ಮುಂಬೈ: ಒಂದು ಕಾಲದಲ್ಲಿ ಹೆಣ್ಣುಮಕ್ಕಳ ಕಲರವದಿಂದ ತುಂಬಿ ತುಳುಕುತ್ತಿದ್ದ ಮನೆಯಲ್ಲಿ, ಕಳೆದ ನಲವತ್ತು ವರ್ಷಗಳಿಂದ ಕೇವಲ ಟಿವಿಯ ಶಬ್ದ ಮತ್ತು ಕಾಡುವ ಏಕಾಂತವೇ ಆ ವೃದ್ಧೆಗೆ ಸಂಗಾತಿಯಾಗಿತ್ತು. ಕೊನೆಯುಸಿರೆಳೆಯುವಾಗಲೂ ಹೆತ್ತ ಮಕ್ಕಳ ಮುಖ ನೋಡಲಾಗದೆ ಕಣ್ಣುಮುಚ್ಚಿದ ಆ ತಾಯಿಯ ( Elderly Woman ) ಅಂತ್ಯಕ್ರಿಯೆಗೂ ಮಕ್ಕಳು ಬಾರದಿದ್ದಾಗ, ನೆರೆಹೊರೆಯವರೇ ಪತ್ರಿಕೆಯಲ್ಲಿ ಜಾಹೀರಾತು ನೀಡಿ ಮಕ್ಕಳಿಗಾಗಿ ಹುಡುಕಾಟ ನಡೆಸಿದ ಮನಕಲಕುವ ಘಟನೆ ಮುಂಬೈನಲ್ಲಿ ನಡೆದಿದೆ.
ಆಧುನಿಕ ನಗರ ಜೀವನದಲ್ಲಿ ಸಂಬಂಧಗಳ ನಡುವಿನ ಕಂದಕ ಮತ್ತು ವೃದ್ಧಾಪ್ಯದ ಒಂಟಿತನದ ಕ್ರೂರ ವಾಸ್ತವಕ್ಕೆ ಮುಂಬೈನ ಈ ಘಟನೆ ಕನ್ನಡಿ ಹಿಡಿದಿದೆ. ಮೂಲತಃ ಚೆನ್ನೈನವರಾದ ಲಲಿತಾ ಕೃಷ್ಣಮೂರ್ತಿ ಎಂಬ ವೃದ್ಧೆ, ಕಳೆದ 40 ವರ್ಷಗಳಿಂದ ಮುಂಬೈನಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು. ನವೆಂಬರ್ 13ರಂದು ಅವರು ಮುಂಬೈನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದರೂ, ಅವರು ಪ್ರಸ್ತುತ ಎಲ್ಲಿದ್ದಾರೆ ಎಂಬ ಬಗ್ಗೆ ಯಾರಿಗೂ ಯಾವುದೇ ಸುಳಿವಿರಲಿಲ್ಲ. ಹೀಗಾಗಿ, ತಾಯಿಯ ಮರಣದ ನಂತರ ಅಂತ್ಯಕ್ರಿಯೆ ನಡೆಸಲು ಮತ್ತು ಸಂಬಂಧಿಕರಿಗೆ ವಿಷಯ ತಿಳಿಸಲು ನೆರೆಹೊರೆಯವರೇ ಮುಂದಾಗಿ ದಿನಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದು, ಈ ಜಾಹೀರಾತು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿ ಎಂತಹವರ ಕಣ್ಣನ್ನೂ ಒದ್ದೆ ಮಾಡುತ್ತಿದೆ.
