ಅಕ್ರಮ ಸಂಬಂಧ, ಡಿವೋರ್ಸ್ ಕೊಡುವ ಭಯ; ಪತಿ ಜೊತೆ ಕ್ಲೋಸ್​ ಆಗಿದ್ದ ಯುವತಿಯ ಕೊಲೆಗೆ ಪತ್ನಿಯಿಂದಲೇ ಸುಪಾರಿ

ಕೊಲೆಯಾದ ಯುವತಿ  ವರ್ಷಾ ತುರ್ಕರ್
ಕೊಲೆಯಾದ ಯುವತಿ ವರ್ಷಾ ತುರ್ಕರ್
Published on: 
  • .ಪತಿಗೆ ಅಕ್ರಮ ಸಂಬಂಧವಿದೆ ಎನ್ನುವ ಸಂಶಯ, ಯುವತಿಯ ಕೊಲೆಗೆ ಸುಪಾರಿ

  • 13 ಲಕ್ಷ ಕೊಟ್ಟು ಕೊಲೆಗೆ ಸಂಚು ರೂಪಿಸಿದ್ದ ಪತ್ನಿ ಸೇರಿದಂತೆ ನಾಲ್ವರು ಅರೆಸ್ಟ್.

  • ಇಂಡಿಗೋ ಏರ್​ಲೈನ್​ನ ಉದ್ಯೋಗಿ ವರ್ಷಾ ತುರ್ಕರ್ ಕೊಲೆ.

ಗೊಂಡಿಯಾ: ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯಲ್ಲಿ ಇಂಡಿಗೋ ಏರ್​ಲೈನ್​ನ ಉದ್ಯೋಗಿ ವರ್ಷಾ ತುರ್ಕರ್​ ಬರ್ಬರ ಕೊಲೆಯಾಗಿತ್ತು. ಈ ಕೇಸ್​ ಬೆನ್ನಟ್ಟಿ ಹೊರಟ ಪೊಲೀಸರು, ಆಕೆಯ ಸ್ನೇಹಿತನ ಪತ್ನಿ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಅಕ್ರಮ ಸಂಬಂಧವೇ ಈ ಭೀಕರ ಕೊಲೆಗೆ ಮೂಲ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.

ವರ್ಷಾ ತುರ್ಕರ್ ಪುಣೆಯ ವಿಮಾನ ನಿಲ್ದಾಣದ ಏರ್​ ಇಂಡಿಯಾ ವಿಮಾನಯಾನ ಸಂಸ್ಥೆಯಲ್ಲಿ​ ಕೆಲಸ ಮಾಡುತ್ತಿದ್ದರು. ದೀಪಾವಳಿ ಹಬ್ಬದ ಹಿನ್ನೆಲೆ ಸುದೀರ್ಘ ರಜೆ ಪಡೆದು, ಮಧ್ಯಪ್ರದೇಶದ ಬಾಲಘಾಟ್​ ಜಿಲ್ಲೆಯಲ್ಲಿರುವ ತನ್ನ ತವರು ಮನೆಗೆ ಎರಡೂವರೆ ವರ್ಷದ ಮಗಳೊಂದಿಗೆ ತೆರಳಿದ್ದರು.

ನ.14ರಂದು ಹಳೆಯ ಸ್ನೇಹಿತ, ರಿಯಲ್ ಎಸ್ಟೇಟ್ ಉದ್ಯಮಿ ನಿತೀಶ್ ಅಗರ್ವಾಲ್ (42) ಗೊಂಡಿಯಾ ಜಿಲ್ಲೆಯ ಬೋಂಡ್ರಾನಿ ಅರಣ್ಯ ಪ್ರದೇಶದಲ್ಲಿ ಭೇಟಿಯಾಗಲು ನಿರ್ಧರಿಸಿದ್ದರು. ವೈನ್‌ಗಂಗಾ ನದಿಯ ದಡದಲ್ಲಿರುವ ನಿರ್ಜನ ಅರಣ್ಯ ಪ್ರದೇಶಕ್ಕೆ ಅವರು ತೆರಳಿದ್ದಾಗ, ಎಂಟ್ರಿ ಕೊಟ್ಟ ಮೂವರು ದುಷ್ಕರ್ಮಿಗಳು ಆಕೆಗೆ ಚಾಕುವಿನಿಂದ ಇರಿದು ಕೊಂದಿದ್ದಾರೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ. ಈ ಘಟನೆಯನ್ನು ನಿತೀಶ್ ಕಣ್ಣಾರೆ ಕಂಡಿದ್ದರು.

ಪತ್ನಿಯಿಂದಲೇ ಸುಪಾರಿ

ನಿತೀಶ್ ಮೋನಾ ಅಗರ್ವಾಲ್​​ ತನ್ನ ಪತಿಗೆ ವರ್ಷಾಳೊಂದಿಗೆ ಸಂಬಂಧವಿದೆ ಎಂದುಕೊಂಡಿದ್ದರು. ಇದರಿಂದ ತೀವ್ರವಾಗಿ ನೊಂದಿದ್ದರು. ಡಿವೋರ್ಸ್​ ಕೊಡುವ ಭಯದಲ್ಲಿ 13 ಲಕ್ಷ ರೂಪಾಯಿ ಕೊಟ್ಟು ಕೊಲೆಗೆ ಸುಪಾರಿ ಕೊಡಲು ನಿರ್ಧರಿಸಿದ್ದಾರೆ.

ಬೆಳಕಿಗೆ ಬಂದಿದ್ದು ಹೇಗೆ?

