ಜುಲೈ 20 ರಂದು 'ಸಂಸತ್ ಚಲೋ'ಗೆ ಕರೆ ನೀಡಿದ ಸೋನಮ್ ವಾಂಗ್‌ಚುಕ್
- ಸೋನಮ್ ವಾಂಗ್‌ಚುಕ್ ಉಪವಾಸ ಸತ್ಯಾಗ್ರಹ 14ನೇ ದಿನಕ್ಕೆ ಕಾಲಿಟ್ಟಿದೆ
- ಜುಲೈ 20 ರಂದು 'ಸಂಸತ್ ಚಲೋ'ಗೆ ಕರೆ ನೀಡಿದ ಸೋನಮ್ ವಾಂಗ್‌ಚುಕ್
- ನನ್ನನ್ನು ಗಾಂಧಿ ಎನ್ನಬೇಡಿ, ನಾನೇನು ಸೂಪರ್ ಹಿರೋ ಅಲ್ಲ
ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ಪರೀಕ್ಷಾ ಅಕ್ರಮಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಈಗ ಇಡೀ ದೇಶದ ಗಮನ ಸೆಳೆದಿದೆ. ಕಾಕ್ರೊಚ್ ಜನತಾ ಪಕ್ಷ (CJP) ಹಮ್ಮಿಕೊಂಡಿರುವ ಈ ಹೋರಾಟ ಶನಿವಾರ (ಜು.11) ಕ್ಕೆ 22ನೇ ದಿನಕ್ಕೆ ಕಾಲಿಟ್ಟಿದೆ.
ಜೂನ್ 28 ರಂದು ಈ ಆಂದೋಲನಕ್ಕೆ ಕೈಜೋಡಿಸಿದ ಖ್ಯಾತ ಶಿಕ್ಷಣತಜ್ಞ ಹಾಗೂ ಹವಾಮಾನ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ (Sonam Wangchuk Protest) ಅವರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಈಗ 14ನೇ ದಿನ ತಲುಪಿದೆ.
ಹಗಲಿರುಳು ದೇಶದ ಭವಿಷ್ಯಕ್ಕಾಗಿ ಧರಣಿ ಕುಳಿತಿರುವ ವಾಂಗ್‌ಚುಕ್ ಅವರ ಆರೋಗ್ಯದ ಸ್ಥಿತಿ ಸದ್ಯ ಕಳವಳಕಾರಿಯಾಗಿದೆ. ವೈದ್ಯಕೀಯ ವರದಿಗಳ ಪ್ರಕಾರ, ಉಪವಾಸ ಆರಂಭಿಸಿದಾಗಿನಿಂದ ಅವರು ಬರೋಬ್ಬರಿ 7.5 ಕೆಜಿ ತೂಕ ಕಳೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ನಾನು ಗಾಂಧಿಯೂ ಅಲ್ಲ, ಹೀರೋ ಕೂಡ ಅಲ್ಲ!
ಶುಕ್ರವಾರ (ಜು.10) ತಡರಾತ್ರಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ವೀಡಿಯೊ ಒಂದನ್ನು ಹಂಚಿಕೊಂಡಿರುವ ಸೋನಮ್ ವಾಂಗ್‌ಚುಕ್, ತಮಗೆ ದಣಿವಾಗಿದ್ದರೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇಂದು ನನ್ನ ಉಪವಾಸದ 13ನೇ ದಿನ. ನಿನ್ನೆಯಿದ್ದಷ್ಟು ಶಕ್ತಿ ಇವತ್ತಿಲ್ಲ, ಸ್ವಲ್ಪ ಸುಸ್ತಾಗುತ್ತಿದೆ. ಉಪವಾಸದ ದಿನಗಳಲ್ಲಿ ಇದು ಸಹಜ, ಎಂದಿದ್ದಾರೆ.