ಲಲಿತಾ ಕೃಷ್ಣಮೂರ್ತಿ ಅವರ ನಿಧನದ ನಂತರ ನೆರೆಹೊರೆಯವರು ಅವರ ಕುಟುಂಬದವರನ್ನು ಸಂಪರ್ಕಿಸಲು ಸಾಕಷ್ಟು ಪ್ರಯತ್ನಿಸಿದರು, ಆದರೆ ಅವರ ಇಬ್ಬರು ಪುತ್ರಿಯರು ಅಥವಾ ಹತ್ತಿರದ ಸಂಬಂಧಿಕರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಲಿಲ್ಲ. ಅಂತಿಮವಾಗಿ ಬೇರೆ ದಾರಿ ಕಾಣದೆ ನೆರೆಹೊರೆಯವರು ಲಲಿತಾ ಅವರ ಭಾವಚಿತ್ರ ಹಾಗೂ ನಿಧನದ ಮಾಹಿತಿಯನ್ನು ಪತ್ರಿಕೆಯಲ್ಲಿ ಪ್ರಕಟಿಸಿದರು. "ಶ್ರೀಮತಿ ಲಲಿತಾ ಕೃಷ್ಣಮೂರ್ತಿ ಅವರು ನವೆಂಬರ್ 13ರಂದು ಮುಂಬೈನಲ್ಲಿ ನಿಧನರಾಗಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತೇವೆ. ಮೂಲತಃ ಚೆನ್ನೈನವರಾದ ಇವರ ಪುತ್ರಿಯರು ಮತ್ತು ಸಂಬಂಧಿಕರ ವಿಳಾಸ ಅಥವಾ ಫೋನ್ ನಂಬರ್ ಲಭ್ಯವಿಲ್ಲ. ಇವರ ಮಕ್ಕಳು, ಹತ್ತಿರದ ಕುಟುಂಬಸ್ಥರು ಅಥವಾ ಇವರ ಕುಟುಂಬದ ಬಗ್ಗೆ ಮಾಹಿತಿ ಇರುವವರು ದಯವಿಟ್ಟು ನಮ್ಮನ್ನು ಸಂಪರ್ಕಿಸಿ" ಎಂದು ಜಾಹೀರಾತಿನಲ್ಲಿ ಮನವಿ ಮಾಡಲಾಗಿದ್ದು, ಉಷಾ ಲಕ್ಷ್ಮೀನಾರಾಯಣ್ ಮತ್ತು ಪವನ್ ಶೆಟ್ಟಿ ಅವರ ಸಂಪರ್ಕ ಸಂಖ್ಯೆಗಳನ್ನು ನೀಡಲಾಗಿದೆ.
ಕಿಶೋರ್ ಸುಬ್ರಮಣಿಯನ್ ಎಂಬುವವರು ಪತ್ರಿಕೆಯಲ್ಲಿ ಪ್ರಕಟವಾದ ಈ ಜಾಹೀರಾತಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಇಡೀ ಘಟನೆಯನ್ನು ವಿವರಿಸಿದ್ದಾರೆ. ಜಾಹೀರಾತಿನಲ್ಲಿದ್ದ ಪವನ್ ಶೆಟ್ಟಿ ಅವರನ್ನು ಕರೆ ಮಾಡಿ ಮಾತನಾಡಿದಾಗ ಲಲಿತಾ ಅವರ ಜೀವನದ ಕೊನೆಯ ದಿನಗಳ ಕರುಣಾಜನಕ ಸಂಗತಿಗಳು ಬೆಳಕಿಗೆ ಬಂದಿವೆ. ಲಲಿತಾ ಅವರು ಸುಮಾರು ನಾಲ್ಕು ದಶಕಗಳಿಂದ ಮುಂಬೈನಲ್ಲಿ ಒಂಟಿಯಾಗಿ ಬದುಕುತ್ತಿದ್ದರು, ಕಟ್ಟಡದ ನೆರೆಹೊರೆಯವರು ಮತ್ತು ಕೆಲವು ದೂರದ ಪರಿಚಯಸ್ಥರೇ ಅವರಿಗೆ ಆಸರೆಯಾಗಿದ್ದರು. ಆದರೆ, ಅವರ ಸಾವಿನ ನಂತರ ರಕ್ತಸಂಬಂಧಿಕರು ಯಾರೂ ಹತ್ತಿರವಿಲ್ಲದ ಕಾರಣ, ನೆರೆಹೊರೆಯವರೇ ಮಾನವೀಯತೆ ಮೆರೆದು ರಕ್ತಸಂಬಂಧಿಗಳ ಕರ್ತವ್ಯವನ್ನು ನಿಭಾಯಿಸಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಮರಣದ ನಂತರವೂ ಅವರ ಹೆಣ್ಣುಮಕ್ಕಳಿಗಾಗಿ ಹುಡುಕಾಟ ಮುಂದುವರಿದಿದೆ ಎಂದು ಕಿಶೋರ್ ತಿಳಿಸಿದ್ದಾರೆ.
