ಬೆಂಗಳೂರಿನ ಬಳಿಕ ಗುಜರಾತ್‌ನಲ್ಲಿ ಎಬೋಲಾ ಶಂಕೆ
- ಬೆಂಗಳೂರಿನ ಬಳಿಕ ಗುಜರಾತ್‌ನಲ್ಲಿ ಎಬೋಲಾ ಶಂಕೆ
- ಕಾಂಗೋ ದೇಶದಿಂದ ಬಂದಿದ್ದ ವ್ಯಕ್ತಿಯಲ್ಲಿ ಎಬೋಲಾ ಲಕ್ಷಣ
- ಪ್ರಾಥಮಿಕ ತನಿಖೆಯಲ್ಲಿ ನೆಗೆಟಿವ್ ಎಂದ ವರದಿ
- ಬೆಂಗಳೂರಿನ ಪ್ರಕರಣದಲ್ಲಿ ಭಯ ಪಡುವ ಅಗತ್ಯವಿಲ್ಲ ಎಂದ ಆರೋಗ್ಯ ಸಚಿವ
ವಡೋದರಾ: ಕೊರೊನಾ ಸೃಷ್ಟಿಸಿದ್ದ ಪ್ರಮಾದವನ್ನು ಜನ ಇನ್ನು ಮರೆತಿಲ್ಲ, ಆಗಲೇ ಜಗತ್ತಿಗೆ ಈಗ ಮತ್ತೊಂದು ಡೇಂಜರಸ್ ವೈರಸ್ ಎಬೋಲಾ (Ebola Virus in Gujarat) ಭೀತಿ ಶುರುವಾಗಿದೆ. ಆಫ್ರಿಕಾ ದೇಶಗಳಲ್ಲಿ ಅಟ್ಟಹಾಸ ಮೆರೆಯುತ್ತಿರುವ ಈ ಮಾರಣಾಂತಿಕ ವೈರಸ್‌ನ ಲಕ್ಷಣಗಳು ಈಗ ಭಾರತದಲ್ಲೂ ಕಾಣಿಸಿಕೊಳ್ಳುತ್ತಿರುವುದು ತೀವ್ರ ಆತಂಕ ಮೂಡಿಸಿದೆ. ಕರ್ನಾಟಕದ ಬೆನ್ನಲ್ಲೇ ಈಗ ಗುಜರಾತ್‌ನಲ್ಲೂ ಮೊದಲ ಶಂಕಿತ ಎಬೋಲಾ ಪ್ರಕರಣ ಪತ್ತೆಯಾಗಿದ್ದು, ಆರೋಗ್ಯ ಇಲಾಖೆ ಅಲರ್ಟ್ ಆಗಿದೆ.
ಕಾಂಗೋದಿಂದ ಮುಂಬೈ, ಅಲ್ಲಿಂದ ಗುಜರಾತ್?
ಆಫ್ರಿಕಾದ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಬ್ಯಾಂಕರ್ ಆಗಿ ಕೆಲಸ ಮಾಡುತ್ತಿರುವ 37 ವರ್ಷದ ವ್ಯಕ್ತಿಯೊಬ್ಬರು ಇತ್ತೀಚೆಗಷ್ಟೇ ಭಾರತಕ್ಕೆ ಮರಳಿದ್ದರು. ಕಾಂಗೋದಿಂದ ಮುಂಬೈಗೆ ಬಂದು, ಅಲ್ಲಿಂದ ವಡೋದರಾ ವಿಮಾನ ನಿಲ್ದಾಣ ತಲುಪಿದ ಈ ವ್ಯಕ್ತಿಗೆ ದಿಢೀರ್ ತೀವ್ರ ಜ್ವರ ಹಾಗೂ ಎಬೋಲಾ ಮಾದರಿಯ ಲಕ್ಷಣಗಳು ಕಾಣಿಸಿಕೊಂಡಿವೆ.
ರಾಜ್ಯದಲ್ಲಿ ಇಂತಹ ಲಕ್ಷಣ ಕಾಣಿಸಿಕೊಂಡ ಮೊದಲ ಕೇಸ್ ಇದಾದ್ದರಿಂದ ತಕ್ಷಣವೇ ಎಚ್ಚೆತ್ತ ವೈದ್ಯಕೀಯ ತಂಡ, ಆತನನ್ನು ಅಹಮದಾಬಾದ್ ಸಿವಿಲ್ ಆಸ್ಪತ್ರೆಯ ವಿಶೇಷ ಎಬೋಲಾ ವಾರ್ಡ್‌ಗೆ ಸ್ಥಳಾಂತರಿಸಿ ಕಟ್ಟುನಿಟ್ಟಿನ ಕ್ವಾರಂಟೈನ್‌ನಲ್ಲಿ ಇಟ್ಟಿದೆ.