ಇದೇ ವೇಳೆ ತಮಗೆ ಸಿಗುತ್ತಿರುವ ಅತಿಯಾದ ಪ್ರಶಂಸೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಜನ ನನ್ನನ್ನು 21ನೇ ಶತಮಾನದ ಗಾಂಧಿ ಅಥವಾ ಆಧುನಿಕ ಗಾಂಧಿ ಎಂದು ಕರೆಯುತ್ತಿದ್ದಾರೆ. ಇನ್ನೂ ಕೆಲವರು ನನ್ನನ್ನು ಸೂಪರ್ ಹೀರೋ ತರ ನೋಡುತ್ತಿದ್ದಾರೆ. ಆದರೆ ಇಂತಹ ಕಾಮೆಂಟ್‌ಗಳು ನನಗೆ ಮುಜುಗರ ತರುತ್ತವೆ. ನಾನು ಗಾಂಧಿಯೂ ಅಲ್ಲ, ಹೀರೋ ಕೂಡ ಅಲ್ಲ. ದೇಶದ ಒಬ್ಬ ಸಾಮಾನ್ಯ ನಾಗರಿಕನಾಗಿ ನನ್ನ ಜವಾಬ್ದಾರಿಯನ್ನು ನಿಭಾಯಿಸಲು ಪ್ರಯತ್ನಿಸುತ್ತಿದ್ದೇನೆ, ಅಷ್ಟೇ, ಎಂದು ಅವರು ಹೇಳಿದ್ದಾರೆ.
ವಿದ್ಯಾರ್ಥಿಗಳ ಆತ್ಮಹತ್ಯೆಗೆ ಯಾರು ಹೊಣೆ?
ದೇಶದಲ್ಲಿ ಇತ್ತೀಚೆಗೆ ನಡೆದ ಪರೀಕ್ಷಾ ಅಕ್ರಮಗಳು ಮತ್ತು ಪೇಪರ್ ಲೀಕ್ ದಂಧೆಯಿಂದ ಬೇಸತ್ತು ಹಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ವಾಂಗ್‌ಚುಕ್ ತೀವ್ರವಾಗಿ ಖಂಡಿಸಿದರು. ಒಂದು ವೇಳೆ ಆತ್ಮಹತ್ಯೆ ಮಾಡಿಕೊಂಡ ಆ ವಿದ್ಯಾರ್ಥಿಗಳಲ್ಲಿ ನಿಮ್ಮ ಸ್ವಂತ ತಂಗಿ ಅಥವಾ ಮಗಳು ಇದ್ದಿದ್ದರೆ ನೀವು ಸುಮ್ಮನೆ ಕೂರುತ್ತಿದ್ದಿರಾ? ಇಲ್ಲ ತಾನೇ? ಅಂತಹ ಪರಿಸ್ಥಿತಿ ಬರುವವರೆಗೂ ಕಾಯಬೇಡಿ. ಅನ್ಯಾಯದ ವಿರುದ್ಧ ಈಗಲೇ ಧ್ವನಿ ಎತ್ತಿ, ಎಂದು ಜನಸಾಮಾನ್ಯರಿಗೆ ಕರೆ ನೀಡಿದರು.
ಜುಲೈ 20 ರಂದು ಸಂಸತ್ ಚಲೋ!
ಜುಲೈ 20 ರಿಂದ ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭವಾಗಲಿದ್ದು, ಅಂದು ಸಂಸತ್ತಿಗೆ ಬೃಹತ್ ಶಾಂತಿಯುತ ಮೆರವಣಿಗೆ ನಡೆಸಲು ಪ್ರತಿಭಟನಾಕಾರರು ಸಜ್ಜಾಗಿದ್ದಾರೆ. ಈ ಬಗ್ಗೆ ಮಾತನಾಡಿದ ವಾಂಗ್‌ಚುಕ್, ನಮ್ಮ ಹಾಗೆ ನೀವು 24 ದಿನಗಳ ಕಾಲ ಉಪವಾಸ ಇರಬೇಕಾಗಿಲ್ಲ. ಚೆನ್ನಾಗಿ ಊಟ ಮಾಡಿಕೊಂಡೇ ಬನ್ನಿ! ಆದರೆ ಜುಲೈ 20 ರಂದು ನಮ್ಮೊಂದಿಗೆ ಕೈಜೋಡಿಸಿ. ಒಂದು ವೇಳೆ ನಿಮಗೆ ದೆಹಲಿಗೆ ಬರಲು ಸಾಧ್ಯವಾಗದಿದ್ದರೆ, ನೀವು ಎಲ್ಲಿದ್ದೀರೋ ಅಲ್ಲೇ ಒಂದು ದಿನ ಉಪವಾಸ ಮಾಡಿ ನಿಮ್ಮ ಬೆಂಬಲದ ಸಂದೇಶವನ್ನು ಹಂಚಿಕೊಳ್ಳಿ, ಎಂದು ಜನರಲ್ಲಿ ವಿನಂತಿಸಿದ್ದಾರೆ, (ಏಜನ್ಸೀಸ್).