ನಗರ ಪ್ರದೇಶಗಳಲ್ಲಿ ಹಿರಿಯ ನಾಗರಿಕರು ಎದುರಿಸುತ್ತಿರುವ ಭೀಕರ ಏಕಾಂತದ ಬಗ್ಗೆ ಕಿಶೋರ್ ಸುಬ್ರಮಣಿಯನ್ ತಮ್ಮ ಪೋಸ್ಟ್ನಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. "ಇದು ಕೇವಲ ಒಬ್ಬ ಮಹಿಳೆಯ ಕಥೆಯಲ್ಲ, ಉತ್ತಮ ಜೀವನವನ್ನು ಅರಸಿ ದೂರ ಹೋಗುವ ಮಕ್ಕಳು ಎಂದಿಗೂ ಹಿಂತಿರುಗಿ ಬರುವುದಿಲ್ಲ, ಕನಿಷ್ಠ ಪೋಷಕರ ಕೊನೆಯ ದಿನಗಳಲ್ಲೂ ಜತೆಗಿರುವುದಿಲ್ಲ. ಆರಂಭದಲ್ಲಿ ಫೋನ್ ಕರೆಗಳು ಕಡಿಮೆಯಾಗುತ್ತವೆ, 'ಬೇಗ ಬರುತ್ತೇವೆ' ಎಂಬ ಭರವಸೆಯ ಮಾತುಗಳನ್ನು ವರ್ಷಗಟ್ಟಲೆ ಕೇಳುತ್ತಾ ಪೋಷಕರು ಕಾಯುತ್ತಾರೆ. ಕೊನೆಗೆ ಬೇರೆ ದಾರಿಯಿಲ್ಲದೆ ತಮ್ಮ ಸ್ವಾಭಿಮಾನಕ್ಕಾಗಿ ಕಾಯುವುದನ್ನೇ ಬಿಟ್ಟುಬಿಡುತ್ತಾರೆ. ಆದರೂ ಹೃದಯದ ಒಂದು ಮೂಲೆಯಲ್ಲಿ ಮಕ್ಕಳ ಮೇಲಿನ ಹಂಬಲ ಹಾಗೆಯೇ ಉಳಿದಿರುತ್ತದೆ. ಹಣಕಾಸಿನ ನೆರವು ಎಂದಿಗೂ ಪ್ರೀತಿ ಮತ್ತು ಒಡನಾಟಕ್ಕೆ ಪರ್ಯಾಯವಾಗಲು ಸಾಧ್ಯವಿಲ್ಲ" ಎಂದು ಅವರು ಭಾವುಕರಾಗಿ ಬರೆದುಕೊಂಡಿದ್ದಾರೆ.
ಈ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ತೀವ್ರ ದುಃಖ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಯಿಯ ಸಾವಿನ ಸುದ್ದಿಯೂ ಮಕ್ಕಳಿಗೆ ತಲುಪದಿರುವುದು ನಿಜಕ್ಕೂ ದೊಡ್ಡ ದುರಂತ ಎಂದು ಒಬ್ಬರು ಪ್ರತಿಕ್ರಿಯಿಸಿದರೆ, ಮತ್ತೊಬ್ಬರು ರಕ್ತಸಂಬಂಧಿಗಳಿಗಿಂತ ಹೆಚ್ಚಾಗಿ ನಿಂತು ಅಂತ್ಯಸಂಸ್ಕಾರ ನೆರವೇರಿಸಿದ ಮುಂಬೈನ ನೆರೆಹೊರೆಯವರ ಮಾನವೀಯತೆಯನ್ನು ಕೊಂಡಾಡಿ, ಅವರೇ ಲಲಿತಾ ಅವರ ನಿಜವಾದ ಬಂಧುಗಳು ಎಂದು ಶ್ಲಾಘಿಸಿದ್ದಾರೆ.
ಇದೇ ವೇಳೆ ಕೆಲವು ನೆಟ್ಟಿಗರು ಈ ವಿಚಾರದಲ್ಲಿ ವಿಭಿನ್ನ ನಿಲುವನ್ನೂ ವ್ಯಕ್ತಪಡಿಸಿದ್ದಾರೆ. ವಿದೇಶದಲ್ಲಿ ಅಥವಾ ಬಹಳ ದೂರದಲ್ಲಿ ವಾಸಿಸುವ ಸಂಬಂಧಿಕರಿಗೆ ತಕ್ಷಣವೇ ಹಿಂತಿರುಗಿ ಬರಲು ಯಾವಾಗಲೂ ಸಾಧ್ಯವಾಗುವುದಿಲ್ಲ, ಅಲ್ಲದೆ ಕುಟುಂಬದಿಂದ ದೂರವಿರಲು ನಿಖರವಾದ ಕಾರಣ ಏನು ಎಂಬುದು ಹೊರಗಿನವರಿಗೆ ತಿಳಿದಿರುವುದಿಲ್ಲವಾದ್ದರಿಂದ ಯಾರನ್ನೂ ತಕ್ಷಣವೇ ಟೀಕಿಸಬಾರದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆಯಾಗಿ, 40 ವರ್ಷಗಳ ಏಕಾಂತದ ಬದುಕಿನ ನಂತರ ಅನಾಥ ಶವದಂತೆ ಅಂತ್ಯಕಂಡ ಲಲಿತಾ ಅವರ ಕಥೆ ಆಧುನಿಕ ಸಮಾಜದ ಸಂಬಂಧಗಳ ಮೌಲ್ಯವನ್ನು ಪ್ರಶ್ನಿಸುವಂತೆ ಮಾಡಿದೆ, (ಏಜೆನ್ಸೀಸ್).