ನಿಟ್ಟುಸಿರು ಬಿಟ್ಟ ಅಧಿಕಾರಿಗಳು!
ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ಈ ರೋಗಿಯ ಆರಂಭಿಕ ರಕ್ತದ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಅಂದರೆ ಮೊದಲ ಹಂತದಲ್ಲಿ ಎಬೋಲಾ ಇಲ್ಲ ಎಂಬುದು ಕನ್ಫರ್ಮ್ ಆಗಿದೆ. ಆದರೂ ಅಧಿಕಾರಿಗಳು ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿಲ್ಲ. ಎಲ್ಲಾ ಹಂತದ ಪರೀಕ್ಷಾ ವರದಿಗಳು ಸಂಪೂರ್ಣ ನೆಗೆಟಿವ್ ಬರುವವರೆಗೂ ಆತನನ್ನು ಬಿಡುಗಡೆ ಮಾಡುವುದಿಲ್ಲ, ತೀವ್ರ ನಿಗಾದಲ್ಲಿ ಇಡಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲೂ ಹರಡಿತ್ತು ಭೀತಿ!
ಇದಕ್ಕೂ ಮುನ್ನ ನಮ್ಮ ಬೆಂಗಳೂರಿನಲ್ಲೂ ಇಂತಹುದೇ ಒಂದು ಘಟನೆ ನಡೆದಿತ್ತು. ಉಗಾಂಡಾದಿಂದ ಬಂದಿದ್ದ 28 ವರ್ಷದ ಮಹಿಳೆಗೆ ಎಬೋಲಾ ಲಕ್ಷಣಗಳಿವೆ ಎಂದು ಶಂಕಿಸಿ, ಆಕೆಯನ್ನು ಬೆಂಗಳೂರಿನ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಯ ರಕ್ತದ ಮಾದರಿಯನ್ನು ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (NIV) ಗೆ ಕಳುಹಿಸಲಾಗಿತ್ತು. ಆದರೆ, ಈ ಮಹಿಳೆಯ ವರದಿ ನೆಗೆಟಿವ್ ಬಂದಿರುವ ಕಾರಣ ಜನ ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಖಚಿತಪಡಿಸಿದ್ದಾರೆ.
ಆಫ್ರಿಕಾದ ಕಾಂಗೋ ಮತ್ತು ಉಗಾಂಡಾ ದೇಶಗಳಲ್ಲಿ ಎಬೋಲಾ ವೈರಸ್ ನಿಯಂತ್ರಣಕ್ಕೆ ಸಿಗದೆ ಹರಡುತ್ತಿರುವುದರಿಂದ, ಮೇ 17 ರಂದು ವಿಶ್ವ ಆರೋಗ್ಯ ಸಂಸ್ಥೆ ಇದನ್ನು ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ (PHEIC) ಎಂದು ಘೋಷಿಸಿದೆ. ಇದು ಗಾಳಿಯಲ್ಲಿ ಹರಡುವ ರೋಗವಲ್ಲ, ಬದಲಿಗೆ ಸೋಂಕಿತ ಪ್ರಾಣಿಗಳು (ಬಾವಲಿ, ಮುಳ್ಳುಹಂದಿ) ಹಾಗೂ ಸೋಂಕಿತ ಮನುಷ್ಯರ ದೈಹಿಕ ದ್ರವಗಳ (ಲಾಲಾರಸ, ರಕ್ತ) ನೇರ ಸಂಪರ್ಕಕ್ಕೆ ಬಂದರೆ ಮಾತ್ರ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಭಾರತ ಸರ್ಕಾರ ಜಾರಿಗೊಳಿಸಿದ ಹೊಸ ರೂಲ್ಸ್
ಕೇಂದ್ರ ಆರೋಗ್ಯ ಸಚಿವಾಲಯ ಇಡೀ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಭಾರತದಲ್ಲಿ ಇದುವರೆಗೆ ಯಾವುದೇ ಅಧಿಕೃತ ಎಬೋಲಾ ಪ್ರಕರಣ ಪತ್ತೆಯಾಗಿಲ್ಲ, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಧೈರ್ಯ ತುಂಬಿದೆ. ಆದರೂ ಮುನ್ನೆಚ್ಚರಿಕೆಯಾಗಿ, ಆಫ್ರಿಕಾದಿಂದ ಬರುವ ಪ್ರಯಾಣಿಕರು ಕಡ್ಡಾಯವಾಗಿ 21 ದಿನಗಳ ಕಾಲ ಸೆಲ್ಫ್ ಮಾನಿಟರಿಂಗ್ ಮಾಡಿಕೊಳ್ಳಬೇಕು ಎಂದು ನಿಯಮ ಜಾರಿಗೊಳಿಸಲಾಗಿದೆ, (ಏಜನ್ಸೀಸ್).