಾವತಿ ಹಾಗೂ ಮನೆ ನವೀಕರಣದಂತಹ ಅಗತ್ಯಗಳಿಗೂ ನಿಗದಿತ ಷರತ್ತುಗಳೊಂದಿಗೆ ಹಣ ಹಿಂಪಡೆಯಬಹುದು. ಈ ಬದಲಾವಣೆಗಳ ಉದ್ದೇಶ ಸದಸ್ಯರಿಗೆ ಹೆಚ್ಚಿನ ಆರ್ಥಿಕ ಸ್ವಾತಂತ್ರ್ಯ ನೀಡುವುದರ ಜತೆಗೆ, ನಿವೃತ್ತಿ ಉಳಿತಾಯದ ಒಂದು ಭಾಗವನ್ನು ಸುರಕ್ಷಿತವಾಗಿಡುವುದಾಗಿದೆ.
ಇಲ್ಲಿ ಉದ್ಯೋಗಿಗಳು ಗಮನಿಸಬೇಕಾದ ಪ್ರಮುಖ ಅಂಶವಿದೆ. ಇಪಿಎಫ್ಓನ ಕೇಂದ್ರ ಟ್ರಸ್ಟಿಗಳ ಮಂಡಳಿ ಈ ಯೋಜನೆಗೆ ಅನುಮೋದನೆ ನೀಡಿದ್ದೇ ಆದರೂ, ಸೌಲಭ್ಯ ತಕ್ಷಣವೇ ಜಾರಿಗೆ ಬರುವುದಿಲ್ಲ. EPFO ಅಧಿಕೃತ ಅಧಿಸೂಚನೆ ಹೊರಡಿಸಿ, ಸಂಪೂರ್ಣ ಮಾರ್ಗಸೂಚಿಗಳನ್ನು ಪ್ರಕಟಿಸಿದ ನಂತರವಷ್ಟೇ ಸದಸ್ಯರು ಇದರ ಪ್ರಯೋಜನ ಪಡೆಯಲು ಸಾಧ್ಯವಾಗಲಿದೆ.
ಆರಂಭಿಕ ಹಂತದಲ್ಲಿ ಕಾನೂನಿನಡಿ ಇಪಿಎಫ್ ವ್ಯವಸ್ಥೆಗೆ ಒಳಪಡುವ ಸದಸ್ಯರಿಗೆ ಈ ಸೌಲಭ್ಯ ಅನ್ವಯವಾಗುವ ನಿರೀಕ್ಷೆಯಿದೆ. ಪ್ರತ್ಯೇಕ ಟ್ರಸ್ಟ್ಗಳ ಮೂಲಕ ಪಿಎಫ್ ನಿರ್ವಹಿಸುವ ಸಂಸ್ಥೆಗಳ ಉದ್ಯೋಗಿಗಳಿಗೆ ಸದ್ಯಕ್ಕೆ ಇದು ಅನ್ವಯಿಸದೇ ಇರಬಹುದು. ಇನ್ನೊಂದು ಮುಖ್ಯ ವಿಚಾರವೆಂದರೆ, ಈ ಹೊಸ ಯೋಜನೆ ಇಪಿಎಫ್ ಖಾತೆಯಲ್ಲಿರುವ ಉಳಿತಾಯಕ್ಕೆ ಸಂಬಂಧಿಸಿದೆ. ಉದ್ಯೋಗಿಗಳ ಪಿಂಚಣಿ ಯೋಜನೆ (EPS) ಅಡಿಯಲ್ಲಿ ಸಿಗುವ ಮಾಸಿಕ ಪಿಂಚಣಿ ಇದರಿಂದ ಪ್ರತ್ಯೇಕವಾಗಿರಲಿದೆ,(ಏಜೆನ್ಸೀಸ್).