ತಿರೋಡಾ, ಖೈರ್ಲಾಂಜಿ, ವರಶಿವನಿ ಮತ್ತು ಗೊಂಡಿಯಾ ಸೇರಿದಂತೆ ವಿವಿಧ ಕಡೆಗಳಲ್ಲಿ ಅಳವಡಿಸಲಾಗಿದ್ದ ಸುಮಾರು 300 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದರು. ಮೊಬೈಲ್ ಫೋನ್ ಕಣ್ಗಾವಲು, ಕರೆ ವಿವರಗಳ ದಾಖಲೆಗಳು ಮತ್ತು ವಾಹನಗಳ ಸಂಚಾರಕ್ಕೆ ಸಂಬಂಧಿಸಿದ ಮಾಹಿತಿಯಿಂದ ಆರೋಪಿಗಳನ್ನು ಪತ್ತೆ ಹಚ್ಚಲು ಸಹಾಯವಾಯ್ತು ಎಂದಿದ್ದಾರೆ ಪೊಲೀರಸರು,

ಗೊಂಡಿಯಾದ ಸಂಜಯನಗರ ಮುರಿಯ ನಿವಾಸಿ, 26 ವರ್ಷದ ಇಮ್ರಾನ್ ಕರೀಮ್ ಶೇಖ್‌ನನ್ನು ಆರೋಪಿ ಎಂದು ಶಂಕಿಸಲಾಗಿತ್ತು. ಸಿಸಿಟಿವಿ, ಚಲನವಲನ ಗಮನಿಸಿ ನವೆಂಬರ್ 19 ರಂದು ಆತನನ್ನು ವಶಕ್ಕೆ ಪಡೆದಾಗ, ವರ್ಷಾಳ ಹತ್ಯೆಗೆ ಮೋನಾ ಸಂಚು ರೂಪಿಸಿದ್ದಳು ಎಂದು ಹೇಳಿಕೊಂಡಿದ್ದಾರೆ.

ಉದ್ಯಮಿ ಮೂಲಕ ಆರೋಪಿ ಪರಿಚಯ

ಮೋನಾ ಮೊದಲು ತನ್ನ ನೆರೆಯ ನಿವಾಸಿಯಾಗಿದ್ದ, ಶ್ರೀಮಂತ ಉದ್ಯಮಿ ಕುನಾಲ್ ಕುಂಭಾಲ್ಕರ್ (31) ಎಂಬಾತನನ್ನು ಸಂಪರ್ಕಿಸಿದಳು. ನಂತರ ಕುನಾಲ್, ಶಾರುಖ್ ಪಠಾಣ್ ಎಂಬ ವ್ಯಕ್ತಿಯನ್ನು ಸಂಪರ್ಕಿಸಿ, ವರ್ಷಾಳ ಹತ್ಯೆ ನಡೆಸಲು 13 ಲಕ್ಷ ರೂಪಾಯಿಗಳನ್ನು ನೀಡಿದನು. ಈ ಹತ್ಯೆಯ ಕೆಲಸವನ್ನು ಆತ ಸಂಜಯನಗರ ಮುರಿಯ ಸ್ಥಳೀಯ ಯುವಕರಾದ ಇಮ್ರಾನ್ ಶೇಖ್, ನಯಲನ್ ಶೇಖ್ ಮತ್ತು ಕೃಷ್ ರೌತ್ ಎಂಬುವರಿಗೆ ವಹಿಸಿದನು ಎನ್ನಲಾಗಿದೆ.

ಆರೋಪಿಗಳು, ಮೋನಾಳ ಹೆಸರಿನಲ್ಲಿ ನೋಂದಾಯಿತವಾಗಿದ್ದ ನಿತೇಶ್‌ನ ಕಾರಿನ 'ಐ-ಕನೆಕ್ಟ್' ಆ್ಯಪ್ ಐಡಿ ಮತ್ತು ಪಾಸ್‌ವರ್ಡ್ ಬಳಸಿ ಅದರ ಮೇಲೆ ನಿಗಾ ಇಟ್ಟಿದ್ದರು. ಇದರಿಂದ ಅವರಿಗೆ ವಾಹನದ ಲೈವ್ ಜಿಪಿಎಸ್ ಸ್ಥಳದ ಮಾಹಿತಿ ಸಿಕ್ಕಿತು ಎಂದು ಗೊಂಡಿಯಾ ಎಸ್‌ಪಿ ಗೋರಖ್ ಭಮ್ರೆ ತಿಳಿಸಿದ್ದಾರೆ.

ಕಾರು ದೇವಸ್ಥಾನವೊಂದರ ಬಳಿ ನಿಂತಾಗ, ಈ ಮೂವರು ದಾಳಿಕೋರರು ವರ್ಷಾಳ ಮೇಲೆ ಹಲ್ಲೆ ನಡೆಸಿದ್ದಾರೆ . ಇಮ್ರಾನ್ ನೀಡಿದ ಹೇಳಿಕೆಯ ಆಧಾರದ ಮೇಲೆ, ಶುಕ್ರವಾರ ಮೋನಾ ಮತ್ತು ಕುನಾಲ್ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಬಳಿಕ ಇಮ್ರಾನ್, ಮೋನಾ ಮತ್ತು ಕುನಾಲ್ ಅವರನ್ನು ದವನಿವಾಡಾ ಪೊಲೀಸರಿಗೆ ಹಸ್ತಾಂತರಿಸಲಾಯಿತು. ಶಾರುಖ್ ಪಠಾಣ್ ಸೇರಿದಂತೆ ಈ ಮೂವರನ್ನೂ ಬಂಧಿಸಲಾಗಿದೆ. ಪ್ರಕರಣದ ಇತರ ಇಬ್ಬರು ಆರೋಪಿಗಳಾದ ನಯಲನ್ ಮತ್ತು ಕೃಷ್ ತಲೆಮರೆಸಿಕೊಂಡಿದ್ದಾರೆ.